ಕನ್ನಡ ಸುದ್ದಿ  /  Sports  /  Cricket News Ipl 2023 Fan Park In Mysuru Maharaja Ground Football Ground Indian Premier League Rcb Vs Gt Jra

Mysuru News: ಸಾಂಸ್ಕೃತಿಕ ನಗರಿಯಲ್ಲಿ ಐಪಿಎಲ್ ಫ್ಯಾನ್ ಪಾರ್ಕ್; ಆರ್‌ಸಿಬಿ ಪಂದ್ಯಕ್ಕೆ ಕಾದು ಕುಳಿತ ಮೈಸೂರಿಗರು

ಫ್ಯಾನ್‌ ಪಾರ್ಕ್‌ನಲ್ಲಿ ರಿಜಿಸ್ಟ್ರೇಷನ್ ಕೌಂಟರ್, ಜೆರ್ಸಿ ಕೌಂಟರ್, ಫ್ಲಾಗ್ ಕೌಂಟರ್, ಫೇಸ್ ಪೇಂಟಿಂಗ್ ಕೌಂಟರ್, ಟಾಟಾ ಟಿಯಾಗೋ ಇವಿ ಕಾರ್‌ನ ಪ್ರದರ್ಶನ, ಡಗ್ ಔಟ್, ಫ್ಯಾನ್ ಆಫ್‌ದ ಫ್ಯಾನ್ ಪಾರ್ಕ್, ವಿಐಪಿ ಕೌಂಟರ್, ನೆಟ್ ಕ್ರಿಕೆಟ್ ಝೋನ್, ಮಕ್ಕಳಿಗೆ ಆಟವಾಡಲು ಆಟೋಪಕರಣಗಳು, ಜ್ಯೂಸ್ ಹಾಗೂ ತಿಂಡಿ ಕೌಂಟರ್ ಅನ್ನು ನಿರ್ಮಾಣ ಮಾಡಲಾಗಿದೆ.

ಫ್ಯಾನ್‌ ಪಾರ್ಕ್‌ನಲ್ಲಿ ಸೇರಿರುವ ಜನ
ಫ್ಯಾನ್‌ ಪಾರ್ಕ್‌ನಲ್ಲಿ ಸೇರಿರುವ ಜನ

ಮೈಸೂರು : ಟಾಟಾ ಐಪಿಎಲ್ 2023ರ ಆವೃತ್ತಿಯ ಫ್ಯಾನ್ ಪಾರ್ಕ್, ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿಯಲ್ಲಿ ನಿರ್ಮಾಣವಾಗಿದೆ. ಮೈಸೂರಿನ ಮಹಾರಾಜ ಗ್ರೌಂಡ್ಸ್ ಫುಟ್ಬಾಲ್ ಮೈದಾನದಲ್ಲಿ ಐಪಿಎಲ್‌ ಫ್ಯಾನ್‌ ಪಾರ್ಕ್‌ ಅನ್ನು ನಿರ್ಮಾಣ ಮಾಡಲಾಗಿದೆ. ಈ ಫ್ಯಾನ್ ಪಾರ್ಕ್‌ನಲ್ಲಿ ಇಂದಿನ ಪಂದ್ಯಗಳನ್ನು ವೀಕ್ಷಿಸಲು ಸಾವಿರಾರು ಜನ ಸೇರಿದ್ದಾರೆ.

ಕರ್ನಾಟಕದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮಾತ್ರ ಐಪಿಎಲ್‌ ಪಂದ್ಯಗಳು ನಡೆಯುತ್ತದೆ. ಹೀಗಾಗಿ ಮೈಸೂರಿನ ಎಲ್ಲಾ ಜನರಿಗೆ ನೇರವಾಗಿ ಪಂದ್ಯ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮೈದಾನದಲ್ಲಿ ಕುಳಿತು ಪಂದ್ಯ ವೀಕ್ಷಿಸುವ ಅನುಭವ ನೀಡಲು ಫ್ಯಾನ್‌ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ.

ಲೈವ್ ಕ್ರಿಕೆಟ್‌ ವೇಳೆ ಕಾಣಸಿಗುವ ಅನುಭವವನ್ನೇ ಪಡೆಯುತ್ತಿರುವ ಅಭಿಮಾನಿಗಳು ಫ್ಯಾನ್ ಪಾರ್ಕ್‌ನಲ್ಲಿ ಕುಣಿದು ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ಮಧ್ಯಾಹ್ನ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಪಂದ್ಯ ನಡೆಯುತ್ತಿರುವುದರಿಂದ, ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಫ್ಯಾನ್ ಪಾರ್ಕ್‌ನಲ್ಲಿ ಸೇರಿದ್ದರು. ಮುಂಬೈ ಇಂಡಿಯನ್ಸ್ ಜೆರ್ಸಿ ಮತ್ತು ಬಾವುಟಗಳನ್ನು ಹಿಡಿದು ಪಂದ್ಯ ವೀಕ್ಷಿಸಿದರು. ಈ ನಡುವೆ ಹಲವು ಅಭಿಮಾನಿಗಳು ರಾತ್ರಿ ನಡೆಯುವ ಆರ್‌ಸಿಬಿ ಪಂದ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಜೆರ್ಸಿ ಧರಿಸಿ ಬಂದು ಮಧ್ಯಾಹ್ನದಿಂದಲೇ ತಮ್ಮ ತಂಡಕ್ಕೆ ಸಪೋರ್ಟ್‌ ಮಾಡುತ್ತಿದ್ದಾರೆ.

ಇಂದಿನ ಮೊದಲು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಹೈದರಾಬಾದ್‌ ಮುಖಾಮುಖಿಯಾಗುತ್ತಿವೆ. ಹೀಗಾಗಿ ಆಯೋಜಕರು ಮುಂಬೈ ಇಂಡಿಯನ್ಸ್ ಜೆರ್ಸಿ ಹಾಗೂ ಬಾವುಟಗಳನ್ನು ಫ್ಯಾನ್‌ ಪಾರ್ಕ್‌ನಲ್ಲಿ ಹಂಚಿದ್ದಾರೆ. ಮಧ್ಯಾಹ್ನದ ಪಂದ್ಯದ ನೇರ ಪ್ರಸಾರದ ವೇಳೆಯಲ್ಲಿ ಮೈಸೂರಿನಲ್ಲಿ ಕೆಲ ಹೊತ್ತು ಮಳೆ ಬಂದು ಪ್ರಸಾರ ಸ್ಥಗಿತಗೊಂಡಿತು. ಅರ್ಧ ಗಂಟೆಯ ಬಳಿಕ ಪ್ರಸಾರ ಮತ್ತೆ ಆರಂಭಗೊಂಡಿತು. ಹೀಗಾಗಿ ಅಭಿಮಾನಿಗಳು ಫ್ಯಾನ್ ಪಾರ್ಕ್ ಕಡೆ ಧಾವಿಸಿ ಪಂದ್ಯವನ್ನು ವೀಕ್ಷಿಸಿದರು.

ಫ್ಯಾನ್ ಪಾರ್ಕ್‌ನಲ್ಲಿ ಏನೇನಿದೆ?

ಫ್ಯಾನ್‌ ಪಾರ್ಕ್‌ನಲ್ಲಿ ರಿಜಿಸ್ಟ್ರೇಷನ್ ಕೌಂಟರ್, ಜೆರ್ಸಿ ಕೌಂಟರ್, ಫ್ಲಾಗ್ ಕೌಂಟರ್, ಫೇಸ್ ಪೇಂಟಿಂಗ್ ಕೌಂಟರ್, ಟಾಟಾ ಟಿಯಾಗೋ ಇವಿ ಕಾರ್‌ನ ಪ್ರದರ್ಶನ, ಡಗ್ ಔಟ್, ಫ್ಯಾನ್ ಆಫ್‌ದ ಫ್ಯಾನ್ ಪಾರ್ಕ್, ವಿಐಪಿ ಕೌಂಟರ್, ನೆಟ್ ಕ್ರಿಕೆಟ್ ಝೋನ್, ಮಕ್ಕಳಿಗೆ ಆಟವಾಡಲು ಆಟೋಪಕರಣಗಳು, ಜ್ಯೂಸ್ ಹಾಗೂ ತಿಂಡಿ ಕೌಂಟರ್ ಅನ್ನು ನಿರ್ಮಾಣ ಮಾಡಲಾಗಿದೆ.

ಆರ್‌ಸಿಬಿ ಪಂದ್ಯಕ್ಕಾಗಿ ಜನರ ಕಾತರ

ಮುಂಬೈ ಹಾಗೂ ಎಸ್‌ಆರ್‌ಎಚ್‌ ಪಂದ್ಯದ ಬಳಿಕ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ರಾತ್ರಿ ಪಂದ್ಯ ನಡೆಯುತ್ತಿದೆ. ಹೀಗಾಗಿ ಮಧ್ಯಾಹ್ನದ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲಿಗೆ ಮೈಸೂರು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ವೇಳೆ ರಾತ್ರಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯಗಳಿಸಿ, ಪ್ಲೇ ಆಫ್‌ಗೆ ತಲುಪಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಈ ನಡುವೆ ಮೈಸೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕೆಲ ಸಮಯದಿಂದ ಜೋರು ಗಾಳಿ ಹಾಗೂ ಗುಡುಗು ಬರುತ್ತಿದ್ದು, ಯಾವ ಕ್ಷಣದಲ್ಲಾದೂ ಬಿರುಸಿನ ಮಳೆ ಸಿರಿಯು ಮುನ್ಸೂಚನೆ ಇದೆ. ಮತ್ತೊಂದೆಡೆ ಬೆಂಗಳೂರಿನಲ್ಲೂ ಆಲಿಕಲ್ಲು ಸಹಿತ ಈಗಾಗಲೇ ಭಾರಿ ಮಳೆಯಾಗುತ್ತಿದೆ. ಹೀಗಾಗಿ ರಾತ್ರಿ ನಡೆಯುವ ಆರ್‌ಸಿಬಿ ಪಂದ್ಯ ರದ್ದಾಗುವ ಭೀತಿಯೂ ಇದೆ. ಈ ಹವಾಮಾನದ ನಡುವೆಯೂ ಕ್ರಿಕೆಟ್ ಪ್ರಿಯರು ಉತ್ಸಾಹ ಕಳೆದುಕೊಳ್ಳದೆ ಫ್ಯಾನ್ ಪಾರ್ಕ್‌ನಲ್ಲಿ ಜೋಶ್‌ನಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ.