ಕನ್ನಡ ಸುದ್ದಿ  /  Sports  /  Cricket News Ipl 2023 Final Kapil Dev Statement On Ms Dhoni Retirement Talk Chennai Super Kings Csk Vs Gt Jra

Kapil Dev: ಅವರು ಜೀವನ ಪೂರ್ತಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ; ಧೋನಿ ನಿವೃತ್ತಿ ಕುರಿತು ಕಪಿಲ್ ದೇವ್ ಮಾತು

MS Dhoni retirement: ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಕಪಿಲ್ ದೇವ್; ಎಂಎಸ್ ಧೋನಿ
ಕಪಿಲ್ ದೇವ್; ಎಂಎಸ್ ಧೋನಿ

ಅಹಮದಾಬಾದ್‌ನಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಐಪಿಎಲ್ 2023ರ ಫೈನಲ್ (IPL 2023 final) ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯ್ತು. ನರೇಂದ್ರ ಮೋದಿ ಕ್ರೀಡಾಂಗಣ(Narendra Modi Stadium)ದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಗೆ ನಿರಾಸೆಯಾಯ್ತು. ಇದೇ ವೇಳೆ ಹಳದಿ ಆರ್ಮಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡದ ಅಭಿಮಾನಿಗಳು ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರೆಲ್ಲರೂ ತಮ್ಮ ನೆಚ್ಚಿನ ನಾಯಕ ಎಂಎಸ್ ಧೋನಿಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಆದರೆ, ಅವರೆಲ್ಲರ ಆಸೆಗೆ ವರುಣ ತಣ್ಣೀರೆರಚಿದ.

ಪ್ರಸಕ್ತ ಆವೃತ್ತಿಯ ಐಪಿಎಲ್, ಧೋನಿ ವೃತ್ತಿಜೀವನದ ಅಂತಿಮ ಪಂದ್ಯ ಎಂದು ಅಭಿಮಾನಿಗಳಲ್ಲಿ ಅಭಿಪ್ರಾಯವಿದೆ. ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದಿದ್ದರೂ, ಅಭಿಮಾನಿಗಳು ಮಾತ್ರ ಇದು ಸತ್ಯ ಎಂದುಕೊಂಡಿದ್ದಾರೆ. ಹೀಗಾಗಿಯೇ ಧೋನಿಯವರ ಸಿಎಸ್‌ಕೆ ತಂಡದ ಪಂದ್ಯ ನಡೆಯುವ ಮೈದಾನದಲ್ಲೆಲ್ಲಾ ದೊಡ್ಡ ಸಂಖ್ಯೆಯಲ್ಲಿ ಹಳದಿ ಬಣ್ಣ ಕಾಣುತ್ತದೆ. ಸದ್ಯ ಅಭಿಮಾನಿಗಳಲ್ಲಿ ಇಂತಹ ಗೊಂದಲಗಳು ಇರುವ ನಡುವೆ, ಕ್ರಿಕೆಟ್‌ ಕ್ಷೇತ್ರದ ದಿಗ್ಗಜ ಕಪಿಲ್ ದೇವ್ ಅವರು ಧೋನಿಯ ನಿವೃತ್ತಿಯ ಬಗ್ಗೆ ಆಚ್ಚರಿಯ ಮಾತುಗಳನ್ನಾಡಿದ್ದಾರೆ.

ಕಳೆದ ಮೂರು ಸೀಸನ್‌ನಲ್ಲಿಯೂ ಧೋನಿ ನಿವೃತ್ತಿಯ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು. ಪ್ರತಿ ಬಾರಿಯೂ ಅದು ಮುಂದಿನ ವರ್ಷಕ್ಕೆ ಕುತೂಹಲಕಾರಿಯಾಗಿ ಸಾಗುತ್ತಾ ಬಂದಿದೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್‌ ಮ್ಯಾನೇಜ್‌ಮೆಂಟ್ ಆಗಲಿ, ಅಥವಾ ಧೋನಿಯಾಗಲಿ ಎಲ್ಲೂ ಖಚಿತಪಡಿಸಿಲ್ಲ. ಹೀಗಾಗಿ ಅಭಿಮಾನಿಗಳ ಊಹೆ ಮತ್ತು ಧೋನಿ ನಿವೃತ್ತಿಯ ಬಗೆಗಿನ ಚರ್ಚೆ ಕುರಿತಾಗಿ ಇಲ್ಲಸಲ್ಲದ ಊಹೆ ಮಾಡುತ್ತಿರುವ ವಿಶ್ವ ಕ್ರಿಕೆಟ್ ಅನ್ನು ಕಪಿಲ್‌ ದೇವ್‌ ಲೇವಡಿ ಮಾಡಿದ್ದಾರೆ.

ಧೋನಿ ಯಾವಾಗ ನಿವೃತ್ತಿ ಘೋಷಿಸುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. 2014ರಲ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಯಾರೂ ಅದನ್ನು ನಂಬಲಿಲ್ಲ. ಆ ಬಳಿಕ 2020ರಲ್ಲಿ ಅಂತಾರಾಷ್ಟ್ರೀಯ ನಿವೃತ್ತಿಯನ್ನು ಕೂಡಾ ಯಾರೂ ನಿರೀಕ್ಷಿಸಿರಲಿಲ್ಲ.

ಭಾನುವಾರ ಎಬಿಪಿ ನ್ಯೂಸ್‌ ಜೊತೆಗೆ ಮಾತನಾಡಿದ ಕಪಿಲ್ ದೇವ್, ಧೋನಿ ಅವರ ನಿವೃತ್ತಿಯ ಕುರಿತಾಗಿ ಚರ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ. ಐಪಿಎಲ್‌ನಲ್ಲಿ 15 ವರ್ಷಗಳ ಕಾಲ ಆಡಿದ ಅವರಿಗೆ ಅಭಿಮಾನಿಗಳು ಕೃತಜ್ಞರಾಗಿರಬೇಕು ಎಂದು ಹೇಳಿದರು. ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್‌ ಪಂದ್ಯದ ಬಳಿಕ ಧೋನಿ ವಿದಾಯ ಹೇಳಿದರೂ, ಅವರು ಪ್ರಭಾವಶಾಲಿ ದಾಖಲೆಗಳೊಂದಿಗೆ ಕ್ರೀಡೆಯನ್ನು ತೊರೆದಿದ್ದಾರೆ ಎಂಬ ಅಂಶವನ್ನು ವಿಶ್ವ ಕ್ರಿಕೆಟ್ ಶ್ಲಾಘಿಸಬೇಕು ಎನ್ನುವ ಮೂಲಕ ಕಪಿಲ್‌ ದೇವ್ ಗಮನಸೆಳೆದಿದ್ದಾರೆ.

“ಅವರು 15 ವರ್ಷಗಳಿಂದ ಐಪಿಎಲ್ ಆಡುತ್ತಿದ್ದಾರೆ. ಆದರೆ ನಾವು ಧೋನಿ ನಿವೃತ್ತಿ ಬಗ್ಗೆ ಮಾತ್ರ ಏಕೆ ಮಾತನಾಡುತ್ತಿದ್ದೇವೆ? ಅವರು ಮಾಡಬೇಕಿದ್ದ ಕೆಲಸವನ್ನು ಅವರು ಮಾಡಿದ್ದಾರೆ. ಅವರಿಂದ ನಮಗೆ ಇನ್ನೇನು ಬೇಕು? ತಮ್ಮ ಜೀವನದುದ್ದಕ್ಕೂ ಆಡಬೇಕೆಂದು ನಾವೇಕೆ ಬಯಸಬೇಕು? ಹಾಗಾಗುವುದಿಲ್ಲ. ಅದರ ಬದಲಿಗೆ ಅವರು 15 ವರ್ಷಗಳ ಕಾಲ ಆಡಿರುವುಕ್ಕೆ ನಾವು ಕೃತಜ್ಞರಾಗಿರಬೇಕು. ಮುಂದಿನ ವರ್ಷ ಅವರು ಆಡಲಿ ಬಿಡಲಿ. ಕ್ರಿಕೆಟ್‌ನಿಂದ ನಿರ್ಗಮಿಸುವ ಮುನ್ನ ಆಕರ್ಷಕವಾಗಿ ಆಡಿದ್ದಾರೆ. ಅವರು ಬೃಹತ್‌ ರನ್ ಕಲೆ ಹಾಕದೇ ಇರಬಹುದು. ಆದರೆ ಅವರು ತಮ್ಮ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದಾರೆ. ಕ್ರಿಕೆಟ್ ಆಟದಲ್ಲಿ ಇದು ನಾಯಕನ ಪ್ರಾಮುಖ್ಯತೆಯನ್ನು ತೋರಿಸುತ್ತದೆ,” ಎಂದು ಅವರು ಹೇಳಿದರು.

ಈ ವರ್ಷವೇ ಧೋನಿ ವಿದಾಯ ಹೇಳುತ್ತಾರೋ ಇಲ್ಲವೋ ಎನ್ನವುದಕ್ಕೆ ಇಂದು ಸ್ಪಷ್ಟನೆ ಸಿಗಲಿದೆ.