ಕನ್ನಡ ಸುದ್ದಿ  /  Sports  /  Cricket News Ipl 2023 Final Ms Dhoni Retirement Chennai Super Kings Vs Gujarat Titans Ahamedabad Harsha Bhogle Jra

MS Dhoni: ನಿವೃತ್ತಿ ಘೋಷಿಸಲು ಉತ್ತಮ ಸಮಯ, ಆದರೆ; ಫೈನಲ್ ಬಳಿಕ ಭೋಗ್ಲೆ ಹಾಗೂ ಮಾಹಿ ನಡುವಿನ ಸಂಭಾಷಣೆ ಹೀಗಿತ್ತು

ಸದ್ಯ ನಿವೃತ್ತಿ ಘೋಷಣೆ ಮಾಡುವುದದಿಲ್ಲ ಎಂದು ಸಿಎಸ್‌ಕೆ ನಾಯಕ ಎಂಎಸ್‌ ಧೋನಿ ಪರೋಕ್ಷವಾಗಿ ಹೇಳಿದ್ದಾರೆ. ತಮ್ಮ ಆರೋಗ್ಯ ನೋಡಿಕೊಂಡು ಮುಂದಿನ ತಿಂಗಳುಗಳಲ್ಲಿ ಈ ಬಗ್ಗೆ ನಿರ್ಧರಿಸುವುದಾಗಿ ಅವರು ಹೇಳಿದ್ದಾರೆ.

ಸಿಎಸ್‌ಕೆ ನಾಯಕ ಧೋನಿ
ಸಿಎಸ್‌ಕೆ ನಾಯಕ ಧೋನಿ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ತಡರಾತ್ರಿ ಐಪಿಎಲ್‌ 16ನೇ ಆವೃತ್ತಿಯ ಫೈನಲ್ ಪಂದ್ಯ ನಡೆಯಿತು. ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಎಂಎಸ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಐದು ವಿಕೆಟ್‌ಗಳಿಂದ ಗೆದ್ದು, ದಾಖಲೆಯ ಐದನೇ ಐಪಿಎಲ್‌ ಟ್ರೋಫಿ ತನ್ನದಾಗಿಸಿತು. ಈ ವೇಳೆ ಮೈದಾನ ಪೂರ್ತಿ ತುಂಬಿದ್ದ ಚೆನ್ನೈ ಅಭಿಮಾನಿಗಳ ಹರ್ಷೋದ್ಘಾರ ಮುಗಿಲೆತ್ತರ ತಲುಪಿತು. ಇದಾದ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನ ಬಹುದಿನಗಳ ನಿರೀಕ್ಷೆಯಂತೆಯೇ ಕೂಲ್‌ ಕ್ಯಾಪ್ಟನ್‌ ಎಂಎಸ್‌ ಧೋನಿ ಬಾಯಿಯಿಂದ ನಿವೃತ್ತಿ ಕುರಿತ ಮಾತುಗಳು ಕೇಳಿಬಂತು. ಇದು ಅಹಮದಾಬಾದ್ ಮೈದಾನದಲ್ಲಿ ಲಕ್ಷ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರ ಅಚ್ಚರಿಗೆ ಕಾರಣವಾಯ್ತು.

ಐಪಿಎಲ್‌ನ ಪ್ರಸಕ್ತ ಆವೃತ್ತಿಗೂ ಮುನ್ನ, ಧೋನಿ ವಿದಾಯ ಬಹುತೇಕ ಖಚಿತವಾಗಿತ್ತು. ಇದೇ ಕಾರಣಕ್ಕೆ ಸಿಎಸ್‌ಕೆ ಪಂದ್ಯಗಳು ನಡೆದಲ್ಲೆಲ್ಲಾ ಮಾಹಿಗಾಗಿ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದರು. ಧೋನಿಗೆ ವಿದಾಯ ಘೋಷಿಸಿದರೆ, ಅವರ ಆಟವನ್ನು ಮೈದಾನದಲ್ಲಿ ಕೊನೆಯ ಬಾರಿಗೆ ನೋಡಬೇಕು ಎಂಬ ಭಾವನೆ ಅಭಿಮಾನಿಗಳಲ್ಲಿತ್ತು. ಅದರಂತೆಯೇ, ಚೆನ್ನೈ ಸೂಪರ್‌ ಕಿಂಗ್ಸ್‌ ಐದನೇ ಟ್ರೋಫಿ ಗೆದ್ದ ಬೆನ್ನಲ್ಲೇ ಧೋನಿ ಐಪಿಎಲ್‌ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

ಪಂದ್ಯದ ಬಳಿಕ ಸಂಪ್ರದಾಯದಂತೆ, ಗೆದ್ದ ತಂಡದ ನಾಯಕನನ್ನು ಮಾತನಾಡಿಸಲಾಯ್ತು. ಗೆದ್ದ ತಂಡದ ನಾಯಕ ಮಾಹಿಯನ್ನು ಅಂತಿಮವಾಗಿ ಕರೆಯಲಾಯಿತು. ಈ ವೇಳೆ ಧೋನಿ ಜೊತೆಗೆ ಮಾತಿಗಿಳಿದ ನಿರೂಪಕ ಹರ್ಷಾ ಭೋಗ್ಲೆ, ಸಮಯ ವ್ಯರ್ಥ ಮಾಡದೆ ನೇರವಾಗಿ ಧೋನಿಗೆ ಪ್ರಶ್ನೆ ಕೇಳಿದರು. ಈ ಸಂಭಾಷಣೆ ಹೀಗಿತ್ತು.

ಹರ್ಷ ಭೋಗ್ಲೆ: ನಾವು ಮತ್ತೆ ಭೇಟಿಯಾಗುತ್ತೇವೆ. ಪ್ರಶಸ್ತಿಗಳನ್ನು ಗೆದ್ದ ಬಳಿಕ ನಾವು ಆಗಾಗ ಭೇಟಿಯಾಗುವಂತೆ ನಾವು ಮತ್ತೆ ಭೇಟಿಯಾಗುತ್ತಿದ್ದೇವೆ. ಈಗ ನಾನೇ ನಿಮ್ಮಲ್ಲಿ ಏನಾದರೂ ಕೇಳಬೇಕೇ ಅಥವಾ ನೀವೇ ಏನಾದರೂ ಹೇಳುವುದಿದೆಯಾ?

ಎಂಎಸ್ ಧೋನಿ: ನೀವೇ ಕೇಳಿದರೆ ಒಳ್ಳೆಯದು. ಅದಕ್ಕೆ ನಾನು ಉತ್ತರಿಸುತ್ತೇನೆ.

ಹರ್ಷಾ ಭೋಗ್ಲೆ: ನೀವು ಕೊನೆಯ ಬಾರಿ ಟ್ರೋಫಿ ಗೆದ್ದಾಗ, ನಾನು ನಿಮ್ಮಲ್ಲಿ ಕೇಳಿದ್ದೆ. ಸಿಎಸ್‌ಕೆ ತಂಡದಲ್ಲಿ ನೀವು ಬಿಟ್ಟುಹೋಗುವ ಪರಂಪರೆಯ ಬಗ್ಗೆ ನಾನು ಉಲ್ಲೇಖಿಸಿದ್ದೆ. ಆಗ ನೀವು ನಾನು ಇನ್ನೂ ಅದನ್ನು ಬಿಟ್ಟಿಲ್ಲ ಎಂದು ಹೇಳಿದ್ರಿ.

ಈ ವೇಳೆ ಧೋನಿ ಬಾಯಿಂದ ಅತ್ಯಮೂಲ್ಯ ಮಾತುಗಳು ಹೊರಬಂದವು. ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸೂಕ್ತ ಸಮಯ ಎಂದು ಧೋನಿ ಒಪ್ಪಿಕೊಂಡರು. ಇದೇ ವೇಳೆ ಅಭಿಮಾನಿಗಳ ಬೆಂಬಲವನ್ನು ಮೆಚ್ಚಿದ ಮಾಹಿ, ಮತ್ತೊಂದು ಋತುವಿನಲ್ಲಿ ಆಡಲು ಮುಕ್ತವಾಗಿರುವುದಾಗಿ ಘೋಷಿಸಿದರು. ಅಂದರೆ ಮುಂದಿನ ವರ್ಷವೂ ಪುನರಾಗಮನ ಮಾಡಲು ಬಯಸುವುದಾಗಿ ಚೆನ್ನೈ ನಾಯಕ ತಿಳಿಸಿದ್ದಾರೆ. ಐಪಿಎಲ್ 2024ರ ಆವೃತ್ತಿಯಲ್ಲಿ ಭಾಗವಹಿಸುವ ಬಗ್ಗೆ ಮಹತ್ವದ ಮತ್ತು ಅತಿ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಒಂಬತ್ತು ತಿಂಗಳುಗಳಿವೆ ಎಂದು ಮಾಹಿ ಹೇಳಿದರು.

ಧೋನಿ: ಉತ್ತರಕ್ಕೆ ಎದುರು ನೋಡುತ್ತಿದ್ದೀರಾ? ಸಾಂದರ್ಭಿಕವಾಗಿ ನೀವು ಗಮನಿಸಿದರೆ, ನಾನು ನಿವೃತ್ತಿ ಘೋಷಿಸಲು ಇದು ಸೂಕ್ತ ಸಮಯ. ಆದರೆ ಈ ವರ್ಷ ನಾನು ಎಲ್ಲೇ ಹೋದರೂ, ನನಗೆ ಸಿಕ್ಕ ಪ್ರೀತಿ ಮತ್ತು ವಾತ್ಸಲ್ಯವನ್ನು ನೋಡಿದರೆ ಎಲ್ಲರಿಗೂ "ಧನ್ಯವಾದ" ಹೇಳುವುದು ನನ್ನ ಪಾಲಿಗೆ ತುಂಬಾ ಸುಲಭದ ಕೆಲಸ. ಆದರೆ, ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಕಾದು ಮತ್ತೆ ಕನಿಷ್ಠ 1 ಐಪಿಎಲ್ ಸೀಸನ್ ಆಡುವುದು. ಇದು ನನ್ನ ದೇಹವನ್ನು ಬಹಳಷ್ಟು ಅವಲಂಬಿಸಿರುತ್ತದೆ. ಈ ಬಗ್ಗೆ ನಿರ್ಧಾರಕ್ಕೆ ಬರಲು ನನಗಿನ್ನೂ 6-7 ತಿಂಗಳುಗಳಿವೆ. ಆವರೆಗೆ ನೋಡೋಣ. ಇದು ನನ್ನ ಕಡೆಯಿಂದ ನಿಮಗೆ ಉಡುಗೊರೆ. ಇದು ನನಗೆ ಅಷ್ಟೊಂದು ಸುಲಭವಲ್ಲ. ಆದರೆ ಇದು ಅಭಿಮಾನಿಗಳಿಗೆ ನಾನು ಕೊಡುವ ಉಡುಗೊರೆ. ಅವರು ನನ್ನ ಮೇಲೆ ತೋರಿದ ಪ್ರೀತಿ ಮತ್ತು ವಾತ್ಸಲ್ಯಕ್ಕೆ, ನಾನು ಅವರಿಗಾಗಿ ಏನಾದರೂ ಮಾಡಲೇಬೇಕು ಎಂದು ನಾನು ಭಾವಿಸುತ್ತೇನೆ.

ಈ ಉತ್ತರದೊಂದಿಗೆ, ಧೋನಿ ಸದ್ಯ ನಿವೃತ್ತಿ ಘೋಷಣೆ ಮಾಡುವುದದಿಲ್ಲ ಎಂಬುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ತಮ್ಮ ಆರೋಗ್ಯ ಹಾಗೂ ದೇಹವು ಆಟಕ್ಕೆ ಯಾವ ರೀತಿ ಬೆಂಬಲಿಸುತ್ತದೆ ಎಂಬುದನ್ನು ನೋಡಿಕೊಂಡು ಈ ಬಗ್ಗೆ ನಿರ್ಧರಿಸುವುದಾಗಿ ಅವರು ಹೇಳಿದ್ದಾರೆ.

ಧೋನಿ: ಇದು ನನ್ನ ವೃತ್ತಿಜೀವನದ ಕೊನೆಯ ಭಾಗವಾಗಿರುವುದರಿಂದ ಭಾವುಕನಾಗುವುದು ಸಹಜ. ನಮ್ಮ ಪಂದ್ಯ ಇದೇ ಮೈದಾನದಲ್ಲಿ ಪ್ರಾರಂಭವಾಯಿತು. ನಾನು ಇಲ್ಲಿ ನಡೆದಾಡುವಾಗೆಲ್ಲ ನನ್ನ ಹೆಸರನ್ನು ಜಪಿಸುತ್ತಿದ್ದರು(ಅಭಿಮಾನಿಗಳು). ನನ್ನ ಕಣ್ಣಾಲಿಗಳು ನೀರಿನಿಂದ ತುಂಬಿದ್ದವು. ನಾನು ಇದನ್ನು ಆನಂದಿಸಲು ಬಯಸುತ್ತೇನೆ ಎಂದು ನಾನು ಅರಿತುಕೊಂಡೆ. ಆ ಬಳಿಕ ಚೆನ್ನೈನಲ್ಲಿಯೂ ಹಾಗೆಯೇ ಆಯಿತು.

ಧೋನಿ: ನಾನು ಆಡುವ ರೀತಿಯ ಕ್ರಿಕೆಟ್ ಅನ್ನು, ಸ್ಟೇಡಿಯಂನಲ್ಲಿರುವ ಪ್ರತಿಯೊಬ್ಬರೂ ಆಡಬಹುದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅದರಲ್ಲಿ ಸಾಂಪ್ರದಾಯ ಎನ್ನುವಂಥದ್ದು ಏನೂ ಇಲ್ಲ. ನಾನು ಬದಲಾಗಲು ಬಯಸುವುದಿಲ್ಲ. ನನ್ನನ್ನು ನಾನಲ್ಲದ ರೀತಿಯಲ್ಲಿ ಚಿತ್ರಿಸಿಕೊಳ್ಳಲು ಎಂದಿಗೂ ಬಯಸುವುದಿಲ್ಲ. ನಾನು ಎಲ್ಲವನ್ನೂ ಸರಳವಾಗಿರಿಸಿಕೊಳ್ಳುತ್ತೇನೆ, ಎಂದು ಮಾಹಿ ಹೇಳಿದ್ದಾರೆ.