ಕನ್ನಡ ಸುದ್ದಿ  /  Sports  /  Cricket News Ipl 2023 Award Winners List Orange Cap Purple Cap Valuable Player Of The Season Fairplay Awards Jra

IPL Award Winners: ಐಪಿಎಲ್ 16ನೇ ಆವೃತ್ತಿಯ ವಿವಿಧ ಪ್ರಶಸ್ತಿ ಗೆದ್ದವರ ಪಟ್ಟಿ ಇಲ್ಲಿದೆ; ಫೈನಲ್ ಪಂದ್ಯದ ವಿಶೇಷ ಕ್ಷಣ ಇದು

ಐಪಿಎಲ್ 2023ರ ಆವೃತ್ತಿಗೆ ತೆರೆ ಬಿದ್ದಿದೆ. ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ಚಾಂಪಿಯನ್‌ ಆಗಿದೆ.‌ ಆವೃತ್ತಿಯ ವಿವಿಧ ಪ್ರಶಸ್ತಿಗಳ ಘೋಷಣೆಯಾಗಿದ್ದು, ಗುಜರಾತ್ ಟೈಟಾನ್ಸ್‌ ಬ್ಯಾಟರ್ ಶುಬ್ಮನ್ ಗಿಲ್ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಧೋನಿ ಜೊತೆಗೆ ಮಾತನಾಡುತ್ತಿರುವ ರಶೀದ್‌ ಖಾನ್
ಧೋನಿ ಜೊತೆಗೆ ಮಾತನಾಡುತ್ತಿರುವ ರಶೀದ್‌ ಖಾನ್ (AP)

ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 16ನೇ ಆವೃತ್ತಿಗೆ ಅದ್ಧೂರಿ ತೆರೆ ಬಿದ್ದಿದೆ. ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ರೋಚಕ ಗೆಲುವು ಸಾಧಿಸಿ, ಐದನೇ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿತು. ರವೀಂದ್ರ ಜಡೇಜಾ (Ravindra Jadeja) ಅವರ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವು ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆಯಿತು. ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium Ahamedabad) ಇತಿಹಾಸ ನಿರ್ಮಿಸಿದ ಚೆನ್ನೈ ತಂಡವು, ಮುಂಬೈ ಇಂಡಿಯನ್ಸ್‌ ದಾಖಲೆಯನ್ನು ಸರಿಗಟ್ಟಿತು.

ಮೀಸಲು ದಿನದ ಪಂದ್ಯ ಕೂಡಾ ಮಳೆಯಿಂದ ಕೆಲಕಾಲ ಮುಂದೂಡಲ್ಪಟ್ಟಿತು. ಅಂತಿಮವಾಗಿ 15 ಓವರ್‌ಗಳಲ್ಲಿ 171 ರನ್‌ಗಳ ಪರಿಷ್ಕೃತ ಗುರಿ ಪಡೆದ ಚೆನ್ನೈ, ಪಂದ್ಯದ ಕೊನೆಯ ಎಸೆತದಲ್ಲಿ ಜಯ ತನ್ನದಾಗಿಸಿತು. ಒಂದು ಸಿಕ್ಸರ್ ಮತ್ತು ಬೌಂಡರಿಗಳನ್ನು ಸಿಡಿಸಿದ ಜಡೇಜಾ ಹೀರೋ ಆದರು. ಈ ಗೆಲುವಿನೊಂದಿಗೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸಿಎಸ್‌ಕೆ ಸರಿಗಟ್ಟಿದೆ.

ಯಾರು ಯಾವ ಪ್ರಶಸ್ತಿ ಗೆದ್ದರು?

ಐಪಿಎಲ್ 2023ರ ಫೈನಲ್‌ ಪಂದ್ಯದಲ್ಲಿ 25 ಎಸೆತಗಳಲ್ಲಿ 47 ರನ್ ಗಳಿಸಿದ ಸಿಎಸ್‌ಕೆಯ ಡೆವೊನ್ ಕಾನ್ವೇ, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.

20 ಎಸೆತಗಳಲ್ಲಿ 39 ರನ್‌ಗಳ ಮನರಂಜನೆಯ ಆಟವಾಡಿದ ಶುಬ್ಮನ್ ಗಿ‌ಲ್, ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಸರಣಿಶ್ರೇಷ್ಠರಾದರು. ಪ್ರಸಕ್ತ ಋತುವಿನಲ್ಲಿ ಸ್ಫೋಟಕ ಫಾರ್ಮ್‌ನಲ್ಲಿರುವ ಅವರು, ಕೊನೆಯ ಎರಡು ಲೀಗ್‌ ಪಂದ್ಯಗಳಲ್ಲಿ ಶತಕ ಸಿಡಿಸಿದ್ದರು. ಆ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿಯೂ ಶತಕ ಸಿಡಿಸುವ ಮೂಲಕ ತಮ್ಮ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದರು. ಒಟ್ಟಾರೆಯಾಗಿ ಟೂರ್ನಿಯಲ್ಲಿ ಬರೋಬ್ಬರಿ 890 ರನ್ ಗಳಿಸಿದ ಅವರು ಪ್ರತಿಷ್ಠಿತ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.

ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

ಆರೆಂಜ್ ಕ್ಯಾಪ್: ಶುಬ್ಮನ್ ಗಿಲ್ (890ರನ್)

ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ (28‌ ವಿಕೆಟ್).

ಫೇರ್‌ಪ್ಲೇ ಆಫ್ ದಿ ಸೀಸನ್ ಪ್ರಶಸ್ತಿ: ಡೆಲ್ಲಿ ಕ್ಯಾಪಿಟಲ್ಸ್

ಕ್ಯಾಚ್ ಆಫ್ ದಿ ಸೀಸನ್ ಪ್ರಶಸ್ತಿ: ರಶೀದ್ ಖಾನ್

ಸೀಸನ್‌ನ ಅತಿ ಉದ್ದದ ಸಿಕ್ಸರ್‌ ಪ್ರಶಸ್ತಿ: ಫಾಫ್ ಡು ಪ್ಲೆಸಿಸ್ (115 ಮೀ ಉದ್ದದ ಸಿಕ್ಸರ್‌).

ಹೆಚ್ಚು ಬೌಂಡರಿಗಳು ಪ್ರಶಸ್ತಿ: ಶುಬ್ಮನ್ ಗಿಲ್ (84‌ ಫೋರ್)

ಋತುವಿನ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ: ಶುಬ್ಮನ್ ಗಿಲ್.

ಗೇಮ್ ಚೇಂಜರ್ ಆಫ್ ದಿ ಸೀಸನ್ ಪ್ರಶಸ್ತಿ: ಶುಬ್ಮನ್ ಗಿಲ್.

ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ: ಗ್ಲೆನ್ ಮ್ಯಾಕ್ಸ್‌ವೆಲ್.

ವರ್ಷದ ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್.

ಅತ್ಯುತ್ತಮ ಆತಿಥ್ಯದ ಮೈದಾನಗಳು: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮತ್ತು ಮುಂಬೈನ ವಾಂಖೆಡೆ ಸ್ಟೇಡಿಯಂ

ರನ್ನರ್ ಅಪ್ : ಗುಜರಾತ್ ಟೈಟಾನ್ಸ್‌ (12.5 ಕೋಟಿ ರೂಪಾಯಿ ಬಹುಮಾನ)

ಚಾಂಪಿಯನ್: ಚೆನ್ನೈ ಸೂಪರ್ ಕಿಂಗ್ಸ್ (20 ಕೋಟಿ ರೂಪಾಯಿ ಬಹುಮಾನ)

ಪಂದ್ಯಶ್ರೇಷ್ಠ: ಡಿವೋನ್‌ ಕಾನ್ವೆ

ಸರಣಿ ಶ್ರೇಷ್ಠ: ಶುಬ್ಮನ್‌ ಗಿಲ್‌

ಫೈನಲ್‌ ಪಂದ್ಯದ ವಿಶೇಷ ಕ್ಷಣ:

ಕೊನೆಯ ಎರಡು ಎಸೆತಗಳಲ್ಲಿ ಹತ್ತು ರನ್‌ ಸಿಡಿಸಿದ ರವೀಂದ್ರ ಜಡೇಜಾ ಪಂದ್ಯದ ಹೀರೋ ಆದರು. ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ, ರವೀಂದ್ರ ಜಡೇಜಾ ಅವರನ್ನು ಎತ್ತಿಕೊಂಡು ಸಂಭ್ರಮಿಸಿದರು. ಈ ಫೋಟೋ ಪಂದ್ಯದ ಅದ್ಭುತ ಕ್ಷಣ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.

ಗುಜರಾತ್‌ ಪರ ಸಾಯಿ ಸುದರ್ಶನ್‌ 96 ರನ್‌ ಗಳಿಸಿ ಮಿಂಚಿದರು. ಕೇವಲ ನಾಲ್ಕು ರನ್‌ಗಳಿಂದ ಶತಕ ವಂಚಿದರಾದರು. ಚೆನ್ನೈಗೆ ಆರಂಭದಲ್ಲಿ ಸೋಲಿನ ಭೀತಿ ಮೂಡಿಸಿದ್ದು ಇವರೇ. ವಿಶೇಷವೆಂದರೆ ಸಾಯಿ ಚೆನ್ನೈ ಮೂಲದವರು. ಆದರೆ ಗುಜರಾತ್‌ ತಂಡದಲ್ಲಿ‌ ಆಡುತ್ತಿದ್ದಾರೆ.

ಅತ್ತ ಗುಜರಾತ್‌ ತಂಡದ ಗೆಲುವು ಕಸಿದವರು ರವೀಂದ್ರ ಜಡೇಜಾ. ಇವರು ಗುಜರಾತ್‌ನವರು. ಆದರೆ ಚೆನ್ನೈ ಪರ ಆಡುತ್ತಿದ್ದಾರೆ. ಸಾಯಿ ಹಾಗೂ ಜಡೇಜಾ ತಮ್‌ ತವರಿನ ತಂಡದ ವಿರುದ್ಧ ಆಡುತ್ತಿದ್ದು, ತವರಿನ ಅಭಿಮಾನಿಗಳು ಖುಷಿ ಪಡುವಂತೆ ಆಡಿದರು. ಇದು ಕ್ರೀಡೆಯ ವಿಶೇಷತೆಗೆ ಸಾಕ್ಷಿ.