ಕನ್ನಡ ಸುದ್ದಿ  /  Sports  /  Cricket News Ipl 2023 Harbhajan Singh On Virat Kohli And Gautam Gambhir Ahead Of Rcb Vs Lsg Playoff Eliminator Jra

Harbhajan Singh: ಎಲಿಮನೇಟರ್‌ನಲ್ಲಿ ಆರ್‌ಸಿಬಿ ಲಖನೌ ಎದುರಾದರೆ ಅದು ಮಾತ್ರ ಆಗ್ಬಾರ್ದು; ಗಂಭೀರ್, ಕೊಹ್ಲಿಗೆ ಹರ್ಭಜನ್ ಸಲಹೆ

ಮುಂದಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಲಖನೌ ತಂಡಗಳ ನಡುವೆ ಬ್ಲಾಕ್‌ಬಸ್ಟರ್ ಪಂದ್ಯ ನಡೆಯುವ ನಿರೀಕ್ಷೆಗಳಿವೆ. ಈ ಪಂದ್ಯಕ್ಕೂ ಮುನ್ನ ಮಾತನಾಡಿದ ಭಾರತದ ದಿಗ್ಗಜ ಕ್ರಿಕೆಟಿಗ ಹರ್ಭಜನ್ ಸಿಂಗ್, ಈ ಹಿಂದೆ ನಡೆದ ಗಂಭೀರ್ ಮತ್ತು ಕೊಹ್ಲಿ ನಡುವಿನ ಮಾತಿನ ಚಕಮಕಿಯನ್ನು ನೆನಪಿಸಿಕೊಂಡಿದ್ದಾರೆ.

ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್ (AP)

ಗೌತಮ್ ಗಂಭೀರ್ (Gautam Gambhir) ಮೆಂಟರ್ ಆಗಿರುವ ಲಖನೌ ಸೂಪರ್ ಜೈಂಟ್ಸ್ (LGS) ತಂಡವು, 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ಲೇ ಆಫ್‌ ಪ್ರವೇಶಿಸಿದ ಮೂರನೇ ತಂಡವಾಗಿದೆ. ಇತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ನಾಲ್ಕನೇ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ (MI) ತಂಡದೊಂದಿಗೆ ಹೋರಾಡುತ್ತಿದೆ. ಸದ್ಯ ಅಭಿಮಾನಿಗಳ ಕಣ್ಣು ಮುಂಬೈ ಇಂಡಿಯನ್ಸ್‌ಗಿಂತ ಹೆಚ್ಚಾಗಿ ಆರ್‌ಸಿಬಿ ಮೇಲೆ ನೆಟ್ಟಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ.

ಟ್ರೆಂಡಿಂಗ್​ ಸುದ್ದಿ

ನಾಲ್ಕನೇ ಸ್ಥಾನಕ್ಕಾಗಿ ಆರ್‌ಸಿಬಿ ಜೊತೆಗೆ ರಾಜಸ್ಥಾನ್ ರಾಯಲ್ಸ್ (RR) ಮತ್ತು ಮುಂಬೈ ತಂಡಗಳಿಂದ ಪೈಪೋಟಿ ಇದೆ. ಇದರಲ್ಲಿ ಮುಂಬೈ ಅಥವಾ ಆರ್‌ಸಿಬಿ ತಂಡಗಳಲ್ಲಿ ಒಂದು ತಂಡ ಪ್ಲೇಆಫ್‌ ಹಂತಕ್ಕೆ ಪ್ರವೇಶಿಸುವುದು ಬಹುತೇಕ ಖಚಿತ. ಎರಡರಲ್ಲಿ ಗೆಲ್ಲುವ ಒಂದು ತಂಡ ನೇರವಾಗಿ ಪ್ಲೇ ಆಫ್‌ ಪ್ರವೇಶಿಸುತ್ತದೆ. ಒಂದು ವೇಳೆ ಎರಡೂ ತಂಡಗಳು ಗೆದ್ದರೆ ಅಥವಾ ಸೋತರೆ, ರನ್‌ ರೇಟ್‌ ಲೆಕ್ಕಕ್ಕೆ ಬರಲಿದೆ.

ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿರುವ RCB ತಂಡವು, ಮುಂಬೈ ತಂಡದಂತೆ 16 ಅಂಕಗಳಲ್ಲಿ ಪಡೆದರೂ ಸಹ ಪ್ಲೇಆಫ್‌ಗೆ ಪ್ರವೇಶಿಸಬಹುದು. ಇದಕ್ಕೆ ಕಾರಣ ತಂಡದ ಅಧಿಕ ರನ್‌ ರೇಟ್. ಸದ್ಯ ರೋಹಿತ್ ಪಡೆಯು ಪ್ಲೇಆಫ್ ಹಂತದಲ್ಲಿ ಉಳಿಯಲು ಸನ್‌ರೈಸರ್ಸ್ ಹೈದರಾಬಾದ್ (SRH) ಅನ್ನು ಭಾರಿ ಅಂತರದಿಂದ ಸೋಲಿಸಬೇಕಾಗಿದೆ. ಆದರೆ, ಮುಂಬೈ ತಂಡ ಹೈದರಾಬಾದ್‌ ವಿರುದ್ಧ‌ ಚೇಸಿಂಗ್‌ ಆಯ್ಕೆ ಮಾಡಿದ್ದು, ಅದು ನೀಡುವ ಗುರಿಯನ್ನು ಬೇಗನೆ ಬೆನ್ನಟ್ಟಬೇಕಾದ ಅನಿವಾರ್ಯತೆ ತಂಡಕ್ಕಿದೆ. ಒಂದು ವೇಳೆ ಆರ್‌ಸಿಬಿಯು ನಾಲ್ಕನೇ ಸ್ಥಾನವನ್ನು ಪಡೆದುಕೊಂಡರೆ, ಪ್ಲೇಆಫ್‌ ಹಂತದಲ್ಲಿ ಬೆಂಗಳೂರು ಮತ್ತು ಲಖನೌ ತಂಡಗಳು ಮುಖಾಮುಖಿಯಾಗಲಿವೆ. ಇದು ಹೈ ವೋಲ್ಟೇಜ್‌ ಪಂದ್ಯವಾಗಲಿದೆ.

ಮೇ 1ರಂದು ನಡೆದ ಪಂದ್ಯದಲ್ಲಿ ಲಖನೌ ತಂಡವನ್ನು ಅದರದ್ದೇ ನೆಲದಲ್ಲಿ ರೋಚಕವಾಗಿ ಮಣಿಸಿದ್ದ ಆರ್‌ಸಿಬಿ, ತವರಿನ ಸೋಲಿಗೆ ಸೇಡು ತೀರಿಸಿಕೊಂಡಿತ್ತು. ಈ ಪಂದ್ಯದ ಬಳಿಕ ಗಂಭೀರ್ ಅವರೊಂದಿಗೆ ಕೊಹ್ಲಿ ಮೈದಾನದಲ್ಲಿ ವಾಗ್ವಾದ ನಡೆಸಿದ್ದರು.‌ ಅಲ್ಲದೆ ಲಖನೌ ಬೌಲರ್‌ ನವೀನ್‌ ಮತ್ತು ಕೊಹ್ಲಿ ನಡುವೆಯೂ ವಾಕ್‌ಸಮರ ನಡೆದಿತ್ತು. ಇದು ಭಾರಿ ಮಟ್ಟದಲ್ಲಿ ವೈರಲ್‌ ಆಗಿತ್ತು. ಆ ಘಟನೆ ಬಳಿಕ ಈಗಲೂ ಲಖನೌ ಪಂದ್ಯದ ವೇಳೆ, ನವೀನ್‌ ಎದುರಿಗೆ ಅಭಿಮಾನಿಗಳು ಕೊಹ್ಲಿ ಹೆಸರು ಕೂಗಿ ಕೆಣಕುತ್ತಿದ್ದಾರೆ.

ಸದ್ಯ ಮುಂದಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಲಖನೌ ತಂಡಗಳ ನಡುವೆ ಬ್ಲಾಕ್‌ಬಸ್ಟರ್ ಪಂದ್ಯ ನಡೆಯುವ ನಿರೀಕ್ಷೆಗಳಿವೆ. ಈ ಪಂದ್ಯಕ್ಕೂ ಮುನ್ನ ಮಾತನಾಡಿದ ಭಾರತದ ದಿಗ್ಗಜ ಕ್ರಿಕೆಟಿಗ ಹರ್ಭಜನ್ ಸಿಂಗ್, ಈ ಹಿಂದೆ ನಡೆದ ಗಂಭೀರ್ ಮತ್ತು ಕೊಹ್ಲಿ ನಡುವಿನ ಮಾತಿನ ಚಕಮಕಿಯನ್ನು ನೆನಪಿಸಿಕೊಂಡಿದ್ದಾರೆ. ಈ ರೀತಿ ಮುಂದಿನ ಪಂದ್ಯದಲ್ಲಿ ನಡೆಯಬಾರದು ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹರ್ಭಜನ್ ಸಿಂಗ್ ನೀಡಿದ ಹೇಳಿಕೆಯನ್ನು ಇಂಡಿಯಾ ಟುಡೇ ಉಲ್ಲೇಖಿಸಿದೆ.

"ಮುಂಬೈ ತಂಡವು ಒಂದು ಬಾರಿ ಮುನ್ನುಗ್ಗಿದರೆ ಅದನ್ನು ತಡೆಯಲಾಗದು. ಪ್ಲೇಆಫ್‌ಗೆ ಎಂಟ್ರಿ ಕೊಟ್ಟರೆ, ಅದು ಟ್ರೋಫಿ ಗೆಲ್ಲುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗುತ್ತದೆ. ತಂಡವು ಅತ್ಯುತ್ತಮ ಬ್ಯಾಟಿಂಗ್ ಲೈನಪ್‌ ಹೊಂದಿದೆ. ಬೌಲಿಂಗ್ ಕೂಡಾ ಸ್ವಲ್ಪ ಉತ್ತಮವಾಗಿದ್ದರೆ, ಮುಂಬೈ ಇಂಡಿಯನ್ಸ್‌ಗಿಂತ ಉತ್ತಮ ತಂಡ ಬೇರೊಂದಿಲ್ಲ. ಈ ಋತುವಿನಲ್ಲಿ ಮುಂಬೈ ಮತ್ತು ಸಿಎಸ್‌ಕೆ ಫೈನಲ್‌ಗೆ ಬಂದರೆ ತುಂಬಾ ಉತ್ತಮವಾಗಿರುತ್ತದೆ" ಎಂದು ಹರ್ಭಜನ್ ಹೇಳಿದ್ದಾರೆ.