ಕನ್ನಡ ಸುದ್ದಿ  /  Sports  /  Cricket News Ipl 2023 Amit Mishra Becomes Third Highest Wicket Taker In Ipl History And Surpasses Malinga Jra

Amit Mishra: ಲಸಿತ್ ಮಾಲಿಂಗ ಹಿಂದಿಕ್ಕಿದ ಅಮಿತ್ ಮಿಶ್ರಾ; 40ರ ಹರೆಯದಲ್ಲಿ ಐಪಿಎಲ್ ದಾಖಲೆ

ಐಪಿಎಲ್‌ನಲ್ಲಿ 160 ಪಂದ್ಯಗಳಲ್ಲಿ ಆಡಿರುವ ಮಿಶ್ರಾ, 7.34ರ ಎಕಾನಮಿ ರೇಟ್‌ನಲ್ಲಿ ಬೌಲಿಂಗ್‌ ಮಾಡಿ 172 ವಿಕೆಟ್‌ಗಳನ್ನು ಪಡೆದಿದ್ದಾರೆ. 2023ರ ಐಪಿಎಲ್‌ ಆವೃತ್ತಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ 18.16ರ ಸರಾಸರಿ ಮತ್ತು 7.26ರ ಎಕಾನಮಿಯಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ.

ಸುಯೇಶ್‌ ವಿಕೆಟ್‌ ಪಡೆದ ಅಮಿತ್‌ ಮಿಶ್ರಾ
ಸುಯೇಶ್‌ ವಿಕೆಟ್‌ ಪಡೆದ ಅಮಿತ್‌ ಮಿಶ್ರಾ (AP)

ಸೋಮವಾರ (ಮೇ 1) ನಡೆದ ಐಪಿಎಲ್ ಪಂದ್ಯದಲ್ಲಿ ಭಾರತದ ಹಿರಿಯ ಸ್ಪಿನ್ನರ್‌ ಅಮಿತ್ ಮಿಶ್ರಾ ವಿಶೇಷ ಮೈಲಿಗಲ್ಲು ತಲುಪಿದರು. ಆ ಮೂಲಕ ಅವರು ಶ್ರೀಲಂಕಾದ ದಿಗ್ಗಜ ಬೌಲರ್‌ ಲಸಿತ್ ಮಾಲಿಂಗ ಅವರನ್ನು ಹಿಂದಿಕ್ಕಿ, ಐಪಿಎಲ್‌ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಲಖನೌ ಸೂಪರ್ ಜೈಂಟ್ಸ್ (LSG) ಪರ ಆಡುತ್ತಿರುವ 40 ವರ್ಷ ವಯಸ್ಸಿನ ಆಟಗಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಈ ದಾಖಲೆ ಮಾಡಿದ್ದಾರೆ.

ಲಖನೌನ ಸ್ಪಿನ್ ಸ್ನೇಹಿ ಪಿಚ್‌ನ ಅನುಕೂಲವನ್ನು ಅಮಿತ್ ಮಿಶ್ರಾ ಸಂಪೂರ್ಣವಾಗಿ ಬಳಸಿಕೊಂಡರು. ಎಸೆದ ನಾಲ್ಕು ಓವರ್‌ಗಳಲ್ಲಿ 21 ರನ್‌ ಬಿಟ್ಟುಕೊಟ್ಟು 2 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಅವರು ಸುಯೇಶ್ ಪ್ರಭುದೇಸಾಯಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಅವರ ಪ್ರಮುಖ ವಿಕೆಟ್ ಪಡೆದರು.

ಇಲ್ಲಿಯವರೆಗೆ ಐಪಿಎಲ್‌ನಲ್ಲಿ 160 ಪಂದ್ಯಗಳಲ್ಲಿ ಆಡಿರುವ ಮಿಶ್ರಾ, 7.34ರ ಎಕಾನಮಿ ರೇಟ್‌ನಲ್ಲಿ ಬೌಲಿಂಗ್‌ ಮಾಡಿ 172 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಸರಾಸರಿ 23.75. ಐಪಿಎಲ್‌ನಲ್ಲಿ 17 ರನ್‌ ಬಿಟ್ಟುಕೊಟ್ಟು 5 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶ.

ಅಮಿತ್‌, 2023ರ ಐಪಿಎಲ್‌ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ ಆರು ಪಂದ್ಯಗಳಲ್ಲಿ 18.16ರ ಸರಾಸರಿ ಮತ್ತು 7.26ರ ಎಕಾನಮಿಯಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ 2/21.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರಲ್ಲಿ ಅಮಿತ್‌ ಮಿಶ್ರಾ ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ.

1. ಡ್ವೇನ್ ಬ್ರಾವೋ (183 ವಿಕೆಟ್)

2. ಯಜುವೇಂದ್ರ ಚಾಹಲ್ (178 ವಿಕೆಟ್)

3. ಅಮಿತ್‌ ಮಿಶ್ರಾ (172 ವಿಕೆಟ್)

‌4. ಲಸಿತ್ ಮಾಲಿಂಗ (170 ವಿಕೆಟ್)

5. ಪಿಯೂಷ್ ಚಾವ್ಲಾ (170 ವಿಕೆಟ್)

ಪಂದ್ಯದ ವಿವರ

ಸೋಮವಾರ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಚಕ ಜಯ ಸಾಧಿಸಿದೆ. ನಿಧಾನಗತಿಯ ಪಿಚ್‌ನಲ್ಲಿ ಸರಳ ಗುರಿ ನೀಡಿ ಡಿಫೆಂಡ್‌ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಫಾಫ್‌ ಪಡೆ, ಲಖನೌಗೆ ಅದರ ತವರಿನಲ್ಲೇ ಸೋಲುಣಿಸಿತು. ಆ ಮೂಲಕ ತನ್ನ ತವರಿನಲ್ಲಾದ ಒಂದು ವಿಕೆಟ್‌ ಅಂತರದ ರೋಚಕ ಸೋಲಿಗೆ ಸೇಡು ತೀರಿಸಿಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, 9 ವಿಕೆಟ್‌ ಕಳೆದುಕೊಂಡು 126 ರನ್‌ ಗಳಿಸಿತು. ಸಾಧಾರಣ ಗುರಿ ಬೆನ್ನತ್ತಿದ ಲಖನೌ, 19.5 ಓವರ್‌ಗಳಲ್ಲಿ 108 ರನ್‌ ಗಳಿಸಿ ಆಲೌಟ್‌ ಆಯ್ತು. ಆ ಮೂಲಕ ಬೆಂಗಳೂರು ತಂಡವು 18 ರನ್‌ಗಳ ಅಂತರದಿಂದ ಗೆದ್ದು ಬೀಗಿತು. ತವರು ಮೈದಾನದಲ್ಲಿ ಲಖನೌ ತಂಡದ ಯಶಸ್ವಿ ರನ್‌ ಚೇಸಿಂಗ್‌ಗೆ ಆರ್‌ಸಿಬಿ ಅವಕಾಶ ನೀಡಲಿಲ್ಲ. ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ ದ್ವಿಶತಕದ ಗುರಿಯನ್ನು ಸುಲಭವಾಗ ತಲುಪಿದ್ದ ಲಖನೌ, ಈ ಪಂದ್ಯದಲ್ಲಿ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಹೋಯ್ತು.‌ ನಿಧಾನಗತಿಯ ಪಿಚ್‌ನಲ್ಲಿ ಬ್ಯಾಟಿಂಗ್‌ ಲಾಭವನ್ನು ಪಡೆದ ಫಾಫ್‌ ಪಡೆ, ಬಳಿಕ ಬೌಲಿಂಗ್‌ ವೇಳೆಯೂ ಪಿಚ್‌ ಲಲಾಭ ಪಡೆದುಕೊಂಡಿತು.