ಕನ್ನಡ ಸುದ್ದಿ  /  ಕ್ರೀಡೆ  /  Watch: ವಿರಾಟ್‌ಗೆ ಮುತ್ತಿನ ಮಳೆ ಸುರಿಸಿದ ಪತ್ನಿ ಅನುಷ್ಕಾ; ಹಾರ್ದಿಕ್ ಅಪ್ಪುಗೆಗೆ ಅಭಿಮಾನಿಗಳ ಮೆಚ್ಚುಗೆ

Watch: ವಿರಾಟ್‌ಗೆ ಮುತ್ತಿನ ಮಳೆ ಸುರಿಸಿದ ಪತ್ನಿ ಅನುಷ್ಕಾ; ಹಾರ್ದಿಕ್ ಅಪ್ಪುಗೆಗೆ ಅಭಿಮಾನಿಗಳ ಮೆಚ್ಚುಗೆ

Anushka Sharma: ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿಯುತ್ತಿದ್ದಂತೆಯೇ, ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ನಿ ಅನುಷ್ಕಾ ಶರ್ಮಾ ತಮ್ಮ ಪತಿಗೆ ವಿಶೇಷ ಮೆಚ್ಚುಗೆ‌ ವ್ಯಕ್ತಪಡಿಸಿದರು. ಇದೇ ವೇಳೆ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡಾ ಕೊಹ್ಲಿಯನ್ನು ಅಭಿನಂದಿಸಿದರು.

ಕೊಹ್ಲಿಗೆ ಮುತ್ತಿನ ಸುರಿಮಳೆ ಹರಿಸಿದ ಅನುಷ್ಕಾ
ಕೊಹ್ಲಿಗೆ ಮುತ್ತಿನ ಸುರಿಮಳೆ ಹರಿಸಿದ ಅನುಷ್ಕಾ

ಐಪಿಎಲ್‌ನ 2016ರ ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ ಅಬ್ಬರಿಸಿದ್ದರು. ಒಂದೇ ಆವೃತ್ತಿಯಲ್ಲಿ ನಾಲ್ಕು ಶತಕ ಸಿಡಿಸಿ ಮಿಂಚಿದ್ದರು. ಆದಾದ ಬಳಿಕ ಡಲ್‌ ಆಗಿದ್ದ ವಿರಾಟ್‌ ಬ್ಯಾಟಿಂಗ್‌, ಈ ಬಾರಿ ಮತ್ತೆ ವೀರಾವೇಶದಿಂದ ಕೂಡಿತ್ತು. ಸತತ ಎರಡು ಶತಕಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದರು. ಹೀಗಾಗಿ ವಿರಾಟ್‌ ಮತ್ತೆ ಅಭಿಮಾನಿಗಳನ್ನು 2016ರ ಆವೃತ್ತಿಗೆ ಕೊಂಡೊಯ್ದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್ 2023ರ ಉದ್ದಕ್ಕೂ, ಕೊಹ್ಲಿಯ ಸ್ಟ್ರೈಕ್ ರೇಟ್ ಮತ್ತು ಅವರ ಟಿ20 ಬ್ಯಾಟಿಂಗ್‌ ಬಗ್ಗೆ ಟೀಕೆಗಳು ಎದ್ದಿದ್ದವು. ಆದರೆ ಆರ್‌ಸಿಬಿಯ ಮಾಜಿ ದೈತ್ಯ ಕ್ರಿಸ್ ಗೇಲ್ ಮಾತ್ರ, “ಕೊಹ್ಲಿಯನ್ನು ಎಂದಿಗೂ ಅನುಮಾನಿಸಬೇಡಿ” ಎಂದು ಹೇಳಿದ್ದರು. ಭಾನುವಾರದಂದು, ಸತತ ಎರಡನೇ ಶತಕವನ್ನು ಸಿಡಿಸುವ ಮೂಲಕ ಆರ್‌ಸಿಬಿ ಪರ ಏಕಾಂಗಿ ಹೋರಾಟ ನಡೆಸಿದ ಕಿಂಗ್‌, ಟೀಕಾಕಾರರ ಬಾಯಿ ಮುಚ್ಚಿಸಿದರು. ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿಯುತ್ತಿದ್ದಂತೆಯೇ, ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ನಿ ಅನುಷ್ಕಾ ಶರ್ಮಾ ತಮ್ಮ ಪತಿಗೆ ವಿಶೇಷ ಮೆಚ್ಚುಗೆ‌ ವ್ಯಕ್ತಪಡಿಸಿದರು. ಇದೇ ವೇಳೆ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡಾ ಕೊಹ್ಲಿಯನ್ನು ಅಭಿನಂದಿಸಿದರು.

ಕಳೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧವೂ ಶತಕ ಸಿಡಿಸಿದ್ದ ವಿರಾಟ್‌, ಭರ್ಜರಿ ಸಂಭ್ರಮಾಚರಣೆ ನಡೆಸಿದ್ದರು. ಆದರೆ ಗುಜರಾತ್‌ ವಿರುದ್ಧದ ಪಂದ್ಯದ ಅಂತಿಮ ಓವರ್‌ನಲ್ಲಿ ಶತಕ ಸಿಡಿಸಿದಾಗ, ಕೊಹ್ಲಿಯಿಂದ ಸೌಮ್ಯವಾದ ಸಂಭ್ರಮಾಚರಣೆ ಕಂಡುಬಂತು. ಆರ್‌ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಇದಾಗಿದ್ದರಿಂದ, ತನ್ನ ಕೆಲಸ ಇನ್ನೂ ಬಾಕಿ ಇದೆ ಎಂದು ಅವರಿಗೆ ತಿಳಿದಿತ್ತು. ಆದರೆ, ಪತ್ನಿ ಅನುಷ್ಕಾ ಶರ್ಮಾ ಮಾತ್ರ ತಮ್ಮ ಪತ್ನಿಯ ಶತಕವನ್ನು ಅಪಾರವಾಗಿ ಸಂಭ್ರಮಿಸಿದರು. ಕೊಹ್ಲಿಗೆ ಗಾಳಿಯಲ್ಲಿ ಮುತ್ತುಗಳ ರಾಶಿಯನ್ನೇ ಸುರಿದರು. ಇದೇ ವೇಳೆ ಎದುರಾಳಿ ತಂಡದ ನಾಯಕ ಹಾರ್ದಿಕ್, ವಿರಾಟ್‌ಗೆ ಅಪ್ಪುಗೆಯನ್ನು ನೀಡಿದರು. ಅವರ ಸಾಧನೆಗಾಗಿ ಅಭಿನಂದಿಸಿದರು.

ಪಂದ್ಯದ ನಡುವೆ ಮಾತನಾಡಿದ ವಿರಾಟ್ “ನನಗೆ ನನ್ನ ಪ್ರದರ್ಶನ ನಿಜಕ್ಕೂ ಉತ್ತಮ ಅನಿಸಿತು. ನನ್ನ ಟಿ20 ಕ್ರಿಕೆಟ್ ಸಾಮರ್ಥ್ಯ ಕುಸಿಯುತ್ತಿದೆ ಎಂದು ಬಹಳಷ್ಟು ಜನರು ಭಾವಿಸಿದ್ದಾರೆ. ಆದರೆ ನನಗೆ ಹಾಗೇನೂ ಅನಿಸುತ್ತಿಲ್ಲ. ನಾನು ಮತ್ತೊಮ್ಮೆ ನನ್ನೊಳಗಿನ ಅತ್ಯುತ್ತಮ ಟಿ20 ಕ್ರಿಕೆಟ್ ಆಡುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಆಟವನ್ನು ಆನಂದಿಸುತ್ತಿದ್ದೇನೆ. ಪರಿಸ್ಥಿತಿಯನ್ನು ನೋಡಿಕೊಂಡು ಅವಕಾಶ ಸಿಕ್ಕಂತೆಲ್ಲಾ ದೊಡ್ಡ ಹೊಡೆತಕ್ಕೆ ಕೈ ಹಾಕುತ್ತೇನೆ. ಆಟಗಾರನು ಸಂದರ್ಭವನ್ನು ಅರ್ಥ ಮಾಡಿಕೊಂಡು ಆಡಬೇಕು. ತಂಡದ ಅಗತ್ಯಕ್ಕನುಗುಣವಾಗಿ ಹೊಡೆತಗಳನ್ನು ನಿರ್ಧರಿಸಬೇಕು. ಈ ಸಮಯದಲ್ಲಿ ನನ್ನ ಆಟ ಮತ್ತು ನಾನು ಹೇಗೆ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂಬುದರ ಬಗ್ಗೆ ನನಗೆ ಖುಷಿ ಇದೆ,” ವಿರಾಟ್‌ ತಮ್ಮ ಶತಕದ ಬಳಿಕ ಹೇಳಿದ್ದಾರೆ.

ಕೇವಲ 61 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ ಅಜೇಯ 101 ರನ್ ಗಳಿಸಿದ ವಿರಾಟ್‌, ಐಪಿಎಲ್‌ನಲ್ಲಿ ಹಲವು ದಾಖಲೆ ಬರೆದರು. ಪ್ರಸಕ್ತ ಋತುವಿನಲ್ಲಿ ಕೊಹ್ಲಿ ಅವರ ಸತತ ಎರಡನೇ ಶತಕವಾಗಿದೆ. ಕಳೆದ ಪಂದ್ಯದಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧವೂ 100 ರನ್ ಗಳಿಸಿದ್ದರು. ಆ ಮೂಲಕ ಐಪಿಎಲ್‌ನಲ್ಲಿ ಏಳನೇ ಶತಕ ಸಿಡಿಸಿದ ಸಾಧನೆ ಮಾಡಿದರು. ಇದರೊಂದಿಗೆ ಕ್ರಿಸ್ ಗೇಲ್ ಅವರ ದೀರ್ಘಕಾಲದ ಐಪಿಎಲ್ ದಾಖಲೆಯನ್ನು ಬ್ರೇಕ್‌ ಮಾಡಿದರು.

ಈ ಶತಕದೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಶಿಖರ್ ಧವನ್ 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವಾಗ ಮೊದಲ ಬಾರಿಗೆ ಈ ಸಾಧನೆ ಮಾಡಿದರು. ಕಳೆದ ಆವೃತ್ತಿಯಲ್ಲಿ ಜೋಸ್‌ ಬಟ್ಲರ್‌ ಕೂಡಾ ಸತತ ಶತಕ ಸಿಡಿಸಿದ್ದರು. ವಿರಾಟ್‌ ಬಳಿಕ ಕಳೆದ ಪಂದ್ಯದಲ್ಲಿ ಶುಬ್ಮನ್‌ ಗಿಲ್‌ ಕೂಡಾ ಸತತ ಎರಡು ಶತಕ ಸಿಡಿಸಿದ್ದಾರೆ.