ಕನ್ನಡ ಸುದ್ದಿ  /  ಕ್ರೀಡೆ  /  Watch: ಶರ್ಟ್ ಮೇಲೆ ಧೋನಿ ಅಟೋಗ್ರಾಫ್ ತೆಗೆದುಕೊಂಡ ಗವಾಸ್ಕರ್; ಸಿಎಸ್‌ಕೆ ನಾಯಕನಿಗೆ ದಿಗ್ಗಜರೇ ಅಭಿಮಾನಿಗಳು

Watch: ಶರ್ಟ್ ಮೇಲೆ ಧೋನಿ ಅಟೋಗ್ರಾಫ್ ತೆಗೆದುಕೊಂಡ ಗವಾಸ್ಕರ್; ಸಿಎಸ್‌ಕೆ ನಾಯಕನಿಗೆ ದಿಗ್ಗಜರೇ ಅಭಿಮಾನಿಗಳು

ದಿಗ್ಗಜ ಕ್ರಿಕೆಟಿಗೆ ಗವಾಸ್ಕರ್ ಅಟೋಗ್ರಾಫ್‌ಗಾಗಿ ಧೋನಿ ಬಳಿ ಹೋದರು. ಬ್ಯಾಟಿಂಗ್ ದಂತಕಥೆಯ ವಿನಂತಿಯನ್ನು ಅಂಗೀಕರಿಸಿದ ಧೋನಿ, ಪಂದ್ಯದ ನಂತರ ಅವರ ಶರ್ಟ್‌ಗೆ ಸಹಿ ಹಾಕಿದರು.

ಧೋನಿ ಅಟೋಗ್ರಾಫ್‌ ತೆಗೆದುಕೊಂಡ ಗವಾಸ್ಕರ್
ಧೋನಿ ಅಟೋಗ್ರಾಫ್‌ ತೆಗೆದುಕೊಂಡ ಗವಾಸ್ಕರ್ (Jio Cinema-AP)

ಕ್ರಿಕೆಟ್‌ ಜಗತ್ತಿನಲ್ಲೇ ಚಾಣಾಕ್ಷ ನಾಯಕ ಎಂದು ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿಗೆ ಹಲವು ಅಭಿಮಾನಿಗಳಿದ್ದಾರೆ. ಯುವ ಆಟಗಾರರು ಮಾತ್ರವಲ್ಲದೆ ದಿಗ್ಗಜ ಕ್ರಿಕೆಟಿಗರು ಕೂಡಾ ಅವರ ಆಟವನ್ನು ಮೆಚ್ಚಿ ಅಭಿಮಾನಿಯಾಗಿಬಿಡುತ್ತಾರೆ. ಈ ಪಟ್ಟಿಯಲ್ಲಿ ಸುನಿಲ್‌ ಗವಾಸ್ಕರ್‌ ಅಗ್ರಗಣ್ಯರು. ಭಾನುವಾರ, ಚೆನ್ನೈನ ಚೆಪಾಕ್‌ ಮೈದಾನದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಕೆಕೆಆರ್‌ ವಿರುದ್ಧ ಆಡಿತು. ಪ್ರಸಕ್ತ ಐಪಿಎಲ್‌ನಲ್ಲಿ ಚೆಪಾಕ್‌ನಲ್ಲಿ ಚೆನ್ನೈಗೆ ಇದು ಕೊನೆಯ ಲೀಗ್‌ ಪಂದ್ಯ. ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಸೋತ ಬಳಿಕ, ಚೆಪಾಕ್‌ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳಿಗೆ ಧೋನಿ ಪಡೆಯು ಅಭಿನಂದನೆ ಸಲ್ಲಿಸಿತು.

ಟ್ರೆಂಡಿಂಗ್​ ಸುದ್ದಿ

ಈ ವೇಳೆ ಮೈದಾನದಲ್ಲಿ ಅಪರೂಪದ ಸನ್ನಿವೇಶ ಜರುಗಿತು. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಬಳಿಕ, ಸಿಎಸ್‌ಕೆ ನಾಯಕ ಧೋನಿ ಮೈದಾನದ ಸುತ್ತ ಭಾವನಾತ್ಮಕ ವಿಹಾರ ನಡೆಸಿದರು. ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿ, ಅವರಿಗೆ ಮರೆಯಲಾಗದ ಉಡುಗೊರೆ ನೀಡಿದರು.

ಐಪಿಎಲ್‌ನ ಪ್ರಸಕ್ತ ಋತುವಿನ ಮೂಲಕ, ಧೋನಿ ಕೊನೆಯ ಆವೃತ್ತಿಯಲ್ಲಿ ಆಡುತ್ತಿದ್ದಾರೆ ಎಂಬ ಬೇಸರ ಅಭಿಮಾನಿಗಳಲ್ಲಿದೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ, ಕೆಲವು ಸುಳಿವುಗಳ ಮೂಲಕ ಅಭಿಮಾನಿಗಳಿಗೆ ಇದು ಗೊತ್ತಾಗಿದೆ. ಹೀಗಾಗಿ ತಮ್ಮ ನೆಚ್ಚಿನ ನಾಯಕನನ್ನು ನೋಡಲು ಅಭಿಮಾನಿಗಳ ದಂಡು ಮೈದಾನದಲ್ಲಿ ನೆರೆದಿತ್ತು. ಹೀಗಾಗಿ ಸಿಎಸ್‌ಕೆ ಮತ್ತು ಕೆಕೆಆರ್ ನಡುವಿನ ಪಂದ್ಯವು, ಅಭಿಮಾನಿಗಳ ಪಾಲಿಗೆ ಮಹತ್ವದ್ದಾಗಿತ್ತು. ಹೀಗಾಗಿ ಪಂದ್ಯದ ಬಳಿಕ ಧೋನಿ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಮೈದಾನದ ಸುತ್ತಲೂ ನಡಿಗೆಯಲ್ಲಿ ಸಾಗಿ ಅವರತ್ತ ಕೈ ಬೀಸಿದರು.

ಈ ವೇಳೆ, ದಿಗ್ಗಜ ಕ್ರಿಕೆಟಿಗೆ ಗವಾಸ್ಕರ್ ಅವರು ವಿಶೇಷ ಅಟೋಗ್ರಾಫ್‌ಗಾಗಿ ಧೋನಿ ಬಳಿ ಓಡಿಹೋದರು. ಬ್ಯಾಟಿಂಗ್ ದಂತಕಥೆಯ ವಿನಂತಿಯನ್ನು ಅಂಗೀಕರಿಸಿದ ಧೋನಿ, ಪಂದ್ಯದ ನಂತರ ಗವಾಸ್ಕರ್ ಅವರ ಶರ್ಟ್‌ಗೆ ಸಹಿ ಹಾಕಿದರು. ಇದು ಅಭಿಮಾನಿಗಳಿಗೂ ಅಚ್ಚರಿಯಾಯ್ತು. ವಯಸ್ಸು ಹಾಗೂ ಅನುಭವದಲ್ಲಿ ಧೋನಿಗಿಂತ ದೊಡ್ಡವರಾದರೂ, ತಾನು ಧೋನಿಯ ಅಭಿಮಾನಿ ಎಂಬುದನ್ನು ತೋರಿಸಿಕೊಳ್ಳುವ ಮೂಲಕ ಗವಾಸ್ಕರ್‌ ಸರಳತೆ ಮೆರೆದರು. ಅಲ್ಲದೆ ಧೋನಿ ಎಷ್ಟರ ಮಟ್ಟಿಗೆ ಕ್ರಿಕೆಟ್‌ ಅಭಿಮಾನಿಗಳ ಮನದಲ್ಲಿ ಜಾಗ ಪಡೆದಿದ್ದಾರೆ ಎಂಬುದು ಕೂಡಾ ಸಾಬೀತಾಯ್ತು. ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಅಲ್ಲದೆ ಅಭಿಮಾನಿಗಳಿಂದ ಬಗೆಬಗೆಯ ಪ್ರತಿಕ್ರಿಯೆಗಳನ್ನು ಪಡೆದಿದೆ.

ಇಷ್ಟೇ ಅಲ್ಲದೆ ಧೋನಿ ಬಗ್ಗೆ ಸನ್ನಿ ವಿಶೇಷ ಮಾತುಗಳನ್ನಾಡಿದ್ದಾರೆ. "ಧೋನಿಯಂತಹ ಆಟಗಾರರು ಶತಮಾನಕ್ಕೊಮ್ಮೆ ಮಾತ್ರ ಬರುತ್ತಾರೆ. ಒಂದು ಪೀಳಿಗೆಯಲ್ಲಿ ಒಮ್ಮೆ ಕೂಡಾ ಅಲ್ಲ" ಎಂದು ಸುನಿಲ್ ಗವಾಸ್ಕರ್ ಅವರು ಲಕ್ಷಾಂತರ ಅಭಿಮಾನಿಗಳ ಭಾವನೆಯನ್ನು ಪ್ರತಿಧ್ವನಿಸಿದ್ದಾರೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ (CSK), ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 144 ರನ್‌ ಕಲೆ ಹಾಕಿತು. ಆ ಮೂಲಕ ಸಾಧಾರಣ ಗುರಿ ಪಡೆದ ಕೋಲ್ಕತ್ತಾ ನೈಟ್‌ ರೈಡರ್ಸ್, 18.3 ಓವರ್‌ಗಳಲ್ಲಿ ಕೇವಲ 4‌ ವಿಕೆಟ್‌ ಕಳೆದುಕೊಂಡು 147 ರನ್‌ ಬಾರಿಸಿ ಗುರಿ ತಲುಪಿತು.

ಕೆಕೆಆರ್ ನಾಯಕ ನಿತೀಶ್‌ ರಾಣಾ ಹಾಗೂ ರಿಂಕು ಸಿಂಗ್ ತಂಡಕ್ಕೆ ಉತ್ತಮ ಜೊತೆಯಾಟದ ಕೊಡುಗೆ ನೀಡಿದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರೂ 99 ರನ್‌ಗಳ ಉತ್ತಮ ಜೊತೆಯಾಟವಾಡಿದರು. ರಿಂಕು ಅರ್ಧಶತಕ ಗಳಿಸಿದರೆ, ನಾಯಕನಾಟವಾಡಿದ ನಿತೀಶ್ ರಾಣಾ ಕೂಡಾ ಅಜೇಯ 57 ರನ್‌ ಗಳಿಸಿದರು. ಈ ಗೆಲುವಿನೊಂದಿಗೆ ಕೆಕೆಆರ್‌ ಪ್ಲೇ ಆಫ್‌ ರೇಸ್‌ನಲ್ಲಿ ಉಳಿದುಕೊಂಡಿದೆ. ಮುಂದಿನ ಪಂದ್ಯಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರದ ಮೇಲೆ ತಂಡದ ಭವಿಷ್ಯ ನಿರ್ಧಾರವಾಗಲಿದೆ.