ಕನ್ನಡ ಸುದ್ದಿ  /  Sports  /  Cricket News Ipl 2023 Final Sunil Gavaskar On Gujarat Titans Skipper Hardik Pandya Msd Ms Dhoni Csk Vs Gt Jra

Sunil Gavaskar: ಐಪಿಎಲ್ ಫೈನಲ್‌ಗೂ ಮುನ್ನ ಹಾರ್ದಿಕ್ ನಾಯಕತ್ವ ಹೊಗಳಿದ ಗವಾಸ್ಕರ್; ಮಾಹಿಯಂತೆಯೇ ಕೂಲ್ ಎಂದ ದಿಗ್ಗಜ

IPL 2023 Final: ಗುಜರಾತ್ ಟೈಟಾನ್ಸ್ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಐಪಿಎಲ್ ಫೈನಲ್‌ ಪಂದ್ಯಕ್ಕೂ ಮುನ್ನ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಪಾಂಡ್ಯ ನಾಯಕತ್ವ ಕುರಿತು ಮಾತನಾಡಿದ್ದಾರೆ. ಈ ವೇಳೆ ಎಂಎಸ್‌ ಧೋನಿ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್ (PTI-ANI)

ಐಪಿಎಲ್‌ನ 2022ರ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ಆ ಬಳಿಕ ಭಾರತ ಟಿ20 ತಂಡದ ನಾಯಕನಾಗಿ ಬಡ್ತಿ ಪಡೆದರು. ಗುಜರಾತ್‌ ತಂಡದ ಮೂಲಕ ನಾಯಕತ್ವ ವಹಿಸಿದ ಚೊಚ್ಚಲ ಪ್ರಯತ್ನದಲ್ಲೇ ಯಶಸ್ಸು ಕಂಡ ಹಾರ್ದಿಕ್, ತಂಡಕ್ಕೆ ಮಹತ್ವದ ಟ್ರೋಫಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸತತ ಎರಡನೇ ವರ್ಷವೂ ತಮ್ಮ ತಂಡವನ್ನು ಐಪಿಎಲ್ ಫೈನಲ್‌ವರೆಗೆ ಕೊಂಡೊಯ್ದಿರುವ ಅವರು,‌ ಸದ್ಯ ಮತ್ತೊಂದು ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ಸ್ಟಾರ್ ಆಲ್‌ರೌಂಡರ್ ಟೀಮ್‌ ಇಂಡಿಯಾ ನಾಯಕತ್ವದ ಗುಂಪಿನ ಅವಿಭಾಜ್ಯ ಅಂಗವಾಗಿದ್ದಾರೆ. ಭಾರತದ ವೈಟ್ ಬಾಲ್ ತಂಡದ ಉಪನಾಯಕ ಪಾಂಡ್ಯ, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ಐತಿಹಾಸಿಕ ಸಾಧನೆಗಳನ್ನು ಪುನರಾವರ್ತಿಸುವ ಅಂಚಿನಲ್ಲಿದ್ದಾರೆ.

ಈ ಬಾರಿಯೂ ಗುಜರಾತ್‌ ಟೈಟಾನ್ಸ್‌ ತಂಡವು ಫೈನಲ್‌ ಪಂದ್ಯದಲ್ಲಿ ಗೆದ್ದರೆ, ಐಪಿಎಲ್ ಇತಿಹಾಸದಲ್ಲಿ ಸತತ ಕಪ್ ಗೆದ್ದ ಮೂರನೇ ತಂಡ ಎನಿಸಿಕೊಳ್ಳಲಿದೆ.‌ ಈಗಾಗಲೇ ಮುಂಬೈ ಹಾಗೂ ಸಿಎಸ್‌ಕೆ ತಂಡಗಳು ಈ ಸಾಧನೆ ಮಾಡಿವೆ. ಅತ್ತ ಭಾರತದ ಎವರ್‌ಗ್ರೀನ್‌ ಕೂಲ್‌ ಕ್ಯಾಪ್ಟನ್‌ ಎಂಎಸ್ ಧೋನಿ ನಾಯಕತ್ವದಲ್ಲಿ ದಾಖಲೆಯ ಐದನೇ ಟ್ರೋಫಿ ಮೇಲೆ ಸಿಎಸ್‌ಕೆ ಕಣ್ಣಿಟ್ಟಿದೆ.

ಸಿಎಸ್‌ಕೆ ನಾಯಕ ಧೋನಿಯವರೊಂದಿಗೆ ಆಡಿರುವ ಪಾಂಡ್ಯ, ಹಿರಿಯ ಕ್ರಿಕೆಟಿಗನಿಂದ ಕ್ರಿಕೆಟ್ ಕುರಿತ ಹಲವು ಸೂಕ್ಷ್ಮಗಳನ್ನು ಕಲಿತಿದ್ದಾರೆ. ಗುಜರಾತ್ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಐಪಿಎಲ್ ಫೈನಲ್‌ ಪಂದ್ಯಕ್ಕೂ ಮುನ್ನ ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಪಾಂಡ್ಯ ಅವರ ನಾಯಕತ್ವ ಮತ್ತು ಧೋನಿಯೊಂದಿಗಿನ ಅವರ ಒಡನಾಟದ ಬಗ್ಗೆ ಗಮನಾರ್ಹ ಹೇಳಿಕೆಯನ್ನು ನೀಡಿದ್ದಾರೆ.

“ಧೋನಿಯ ವೃತ್ತಿಜೀವನವನ್ನು ಅನುಸರಿಸಿದ ಎಲ್ಲರಂತೆ ಕೂಲ್‌ ಕ್ಯಾಪ್ಟನ್‌ ಮೇಲಿನ ಅಭಿಮಾನ ಮತ್ತು ಪ್ರೀತಿಯ ಬಗ್ಗೆ ಹಾರ್ದಿಕ್ ತುಂಬಾ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅವರು ಟಾಸ್ ಪ್ರಕ್ರಿಯೆ ನಡೆಯುವ ವೇಳೆಯೂ, ತುಂಬಾ ಆತ್ಮೀಯವಾಗಿ ನಗುತ್ತಾ ಮಾತನಾಡುತ್ತಾರೆ. ಆದರೆ, ಪಂದ್ಯದ ವೇಳೆ ವಾತಾವರಣವು ಸಂಪೂರ್ಣ ವಿಭಿನ್ನಗಿರುತ್ತದೆ. ಹಾರ್ದಿಕ್ ಪಾಂಡ್ಯ ಅವರು ಎಷ್ಟು ಬೇಗನೆ ಕಲಿತಿದ್ದಾರೆ ಎಂಬುದನ್ನು ತೋರಿಸಿಕೊಳ್ಳಲು ಇದು ಉತ್ತಮ ಅವಕಾಶ,” ಎಂದು ಗಾವಸ್ಕರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಭಾರತದ ಮಾಜಿ ನಾಯಕ ಧೋನಿ ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಮ್ಮ 11ನೇ ಐಪಿಎಲ್ ಫೈನಲ್‌ನಲ್ಲಿ ಆಡುತ್ತಿದ್ದಾರೆ. ಇದೇ ವೇಳೆ ಜಿಟಿ ನಾಯಕ ಪಾಂಡ್ಯ ತಮ್ಮ ವೃತ್ತಿಜೀವನದಲ್ಲಿ ಐದನೇ ಐಪಿಎಲ್ ಫೈನಲ್‌ ಆಡುತ್ತಿದ್ದಾರೆ. ವಿಶೇಷವೆಂದರೆ, ಪಾಂಡ್ಯ ಐಪಿಎಲ್ ಫೈನಲ್‌ನಲ್ಲಿ ಇದುವರೆಗೆ ಸೋತಿಲ್ಲ.

“ಕಳೆದ ವರ್ಷ ಅವರು ಮೊದಲ ಬಾರಿಗೆ ನಾಯಕತ್ವ ವಹಿಸಿದಾಗ, ಅವರಿಂದ ಏನನ್ನು ನಿರೀಕ್ಷಿಸಬಹುದು ಎಂದು ಯಾರಿಗೂ ತಿಳಿದಿರಲಿಲ್ಲ. ಏಕೆಂದರೆ ಅವರೊಬ್ಬ ಅತ್ಯಂತ ರೋಮಾಂಚನಕಾರಿ ಕ್ರಿಕೆಟಿಗ. ಅದನ್ನು ನಾವು ಕಳೆದ ವರ್ಷ ನೋಡಿದ್ದೇವೆ. ಅವರು ಮೈದಾನದಲ್ಲಿ ಕಾಯ್ದುಕೊಳ್ಳುವ ಶಾಂತತೆಯು ತಂಡಕ್ಕೆ ಧೋನಿಯನ್ನು ನೆನಪಿಸುತ್ತದೆ. ಈ ತಂಡವು ಸಂಪೂರ್ಣ ಸಂತೋಷದಿಂದಿರುವ ತಂಡ. ಸಿಎಸ್‌ಕೆ ತಂಡದಲ್ಲೂ ಇದೇ ರೀತಿಯ ವಾತಾವರಣವನ್ನು ನಾವು ನೋಡಬಹುದು. ಇದರ ಹಿಂದಿನ ಎಲ್ಲಾ ಗೌರವವೂ ಪಾಂಡ್ಯ ಅವರಿಗೆ ಸಲ್ಲಬೇಕು,” ಎಂದು ಗವಾಸ್ಕರ್ ಹೊಗಳಿದ್ದಾರೆ.