ಕನ್ನಡ ಸುದ್ದಿ  /  Sports  /  Cricket News Ipl 2023 Final Here Is What Umpires Nitin Menon And Rod Tucker Said Before Csk Vs Gt Final Called Off Jra

CSK vs GT: ಚೆನ್ನೈ ಗುಜರಾತ್ ಐಪಿಎಲ್ ಫೈನಲ್‌ ಪಂದ್ಯ ಮುಂದೂಡುವ ಮುನ್ನ ಅಂಪೈರ್‌ಗಳು ಹೇಳಿದ್ದೇನು

IPL 2023 final: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್‌ ಪಂದ್ಯದ ಅಂಪೈರ್‌ಗಳಾದ ನಿತಿನ್ ಮೆನನ್ ಮತ್ತು ರಾಡ್ ಟಕ್ಕರ್‌ ಮೈದಾನದ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಳೆಯ ದೃಶ್ಯ
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಳೆಯ ದೃಶ್ಯ (Twitter)

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೀಸಲು ದಿನದಂದು (reserve day) ಫೈನಲ್‌ ಪಂದ್ಯವನ್ನು ನಡೆಸಲಾಗುತ್ತಿದೆ. ಭಾನುವಾರ (ಮೇ 28) ನಡೆಯಬೇಕಿದ್ದ ಚೆನ್ನೈ ಹಾಗೂ ಗುಜರಾತ್‌ ನಡುವಿನ ಪಂದ್ಯವು ನಿರಂತರ ಮಳೆಯಿಂದಾಗಿ ರದ್ದಾಯಿತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವು, ಅಂತಿಮವಾಗಿ ಬೇರೆ ದಾರಿ ಇಲ್ಲದೆ ಇಂದು (ಸೋಮವಾರ, ಮೇ 29) ನಡೆಸಲು ಅಂಪೈಯರ್‌ಗಳು ತೀರ್ಮಾನಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್‌ ಪಂದ್ಯವನ್ನು ವೀಕ್ಷಿಸಲು, ಜಗತ್ತಿನ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಸುಮಾರು ಒಂದು ಲಕ್ಷ ಅಭಿಮಾನಿಗಳು ಕಾಯುತ್ತಿದ್ದರು. ಭಾರಿ ಮಳೆಯ ನಡುವೆಯೂ ಪಂದ್ಯಕ್ಕೂ ಮುನ್ನವೇ ಮೈದಾನಕ್ಕೆ ತಲುಪಿದ್ದ ಅಭಿಮಾನಿಗಳು ಅಧಿಕೃತ ಘೋಷಣೆಯವರೆಗೂ ಕಾಯುತ್ತಾ ಕುಳಿತಿದ್ದರು. ಅಂತಿಮವಾಗಿ, 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಮೀಸಲು ದಿನದಂದು ಫೈನಲ್‌ ಪಂದ್ಯ ನಡೆಸಲಾಗುತ್ತಿದೆ.

ಭಾನುವಾರ ಸಂಜೆ 7ರಿಂದ 11 ಗಂಟೆಯವರೆಗೂ ಅಭಿಮಾನಿಗಳು, ಆಟಗಾರರು, ತಜ್ಞರು ಮತ್ತು ಎಲ್ಲರೂ ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದರು. ರಾತ್ರಿ 9ರ ಸುಮಾರಿಗೆ ಸ್ವಲ್ಪ ಬಿಡುವು ಕೊಟ್ಟ ಮಳೆಯಿಂದಾಗಿ, ಪಂದ್ಯ ನಡೆಸಲು ತಯಾರಿ ಶುರುವಾಯ್ತು. ಅದರ ಬೆನ್ನಲ್ಲೆ ತುಂತುರು ಮಳೆ ಸುರಿಯಿತು. ಸಮಯ ಮೀರುತ್ತಿದ್ದಂತೆಯೇ ವರುಣನ ವೇಗ ಹೆಚ್ಚಾಯಿತು. ಅಂತಿಮವಾಗಿ ಸತತ ನಾಲ್ಕು ಗಂಟೆಗಳ ಸುದೀರ್ಘ ಕಾಯುವಿಕೆಯ ಬಳಿಕ, ಪಂದ್ಯವನ್ನು ರದ್ದುಗೊಳಿಸಲಾಯಿತು.

ಕಳೆದ ರಾತ್ರಿ 10 ಗಂಟೆಯ ಬಳಿಕ ಮೀಸಲು ದಿನದಂದು ಪಂದ್ಯ ನಡೆಯುವ ಸಾಧ್ಯತೆ ಬಗ್ಗೆ ಚರ್ಚೆ ಹೆಚ್ಚಾಯಿತು. ರಾತ್ರಿ 10:30ರ ಸುಮಾರಿಗೆ ಪಂದ್ಯದ ಇಬ್ಬರು ಅಧಿಕೃತ ಅಂಪೈರ್‌ಗಳಾದ ನಿತಿನ್ ಮೆನನ್ ಮತ್ತು ರಾಡ್ ಟಕ್ಕರ್, ಪಂದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿದರು.

“ಮೈದಾನದ ಪರಿಸ್ಥಿತಿಯು ಸಾಕಷ್ಟು ಉತ್ತಮವಾಗಿತ್ತು (ರಾತ್ರಿ 9 ಗಂಟೆಯ ಸುಮಾರಿಗೆ). 3 ಗಂಟೆಗಳ ಮಳೆಯ ನಂತರವೂ ಮೈದಾನ ತುಂಬಾ ಚೆನ್ನಾಗಿ ಕಾಣುತ್ತಿರುವುದನ್ನು ನೋಡಿ ನಮಗೆ ತುಂಬಾ ಅಚ್ಚರಿಯಾಯಿತು. ಆದ್ದರಿಂದ ಇಂದು(ಭಾನುವಾರ) ರಾತ್ರಿ ಪಂದ್ಯ ನಡೆಯುವ ಬಗ್ಗೆ ಭರವಸೆ ಹೊಂದಿದ್ದೇವೆ. ಆದರೆ ದುರದೃಷ್ಟವಶಾತ್ ಮತ್ತೆ ಮಳೆ ಬಂದಿದೆ. ಮುಂದೆ ನೋಡೋಣ,” ಎಂದು ನಿತಿನ್ ಮೆನನ್ ಹೇಳಿದರು.

“ತಡರಾತ್ರಿ 12:06ರವರೆಗೂ ನಾವು ಪಂದ್ಯವನ್ನು ನಡೆಸುವ ಅವಕಾಶವಿದೆ. ಮಳೆ ಸಂಪೂರ್ಣವಾಗಿ ನಿಂತ ಬಳಿಕ ಮೈದಾನದ ಸಿಬ್ಬಂದಿಗೆ ಮೈದಾನ ಸಿದ್ಧಪಡಿಸಲು ಒಂದು ಗಂಟೆಯ ಸಮಯವಿದೆ. ನಾವು ಇಂದು(ಭಾನುವಾರ) ರಾತ್ರಿ ಪಂದ್ಯವನ್ನು ನಡೆಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅದು 11ರವರೆಗೆ ನಿಲ್ಲದಿದ್ದರೆ, ನಾವು ನಾಳೆ ನಡೆಸಬೇಕಾಗುತ್ತದೆ. ಮಳೆ ನಿಂತ ಬಳಿಕ ಮೈದಾನದ ಸಿಬ್ಬಂದಿಗೆ ಮೈದಾನವನ್ನು ಸಿದ್ಧಪಡಿಸಲು ಸುಮಾರು 60 ನಿಮಿಷಗಳು ಬೇಕು,” ಎಂದು ರಾಡ್ ಟಕ್ಕರ್ ತಿಳಿಸಿದ್ದಾರೆ.

ಒಂದು ವೇಳೆ ಫೈನಲ್ ಪಂದ್ಯವು ರಾತ್ರಿ 12:06ಕ್ಕೆ ಪ್ರಾರಂಭವಾಗಿದ್ದರೆ, ಐದು ಓವರ್‌ಗಳ ಪಂದ್ಯ ನಡೆಯುತ್ತಿತ್ತು. ಕೊನೆಯಲ್ಲಿ, ರಾತ್ರಿ 10:50ರ ಸುಮಾರಿಗೆ ಪಂದ್ಯವನ್ನು ಮುಂದೂಡಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗಿದೆ. ಹೀಗಾಗಿ ಐಪಿಎಲ್‌ನ ಫೈನಲ್‌ ಪಂದ್ಯವು ಮೀಸಲು ದಿನವಾದ ಸೋಮವಾರ ನಡೆಯುತ್ತಿದೆ.

ಇಂದು ಕೂಡಾ ಮಳೆ ಸಾಧ್ಯತೆ

ಹವಾಮಾನ ವರದಿ ಪ್ರಕಾರ ಇಂದು ಕೂಡ ಅಹ್ಮದಾಬಾದ್‌​ನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಪೂರ್ಣ ಪ್ರಮಾಣದ ಪಂದ್ಯ ನಡೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಆದರೆ ಮೇ 28ರ ಮಳೆಯ ಪ್ರಮಾಣಕ್ಕಿಂತ ಕೊಂಚ ಕಡಿಮೆ ಇರಲಿದೆ ಎಂಬುದು ಸಮಾಧಾನಕರ ಸಂಗಂತಿ. ಪಂದ್ಯದ ಫಲಿತಾಂಶ ನಿರ್ಧಾರವಾಗಲು ಕನಿಷ್ಠ 5 ಓವರ್‌ಗಳ ಪಂದ್ಯವಾದರೂ ಜರುಗಬೇಕು. ಇಲ್ಲದಿದ್ದಲ್ಲಿ ಸೂಪರ್‌ ಓವರ್‌ನಲ್ಲಿ ಪಂದ್ಯದ ಫಲಿತಾಂಶ ಬರಬೇಕು. ಒಂದು ವೇಳೆ ಮೀಸಲು ದಿನದಲ್ಲಿ ಅದಕ್ಕೂ ಮಳೆರಾಯ ಅವಕಾಶ ನೀಡದಿದ್ದರೆ, ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಗುಜರಾತ್‌ ಟೈಟಾನ್ಸ್‌ ತಂಡವೇ ಚಾಂಪಿಯನ್‌ ಆಗಿ ಹೊರ ಹೊಮ್ಮಲಿದೆ.