ಕನ್ನಡ ಸುದ್ದಿ  /  Sports  /  Cricket News Ipl 2023 Final Ahmedabad Weather Forecast Reserve Day Csk Vs Gt Chennai Super Kings, Gujarat Titans Jra

CSK vs GT: ಅಹಮದಾಬಾದ್‌ನ ಇಂದಿನ ಹವಾಮಾನ ಹೀಗಿದೆ; ಇದು ಅಭಿಮಾನಿಗಳಿಗೆ ಸಿಹಿಸುದ್ದಿ

ನಿರಂತರ ಮಳೆಯಿಂದಾಗಿ ಐಪಿಎಲ್ 2023ರ ಫೈನಲ್ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಯಿತು.‌ ಇಂದು ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ಮೀಸಲು ದಿನದ ಪಂದ್ಯದಲ್ಲಿ ಕಣಕ್ಕಿಳಿಯಲಿವೆ.

ನರೇಂದ್ರ ಮೋದಿ ಕ್ರೀಡಾಂಗಣ
ನರೇಂದ್ರ ಮೋದಿ ಕ್ರೀಡಾಂಗಣ (PTI)

ಅಹಮದಾಬಾದ್‌ನಲ್ಲಿ ಭಾರಿ ಮಳೆ ಸುರಿದ ಕಾರಣದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ 16ನೇ ಆವೃತ್ತಿಯ ಫೈನಲ್‌ (IPL 2023 final) ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಯ್ತು. ಅದರ ಪ್ರಕಾರ ಭಾನುವಾರ (ಮೇ 28) ನಡೆಯಬೇಕಿದ್ದ ಪಂದ್ಯ ಸೋಮವಾರ (ಮೇ 29)ದಂದು ನಡೆಯುತ್ತಿದೆ. ಕಳೆದ ಪಂದ್ಯದಲ್ಲಿ ಕನಿಷ್ಠ ಟಾಸ್‌ ಪ್ರಕ್ರಿಯೆ ಕೂಡಾ ನಡೆಯಲಿಲ್ಲ. ಹೀಗಾಗಿ ಇಂದಿನ ಪಂದ್ಯದ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನಲ್ಲಿ ದಾಖಲೆಯ ಐದನೇ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ. ಇದೇ ವೇಳೆ ಅತ್ತ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವು ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳಲು ಎದುರು ನೋಡುತ್ತಿದೆ.

ಅಹಮದಾಬಾದ್‌ನಲ್ಲಿ ಮೇ 28ರ ಹವಾಮಾನವು ಕ್ರಿಕೆಟ್‌ ಪ್ರಿಯರ ಪರವಾಗಿರಲಿಲ್ಲ. ಈಗ ಸೋಮವಾರದ (ಮೇ 29) ಹವಾಮಾನ ವರದಿಯ ಪ್ರಕಾರ, ಇಂದು ಸಂಪೂರ್ಣ 20 ಓವರ್‌ಗಳ ಪಂದ್ಯ ನಡೆಯುವ ಸಾಧ್ಯತೆ ಇದೆ. ಅಹಮದಾಬಾದ್‌ನ ಇಂದಿನ ವಾತಾವರಣವು ಪಂದ್ಯ ನಡೆಸಲು ಅವಕಾಶ ನೀಡುವಂತಿದೆ. ಈ ಆಶಾದಾಯಕ ನಿರೀಕ್ಷೆಯು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಆಕ್ಯುವೆದರ್ ಪ್ರಕಾರ, ಇಂದು ಬೆಳಗಿನ ಸಮಯದಲ್ಲಿ ಅಹಮದಾಬಾದ್‌ನಲ್ಲಿ ಬಿಸಿಲು ಇರುತ್ತದೆ. ಸಂಜೆಯಾಗುತ್ತಿದ್ದಂತೆಯೇ ಮೋಡಗಳು ಆಕಾಶದಲ್ಲಿ ಸುಳಿದಾಡುವ ಸಾಧ್ಯತೆ ಇದೆ.

ಪಂದ್ಯ ಆರಂಭವಾಗುವ ಗಂಟೆಗೂ ಮುನ್ನ, ಅಂದರೆ ಸಂಜೆ 5ರಿಂದ 6ರವರೆಗೆ ಹೆಚ್ಚು ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ. ಆದರೆ ಸಂಜೆ ವಾತಾವರಣದ ಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಸಂಜೆ 7 ಗಂಟೆಯ ವೇಳೆಗೆ ಮೋಡಗಳು ಸರಿಯುವ ಸಾಧ್ಯತೆ ಇದ್ದು, ಪಂದ್ಯ ನಡೆಯುವ ಸಂದರ್ಭದಲ್ಲಿ ಮಳೆಯಾಗುವ ಮುನ್ಸೂಚನೆಯಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಸಂತಸವಾಗಿದೆ.

ಒಂದು ವೇಳೆ ಸೋಮವಾರ ರಾತ್ರಿಯೂ ಅನಿರೀಕ್ಷಿತವಾಗಿ ಮಳೆ ಸುರಿದರೆ, ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್‌ ತಂಡ ಎಂದು ಘೋಷಿಸಲಾಗುತ್ತದೆ. ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಕಾರಣ ಹಾರ್ದಿಕ್‌ ಪಾಂಡ್ಯ ಪಡೆಗೆ ಈ ಅನುಕೂಲ ಇರಲಿದೆ.

ಅಹಮದಾಬಾದ್‌ನಲ್ಲಿ ಮಳೆಯ ಸಂಭಾವ್ಯತೆ ಇಲ್ಲ
ಅಹಮದಾಬಾದ್‌ನಲ್ಲಿ ಮಳೆಯ ಸಂಭಾವ್ಯತೆ ಇಲ್ಲ (AccuWeather)

ಆತಿಥೇಯ ಗುಜರಾತ್ ತಂಡವು ಪ್ರಸ್ತುತ ಲೀಗ್‌ ಹಂತದ ಐಪಿಎಲ್‌ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಲೀಗ್ ಹಂತದ 14 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಗೆದ್ದ ತಂಡವು 20 ಅಂಕಗಳನ್ನು ಸಂಪಾದಿಸಿದೆ. ಇದೇ ವೇಳೆ ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡವು 17 ಪಾಯಿಂಟ್ ಪಡೆದು ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಲೀಗ್‌ ಹಂತದ ಅಂಕಪಟ್ಟಿಯ ಅಗ್ರಸ್ಥಾನದ ಮಾನದಂಡದ ಮೇಲೆ, ಇಂದು ಕೂಡಾ ಮಳೆ ಬಂದರೆ ಗುಜರಾತ್‌ ಟೈಟಾನ್ಸ್‌ ತಂಡವು ಸತತ ಎರಡನೇ ಅವಧಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಲಿದೆ.

ಭಾನುವಾರದಂದು, ಅಹಮದಾಬಾದ್‌ನಲ್ಲಿ ಟಾಸ್ ಪ್ರಕ್ರಿಯೆಗಿಂತ ಅರ್ಧ ಗಂಟೆಗೆ ಮುಂಚಿತವಾಗಿ ಮಳೆ ಆರಂಭವಾಯಿತು. ಮುಂದಿನ ಎರಡೂವರೆ ಗಂಟೆಗಳ ಕಾಲ ವರುಣ ಹಿಂತಿರುಗಲೇ ಇಲ್ಲ. ರಾತ್ರಿ 9:00 ಗಂಟೆಯ ನಂತರ ಮಳೆ ನಿಂತ ಬಳಿಕ ಪಿಚ್‌ನ ಕವರ್‌ಗಳನ್ನು ತೆಗೆಯಲಾಯಿತು. ಆದರೆ, ಮತ್ತೆ ಭಾರಿ ಮಳೆ ಬಂದ ಹಿನ್ನೆಲೆಯಲ್ಲಿ ಬೇರೆ ದಾರಿ ಇಲ್ಲದೆ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯ್ತು.‌

ಕನಿಷ್ಠ 5 ಓವರ್‌ಗಳ‌ ಪಂದ್ಯ ನಡೆಸಲು ರಾತ್ರಿ 12 ಗಂಟೆಯವರೆಗೆ ಕಾಲಾವಕಾಶ ಇರುತ್ತದೆ. ಮಳೆ ಸಂಪೂರ್ಣವಾಗಿ ನಿಂತ ಬಳಿಕ ಮೈದಾನದ ಸಿಬ್ಬಂದಿಗೆ ಮೈದಾನವನ್ನು ಪಂದ್ಯಕ್ಕೆ ಸಿದ್ಧಗೊಳಿಸಲು ಸಮಯ ಬೇಕಾಗುತ್ತದೆ. ಅಹಮದಾಬಾದ್‌ ಮೈದಾನದಲ್ಲಿ ಮಳೆ ನಿಂತ ಬಳಿಕ ಪಂದ್ಯ ಆರಂಭಕ್ಕೆ ಕನಿಷ್ಠ ಒಂದು ಗಂಟೆ ಬೇಕು ಎಂದು ಭಾನುವಾರದ ಮಳೆಯ ವೇಳೆ ಅಂಪೈರ್‌ಗಳು ತಿಳಿಸಿದ್ದರು.