ಕನ್ನಡ ಸುದ್ದಿ  /  Sports  /  Cricket News Ipl 2023 Bcci Urged To Name Wriddhiman Saha For Wtc Final As Replacement Of Kl Rahul Test Championship Jra

WTC final: ಕೆಎಲ್ ರಾಹುಲ್‌ ಸ್ಥಾನಕ್ಕೆ ಸಾಹಾಗಿಂತ ಉತ್ತಮ ಆಯ್ಕೆ ಇಲ್ಲ; ಸ್ಫೋಟಕ ಇನ್ನಿಂಗ್ಸ್ ಬೆನ್ನಲ್ಲೇ ಬಿಸಿಸಿಐಗೆ ಹೆಚ್ಚಿದ ಒತ್ತಾಯ

ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸಾಹಾ ಪರ, ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ಬಿಸಿಸಿಐ ಆಯ್ಕೆಗಾರರಿಗೆ ಮನವಿಗಳು ಸಲ್ಲಿಕೆಯಾಗಿವೆ.

ವೃದ್ಧಿಮಾನ್ ಸಾಹಾ
ವೃದ್ಧಿಮಾನ್ ಸಾಹಾ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಆರಂಭಿಕ ಆಟಗಾರ ವೃದ್ಧಿಮಾನ್ ಸಹಾ ಸ್ಫೋಟಕ ಪಾರ್ಮ್‌ನಲ್ಲಿದ್ದರು. ಶುಬ್ಮನ್ ಗಿಲ್ ಜೊತೆಗೆ ಉತ್ತಮ ಜೊತೆಯಾಟವಾಡಿದ ಅವರು, ಪವರ್‌ಪ್ಲೇನಲ್ಲಿ ಅಬ್ಬರಿಸಿದರು. ಅಹಮದಾಬಾದ್‌ ಪಿಚ್‌ನ ಪ್ರಯೋಜನ ಪಡೆದ ಅವರು, ಗುಜರಾತ್ ಸ್ಪಿನ್ನರ್‌ಗಳು ಮತ್ತು ವೇಗಿಗಳನ್ನು ದಂಡಿಸಿದರು. ಮೈದಾನದ ಎಲ್ಲಾ ದಿಕ್ಕುಗಳಿಗೂ ಬಾರಿಸಿ ರನ್‌ ವೇಗ ಹೆಚ್ಚಿಸಿದರು. ಅಂತಿಮವಾಗಿ 43 ಎಸೆತಗಳಲ್ಲಿ 81 ರನ್ ಗಳಿಸಿ ಔಟಾದರು. ಇದೇ ವೇಳೆ ಸಾಹಾ ಆಟ ಹಲವರ ಮನಗೆದ್ದಿತು. ಅಲ್ಲದೆ, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಕೆಎಲ್ ರಾಹುಲ್‌ಗೆ ಬದಲಿಯಾಗಿ ಸಹಾ ಅವರನ್ನು ಹೆಸರಿಸಲು ಬಿಸಿಸಿಐ ಆಯ್ಕೆದಾರರಿಗೆ ಒತ್ತಾಯ ಮಾಡಲಾಗುತ್ತಿದೆ.

ದಿನದ ಆಟದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್‌ ಪರ, ಸಾಹಾ ಮೊದಲ ಓವರ್‌ನಲ್ಲಿ ಮೊಹ್ಸಿನ್ ಖಾನ್ ಅವರ ಎಸೆತಗಳಲ್ಲಿ ಬ್ಯಾಕ್-ಟು-ಬ್ಯಾಕ್ ಬೌಂಡರಿ ಗಳಿಸಿದರು. ನಂತರದ ಪಂದ್ಯದಲ್ಲಿ ಅವೇಶ್ ಖಾನ್ ಅವರ ಎಸೆತದಲ್ಲೂ ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದರು. ಅವರು ಅಂತಿಮವಾಗಿ ಪವರ್‌ಪ್ಲೇನಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ ಸಿಡಿಸಿದರು. ಇವರ ಅಮೋಘ ಕೊಡುಗೆಯಿಂದಾಗಿ, ಮೊದಲು ಬ್ಯಾಟಿಂಗ್‌ ಮಾಡಿದ ಸಂದರ್ಭದಲ್ಲಿ‌ ಗುಜರಾತ್ ಅತ್ಯಧಿಕ ಪವರ್‌ಪ್ಲೇ ಮೊತ್ತ ದಾಖಲಿಸಿತು. ಕೇವಲ 23 ಎಸೆತಗಳಲ್ಲಿ 54 ರನ್ ಗಳಿಸಿದ ಸಹಾ, ತಂಡದ ಮೊತ್ತ 78/0 ಆಗಲು ನೆರವಾದರು.

ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸಾಹಾ ಪರ, ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ಬಿಸಿಸಿಐ ಆಯ್ಕೆಗಾರರಿಗೆ ಮನವಿಗಳು ಸಲ್ಲಿಕೆಯಾಗಿವೆ. ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ನೆಲದಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನಡೆಯುತ್ತಿದ್ದು, ಗಾಯಗೊಂಡು ಹೊರಬಿದ್ದಿರುವ ಕೆಎಲ್‌ ರಾಹುಲ್‌ಗೆ ಬದಲಿಯಾಗಿ ಸಹಾ ಅವರನ್ನು ಆಯ್ಕೆ ಮಾಡಲು ಇದು ಸೂಕ್ತ ಸಮಯ ಎಂದು ಹಲವರು ವಾದಿಸಿದ್ದಾರೆ. ಭಾರತದ ಮಾಜಿ ವೇಗಿ ದೊಡ್ಡ ಗಣೇಶ್ ಈ ಪ್ರಸ್ತಾಪ ಮಾಡಿದವರಲ್ಲಿ ಮೊದಲಿಗರು.

ಇತ್ತೀಚೆಗೆ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಲಖನೌ ಸೂಪರ್‌ ಜೈಂಟ್ಸ್‌ ನಾಯಕ ಕೆಎಲ್‌ ರಾಹುಲ್ ಗಾಯಗೊಂಡಿದ್ದರು. ಹೀಗಾಗಿ ಅವರು ಪ್ರಸಕ್ತ ಐಪಿಎಲ್‌ ಆವೃತ್ತಿಯ ಉಳಿದ ಪಂದ್ಯಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಲಖನೌ ಫ್ರಾಂಚೈಸಿಯು, “ಹೆಚ್ಚಿನ ಪರೀಕ್ಷೆ ಮತ್ತು ಸ್ಕ್ಯಾನ್‌ ನಡೆದ ಬಳಿಕ ರಾಹುಲ್ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂಬುದು ತಿಳಿದುಬಂದಿದೆ. ಹೀಗಾಗಿ ಅವರು ಡಬ್ಲ್ಯೂಟಿಸಿ ಫೈನಲ್‌ನಿಂದಲೂ ಹೊರಗುಳಿದಿದ್ದಾರೆ” ಎಂದು ಹೇಳಿದೆ. ಹೀಗಾಗಿ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಸದ್ಯ ವಿಕೆಟ್ ಕೀಪಿಂಗ್ ಆಯ್ಕೆಯಾಗಿ ಕೆಎಸ್‌ ಭರತ್‌ ಮಾತ್ರ ಉಳಿದಿದ್ದಾರೆ. ಇದೇ ಕಾರಣಕ್ಕೆ ಮತ್ತೋರ್ವ ವಿಕೆಟ್‌ ಕೀಪರ್‌ ಆಗಿ ವೃದ್ಧಿಮಾನ್‌ ಸಾಹಾ ಅವರನ್ನು ಆಯ್ಕೆ ಮಾಡುವಂತೆ ಒತ್ತಾಯಗಳು ಕೇಳಿಬಂದಿವೆ.

ಡಬ್ಲ್ಯೂಟಿಸಿ ಫೈನಲ್‌ಗೆ ಅನುಭವದ ಆಧಾರದ ಮೇಲೆ ಅಜಿಂಕ್ಯ ರಹಾನೆ ಅವರನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ಹೀಗಾಗಿ ಸಹಾ ಅವರನ್ನು ಕೂಡಾ ಇದೇ ಮಾನದಂಡದಲ್ಲಿ ಆಯ್ಕೆ ಮಾಡಬಹುದು ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಮತ್ತೊಂದೆಡೆ ಸಾಹಾ ಅವರನ್ನು ಬ್ಯಾಕ್-ಅಪ್ ಆಯ್ಕೆಯಾಗಿ ಪರಿಗಣಿಸಬಹುದು ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾನುವಾರದ ಪಂದ್ಯದಲ್ಲಿ 43 ಎಸೆತಗಳಲ್ಲಿ 81 ರನ್ ಗಳಿಸಿರುವ ಅವರು, ಈವರೆಗೆ ಆಡಿದ 11 ಇನ್ನಿಂಗ್ಸ್‌ಗಳಲ್ಲಿ 273 ರನ್ ಗಳಿಸಿದ್ದಾರೆ.