ಕನ್ನಡ ಸುದ್ದಿ  /  Sports  /  Cricket News Ipl 2023 Dodda Ganesh Tweet On Lucknow Super Giants Captain Kl Rahul Mentioning Ajinkya Rahane Jra

Dodda Ganesh: ಇರಾದೆಯೊಂದಿದ್ರೆ ಅದ್ಭುತವನ್ನೇ ಮಾಡ್ಬೋದು; ರಹಾನೆ ಪ್ರಶಂಸಿಸಿ‌ ಕೆಎಲ್ ರಾಹುಲ್ ಕಾಲೆಳೆದ ಗಣೇಶ್

ಭಾರತದ ಅನುಭವಿ ವೇಗಿ ದೊಡ್ಡ ಗಣೇಶ್ ರಹಾನೆ ಅವರ ಆಟವನ್ನು ಹೋಲಿಕೆ ಮಾಡಿ ಲಖನೌ ನಾಯಕನ ಮೇಲೆ ಕಟುವಾದ ದಾಳಿ ನಡೆಸಿದ್ದಾರೆ.

ಕೆಎಲ್ ರಾಹುಲ್; ಅಜಿಂಕ್ಯ ರಹಾನೆ
ಕೆಎಲ್ ರಾಹುಲ್; ಅಜಿಂಕ್ಯ ರಹಾನೆ

ಲಖನೌ ಸೂಪರ್ ಜೈಂಟ್ಸ್ (Lucknow Super Giants) ನಾಯಕ ಕೆಎಲ್ ರಾಹುಲ್ (KL Rahul) ಅವರು ಐಪಿಎಲ್ 2023ರ ಆವೃತ್ತಿಯಲ್ಲಿ ಫ್ರಾಂಚೈಸಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಈ ಬಾರಿಯೂ ಆರೆಂಜ್ ಕ್ಯಾಪ್‌ ಗೆಲ್ಲುವ ಗುರಿ ಹೊಂದಿರುವ ಸ್ಟಾರ್ ಬ್ಯಾಟರ್, ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ ಸ್ಟ್ರೈಕ್ ರೇಟ್ ವಿಚಾರವಾಗಿ ವ್ಯಾಪಕ ಟ್ರೋಲ್‌ಗೆ ಆಹಾರವಾಗಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಚೇಸಿಂಗ್‌ ವೇಳೆ ನಿಧಾನಗತಿಯ ಅರ್ಧಶತಕ ಸಿಡಿಸಿದ ಕಾರಣಕ್ಕೆ ಕನ್ನಡಿಗ ವ್ಯಾಪಕ ಟೀಕೆಗೊಳಗಾದರು. ಅಲ್ಪ ಮೊತ್ತ ಚೇಸಿಂಗ್‌ ಮಾಡುವಲ್ಲೂ ಲಖನೌ ತಂಡ ಎಡವಿದ್ದು, ಅದಕ್ಕೆ ರಾಹುಲ್‌ ನಿಧಾನಗತಿಯ ಆಟವೇ ಕಾರಣವೆಂದು ನೆಟ್ಟಿಗರು ಟೀಕಾ ಪ್ರಹಾರ ನಡೆಸಿದ್ದಾರೆ.

ಎಲ್‌ಎಸ್‌ಜಿ ನಾಯಕನ ಆಟಕ್ಕೆ ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಅಜಿಂಕ್ಯ ರಹಾನೆಯೊಂದಿಗೆ ಹೋಲಿಸಿ ಕಟುವಾಗಿ ಟೀಕಿಸಿದ್ದಾರೆ.

ಐಪಿಎಲ್‌ನ 2023ರ ಆವೃತ್ತಿಯಲ್ಲಿ ರಹಾನೆ ಅಚ್ಚರಿಯ ರೀತಿಯಲ್ಲಿ ಆಡುತ್ತಿದ್ದಾರೆ. ಭಾರತ ಟೆಸ್ಟ್ ತಂಡದಿಂದ ಹೊರಗುಳಿದ ನಂತರ, ಕಳೆದ ಒಂದು ವರ್ಷದಿಂದ ಕ್ರಿಕೆಟ್‌ನಿಂದ ಹೊರಗುಳಿದಿದ್ದ ಅವರು, ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 209 ರನ್ ಸಿಡಿಸಿದ್ದಾರೆ. ಬರೋಬ್ಬರಿ 199.04ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಅವರು ಎರಡು ಅರ್ಧ ಶತಕಗಳನ್ನು ಕೂಡಾ ಸಿಡಿಸಿದ್ದಾರೆ. ಐಪಿಎಲ್ 2023ರಲ್ಲಿ ಕನಿಷ್ಠ 100 ಎಸೆತಗಳನ್ನು ಎದುರಿಸಿದ ಬ್ಯಾಟರ್‌ಗಳಲ್ಲಿ, ರಹಾನೆ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎನ್ನುವುದು ವಿಶೇಷ. ಕಳೆದ ಭಾನುವಾರದಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಅಜೇಯ 71 ರನ್ ಗಳಿಸಿ ಹಳದಿ ಆರ್ಮಿ ಪಡೆದ 49 ರನ್ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಭಾರತದ ಅನುಭವಿ ವೇಗಿ ದೊಡ್ಡ ಗಣೇಶ್ ರಹಾನೆ ಅವರ ಆಟವನ್ನು ಹೋಲಿಕೆ ಮಾಡಿ ಲಖನೌ ನಾಯಕನ ಮೇಲೆ ಕಟುವಾದ ದಾಳಿ ನಡೆಸಿದ್ದಾರೆ.

“ಇರಾದೆಯೊಂದಿದ್ದರೆ ಅದ್ಭುತಗಳನ್ನು ಮಾಡಬಹುದು ಎಂಬುದನ್ನು ರಹಾನೆ ತೋರಿಸಿದ್ದಾರೆ. ಕೆಎಲ್ ರಾಹುಲ್‌ಗೆ ಮಾತ್ರ ಇದು ಅರ್ಥವಾಗುತ್ತದೆ,” ಎಂದು ದೊಡ್ಡಗಣೇಶ್‌ ಟ್ವೀಟ್ ಮಾಡಿದ್ದಾರೆ.

ಕಳೆದ ವಾರ ಗುಜರಾತ್‌ ವಿರುದ್ಧ 136 ರನ್ ಚೇಸಿಂಗ್‌ ಮಾಡುವ ವೇಳೆ ರಾಹುಲ್ ಅವರ ಆಟವನ್ನು ಕಟುವಾಗಿ ಟೀಕಿಸಲಾಯಿತು. ಆ ಪಂದ್ಯದಲ್ಲಿ ಅವರು 61 ಎಸೆತಗಳಲ್ಲಿ 68 ರನ್ ಗಳಿಸಿದ್ದರು. ಪವರ್‌ಪ್ಲೇ ನಂತರ ಗಳಿಸಿದ ಕೊನೆಯ 38 ರನ್‌ಗಳು ಬರೋಬ್ಬರಿ 42 ಎಸೆತಗಳಲ್ಲಿ ಬಂದವು.

“ನಾನು ನನ್ನ ಹೊಡೆತಗಳನ್ನು ಆಡಲು ಪ್ರಯತ್ನಿಸುತ್ತಿದ್ದೇನೆ. ಕೆಲವು ಬೌಲರ್‌ಗಳ ವಿರುದ್ಧ ಹೆಚ್ಚಿನ ರನ್‌ ಗಳಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ರಾಹುಲ್ ಹೇಳಿದ್ದಾರೆ. “ಬಹುಶಃ ನಾವು ಇನ್ನೂ ಒಂದೆರಡು ಅವಕಾಶಗಳನ್ನು ತೆಗೆದುಕೊಳ್ಳಬೇಕಾಗಿತ್ತು. ನಮ್ಮ ಕೈಯಲ್ಲಿ ಕೆಲವು ವಿಕೆಟ್‌ಗಳು ಇದ್ದವು. ಆದರೆ ಅದು ಆಗಲಿಲ್ಲ,” ಎಂದು ಪಂದ್ಯದ ಬಳಿಕ ರಾಹುಲ್‌ ಹೇಳಿದ್ದರು.

ಮೊದಲು ಬ್ಯಾಟಿಂಗ್​ ನಡೆಸಿದ್ದ ಗುಜರಾತ್​​ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 135 ರನ್​ ಗಳಿಸಿತ್ತು. ಈ ಅಲ್ಪಗುರಿ ಹಿಂಬಾಲಿಸಿದ ಲಖನೌ 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 128 ರನ್​ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್​​ನಲ್ಲಿ ನಾಲ್ಕು ವಿಕೆಟ್​ ಕಳೆದುಕೊಂಡ ಲಖನೌ ಸೂಪರ್ ಜೈಂಟ್ಸ್​ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು.

ಹೆಚ್ಚಿನ ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ