LSG vs MI Eliminator: ಐಪಿಎಲ್ನಲ್ಲಿಂದು ಮುಂಬೈ-ಲಕ್ನೋ ಎಲಿಮಿನೇಟರ್ ಫೈಟ್; ಗೆದ್ದ ತಂಡವು ಎರಡನೇ ಕ್ವಾಲಿಫೈಯರ್ಗೆ ಅರ್ಹ
16ನೇ ಆವೃತ್ತಿಯ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು (LSG vs MI) ಮುಖಾಮುಖಿಯಾಗುತ್ತಿವೆ. ಹಾಗಾದರೆ ಉಭಯ ತಂಡಗಳಲ್ಲಿ ಯಾರೆಲ್ಲಾ ಆಡುವ 11ರ ಬಳಗದಲ್ಲಿ ಕಣಕ್ಕಿಳಿಯಲಿದ್ದಾರೆ, ಪಿಚ್ ರಿಪೋರ್ಟ್ ಹೇಗಿದೆ, ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ಈ ವರದಿಯಲ್ಲಿ ನೋಡೋಣ.

ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಆರ್ಸಿಬಿ (RCB) ಸೋಲಿನಿಂದ ಲಾಭ ಪಡೆದು ಪ್ಲೇ ಆಫ್ ಪ್ರವೇಶಿಸಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು (Mumbai Indians), ಐಪಿಎಲ್ 16ರ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ಸವಾಲಿಗೆ ಸಜ್ಜಾಗಿದೆ. ಹಾಲಿ ಟೂರ್ನಿಯಲ್ಲಿ ಲೀಗ್ ಹಂತದ ಏಕೈಕ ಮುಖಾಮುಖಿಯಲ್ಲಿ ಗೆಲುವು ದಾಖಲಿಸಿರುವ ಲಕ್ನೋ, ಮುಂಬೈ ಎದುರು ಅಜೇಯ ಗೆಲುವು ಸಾಧಿಸುವ ಹಂಬಲದಲ್ಲಿದೆ. ಮತ್ತೊಂದೆಡೆ ರೋಹಿತ್ ಪಡೆ, 6ನೇ ಪ್ರಶಸ್ತಿ ಗೆಲ್ಲುವತ್ತ ಕಣ್ಣಿಟ್ಟಿದೆ. ಈ ಪಂದ್ಯವು ಚೆನ್ನೈನ ಚೆಪಾಕ್ ಮೈದಾನದಲ್ಲಿ (MA Chidambaram Stadium) ನಡೆಯಲಿದೆ.
ಟ್ರೆಂಡಿಂಗ್ ಸುದ್ದಿ
ಆಲ್ರೌಂಡರ್ ಕೃನಾಲ್ ಪಾಂಡ್ಯ (Krunal Pandya) ಹಂಗಾಮಿ ಸಾರಥ್ಯದ ಲಕ್ನೋ ತಂಡವು, ಲೀಗ್ ಹಂತದ ಕೊನೆಯ 3ನೇ ಪಂದ್ಯಗಳಲ್ಲಿ ಗೆಲುವು ದಾಖಲಿಸಿ, ಉತ್ತಮ ಲಯದಲ್ಲಿದೆ. ಲಕ್ನೋ ತಂಡವು ಲೀಗ್ನಲ್ಲಿ ಆಡಿದ 14 ಪಂದ್ಯಗಳ ಪೈಕಿ 8 ಗೆಲುವು, 5 ಸೋಲು ಕಂಡಿದೆ. 1 ಪಂದ್ಯ ಮಳೆಯಿಂದ ರದ್ದುಗೊಂಡಿದ್ದು, 17 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ. ಇಷ್ಟೇ ಪಂದ್ಯಗಳನ್ನಾಡಿರುವ ಮುಂಬೈ, 8 ಗೆಲುವು, 6 ಸೋಲು ಕಂಡು 16 ಅಂಕ ಕಲೆ ಹಾಕಿ, ಅಗ್ರ-4ರಲ್ಲಿ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶಿಸಿದೆ.
ಕಳೆದ ಆವೃತ್ತಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಮುಂಬೈ, ಈ ಬಾರಿಯ ಆವೃತ್ತಿಯಲ್ಲಿ ಆರಂಭಿಕ ಪಂದ್ಯಗಳಲ್ಲಿ ಸತತ ಸೋಲು ಕಂಡರೂ ಮತ್ತೆ ಪುಟಿದೇಳುವ ಮೂಲಕ ಫಾರ್ಮ್ಗೆ ಮರಳಿದೆ. ಕೆಎಲ್ ರಾಹುಲ್ ಅಲಭ್ಯತೆಯ ನಡುವೆಯೂ ದಿಟ್ಟ ಪ್ರದರ್ಶನ ನೀಡುತ್ತಿರುವ ಲಕ್ನೋ ಚೊಚ್ಚಲ ಕಪ್ ಗೆಲ್ಲುವ ಕನಸಿನಲ್ಲಿದೆ. ಕಳೆದ ಬಾರಿ ಎಲಿಮಿನೇಟರ್ನಲ್ಲಿ ಹೊರ ಬಿದ್ದಿದ್ದ ಲಕ್ನೋ ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ.
ಮುಂಬೈ ತಂಡಕ್ಕೆ ಬ್ಯಾಟಿಂಗ್ ಶಕ್ತಿ
ಟೂರ್ನಿಯಲ್ಲಿ ತಡವಾಗಿ ಲಯ ಕಂಡುಕೊಂಡು, ಭರ್ಜರಿ ಪ್ರದರ್ಶನ ನೀಡುವ ಮೂಲಕ ಕಂಬ್ಯಾಕ್ ಮಾಡಿರುವ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲಿ ಫಾರ್ಮ್ಗೆ ಮರಳಿದ್ದಾರೆ. ಸಂಘಟಿತ ಪ್ರದರ್ಶನದ ಮೂಲಕ ಪುಟಿದೆದ್ದಿರುವ ಮುಂಬೈ, 4 ಬಾರಿ 200ಕ್ಕೂ ಅಧಿಕ ರನ್ ಚೇಸಿಂಗ್ ನಡೆಸಿ ಗೆದ್ದಿದೆ. ಇದು ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಸೂರ್ಯಕುಮಾರ್ 511 ರನ್, ಕ್ಯಾಮರೂನ್ ಗ್ರೀನ್ 381 ರನ್, ಇಶಾನ್ ಕಿಶನ್ 439 ರನ್ ಗಳಿಸಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಚೆನ್ನೈ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡಲಿದ್ದು, 20 ಪಡೆದಿರುವ ಪಿಯೂಷ್ ಚಾವ್ಲಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.
ಕಂಬ್ಯಾಕ್ ವಿಶ್ವಾಸದಲ್ಲಿ ಲಕ್ನೋ
ನಿರ್ಣಾಯಕ ಪಂದ್ಯಗಳಲ್ಲಿ ಒತ್ತಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಹಂಗಾಮಿ ನಾಯಕ ಕೃನಾಲ್ ಪಾಂಡ್ಯ, ಲಕ್ನೋ ತಂಡವನ್ನು ಪ್ಲೇ ಆಫ್ಗೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ತಂಡದ ಪ್ರಮುಖ ರನ್ ಸ್ಕೋರರ್ ಎನಿಸಿದ್ದಾರೆ. ಮುಂಬೈ ವಿರುದ್ಧ ಕಳೆದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಹತ್ವದ ಪಂದ್ಯಕ್ಕೆ ವಿಂಡೀಸ್ನ ಸ್ಪೋಟಕ ಬ್ಯಾಟರ್ ಕೈಲ್ ಮೇಯರ್ಸ್, ತಂಡದಲ್ಲಿ ಮರಳಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಕ್ವಿಂಟನ್ ಡಿ ಕಾಕ್, ಪ್ರೇರಕ್ ಮಂಕಡ್ ಬಲ ತಂಡಕ್ಕಿದೆ. ಸ್ಪಿನ್ನರ್ ರವಿ ಬಿಷ್ಣೋಯ್ ಮುಂಬೈಗೆ ಕಂಟಕವಾಗಬಲ್ಲರು.
ಗೆದ್ದವರು 2ನೇ ಕ್ವಾಲಿಫೈಯರ್ಗೆ ಅರ್ಹ
ಅಂಕಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನ ಅಲಂಕರಿಸಿರುವ ಮುಂಬೈ-ಲಕ್ನೋ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಲಿವೆ. ಇಲ್ಲಿ ಗೆದ್ದವರು 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದ್ದಾರೆ. ಸೋತವರು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡವು, ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ 2ನೇ ಕ್ವಾಲಿಫೈಯರ್ ಆಡಲಿದೆ.
ಉಭಯ ತಂಡಗಳ ಮುಖಾಮುಖಿ
ಲಕ್ನೋ ಮತ್ತು ಮುಂಬೈ ತಂಡಗಳು ಒಟ್ಟು ಬಾರಿ ಮುಖಾಮುಖಿಯಾಗಿವೆ. ಆದರೆ ಮೂರು ಪಂದ್ಯಗಳಲ್ಲೂ ಲಕ್ನೋ ಜಯಿಸಿರುವುದು ವಿಶೇಷ. ಈಗ ಮುಂಬೈ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಪಿಚ್ ರಿಪೋರ್ಟ್
ಚೆನ್ನೈನ ಚಿದಂಬರಂ ಸ್ಟೇಡಿಯಂ ಸ್ಪಿನ್ ಬೌಲಿಂಗ್ಗೆ ಹೆಚ್ಚು ನೆರವಾಗಲಿದೆ. ಮೇ 23ರಂದು ರಾತ್ರಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ - ಗುಜರಾತ್ ಟೈಟಾನ್ಸ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೂ ಇದೇ ಕಂಡು ಬಂತು. ಚೆನ್ನೈ ನೀಡಿದ್ದ 173 ರನ್ ಬೆನ್ನಟ್ಟಲಾಗದೆ ಗುಜರಾತ್ ಸೋಲೊಪ್ಪಿಕೊಂಡಿತು. ಹಾಗಾಗಿ ಇಂದು ಸ್ಪಿನ್ನರ್ಗಳು ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ತಂಡ
ಕೈಲ್ ಮೇಯರ್ಸ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯ್ನಿಸ್, ಕೃನಾಲ್ ಪಾಂಡ್ಯ (ನಾಯಕ), ನಿಕೋಲಸ್ ಪೂರನ್, ಆಯುಷ್ ಬದೋನಿ, ಕೆ ಗೌತಮ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್.
ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ವಿಷ್ಣು ವಿನೋದ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಹೃತಿಕ್ ಶೋಕೀನ್.