KKR vs LSG: ರಿಂಕು ವೀರೋಚಿತ ಹೋರಾಟಕ್ಕೆ ದಕ್ಕದ ಜಯ; ಪ್ಲೇಆಫ್ ಪ್ರವೇಶಿಸಿದ ಲಖನೌ, ಟೂರ್ನಿಯಿಂದ ಹೊರಬಿದ್ದ ಕೆಕೆಆರ್
ಕನ್ನಡ ಸುದ್ದಿ  /  ಕ್ರೀಡೆ  /  Kkr Vs Lsg: ರಿಂಕು ವೀರೋಚಿತ ಹೋರಾಟಕ್ಕೆ ದಕ್ಕದ ಜಯ; ಪ್ಲೇಆಫ್ ಪ್ರವೇಶಿಸಿದ ಲಖನೌ, ಟೂರ್ನಿಯಿಂದ ಹೊರಬಿದ್ದ ಕೆಕೆಆರ್

KKR vs LSG: ರಿಂಕು ವೀರೋಚಿತ ಹೋರಾಟಕ್ಕೆ ದಕ್ಕದ ಜಯ; ಪ್ಲೇಆಫ್ ಪ್ರವೇಶಿಸಿದ ಲಖನೌ, ಟೂರ್ನಿಯಿಂದ ಹೊರಬಿದ್ದ ಕೆಕೆಆರ್

ಗೆಲುವಿನೊಂದಿಗೆ ಲಖನೌ ತಂಡವು ಪ್ರಸಕ್ತ ಆವೃತ್ತಿಯಲ್ಲಿ ಮೂರನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಂಡ ತೃಪ್ತಿಪಟ್ಟಿದ್ದು, ಎಲಿಮನೇಟರ್‌ ಪಂದ್ಯವನ್ನು ಆಡಲಿದೆ.

ಅರ್ಧಶತಕ ಸಿಡಿಸಿದ ರಿಂಕು ಸಿಂಗ್
ಅರ್ಧಶತಕ ಸಿಡಿಸಿದ ರಿಂಕು ಸಿಂಗ್

ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಕೇವಲ ಒಂದು ರನ್‌ಗಳಿಂದ ರೋಚಕ ಗೆಲುವು ಸಾಧಿಸುವ ಮೂಲಕ ಲಖನೌ ಸೂಪರ್‌ ಜೈಂಟ್ಸ್‌ ತಂಡವು ಪ್ರಸಕ್ತ ಐಪಿಎಲ್‌ ಆವೃತ್ತಿಯ ಪ್ಲೇ ಆಫ್‌ಗೆ ಲಗ್ಗೆ ಹಾಕಿದೆ. ಇದೇ ವೇಳೆ ಕೆಕೆಆರ್‌ ತಂಡವು ಟೂರ್ನಿಯಿಂದ ಹೊರಬಿದ್ದಿದೆ.

ಪ್ಲೇ ಆಫ್‌ ಹಂತಕ್ಕೆ ಎಂಟ್ರಿ ಪಡೆಯುವ ಅವಕಾಶ ಪಡೆಯಲು, ಕೆಕೆಆರ್‌ಗೆ ಈ ಪಂದ್ಯದಲ್ಲಿ ಬೃಹತ್‌ ಅಂತರದ ಗೆಲುವು ಅನಿವಾರ್ಯವಾಗಿತ್ತು. ಮತ್ತೊಂದೆಡೆ ಲಖನೌ ತಂಡಕ್ಕೆ ಗೆಲುವು ಸಾಕಿತ್ತು. ಅಂತಿಮವಾಗಿ ಲಖನೌ ಲೆಕ್ಕಾಚಾರ ಕೈಹಿಡಿದಿದೆ. ದೊಡ್ಡ ಅಂತರದ ಗೆಲುವಿನ ಕನಸು ಕಂಡಿದ್ದ ನಿತೀಶ್‌ ರಾಣಾ ಪಡೆಯು, ಕನಿಷ್ಠ ಗೆಲುವು ಸಾಧಿಸುವಲ್ಲೂ ಯಶಸ್ವಿಯಾಗಲಿಲ್ಲ.

ಮೊದಲು ಬ್ಯಾಟಿಂಗ್‌ ಮಾಡಿದ ಲಖನೌ, 8 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಕೆಕೆಆರ್‌, ಅಂತಿಮವಾಗಿ 7 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿತು. ರಿಂಕು ಸಿಂಗ್‌ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ನಡೆಸಿದರಾದರೂ, ಕೇವಲ ಒಂದೇ ಒಂದು ರನ್‌ ಕೊರತೆಯಿಂದಾಗಿ ಆ ಪ್ರಯತ್ನ ವಿಫಲವಾಯ್ತು.

ಈ ಗೆಲುವಿನೊಂದಿಗೆ ಲಖನೌ ತಂಡವು ಪ್ರಸಕ್ತ ಆವೃತ್ತಿಯಲ್ಲಿ ಮೂರನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಂಡ ತೃಪ್ತಿಪಟ್ಟಿದ್ದು, ಎಲಿಮನೇಟರ್‌ ಪಂದ್ಯವನ್ನು ಆಡಲಿದೆ. ಅತ್ತ ಮೊದಲ ಎರಡು ಸ್ಥಾನದಲ್ಲಿರುವ ಗುಜರಾತ್‌ ಹಾಗೂ ಚೆನ್ನೈ ತಂಡಗಳು ಅದೇ ಸ್ಥಾನದಲ್ಲಿ ಮುಂದುವರೆಯಲಿದೆ. ಅಲ್ಲದೆ ಉಭಯ ತಂಡಗಳು ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸದ್ಯ ಪ್ಲೇ ಆಫ್‌ ಪ್ರವೇಶಿಸುವ ನಾಲ್ಕನೇ ತಂಡ ಯಾವುದು ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ. ಈ ಸ್ಥಾನವನ್ನು ಬಹುತೇಕ ಮುಂಬೈ ಇಂಡಿಯನ್ಸ್‌ ಅಥವಾ ಆರ್‌ಸಿಬಿ ಪಡೆಯಲಿದೆ. ನಾಳಿನ ಪಂದ್ಯದಲ್ಲಿ ಗೆಲ್ಲುವ ಅಥವಾ ಹೆಚ್ಚು ರನ್‌ ರೇಟ್‌ನೊಂದಿಗೆ ಗೆಲ್ಲುವ ತಂಡವು ನಾಲ್ಕನೇ ಸ್ಥಾನ ಪಡೆಯಲಿದೆ.

ಚೇಸಿಂಗ್‌ ನಡೆಸಿದ ಕೆಕೆಆರ್‌ ತಂಡದ ಆರಂಭ ಉತ್ತಮವಾಗಿತ್ತು. ಬೇಗನೆ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿ ಕಣಕ್ಕಿಳಿದ ತಂಡವು ಪವರ್‌ಪ್ಲೇಯಲ್ಲಿ 60 ರನ್‌ ಕಲೆ ಹಾಕಿತು. ಆದರೆ ಪವರ್‌ಪ್ಲೇ ಕೊನೆಯ ಹಂತದಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು. ಉತ್ತಮ ಆಟ ಪ್ರದರ್ಶಿಸುತ್ತಿದ್ದ ವೆಂಕಟೇಶ್‌ ಅಯ್ಯರ್‌ 24 ರನ್‌ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ರಾಣಾ 8 ರನ್‌ ಗಳಿಸಿದರೆ, ಜೇಸನ್‌ ರಾಯ್‌ 45 ರನ್‌ ಗಳಿಸಿದ್ದಾಗ ವಿಕೆಟ್‌ ಒಪ್ಪಿಸಿದರು.

ಎಲ್ಲಾ ಬ್ಯಾಟರ್‌ಗಳು ಬಂದು ವಿಕೆಟ್‌ ಒಪ್ಪಿಸುತ್ತಾ ಸಾಗಿದಾಗ, ಆಪದ್ಬಾಂಧವ ರಿಂಕು ಸಿಂಗ್‌ ಮತ್ತೆ ಅಬ್ಬರಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ 41 ರನ್‌ಗಳ ಅಗತ್ಯವಿದ್ದಾಗ, ರಿಂಕು ಅಬ್ಬರ ಆರಂಭವಾಯ್ತು. 19ನೇ ಓವರ್‌ ಎಸೆದ ನವೀನ್‌ ಓವರ್‌ನಲ್ಲಿ ರಿಂಕು ಭರ್ಜರಿ 20 ರನ್‌ ಸಿಡಿಸಿದರು. ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ 21 ರನ್‌ಗಳ ಅಗತ್ಯವಿತ್ತು. ರಿಂಕು ಅಬ್ಬರದಿಂದ ತಂಡ 19 ರನ್‌ ಗಳಿಸಿತು. ಆದರೆ ಕೇವಲ ಎರಡು ರನ್‌ ಕೊರತೆಯಿಂದಾಗಿ ಸೋಲೊಪ್ಪಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಲಖನೌ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆದರೆ, ನಿಕೋಲಸ್‌ ಪೂರನ್‌ ಪಂದ್ಯವನ್ನು ಸ್ಪರ್ಧಾತ್ಮಕ ಹಂತಕ್ಕೆ ಕೊಂಡೊಯ್ದರು. ಒಂದು ಹಂತದಲ್ಲಿ 73 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಬೇಗನೆ ಕುಸಿಯುವ ಹಂತಕ್ಕೆ ಕೃನಾಲ್‌ ಪಡೆ ಬಂದಿತ್ತು. ಆದರೆ ಪೂರನ್‌ ಸಮಯೋಚಿತ ಮತ್ತು ಸ್ಫೋಟಕ ಆಟದಿಂದಾಗಿ ರನ್‌ ವೇಗ ಹೆಚ್ಚಿತು. ಅಂತಿಮವಾಗಿ ತಂಡವು 8 ವಿಕೆಟ್‌ ನಷ್ಟಕ್ಕೆ 176 ರನ್‌ ಪೇರಿಸಿತು.

ಆರಂಭಿಕರಾದ ಕರನ್‌ ಶರ್ಮಾ 3 ರನ್‌ ಗಳಿಸಿ ಔಟಾದರು. ಈ ವೇಳೆ ಅನುಭವಿ ಆಟಗಾರ ಡಿಕಾಕ್‌ ಜೊತೆಗೂಡಿದ ಪ್ರೇರಕ್‌ ಮಂಕಡ್‌ 26 ರನ್‌ ಪೇರಿಸಿದರು. ಅವರು ಔಟಾದ ಬಳಿಕ ಬಂದ ಸ್ಟೋಯ್ನಿಸ್‌ ಕೂಡಾ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ನಿರಾಸೆ ಮೂಡಿಸಿದರು. ನಾಯಕ ಕೃನಾಲ್‌ ಪಾಂಡ್ಯ ಆಟ ಕೂಡಾ ಒಂದಂಕಿ ಮೊತ್ತಕ್ಕೆ ಸೀಮಿತವಾಯ್ತು. ಪಾಂಡ್ಯ ಔಟಾದ ಬೆನ್ನಿಗೆ ಡಿಕಾಕ್‌ ಕೂಡಾ ಚಕ್ರವರ್ತಿಗೆ ವಿಕೆಟ್‌ ಒಪ್ಪಿಸಿದರು.

ಈ ವೇಳೆ ಒಂದಾದ ಆಯುಷ್‌ ಬದೋನಿ ಹಾಗೂ ನಿಕೋಲಸ್‌ ಪೂರನ್‌ ಅರ್ಧಶತಕದ ಜೊತೆಯಾಟವಾಡಿದರು. 25 ರನ್‌ ಗಳಿಸಿ ಬದೋನಿ ಔಟಾದರೆ, ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಪೂರನ್‌ ಕೂಡಾ ನಿರ್ಗಮಿಸಿದರು. ಡೆತ್‌ ಓವರ್‌ಗಳಲ್ಲಿ ಕನ್ನಡಿಗ ಕೆ ಗೌತಮ್ ಒಂದಷ್ಟು ರನ್‌ ಕಲೆ ಹಾಕಿದರು.

ಕೆಕೆಆರ್‌ ಪರ ವೈಭವ್‌, ಠಾಕೂರ್‌ ಮತ್ತು ನರೈನ್ ತಲಾ ಎರಡು ವಿಕೆಟ್‌ ಕಬಳಿಸಿದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.