ಕನ್ನಡ ಸುದ್ದಿ  /  Sports  /  Cricket News Ipl 2023 Gujarat Titans Vs Lucknow Super Giants Match Preview And Playing Eleven Krunal Pandya Jra

GT vs LSG: ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಕೃನಾಲ್‌ಗೆ ನಾಯಕತ್ವ; ಗುಜರಾತ್ ಲಖನೌ ಸಂಭಾವ್ಯ ತಂಡ ಹೀಗಿದೆ

ಲಖನೌ ನಾಯಕ ರಾಹುಲ್ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯದ ನಂತರ ಟೂರ್ನಿಯ ಉಳಿದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಗಾಯಕ್ಕೂ ಮುನ್ನ ರಾಹುಲ್ ಈ ಋತುವಿನಲ್ಲಿ ತಂಡಕ್ಕಾಗಿ 274 ರನ್ ಗಳಿಸಿದ್ದಾರೆ. ಸದ್ಯ ರಾಹುಲ್ ಅನುಪಸ್ಥಿತಿಯಲ್ಲಿ ಕೃನಾಲ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ.

ಕೃನಾಲ್‌ ಪಾಂಡ್ಯ
ಕೃನಾಲ್‌ ಪಾಂಡ್ಯ (PTI)

ಇಂದು (ಮೇ 7) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium)ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಸೆಣಸಾಡಲಿದೆ. ಸಿಎಸ್‌ಕೆ ವಿರುದ್ಧದ ಕೊನೆಯ ಪಂದ್ಯವು ಮಳೆಯಿಂದ ಡ್ರಾಗೊಂಡಿದ್ದು, ಈ ಪಂದ್ಯದಲ್ಲಿ ಗೆಲುವಿನ ಪ್ರಯತ್ನಕ್ಕೆ ಲಖನೌ ಕೈ ಹಾಕಲಿದೆ. ಅಲ್ಲದೆ, ನಾಯಕ ಕೆಎಲ್‌ ರಾಹುಲ್ ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದು, ಇದು ಲಖನೌಗೆ ಭಾರಿ ಆಘಾತ ತಂಡಿದೆ. ಇದೇ ವೇಳೆ ಕಳೆದ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿರುವ ಗುಜರಾತ್‌, ಮೊದಲ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆ ಹಾಕುವ ಯೋಜನೆಯಲ್ಲಿದೆ.

ಲಖನೌನಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಲೋ ಸ್ಕೋರಿಂಗ್‌ ಪಂದ್ಯದಲ್ಲಿ ಸೋತಿದ್ದ ಕೆಎಲ್ ರಾಹುಲ್ ಬಳಗವು, ಸಿಎಸ್‌ಕೆ ವಿರುದ್ಧದ ನಂತರದ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿತ್ತು. ಇದುವರೆಗೆ ಆಡಿರುವ ಹತ್ತು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿರುವ ಸೂಪರ್‌ ಜೈಂಟ್ಸ್ ನಾಲ್ಕರಲ್ಲಿ ಸೋತು ಹನ್ನೊಂದು ಅಂಕಗಳನ್ನು ಸಂಪಾದಿಸಿದೆ.

ಕೈಲ್ ಮೇಯರ್ಸ್ ಈ ಋತುವಿನಲ್ಲಿ ನಾಲ್ಕು ಅರ್ಧಶತಕಗಳೊಂದಿಗೆ 311 ರನ್ ಗಳಿಸಿದ್ದಾರೆ. ನಿಕೋಲಸ್ ಪೂರನ್ ಮತ್ತು ಮಾರ್ಕಸ್ ಸ್ಟೊಯ್ನಿಸ್ ಕ್ರಮವಾಗಿ 245 ಮತ್ತು 235 ರನ್ ಗಳಿಸಿದ್ದಾರೆ. ಮೇಯರ್ಸ್ ಅಗ್ರ ಕ್ರಮಾಂಕದಲ್ಲಿ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಕ್ವಿಂಟನ್ ಡಿ ಕಾಕ್ ಈ ಋತುವಿನಲ್ಲಿ ಆಡಿಲ್ಲ. ಬದೋನಿ ಮತ್ತು ಪಾಂಡ್ಯ ಕೂಡ ತಂಡದ ಬ್ಯಾಟಿಂಗ್ ಲೈನಪ್‌ಗೆ ಉತ್ತಮ ಕೊಡುಗೆ ನೀಡಿದ್ದಾರೆ.

ದೀಪಕ್ ಹೂಡಾ ಈ ಋತುವಿನಲ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಇದೇ ಕಾರಣದಿಂದಾಗಿ ಸಿಎಸ್‌ಕೆ ವಿರುದ್ಧದ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಈ ಋತುವಿನಲ್ಲಿ ಅವರು ಇಲ್ಲಿಯವರೆಗೆ ಕೇವಲ 53 ರನ್ ಮಾತ್ರ ಗಳಿಸಿದ್ದಾರೆ. ಐಪಿಎಲ್‌ನ 2022ರ ಆವೃತ್ತಿಯಲ್ಲಿ ಅವರು 400ಕ್ಕೂ ಹೆಚ್ಚು ರನ್ ಗಳಿಸಿದ್ದರು.

ತಂಡದ ಕಾಯಂ ನಾಯಕ ರಾಹುಲ್ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯದ ನಂತರ ಟೂರ್ನಿಯ ಉಳಿದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಗಾಯಕ್ಕೂ ಮುನ್ನ ರಾಹುಲ್ ಈ ಋತುವಿನಲ್ಲಿ ತಂಡಕ್ಕಾಗಿ 274 ರನ್ ಗಳಿಸಿದ್ದಾರೆ. ಸದ್ಯ ರಾಹುಲ್ ಅನುಪಸ್ಥಿತಿಯಲ್ಲಿ ಕೃನಾಲ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ.

ಅತ್ತ ಹಾಲಿ ಚಾಂಪಿಯನ್‌ ಗುಜರಾತ್‌ ತಂಡವು ಇದುವರೆಗೆ ಆಡಿರುವ ಹತ್ತು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದಿದೆ. ಮೂರರಲ್ಲಿ ಮಾತ್ರ ಸೋತಿರುವ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಮ್ಮೆ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುವ ಹಾದಿಯಲ್ಲಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು, ಈ ಋತುವಿನಲ್ಲಿ ಎಲ್‌ಎಸ್‌ಜಿ ವಿರುದ್ಧ ಎರಡನೇ ಗೆಲುವಿನೊಂದಿಗೆ ಅಗ್ರಸ್ಥಾನವನ್ನು ಬಲಪಡಿಸಲು ನೋಡುತ್ತಿದೆ.

ಈ ಋತುವಿನಲ್ಲಿ ಗುಜರಾತ್‌ ಪರ ಶುಬ್ಮನ್ ಗಿಲ್ ಅಗ್ರ ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ಹತ್ತು ಪಂದ್ಯಗಳಲ್ಲಿ 135 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ 375 ರನ್ ಗಳಿಸಿದ್ದಾರೆ. ಸಾಯಿ ಸುದರ್ಶನ್ 176 ರನ್ ಗಳಿಸಿದ್ದರೆ, ಸಾಹಾ 192 ರನ್ ಗಳಿಸಿದ್ದಾರೆ. ಇದೇ ವೇಳೆ ವಿಜಯ್ ಶಂಕರ್ ಮತ್ತು ಡೇವಿಡ್ ಮಿಲ್ಲರ್ ಕ್ರಮವಾಗಿ 205 ಮತ್ತು 180 ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಋತುವಿನಲ್ಲಿ ನಿಧಾನಗತಿಯ ಆರಂಭ ಪಡೆದ ನಾಯಕ ಹಾರ್ದಿಕ್, ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರು ಇಲ್ಲಿಯವರೆಗೆ 252 ರನ್ ಗಳಿಸಿದ್ದಾರೆ. ಮತ್ತೊಂದೆಡೆ ರಾಹುಲ್ ತೆವಾಟಿಯಾ ಮತ್ತು ಅಭಿನವ್ ಮನೋಹರ್ ಕೂಡ ತಂಡದ ಪರ ನಿರ್ಣಾಯಕ ಪ್ರದರ್ಶನ ನೀಡುತ್ತಿದ್ದಾರೆ.

ರಶೀದ್ ಖಾನ್ ಇದುವರೆಗಿನ ಹತ್ತು ಪಂದ್ಯಗಳಲ್ಲಿ 8ರ ಎಕಾನಮಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ಶಮಿ ಕೂಡ ಪ್ರತಿ ಓವರ್‌ಗೆ 7 ರನ್‌ಗಳನ್ನು ಬಿಟ್ಟುಕೊಟ್ಟು 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಜಾರಿ ಜೋಸೆಫ್ 7 ವಿಕೆಟ್ ಪಡೆದಿದ್ದಾರೆ. ಆದರೆ ಒಂದೆರಡು ಸಂದರ್ಭಗಳಲ್ಲಿ ದುಬಾರಿಯಾದ ಹಿನ್ನೆಲೆಯಲ್ಲಿ ನೂರ್ ಅಹ್ಮದ್ ಅವರ ಸ್ಥಾನವನ್ನು ಕಸಿದುಕೊಂಡಿದ್ದಾರೆ. ಅಹ್ಮದ್ ಅವರು ಆಡಿದ ಆರು ಪಂದ್ಯಗಳಲ್ಲಿ 7ರ ಎಕಾನಮಿಯಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೋಹಿತ್ ಶರ್ಮಾ ಕೂಡ 8 ವಿಕೆಟ್‌ ಕಿತ್ತಿದ್ದಾರೆ. ಎಲ್ಲಾ ರೀತಿಯಲ್ಲೂ ಬಲಿಷ್ಠವಾಗಿರುವ ತಂಡ ಸಂಘಟಿತ ಪ್ರದರ್ಶನ ನೀಡುತ್ತಿದೆ.

ಗುಜರಾತ್‌ ಸಂಭಾವ್ಯ ಆಡುವ ಬಳಗ

ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ.

ಲಖನೌ ಸೂಪರ್‌ ಜೈಂಟ್ಸ್‌

ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಕೆ ಗೌತಮ್, ಅವೇಶ್ ಖಾನ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್.