ಕನ್ನಡ ಸುದ್ದಿ  /  ಕ್ರೀಡೆ  /  Hardik Pandya: ಮಾಹಿಗಾಗಿ ಸೋಲುವುದರಲ್ಲೂ ಖುಷಿ ಇದೆ; ತನ್ನ ಸೋಲಿನಲ್ಲೂ ಧೋನಿ ಗೆಲುವನ್ನು ಸಂಭ್ರಮಿಸಿದ ಪಾಂಡ್ಯ

Hardik Pandya: ಮಾಹಿಗಾಗಿ ಸೋಲುವುದರಲ್ಲೂ ಖುಷಿ ಇದೆ; ತನ್ನ ಸೋಲಿನಲ್ಲೂ ಧೋನಿ ಗೆಲುವನ್ನು ಸಂಭ್ರಮಿಸಿದ ಪಾಂಡ್ಯ

IPL 2023 Final: ಐಪಿಎಲ್ 2023ರ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ಸೋಲನುಭವಿಸಿತು. ಈ ಬಗ್ಗೆ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ಸಿಎಸ್‌ಕೆ ನಾಯಕ ಎಂಎಸ್ ಧೋನಿ ಕುರಿತು ಮಾತನಾಡಿದ್ದಾರೆ.

ಧೋನಿ ಮತ್ತು ಹಾರ್ದಿಕ್‌ ಪಾಂಡ್ಯ
ಧೋನಿ ಮತ್ತು ಹಾರ್ದಿಕ್‌ ಪಾಂಡ್ಯ (PTI)

ಐಪಿಎಲ್‌ನಲ್ಲಿ ಸತತ ಎರಡನೇ ಟ್ರೋಫಿ ಗೆಲ್ಲಲು ಹಾರ್ದಿಕ್‌ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ (GT) ತಂಡವು ವಿಫಲವಾಯ್ತು. ತನ್ನ ತವರು ಮೈದಾನ ಅಹಮದಾಬಾದ್‌ನಲ್ಲಿ ನಡೆದ ಪ್ರಸಕ್ತ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.

ಟ್ರೆಂಡಿಂಗ್​ ಸುದ್ದಿ

ಸಿಎಸ್‌ಕೆ ಪರ ಡಿವೊನ್ ಕಾನ್ವೆ 25 ಎಸೆತಗಳಲ್ಲಿ 47 ರನ್ ಗಳಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕೊನೆಯ 2 ಓವರ್‌​ಗಳಲ್ಲಿ ತಂಡದ ಗೆಲುವಿಗೆ 21 ರನ್​ ಬೇಕಿತ್ತು. 14ನೇ ಓವರ್‌​​ನಲ್ಲಿ ಶಮಿ ಅದ್ಭುತ ಬೌಲಿಂಗ್​ ಪ್ರದರ್ಶಿಸಿದರು. ಕೇವಲ 8 ರನ್ ಬಿಟ್ಟುಕೊಡುವ ಮೂಲಕ ಕೊನೆಯ ಓವರ್‌​ನಲ್ಲಿ ಹಳದಿ ಆರ್ಮಿ ಗೆಲುವಿಗೆ 13 ರನ್‌ ಗಳಿಸುವಂತೆ ಮಾಡಿದರು. ಅಂತಿಮ ಓವರ್​ ಎಸೆದ ಮೋಹಿತ್​ ಶರ್ಮಾ, ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ ಮೂರು ರನ್‌ ಬಿಟ್ಟುಕೊಟ್ಟರು. 5ನೇ ಎಸೆತವನ್ನು ಜಡೇಜಾ ಸಿಕ್ಸರ್‌ಗಟ್ಟಿದರು. ಇದರೊಂದಿಗೆ ಗೆಲುವಿಗೆ ಕೊನೆಯ ಎಸೆತಕ್ಕೆ 4 ರನ್​ ಬೇಕಿತ್ತು. ಕೊನೆಯ ಎಸೆತದಲ್ಲಿ ಜಡೇಜಾ ಬೌಂಡರಿ ಸಿಡಿಸುವ ಮೂಲಕ ಚೆನ್ನೈ ತಂಡಕ್ಕೆ ರೋಚಕ ಗೆಲುವಿನ ಜೊತೆಗೆ ಮತ್ತೊಂದು ಟ್ರೋಫಿ ಗೆದ್ದುಕೊಟ್ಟರು.

ಪಂದ್ಯದ ಬಳಿಕ ತಮ್ಮ ತಂಡದ ಸೋಲಿನ ಕುರಿತಾಗಿ ನಾಯಕ ಹಾರ್ದಿಕ್‌ ಪಾಂಡ್ಯ ಮಾತನಾಡಿದರು. ಈ ವೇಳೆ ಸ್ಟಾರ್ ಆಲ್‌ರೌಂಡರ್ ಸಿಎಸ್‌ಕೆ ನಾಯಕ ಧೋನಿ ಕುರಿತು ವಿಶೇಷ ಉಲ್ಲೇಖ ಮಾಡಿದರು.

'ವಿಧಿ ಇದನ್ನೇ ಬರೆದಿತ್ತು'

“ಸಿಎಸ್‌ಕೆ ಉತ್ತಮ ಕ್ರಿಕೆಟ್ ಆಡಿದೆ. ನಾವು ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೇವೆ‌. ಮುಖ್ಯವಾಗಿ ಸಾಯಿ ಸುದರ್ಶನ್ ಅವರನ್ನು ವಿಶೇಷವಾಗಿ ಉಲ್ಲೇಖಿಸುತ್ತೇನೆ. ಈ ಹಂತದಲ್ಲಿ ಇಷ್ಟು ಉತ್ತಮವಾಗಿ ಆಡುವುದು ಸುಲಭದ ಮಾತಲ್ಲ. ನಾವು ನಮ್ಮ ತಂಡದ ಆಟಗಾರರನ್ನು ಸದಾ ಬೆಂಬಲಿಸುತ್ತಿದ್ದೇವೆ. ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅವರ ಯಶಸ್ಸು ಅವರದ್ದೇ. ಮೋಹಿತ್, ರಶೀದ್, ಶಮಿ ಎಲ್ಲರೂ ಉತ್ತಮ ಬೌಲಿಂಗ್‌ ಮಾಡಿದರು,” ಎಂದು ಹಾರ್ದಿಕ್ ಹೇಳಿದ್ದಾರೆ.

ಕ್ರಿಕೆಟ್ ಕುರಿತ ಹಲವಾರು ಸೂಕ್ಷ್ಮಗಳನ್ನು ಧೋನಿಯಿಂದ ಕಲಿತಿರುವ ಹಾರ್ದಿಕ್, ಐಪಿಎಲ್‌ನಲ್ಲಿ ಅವಿಸ್ಮರಣೀಯ ಋತುವಿನ ನಂತರ ಸಿಎಸ್‌ಕೆ ನಾಯಕ ಟ್ರೋಫಿ ಎತ್ತಿಹಿಡಿದಿರುವುದಕ್ಕೆ ಸಂತೋಷಪಟ್ಟರು. ಈ ಬಗ್ಗೆ ಮಾತನಾಡಿದ ಅವರು, “ಧೋನಿಗಾಗಿ ನಾನು ತುಂಬಾ ಸಂತೋಷಪಡುತ್ತೇನೆ. ವಿಧಿ ಹೀಗೆಯೇ ಆಗಬೇಕು ಎಂದು ಬರೆದಿದೆ. ನಾನು ಸೋಲಲೇಬೇಕೆಂದು ಇದ್ದರೆ, ನಾನು ಮಾಹಿಗಾಗಿ ಸೋಲುತ್ತೇನೆ. ಒಳ್ಳೆಯ ವ್ಯಕ್ತಿಗಳಿಗೆ ಯಾವತ್ತಿಗೂ ಒಳ್ಳೆಯದೇ ಸಂಭವಿಸುತ್ತದೆ. ನನಗೆ ತಿಳಿದಿರುವ ಅತ್ಯುತ್ತಮ ವ್ಯಕ್ತಿಗಳಲ್ಲಿ ಮಾಹಿ ಕೂಡಾ ಒಬ್ಬರು. ದೇವರು ನನಗೆ ದಯೆ ತೋರಿಸಿದ್ದಾನೆ. ಆದರೆ ಈ ದಿನ ಮಾತ್ರ ಅವರದ್ದು” ಎಂದು ಹಾರ್ದಿಕ್ ಹೇಳಿದ್ದಾರೆ. ಹಾರ್ದಿಕ್‌ ಮಾತುಗಳು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ಮತ್ತೊಂದೆಡೆ ಪಂದ್ಯದ ಬಳಿಕ ಮಾತನಾಡಿದ ಸಿಎಸ್‌ಕೆ ನಾಯಕ ಧೋನಿ, ತಮ್ಮ ನಿವೃತ್ತಿ ಕುರಿತ ಸುದ್ದಿಗಳಿಗೆ ತೆರೆ ಎಳೆದರು. “ನಾನು ನಿವೃತ್ತಿ ಘೋಷಿಸಲು ಇದು ಸೂಕ್ತ ಸಮಯ. ಆದರೆ ಈ ವರ್ಷ ನಾನು ಎಲ್ಲೇ ಹೋದರೂ, ನನಗೆ ಸಿಕ್ಕ ಪ್ರೀತಿ ಮತ್ತು ವಾತ್ಸಲ್ಯವನ್ನು ನೋಡಿದರೆ ಎಲ್ಲರಿಗೂ ಧನ್ಯವಾದ ಹೇಳುವುದು ನನ್ನ ಪಾಲಿಗೆ ತುಂಬಾ ಸುಲಭದ ಕೆಲಸ. ಆದರೆ, ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಕಾದು ಮತ್ತೆ ಕನಿಷ್ಠ 1 ಐಪಿಎಲ್ ಸೀಸನ್ ಆಡುವುದು. ಇದು ನನ್ನ ದೇಹವನ್ನು ಬಹಳಷ್ಟು ಅವಲಂಬಿಸಿರುತ್ತದೆ. ಈ ಬಗ್ಗೆ ನಿರ್ಧಾರಕ್ಕೆ ಬರಲು ನನಗಿನ್ನೂ 6-7 ತಿಂಗಳುಗಳಿವೆ. ಆವರೆಗೆ ನೋಡೋಣ. ಇದು ನನ್ನ ಕಡೆಯಿಂದ ನಿಮಗೆ ಉಡುಗೊರೆ. ಇದು ನನಗೆ ಅಷ್ಟೊಂದು ಸುಲಭವಲ್ಲ. ಆದರೆ ಇದು ಅಭಿಮಾನಿಗಳಿಗೆ ನಾನು ಕೊಡುವ ಉಡುಗೊರೆ. ಅವರು ನನ್ನ ಮೇಲೆ ತೋರಿದ ಪ್ರೀತಿ ಮತ್ತು ವಾತ್ಸಲ್ಯಕ್ಕೆ, ನಾನು ಅವರಿಗಾಗಿ ಏನಾದರೂ ಮಾಡಲೇಬೇಕು ಎಂದು ನಾನು ಭಾವಿಸುತ್ತೇನೆ,” ಎಂದು ಧೋನಿ ಹೇಳಿದರು. ಆ ಮೂಲಕ ಮತ್ತೊಂದು ಆವೃತ್ತಿಯಲ್ಲಿ ಆಡುವ ಸುಳಿವು ನೀಡಿದರು.