ಕನ್ನಡ ಸುದ್ದಿ  /  Sports  /  Cricket News Ipl 2023 Final Gujarat Titans Set To Beat Chennai Super Kings Csk Vs Gt Ahmedabad Hardik Pandya Jra

IPL 2023 Final: ಸಿಎಸ್‌ಕೆ ವಿರುದ್ಧ ಸುಲಭ ಜಯ ಸಾಧಿಸಲಿದೆ ಗುಜರಾತ್ ಟೈಟಾನ್ಸ್; ಇಲ್ಲಿವೆ ಐದು ಪ್ರಮುಖ ಕಾರಣಗಳು

CSK vs GT: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಗುಜರಾತ್‌ ಟೈಟಾನ್ಸ್ ತಂಡವು ಮೇಲುಗೈ ಸಾಧಿಸಲಿದೆ. ಇದಕ್ಕೆ ಸೂಕ್ತ ಕಾರಣಗಳು ಇಲ್ಲಿವೆ.

ಧೋನಿ ಮತ್ತು ಹಾರ್ದಿಕ್
ಧೋನಿ ಮತ್ತು ಹಾರ್ದಿಕ್

ಜಗತ್ತಿನ ಕ್ರಿಕೆಟ್ ಅಭಿಮಾನಿಗಳ ಚಿತ್ತ ಇಂದು (ಭಾನುವಾರ, ಮೇ 28) ಅಹಮದಾಬಾದ್‌ನತ್ತ (Ahmedabad) ನೆಟ್ಟಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ 2023ನೇ ಆವೃತ್ತಿಯ ಫೈನಲ್ (IPL 2023 final) ಪಂದ್ಯ ನಡೆಯಲಿದ್ದು, ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗುತ್ತಿವೆ.

ಐಪಿಎಲ್‌ ಇತಿಹಾಸದಲ್ಲೇ ಅತಿಹೆಚ್ಚು ಬಾರಿ ಪ್ಲೇ ಆಫ್‌ ತಲುಪಿರುವ ಸಾಧನೆ ಮಾಡಿರುವ ಸಿಎಸ್‌ಕೆ, ಈ ವರ್ಷ ಹತ್ತನೇ ಫೈನಲ್‌ ಪಂದ್ಯದಲ್ಲಿ ಆಡುತ್ತಿದೆ. ಇದುವರೆಗೂ 4 ಬಾರಿ ಟ್ರೋಫಿ ಎತ್ತಿಹಿಡಿದಿರುವ ಚೆನ್ನೈ, ಈ ಬಾರಿ ಮತ್ತೆ ಗೆಲುವು ಸಾಧಿಸಿ ಐದನೇ ಕಪ್‌ ಎತ್ತುವ ವಿಶ್ವಾಸದಲ್ಲಿದೆ. ಅತ್ತ ಕಳೆದ ವರ್ಷವಷ್ಟೇ ಶ್ರೀಮಂತ ಕ್ರಿಕೆಟ್‌ ಲೀಗ್‌ಗೆ ಲಗ್ಗೆ ಇಟ್ಟ ಗುಜರಾತ್‌ ಟೈಟಾನ್ಸ್‌, ಪ್ರಥಮ ಪ್ರಯತ್ನದಲ್ಲೇ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇದೀಗ ಸತತ ಎರಡನೇ ಆವೃತ್ತಿಯಲ್ಲೂ ಅಗ್ರಸ್ಥಾನಿಯಾಗಿ ಪ್ಲೇ ಆಫ್‌ ಪ್ರವೇಶಿಸಿರುವ ಹಾರ್ದಿಕ್‌ ಪಾಂಡ್ಯ ಬಳಗವು, ಸತತ ಎರಡನೇ ಬಾರಿಯೂ ಚಾಂಪಿಯನ್‌ ಆಗುವ ಭರ್ಜರಿ ವಿಶ್ವಾಸದಲ್ಲಿದೆ.

ಗುಜರಾತ್‌ ತಂಡದ ಸಮತೋಲನ, ಲೀಗ್‌ ಹಂತವನ್ನು ತಂಡ ಮುಗಿಸಿರುವ ರೀತಿ, ಗೆಲುವಿನ ಪ್ರಮಾಣ, ಉಭಯ ತಂಡಗಳ ಮುಖಾಮುಖಿ ದಾಖಲೆ ಹಾಗೂ ತವರಿನ ಲಾಭ ಸೇರಿದಂತೆ ಕೆಲವೊಂದು ಲೆಕ್ಕಾಚಾರಗಳ ಪ್ರಕಾರ ಇಂದಿನ ಪಂದ್ಯದಲ್ಲಿ ಗುಜರಾತ್‌ ಮೇಲುಗೈ ಸಾಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಹಾರ್ದಿಕ್‌ ಪಾಂಡ್ಯ ಬಳಗವು ಗೆಲ್ಲುವ ಫೇವರೆಟ್‌ ಎನಿಸಿಕೊಂಡಿದೆ. ಇದಕ್ಕೆ ಸೂಕ್ತ ಕಾರಣಗಳು ಇಲ್ಲಿವೆ ನೋಡಿ…

ತಂಡದ ಸಮತೋಲನ

ಐಪಿಎಲ್‌ನಲ್ಲಿ ಸಮತೋಲಿತ ತಂಡವೆಂದರೆ ಅದು ಗುಜರಾತ್‌ ಟೈಟಾನ್ಸ್. ಸಿಎಸ್‌ಕೆ ತಂಡಕ್ಕೆ ಹೋಲಿಸಿದರೆ, ಈ ಮಾತು ಹೆಚ್ಚು ಪ್ರಸ್ತುತ. ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಂದ ಹಿಡಿದು, ಮಧ್ಯಮ ಕ್ರಮಾಂಕ ಹಾಗೂ ಫಿನಿಶರ್‌ಗಳ ಪಾತ್ರ ನಿಭಾಯಿಸುವ ಸ್ಟಾರ್‌ ಬ್ಯಾಟರ್‌ಗಳು ತಂಡದಲ್ಲಿದ್ದಾರೆ. ಬೌಲಿಂಗ್‌ನಲ್ಲಿ ರಶೀದ್‌ ಖಾನ್‌, ಶಮಿ ಅವರಂತಹ ಡೇಂಜರಸ್‌ ಬೌಲರ್‌ಗಳಿದ್ದಾರೆ. ಪರ್ಪಲ್‌ ಕ್ಯಾಪ್‌ ಪಟ್ಟಿಯಲ್ಲಿ ತಂಡದ ಆಟಗಾರರೇ ಪ್ರಾಬಲ್ಯ ಸಾಧಿಸಿರುವುದು ಇದಕ್ಕೆ ಸಾಕ್ಷಿ.

ತವರು ಮೈದಾನದಲ್ಲಿ ತಂಡ ಬಲಿಷ್ಠ

ಗುಜರಾತ್ ಟೈಟಾನ್ಸ್ ತಂಡವು ಈ ವರ್ಷ ತವರು ಮೈದಾನದಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿದೆ. ಅಹಮದಾಬಾದ್‌ನಲ್ಲಿ ಆಡಿದ ಕೊನೆಯ ಮೂರು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದು ಬೀಗಿದೆ. ಇದು ತಂಡಕ್ಕೆ ಲಾಭ ತಂದುಕೊಡಲಿದೆ. ಎದುರಾಳಿ ತಂಡಕ್ಕೆ ಹೋಲಿಸಿದರೆ, ತವರಿನ ಪಿಚ್ ಪರಿಸ್ಥಿತಿಯು ತಂಡದ ಆಟಗಾರರಿಗೆ ಚೆನ್ನಾಗಿ ತಿಳಿದಿರುತ್ತದೆ. ಪ್ರಸಕ್ತ ಆವೃತ್ತಿಯ ಚೊಚ್ಚಲ ಪಂದ್ಯವು ಇದೇ ಮೈದಾನದಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಸಿಎಸ್‌ಕೆ ಐದು ವಿಕೆಟ್‌ಗಳಿಂದ ಸೋತಿತ್ತು. ಇದೀಗ ಫೈನಲ್ ಪಂದ್ಯದಲ್ಲಿ ಗುಜರಾತ್‌ಗೆ ಸಿಎಸ್‌ಕೆ ಎದುರಾಳಿಯಾಗಿದೆ.

ಶುಬ್ಮನ್ ಗಿಲ್ ಸ್ಫೋಟಕ ಫಾರ್ಮ್‌

ಶುಬ್ಮನ್ ಗಿಲ್ ಅವರ ಸ್ಫೋಟಕ ಫಾರ್ಮ್‌, ಸಿಎಸ್‌ಕೆ ಬೌಲರ್‌ಗಳ ನಿದ್ದೆಗೆಡಿಸಿದೆ. ಸಿಎಸ್‌ಕೆ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿಯೂ‌ ಗಿಲ್ ತಂಡದ ಪ್ರಮುಖ ರನ್ ಸ್ಕೋರರ್ ಆಗಿದ್ದರು. ಬ್ಯಾಟಿಂಗ್‌ಗೆ ಕಠಿಣವೆನಿಸಿದ ಚೆಪಾಕ್ ಪಿಚ್‌ನಲ್ಲಿಯೂ, ಗಿಲ್ 38 ಎಸೆತಗಳಲ್ಲಿ 42 ರನ್ ಗಳಿಸಿದ್ದರು. ಅತ್ತ ಕಳೆದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಗಿಲ್‌ ಮೂರು ಶತಕಗಳನ್ನು ಸಿಡಿಸಿದ್ದಾರೆ. ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ (851) ಗಳಿಸಿರುವ ಗಿಲ್, ಅಹಮದಾಬಾದ್‌ನಲ್ಲಿ ನಡೆದ ಎಂಟು ಪಂದ್ಯಗಳಲ್ಲಿ 76.14 ಸರಾಸರಿಯಲ್ಲಿ ಬ್ಯಾಟ್‌ ಬೀಸಿದ್ದಾರೆ. 171.38 ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸಿ ಬರೋಬ್ಬರಿ 533 ರನ್ ಗಳಿಸಿದ್ದಾರೆ. ಈ ಮೈದಾನದಲ್ಲಿ ಅವರ ಬ್ಯಾಟ್‌ನಿಂದ ಎರಡು ಶತಕ ಮತ್ತು ಮೂರು ಅರ್ಧಶತಕಗಳು ಸಿಡಿದಿವೆ. ಹೀಗಾಗಿ ಅಹಮದಾಬಾದ್‌ ಮೈದಾನದಲ್ಲಿ ಗಿಲ್‌ ಕಟ್ಟಿಹಾಕಲು ಚೆನ್ನೈ ವಿಭಿನ್ನ ತಂಡತ್ರ ರೂಪಿಸಬೇಕಿದೆ.

ತಂಡಗಳ ಮುಖಾಮುಖಿ ದಾಖಲೆ

ಐಪಿಎಲ್‌ಗೆ ಕಳೆದ ವರ್ಷ ಪದಾರ್ಪಣೆ ಮಾಡಿದ ಬಳಿಕ ಗುಜರಾತ್‌ ಮತ್ತು ಚೆನ್ನೈ ತಂಡಗಳು ಈವರೆಗೆ ನಾಲ್ಕು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೇವಲ ಒಂದು ಪಂದ್ಯ ಗೆದ್ದರೆ, ಗುಜರಾತ್ ಟೈಟಾನ್ಸ್ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಗುಜರಾತ್‌ ಮಾರಕ ಬೌಲಿಂಗ್ ದಾಳಿ

ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ ಮೂವರು ಆಟಗಾರರು ಗುಜರಾತ್ ತಂಡದವರೇ. ಮೊಹಮದ್ ಶಮಿ 7.95ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟು 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಟೂರ್ನಿಯ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇದೇ ವೇಳೆ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ 7.93ರ ಎಕಾನಮಿಯಲ್ಲಿ 27 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಮೋಹಿತ್ ಶರ್ಮಾ ಕಡಿಮೆ ಪಂದ್ಯಗಳಲ್ಲಿ ಆಡಿದ್ದರೂ 24 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.‌