Naveen ul Haq: ಕ್ಷಮಿಸಿ ಕೊಹ್ಲಿ ಸರ್ ಟ್ವೀಟ್ ಕುರಿತು ಸ್ಪಷ್ಟನೆ ನೀಡಿದ ನವೀನ್; ಅಭಿಮಾನಿಗಳಿಗೆ ಸೂಚನೆ ಕೊಟ್ಟ ಮ್ಯಾಂಗೋ ಬಾಯ್
ವೈರಲ್ ಟ್ವೀಟ್ ಕುರಿತು ನವೀನ್ ಉಲ್ ಹಕ್ ಸ್ಪಷ್ಟನೆ ನೀಡಿದ್ದಾರೆ. ಅದು "ನಕಲಿ ಖಾತೆ" ಎಂದು ಸ್ಪಷ್ಟಪಡಿಸಿದ್ದಾರೆ. ಆ ಖಾತೆಯಿಂದ ಯಾವುದೇ ಸಂದೇಶಗಳು ಬಂದರೆ ಅದನ್ನು ರಿಪೋರ್ಟ್ ಮಾಡುವಂತೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಐಪಿಎಲ್‌ನ ಸತತ ಎರಡನೇ ಆವೃತ್ತಿಯಲ್ಲೂ, ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡವು ಎಲಿಮಿನೇಟರ್ ಹಂತದಲ್ಲಿ ಎಡವಿತು. ಮುಂಬೈ ಇಂಡಿಯನ್ಸ್ (Mumbai Indians) ತಂಡದ ವಿರುದ್ಧ ಸೋತ ತಂಡವು, ಟೂರ್ನಿಯಿಂದ ಹೊರಬಿದ್ದಿತು. ಈ ನಡುವೆ ಟೂರ್ನಿಯ ಕೊನೆಯ ಕೆಲವು ಪಂದ್ಯಗಳಲ್ಲಿ ಲಖನೌ ತಂಡವನ್ನು ಬೆಂಬಲಿಸುವ ಅಭಿಮಾನಿಗಳ ಸಂಖ್ಯೆ ಕೂಡಾ ಕಡಿಮೆಯಾದಂತಿದೆ. ತಂಡದ ವೇಗಿ ನವೀನ್ ಉಲ್ ಹಕ್ (Naveen ul Haq) ಹಾಗೂ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ (Virat Kohli) ನಡುವೆ ಮೈದಾನದಲ್ಲೇ ನಡೆದ ಜಗಳದ ಬಳಿಕ, ವ್ಯಾಪಕ ಟೀಕೆಗಳು ಕೇಳಿ ಬಂದಿವೆ. ಲಖನೌ ಪಂದ್ಯಗಳು ನಡೆದ ಮೈದಾನಗಳಲ್ಲೆಲ್ಲಾ ಕೊಹ್ಲಿ ಹೆಸರು ಕೂಗುವ ಮೂಲಕ ಅಭಿಮಾನಿಗಳು ನವೀನ್ ಕಾಲೆಳೆದಿದ್ದಾರೆ. ( ಇದನ್ನೂ ಓದಿ )
ಟ್ರೆಂಡಿಂಗ್ ಸುದ್ದಿ
ಮುಂಬೈ ವಿರುದ್ಧದ ಎಲಿಮನೇಟರ್ ಪಂದ್ಯದಲ್ಲಿ ಲಖನೌ ಸೋತು ನಿರ್ಗಮಿಸಿತು. ಟೂರ್ನಿಯಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ 7.82ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ನವೀನ್, 11 ವಿಕೆಟ್‌ಗಳನ್ನು ಪಡೆದರು. ಮುಂಬೈ ವಿರುದ್ಧದ ಪಂದ್ಯದ ಬಳಿಕ, ವಿರಾಟ್ ಕೊಹ್ಲಿಗೆ ಸಂಬಂಧಿಸಿದ ಟ್ವೀಟ್ ಒಂದು ವೈರಲ್ ಆಗಿತ್ತು. ಈ ಟ್ವೀಟ್ ಕುರಿತಾಗಿ ಸದ್ಯ ಖುದ್ದು ನವೀನ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಮೇ 1ರಂದು ಲಖನೌನಲ್ಲಿ ನಡೆದ ಪಂದ್ಯದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ನವೀನ್ ಜಗಳಕ್ಕಿಳಿದಿದ್ದರು. ಆ ಬಳಿಕ, ಎಲ್‌ಎಸ್‌ಜಿ ತಂಡ ಆಡಿದಲ್ಲೆಲ್ಲಾ ಪ್ರೇಕ್ಷಕರು ನವೀನ್‌ರನ್ನು ಕೆರಳಿಸಿದ್ದಾರೆ. ಕೊಹ್ಲಿಯ ಹೆಸರನ್ನು ಕೂಗುತ್ತಲೇ ನವೀನ್ ಕಾಲೆಳೆದಿದ್ದಾರೆ. ಇದು ಹೈದರಾಬಾದ್, ಲಖನೌ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ನಡೆದ ಎಲಿಮಿನೇಟರ್ ಪಂದ್ಯದ ಸಮಯದಲ್ಲಿಯೂ ಸಂಭವಿಸಿದೆ. ನವೀನ್ ಇದಕ್ಕೆ ನೇರವಾಗಿ ಎಲ್ಲೂ ಪ್ರತಿಕ್ರಿಯಿಸಿಲ್ಲ. ಆದರೆ ಮುಂಬೈ ವಿರುದ್ಧ ಪ್ರತಿ ಬಾರಿ ವಿಕೆಟ್ ಪಡೆದಾಗಲೂ ಕಿವಿಯ ಮೇಲೆ ಬೆರಳಿಟ್ಟು ಸಂಭ್ರಮಿಸುವ ಮೂಲಕ, ನಾನ್ಯಾವುದನ್ನೂ ಲೆಕ್ಕಿಸುವುದಿಲ್ಲ ಎಂಬತೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.
ಈ ಪಂದ್ಯದ ಬಳಿಕ, '@naveenulhaq66' ಹೆಸರಿನ ಟ್ವಿಟರ್ ಖಾತೆಯಲ್ಲಿ "ನನ್ನನ್ನು ಕ್ಷಮಿಸಿ ವಿರಾಟ್ ಕೊಹ್ಲಿ ಸರ್" ಎಂದು ಪೋಸ್ಟ್ ಮಾಡಲಾಗಿತ್ತು. ಇದು ತಕ್ಷಣವೇ ವೈರಲ್ ಆಗಿದ್ದು, 25000ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ವಿಶೇಷವಾಗಿ, ಈ ಖಾತೆಯು ನೀಲಿ ಟಿಕ್ ಚಿಹ್ನೆಯನ್ನು ಹೊಂದಿರುವುದರಿಂದ, ಇದು ನವೀನ್ ಅವರದ್ದೇ ಪೋಸ್ಟ್ ಎಂದು ನೆಟ್ಟಿಗರು ಅಂದುಕೊಂಡಿದ್ದರು. ಹೀಗಾಗಿ ವೇಗವಾಗಿ ಇದು ವೈರಲ್ ಆಗಿತ್ತು.
ಅದಾದ ಬಳಿಕ ಇಂದು (ಶನಿವಾರ, ಮೇ 27) ನವೀನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾಥೆಯ ಸ್ಟೋರಿ ಮೂಲಕ ಈ ಟ್ವಿಟರ್ ಖಾತೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಅಲ್ಲದೆ ಅದನ್ನು "ನಕಲಿ ಖಾತೆ" ಎಂದು ಸ್ಪಷ್ಟಪಡಿಸಿದ್ದಾರೆ. ಆ ಖಾತೆಯಿಂದ ಯಾವುದೇ ಸಂದೇಶಗಳು ಬಂದರೆ ಅದನ್ನು ರಿಪೋರ್ಟ್ ಮಾಡುವಂತೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅದಾದ ಬೆನ್ನಲ್ಲೇ ಇದೀಗ ಟ್ವಿಟರ್ ಆ ಖಾತೆಯನ್ನು ಸ್ಥಗಿತಗೊಳಿಸಿದೆ.
ಮುಂಬೈ ವಿರುದ್ಧದ ಪಂದ್ಯದ ನಂತರ ಪ್ರೇಕ್ಷಕರ ಘೋಷಣೆಗಳ ಬಗ್ಗೆ ನವೀನ್ ಮಾತನಾಡಿದ್ದರು. ಈ ವಾರದ ಆರಂಭದಲ್ಲಿ ನಡೆದ ಪಂದ್ಯದ ನಂತರದ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, “ನಾನು ಅದನ್ನು ಆನಂದಿಸುತ್ತೇನೆ. ಪ್ರೇಕ್ಷಕರು ಅವರ (ವಿರಾಟ್ ಕೊಹ್ಲಿಯ) ಹೆಸರು ಅಥವಾ ಯಾವುದೇ ಇತರ ಆಟಗಾರನ ಹೆಸರನ್ನು ಜಪಿಸುವುದನ್ನು ನಾನು ಇಷ್ಟಪಡುತ್ತೇನೆ. ಇದು ನನ್ನ ತಂಡದ ಪರ ಉತ್ತಮ ಪ್ರದರ್ಶನ ನೀಡುವ ಉತ್ಸಾಹವನ್ನು ನೀಡುತ್ತದೆ,” ಎಂದು ಅವರು ಹೇಳಿದ್ದಾರೆ.