LSG vs RCB: ಫೀಲ್ಡಿಂಗ್ ವೇಳೆ ಗಾಯಗೊಂಡು ಹೊರಬಿದ್ದ ಕೆಎಲ್ ರಾಹುಲ್; ಲಖನೌ ಜೊತೆಗೆ ಟೀಮ್ ಇಂಡಿಯಾಗೂ ಚಿಂತೆ ಶುರು
ಕನ್ನಡ ಸುದ್ದಿ  /  ಕ್ರೀಡೆ  /  Lsg Vs Rcb: ಫೀಲ್ಡಿಂಗ್ ವೇಳೆ ಗಾಯಗೊಂಡು ಹೊರಬಿದ್ದ ಕೆಎಲ್ ರಾಹುಲ್; ಲಖನೌ ಜೊತೆಗೆ ಟೀಮ್ ಇಂಡಿಯಾಗೂ ಚಿಂತೆ ಶುರು

LSG vs RCB: ಫೀಲ್ಡಿಂಗ್ ವೇಳೆ ಗಾಯಗೊಂಡು ಹೊರಬಿದ್ದ ಕೆಎಲ್ ರಾಹುಲ್; ಲಖನೌ ಜೊತೆಗೆ ಟೀಮ್ ಇಂಡಿಯಾಗೂ ಚಿಂತೆ ಶುರು

ಲಖನೌ ನಾಯಕನಿಗಾದ ಗಾಯದ ಕುರಿತು ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ದುರದೃಷ್ಟಕರ ಗಾಯದಿಂದಾಗಿ ಲಖನೌ ನಾಯಕ ಕೆಲ ಪಂದ್ಯಗಳನ್ನು ಕಳೆದುಕೊಳ್ಳಬಹುದಾದ ಆತಂಕ ವ್ಯಕ್ತಪಡಿಸಿದ್ದಾರೆ.

ಗಾಯಗೊಂಡ ಕೆಎಲ್‌ ರಾಹುಲ್
ಗಾಯಗೊಂಡ ಕೆಎಲ್‌ ರಾಹುಲ್ (PTI-IPL)

ಲಖನೌ ತಂಡದ ವರ್ಚಸ್ವಿ ನಾಯಕ ಕೆಎಲ್ ರಾಹುಲ್‌ (KL Rahul injury) ಇಂದಿನ ಪಂದ್ಯದಲ್ಲಿ ಗಾಯಾಳುವಾಗಿದ್ದಾರೆ. ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್‌ನಲ್ಲಿ ನಡೆಯುತ್ತಿರುವ ಲಖನೌ ಸೂಪರ್ ಜೈಂಟ್ಸ್ (Lucknow Super Giants) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಪವರ್‌ಪ್ಲೇ ಸಂದರ್ಭದಲ್ಲಿ ಗಾಯಗೊಂಡ ನಾಯಕ ರಾಹುಲ್, ಮೈದಾನದಿಂದ ಹೊರನಡೆದಿದ್ದಾರೆ.

ಪವರ್‌ಪ್ಲೇ ವೇಳೆ ರನ್‌ಗಳನ್ನು ಉಳಿಸುವ ಪ್ರಯತ್ನಕ್ಕೆ ಕೈಹಾಕಿದ ನಾಯಕ, ತಮ್ಮ ಬಲಗಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಎರಡನೇ ಓವರ್‌ ವೇಳೆಯೇ ಅವರು ಪಂದ್ಯದಿಂದ ನಿರ್ಗಮಿಸಿದರು. ರಾಹುಲ್‌ಗೆ ಸ್ಟ್ರೆಚರ್ ತರಿಸಲಾಗಿತ್ತಾದರೂ, ಅವರು ನಡೆದುಕೊಂಡೇ ಮೈದಾನ ತೊರೆದರು. ಹೀಗಾಗಿ ಆರ್‌ಸಿಬಿ ವಿರುದ್ಧದ ಪಂದ್ಯದ ಉಳಿದ ಭಾಗಕ್ಕೆ ಭಾರತದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ತಂಡದ ನಾಯಕತ್ವ ವಹಿಸಿಕೊಂಡರು.

ಲಖನೌ ನಾಯಕನಿಗಾದ ಗಾಯದ ಕುರಿತು ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ದುರದೃಷ್ಟಕರ ಗಾಯದಿಂದಾಗಿ ಲಖನೌ ನಾಯಕ ಕೆಲ ಪಂದ್ಯಗಳನ್ನು ಕಳೆದುಕೊಳ್ಳಬಹುದಾದ ಆತಂಕ ವ್ಯಕ್ತಪಡಿಸಿದ್ದಾರೆ.

"ರಾಹುಲ್ ತುಂಬಾ ಫಿಟ್ ಕ್ರಿಕೆಟಿಗ, ಮಾತ್ರವಲ್ಲ ಪ್ರಚಂಡ ಕ್ರೀಡಾಪಟು. ತಮ್ಮ ಬ್ಯಾಟಿಂಗ್ ಸಮಯದಲ್ಲಿ ವಿಕೆಟ್‌ಗಳ ನಡುವೆ ಅವರ ಓಟ ಅದ್ಭುತ. ಅವರು ಈ ಮೈದಾನದಲ್ಲಿ ಹೆಚ್ಚು ರನ್‌ ಸೋರಿಕೆಯಾಗುವುದನ್ನು ತಡೆಯಲು ಚೆಂಡನ್ನು ತಡೆಯಲು ಬಯಸಿದ್ದರು. ಆದರೆ ಗಾಯಗೊಂಡು ಹೊರನಡೆಯುತ್ತಿದ್ದಾರೆ. ಅವರು ನಡೆಯುತ್ತಾ ಹೊರಹೋಗುತ್ತಿರುವುದು ಒಳ್ಳೆಯದೇ. ಅವರಿಗೆ ಸ್ಟ್ರೆಚರ್ ಬೇಕಾಗಬಹುದು ಎಂದು ನಾನು ಭಾವಿಸಿದ್ದೆ,”ಎಂದು ಮಂಜ್ರೇಕರ್ ಜಿಯೋ ಸಿನಿಮಾದಲ್ಲಿ ಕಾಮೆಂಟರಿ ವೇಳೆ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಗವಾಸ್ಕರ್‌, "ಅವರು ನಡೆಯುತ್ತಿರುವುದು ಒಳ್ಳೆಯ ವಿಷಯವೆಂದು ಎಂದು ನಾನು ಭಾವಿಸುವುದಿಲ್ಲ. ಅವರು ಸ್ಟ್ರೆಚರ್‌ನಲ್ಲಿ ಹೋಗಬೇಕಿತ್ತು ಎಂದು ನಾನು ಭಾವಿಸುತ್ತೇನೆ. ಗಾಯ ಇನ್ನಷ್ಟು ಉಲ್ಬಣಗೊಳ್ಳದಂತೆ ತಕ್ಷಣ ಚಿಕಿತ್ಸೆ ಪಡೆಯಿರಿ,” ಎಂದು ಗಾವಸ್ಕರ್ ಸಲಹೆ ನೀಡಿದ್ದಾರೆ. ಸದ್ಯ ರಾಹುಲ್‌ ಗಾಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಮುಂದಿನ ಪಂದ್ಯಕ್ಕೆ ಅವರು ಲಭ್ಯರಾಗುತ್ತಾರೆ ಎಂಬ ನಿರೀಕ್ಷೆಯಿದೆ.

ರಾಹುಲ್ ಬದಲಿಗೆ ಯಾರು?

ಪಂದ್ಯದ ವೇಳೆ ಭಾರತದ ಆರಂಭಿಕ ಆಟಗಾರ ಗಾಯಗೊಂಡಿದ್ದರಿಂದ, ಆತಿಥೇಯರು ಆಯುಷ್ ಬದೋನಿ ಅಥವಾ ಕ್ವಿಂಟನ್ ಡಿ ಕಾಕ್‌ರನ್ನು ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿಸಬಹುದು. ತಂಡವು ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಗಳಾಗಿ ಬದೋನಿ, ಡೇನಿಯಲ್ ಸಾಮ್ಸ್, ಅವೇಶ್ ಖಾನ್, ಡಿ ಕಾಕ್ ಮತ್ತು ಪ್ರೇರಕ್ ಮಂಕಡ್ ಅವರನ್ನು ಹೆಸರಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ‌

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರರ್, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

ಲಖನೌ ಸೂಪರ್ ಜೈಂಟ್ಸ್ ಆಡುವ ಬಳಗ

ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯ್ನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್‌ ಕೀಪರ್), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಯಶ್ ಠಾಕೂರ್.

Whats_app_banner