ಕನ್ನಡ ಸುದ್ದಿ  /  Sports  /  Cricket News Ipl 2023 Lucknow Super Giants Vs Mumbai Indians Match Preview Krunal Pandya Rohit Sharma Lsg Vs Mi Jra

LSG vs MI: ಮುಂಬೈ ವಿರುದ್ಧ ಅಜೇಯ ಲಖನೌಗೆ ಹೊಸ ಸವಾಲು; ಉಭಯ ತಂಡಗಳ ಗುರಿ ಪ್ಲೇಆಫ್

IPL 2023: ಕಳೆದ ಋತುವಿನಲ್ಲಿ ಮುಂಬೈ ವಿರುದ್ಧದ ಎರಡೂ ಪಂದ್ಯವನ್ನು ಲಖನೌ ಗೆದ್ದಿದೆ. ಹೀಗಾಗಿ ರೋಹಿತ್‌ ಶರ್ಮಾ ಪಡೆಯ ವಿರುದ್ಧ ಲಖನೌ ತಂಡ ಅಜೇಯ ದಾಖಲೆ ಹೊಂದಿದೆ.

ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್

ಪ್ಲೇ ಆಫ್‌ ಹಂತ ಹತ್ತಿರ ಬರುತ್ತಿದ್ದಂತೆಯೇ ಐಪಿಎಲ್‌ ಪಂದ್ಯಗಳು ಕೂಡಾ ರೋಚಕವಾಗುತ್ತಿದೆ. ಸನ್‌ರೈಸರ್ಸ್‌ ಹೈದಾರಾಬಾದ್‌ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ಗೆದ್ದು, ಪ್ಲೇ ಆಫ್‌ ಹಂತಕ್ಕೆ ಮೊದಲ ತಂಡವಾಗಿ ಲಗ್ಗೆ ಹಾಕಿದೆ. ಇದೀಗ ಇಂದಿನ ಪಂದ್ಯದಲ್ಲಿ ಪ್ಲೇ ಆಫ್ ಹಂತವನ್ನು ಪ್ರವೇಶಿಸುವ ಎರಡನೇ ತಂಡ ಯಾವುದೆಂಬ ಸುಳಿವು ಸಿಗಲಿದೆ.

ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಲಖನೌ ಸೂಪರ್‌ ಜೈಂಟ್ಸ್‌ ತಂಡ ಸವಾಲೆಸೆಯಲಿದೆ. ಪ್ಲೇ ಆಫ್‌ ಹಂತದ ದೃಷ್ಟಿಯಂದ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ.

ಮುಂಬೈ ತಂಡಕ್ಕೆ ಬೌಲಿಂಗ್‌ ಚಿಂತೆ

ರೋಹಿತ್‌ ಶರ್ಮಾ ಪಡೆ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ನಾಯಕ ಶರ್ಮಾ ಹೊರತುಪಡಿಸಿದರೆ, ಇತರರು ಫಾರ್ಮ್‌ ಕಂಡುಕೊಂಡಿದ್ದಾರೆ. ಅದರಲ್ಲೂ ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಆದರೆ ತಂಡದ ಪ್ರಮುಖ ಯುವ ಆಟಗಾರ ತಿಲಕ್‌ ವರ್ಮಾ ಗಾಯಗೊಂಡಿದ್ದು, ಅವರ ಲಭ್ಯತೆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇಬ್ಬರು ಸ್ಫೋಟಕ ಬ್ಯಾಟರ್‌ಗಳಾದ ಡೆವಾಲ್ಡ್ ಬ್ರೆವಿಸ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಅತ್ತ ಜಸ್ಪ್ರೀತ್ ಬುಮ್ರಾ ಮತ್ತು ಜೋಫ್ರಾ ಆರ್ಚರ್ ಗಾಯದಿಂದಾಗಿ ಹೊರಗುಳಿದಿದ್ದಾರೆ. ಸದ್ಯ ತಂಡದಲ್ಲಿ ಬೇರೆ ಯಾರೂ ವಿಶ್ವದರ್ಜೆಯ ಬೌಲರ್‌ ಇಲ್ಲ. ಹೀಗಾಗಿ ತಂಡಕ್ಕೆ ಆ ಸಮಸ್ಯೆ ಕಾಡಲಿದೆ.

ಲಖನೌ ತಂಡಕ್ಕೆ ತವರಿನಲ್ಲಿ ಗೆಲುವು ಮರೀಚಿಕೆ

ಲಖನೌ ಮೈದಾನದ ನಿಧಾನಗತಿಯ ಪಿಚ್‌ನಲ್ಲಿ ಗೆಲುವು ಸಾಧಿಸಲು ಲಖನೌ ಪರದಾಡುತ್ತಿದೆ. ಇಲ್ಲಿ ಆಡಿದ ಕೊನೆಯ ನಾಲ್ಕು ಪಂದ್ಯಗಳಲ್ಲಿ ತಂಡವು ಒಂದೇ ಒಂದು ಗೆಲುವು ಕಂಡಿಲ್ಲ. ಅದರಲ್ಲಿ ಮೂರು ಪಂದ್ಯಗಳಲ್ಲಿ ಸೋತರೆ, ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ತವರಿನಲ್ಲಿ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ.

ಉಭಯ ತಂಡಗಳ ಪ್ಲೇ ಆಫ್‌ ಸಾಧ್ಯತೆ ಹೇಗಿದೆ?

ಮುಂಬೈ ಇಂಡಿಯನ್ಸ್: ಎಂಐ ಪ್ರಸ್ತುತ 12 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಲೀಗ್ ಹಂತದ ತಮ್ಮ ಉಳಿದ ಪಂದ್ಯಗಳಲ್ಲಿ ಇಂದು ಅದು ಲಖನೌ ಮತ್ತು ಮುಂದೆ ಹೈದರಾಬಾದ್‌ ತಂಡವನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ, ತಂಡವು ನಿಸ್ಸಂದೇಹವಾಗಿ ಹಾಗೂ ನೇರವಾಗಿ ಪ್ಲೇ ಆಫ್ ಪ್ರವೇಶಿಸುತ್ತದೆ. ಬೇರೆ ಯಾವುದೇ ತಂಡದ ಫಲಿತಾಂಶವನ್ನು ಕೂಡಾ ತಂಡ ಆಶ್ರಯಿಸಬೇಕಿಲ್ಲ. ಆದರೆ ಉಳಿದ ಎರಡರಲ್ಲಿ ಒಂದನ್ನು ಗೆದ್ದರೆ ಕೂಡಾ ಅರ್ಹತೆ ಪಡೆಯಬಹುದು. ಆದರೆ ತಂಡವು ಲಖನೌ, ಚೆನ್ನೈ ಹಾಗೂ ಆರ್‌ಸಿಬಿ ಸೇರಿದಂತೆ ಇತರ ತಂಡಗಳ ಫಲಿತಾಂಶ ನೋಡಿಕೊಂಡು ಮುಂದಿನ ಹಂತಕ್ಕೆ ಹೋಗಲಿದೆ. ಇಲ್ಲಿ ತಂಡವು ನೆಟ್ ರನ್ ರೇಟ್ ಬಗ್ಗೆಯೂ ಚಿಂತಿಸಬೇಕಾಗಿದೆ.

ಲಖನೌ ಸೂಪರ್ ಜೈಂಟ್ಸ್

ಅತ್ತ ಕೃನಾಲ್ ಪಾಂಡ್ಯ ನೇತೃತ್ವದ ಎಲ್‌ಎಸ್‌ಜಿ 12 ಪಂದ್ಯಗಳಲ್ಲಿ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ತಮ್ಮ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ತಂಡವು ಮುಂಬೈ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ತಂಡ ಈ ಎರಡನ್ನೂ ಗೆಲ್ಲಬೇಕಾಗಿದೆ. ಒಂದು ವೇಳೆ ಒಂದನ್ನು ಮಾತ್ರ ಗೆದ್ದರೂ, ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದು. ಈ ಸಂದರ್ಭದಲ್ಲೂ ಅದು ಇತರ ಫಲಿತಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

ಮುಖಾಮುಖಿ ದಾಖಲೆ

ಕಳೆದ ಋತುವಿನಲ್ಲಿ ಮುಂಬೈ ವಿರುದ್ಧದ ಎರಡೂ ಪಂದ್ಯವನ್ನು ಲಖನೌ ಗೆದ್ದಿದೆ. ಹೀಗಾಗಿ ರೋಹಿತ್‌ ಶರ್ಮಾ ಪಡೆಯ ವಿರುದ್ಧ ಲಖನೌ ತಂಡ ಅಜೇಯ ದಾಖಲೆ ಹೊಂದಿದೆ. ವಿಶೇಷವೆಂದರೆ, ಈ ಎರಡೂ ಪಂದ್ಯಗಳಲ್ಲಿ ನಾಯಕ ಕೆಎಲ್ ರಾಹುಲ್ ಶತಕ ಸಿಡಿಸಿದ್ದರು. ಆದರೆ, ಇಂದು ಅವರು ಆಡುತ್ತಿಲ್ಲ.

ಲಖನೌ ಸಂಭಾವ್ಯ ಆಡುವ ಬಳಗ

ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯ್ನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಆಯುಷ್ ಬದೋನಿ, ಕೆ ಗೌತಮ್, ಯುಧ್ವೀರ್ ಚರಕ್/ಯಶ್ ಠಾಕೂರ್, ರವಿ ಬಿಷ್ಣೋಯ್, ಅಮಿತ್ ಮಿಶ್ರಾ, ಅವೇಶ್ ಖಾನ್.

ಮುಂಬೈ ಸಂಭಾವ್ಯ ಆಡುವ ಬಳಗ

ರೋಹಿತ್ ಶರ್ಮಾ, ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಕ್ರಿಸ್ ಜೋರ್ಡಾನ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಾಲ್, ಜೇಸನ್ ಬೆಹ್ರೆಂಡಾರ್ಫ್.