ಕನ್ನಡ ಸುದ್ದಿ  /  Sports  /  Cricket News Ipl 2023 Final Sachin Tendulkar Reaction For Ms Dhoni After Chennai Super Kings Win Fifth Ipl Trophy Jra

Sachin Tendulkar: ಸಿಎಸ್‌ಕೆ ಐಪಿಎಲ್ ಟ್ರೋಫಿ ಗೆಲ್ಲಲು ಪ್ರಮುಖ ಕಾರಣ ತಿಳಿಸಿದ ತೆಂಡೂಲ್ಕರ್; ಮಾಹಿಗೆ ವಿಶೇಷ ಶ್ಲಾಘನೆ

IPL 2023 final: ಸಚಿನ್ ತೆಂಡೂಲ್ಕರ್ ಅವರು ಐಪಿಎಲ್ 2023ರ ಫೈನಲ್‌ನಲ್ಲಿ ಗೆದ್ದ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಶ್ಲಾಘಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಅವರ ಫೈಲ್ ಫೋಟೋ
ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಅವರ ಫೈಲ್ ಫೋಟೋ

ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಐಪಿಎಲ್ 2023ರ (IPL 2023 final) ಆವೃತ್ತಿಯಲ್ಲಿ ರೋಚಕ ಜಯ ಸಾಧಿಸಿತು. ಕೊನೆಯ ಎಸೆತದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಚೆನ್ನೈ ಮಣಿಸಿದ ನಂತರ, ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಉಭಯ ತಂಡಗಳಿಗೂ ಶುಭಕೋರಿದ್ದಾರೆ. ಇದೇ ವೇಳೆ ಕೂಲ್ ಕ್ಯಾಪ್ಟನ್ ಮಾಹಿ ಹೆಸರನ್ನು ವಿಶೇಷವಾಗಿ ನಮೂದಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸೋಮವಾರ ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿದರು. ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಸಿಎಸ್‌ಕೆ ತಂಡಕ್ಕೆ ಐದನೇ ಐಪಿಎಲ್ ಟ್ರೋಫಿ ಗೆಲ್ಲಲು ನೆರವಾದರು.

ಸುದೀರ್ಘ ಅವಧಿಯ ಟೂರ್ನಿಯ ಫೈನಲ್‌ ಪಂದ್ಯ ಮುಗಿದ ಬೆನ್ನಲ್ಲೇ, ವಿಶ್ವ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್‌ ಸಚಿನ್ ತೆಂಡೂಲ್ಕರ್ ಟ್ವೀಟ್‌ ಮಾಡಿದ್ದಾರೆ. ಧೋನಿ ನೇತೃತ್ವದ ಸಿಎಸ್‌ಕೆ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್‌ ತಂಡವನ್ನು ಸಚಿನ್‌ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

“ಮತ್ತೊಂದು ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ಧೋನಿ ಹಾಗೂ ಸಂಪೂರ್ಣ ಚೆನ್ನೈ ತಂಡಕ್ಕೆ ಅಭಿನಂದನೆಗಳು. ಕೊನೆಯ ಎಸೆತದವರೆಗೂ ಕಠಿಣ ಸ್ಪರ್ಧೆಯೊಡ್ಡಿದ ಗುಜರಾತ್ ಟೈಟಾನ್ಸ್ ತಂಡದ ಪ್ರಯತ್ನವನ್ನು ಶ್ಲಾಘಿಸಲೇಬೇಕು. ದುರದೃಷ್ಟವಶಾತ್, ಕ್ರೀಡೆಯಲ್ಲಿ ಯಾವುದಾದರೂ ಒಂದು ತಂಡ ಮಾತ್ರ ಗೆಲ್ಲಲು ಸಾಧ್ಯ. ಆದರೆ, ಉಭಯ ತಂಡಗಳು ನಮ್ಮೆಲ್ಲರ ಹೃದಯವನ್ನು ಗೆದ್ದಿವೆ. ಎಲ್ಲರೂ ಚೆನ್ನಾಗಿ ಆಡಿದರು” ಎಂದು ಸಚಿನ್ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಮುಂಬೈ ಇಂಡಿಯನ್ಸ್‌ ತಂಡದ ಮೆಂಟರ್‌ ಆಗಿರುವ ಸಚಿನ್‌, ಸಿಎಸ್‌ಕೆ ತಂಡವು ಬ್ಯಾಟಿಂಗ್‌ನಲ್ಲಿ ಹೊಂದಿರುವ ಆಳವು ಅವರ ಗೆಲುವಿಗೆ ಪ್ರಮುಖ ಕಾರಣವೆಂದು ಸೂಚಿಸಿದರು.

“ಅತ್ಯಂತ ರೋಮಾಂಚನಕಾರಿ ಐಪಿಎಲ್ ಸೀಸನ್‌ ಮುಕ್ತಾಯಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಕಠಿಣ ಪೈಪೋಟಿ ನೀಡಿದವು. ಆದರೆ ಚೆನ್ನೈ ತಂಡವು ಬ್ಯಾಟಿಂಗ್‌ನಲ್ಲಿ ಹೊಂದಿರುವ ಆಳವು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಾಬೀತಾಯಿತು. ವಿಜೇತರನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಆರಂಭದಿಂದಲೂ ಉಭಯ ತಂಡಗಳು ಅಸಾಧಾರಣ ಪ್ರದರ್ಶನ ನೀಡಿವೆ. ಕೊನೆಯ ಎಸೆತದವರೆಗೂ ಪಂದ್ಯವು ರೋಚಕತೆಯಿಂದ ಕೂಡಿತ್ತು,” ಎಂದು ಅವರು ಬರೆದುಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​​ ತಂಡವು ಐಪಿಎಲ್‌ನಲ್ಲಿ 5ನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಆ ಮೂಲಕ ಈಗಾಗಲೇ 5 ಸಲ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್​​ ದಾಖಲೆ ಸಮಗೊಳಿಸಿದೆ. ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್​​ನಲ್ಲಿ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿಯಲ್ಲಿ ಧೋನಿ 2ನೇ ಸ್ಥಾನ ಪಡೆದಿದ್ದಾರೆ. ಹಾರ್ದಿಕ್​ ಪಾಂಡ್ಯ, ಕಿರನ್​ ಪೊಲಾರ್ಡ್​ ಕೂಡ 5 ಬಾರಿ ಟ್ರೋಫಿ ಗೆದ್ದಿದ್ದಾರೆ. ಇದೀಗ ಇವರ ಸಾಲಿಗೆ ಧೋನಿ ಸೇರಿದ್ದಾರೆ. ರೋಹಿತ್​ ಶರ್ಮಾ ಮತ್ತು ಅಂಬಟಿ ರಾಯಡು ತಲಾ 6 ಬಾರಿ ಫೈನಲ್ ಪಂದ್ಯ​ ಗೆದ್ದ ತಂಡದ ಭಾಗವಾಗಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾದರು. ರೋಹಿತ್​ ಶರ್ಮಾ 243 ಪಂದ್ಯಗಳು, ದಿನೇಶ್​ ಕಾರ್ತಿಕ್​ 242 ಪಂದ್ಯಗಳಲ್ಲಿ ಕಣಕ್ಕಿಳಿದು ಧೋನಿ ನಂತರದ ಸ್ಥಾನದಲ್ಲಿದ್ದಾರೆ. 237 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿರಾಟ್​ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಅತಿ ಹೆಚ್ಚು ಐಪಿಎಲ್ ಫೈನಲ್ ಪಂದ್ಯಗಳನ್ನಾಡಿದ ಆಟಗಾರ​ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​​ ಪರ ಒಟ್ಟು 10 ಫೈನಲ್​ ಪಂದ್ಯಗಳನ್ನಾಡಿರುವ ಧೋನಿ, ರೈಸಿಂಗ್ ಪುಣೆ ಜೈಂಟ್ಸ್​ ಪರವೂ ಒಂದು ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

ಸಂಬಂಧಿತ ಲೇಖನ