IPL 2023 Playoffs: ಇಲ್ಲಿದೆ ಐಪಿಎಲ್ ಪ್ಲೇಆಫ್ ಪಂದ್ಯಗಳ ಅಂತಿಮ ವೇಳಾಪಟ್ಟಿ; ಕ್ವಾಲಿಫೈಯರ್ ಲೆಕ್ಕಾಚಾರ ಹೀಗಿದೆ
ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಿವೆ.

ಐಪಿಎಲ್ 2023ರ ಆವೃತ್ತಿಯ ಲೀಗ್ ಹಂತದ ಅಂತಿಮ ದಿನವು ಸಾಕಷ್ಟು ನಾಟಕೀಯವಾಗಿ ಸಾಗಿತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡವು ನಾಲ್ಕನೇ ಪ್ಲೇಆಫ್ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆ ಮೂಲಕ ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಬಳಿಕ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿತು.
ಟ್ರೆಂಡಿಂಗ್ ಸುದ್ದಿ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸುವುದರೊಂದಿಗೆ ರೋಹಿತ್ ಪಡೆ ಯಶಸ್ವಿಯಾಯ್ತು. ಅಂತಿಮ ಪ್ಲೇಆಫ್ ಸ್ಥಾನದಿಂದ ಮುಂಬೈ ತಂಡವನ್ನು ಕೆಳಗಿಳಿಸಲು, ಆರ್‌ಸಿಬಿ ತಂಡವು ಲೀಗ್‌ನ ಅಂತಿಮ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸೋಲಿಸುವ ಅಗತ್ಯವಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ.
ಅಂಕಪಟ್ಟಿ ಹೀಗಿದೆ
ಗುಜರಾತ್ ತಂಡದ ಭರ್ಜರಿ ಗೆಲುವಿನ ಬಳಿಕ, ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಲೀಗ್ ಹಂತವನ್ನು ಅಗ್ರಸ್ಥಾನಿಯಾಗಿ ಮುಗಿಸಿದೆ. 14 ಪಂದ್ಯಗಳಲ್ಲಿ 20 ಅಂಕಗಳೊಂದಿಗೆ ಸತತ ಎರಡನೇ ವರ್ಷ ಯಶಸ್ವಿ ತಂಡವಾಯ್ತು. ಸಿಎಸ್‌ಕೆ ತಂಡವು 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಎಲ್‌ಎಸ್‌ಜಿ ಕೂಡಾ 17 ಅಂಕ ಪಡೆದಿದ್ದು, ರನ್ ರೇಟ್ ಲೆಕ್ಕಾಚಾರದಂತೆ ಮೂರನೇ ಸ್ಥಾನ ಪಡೆದಿದೆ. ಎಂಐ 16 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಆರ್‌ಸಿಬಿ ಸೋಲಿನ ಬಳಿಕ ರಾಜಸ್ಥಾನ ತಂಡವು 14) ಅಂಕಗಳೊಂದಿಗೆ ಐದನೇ ಸ್ಥಾನ ಮತ್ತು ಆರ್‌ಸಿಬಿ ಕೂಡಾ 14 ಅಂಕ ಪಡೆದು ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಕೆಕೆಆರ್ (12 ಅಂಕ) ಏಳನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ (12 ಅಂಕ), ಡೆಲ್ಲಿ ಕ್ಯಾಪಿಟಲ್ಸ್ (10 ಅಂಕ) ಮತ್ತು ಹೈದರಾಬಾದ್ (8 ಅಂಕ) ಅಂಕಪಟ್ಟಿಯ ನಂತರದ ಸ್ಥಾನಗಳನ್ನ ಪಡೆದಿವೆ.
ಐಪಿಎಲ್ 2022ರ ಪ್ಲೇಆಫ್ ವೇಳಾಪಟ್ಟಿ
ಕ್ವಾಲಿಫೈಯರ್ 1: ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್, ಮೇ 23ರ ಮಂಗಳವಾರ -ಸಂಜೆ 7:30, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ.
ಎಲಿಮಿನೇಟರ್: ಲಖನೌ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್, ಮೇ 24 ಬುಧವಾರ - ಸಂಜೆ 7:30, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ.
ಕ್ವಾಲಿಫೈಯರ್ 2: ಕ್ವಾಲಿಫೈಯರ್ 1ರಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್‌ನಲ್ಲಿ ಗೆದ್ದ ತಂಡ -ಮೇ 26 ಶುಕ್ರವಾರ - ಸಂಜೆ 7:30, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.
ಫೈನಲ್: ಕ್ವಾಲಿಫೈಯರ್ 1ರಲ್ಲಿ ವಿಜೇತ ತಂಡ ಮತ್ತು ಕ್ವಾಲಿಫೈಯರ್ 2ರಲ್ಲಿ ವಿಜೇತ ತಂಡ - ಮೇ 28 ಭಾನುವಾರ ಸಂಜೆ 7:30, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.
ಭಾನುವಾರದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ವಿರಾಟ್ ಕೊಹ್ಲಿ ಅಬ್ಬರದ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 197 ರನ್ ಕಲೆ ಹಾಕಿತು. ಬೃಹತ್ ಗುರಿ ಪಡೆದ ಗುಜರಾತ್, 19.1 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆ ಮೂಲಕ 6 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು. ಸ್ಫೋಟಕ ಆಟ ಆಡಿದ ಶುಬ್ಮನ್ ಗಿಲ್, ಭರ್ಜರಿ ಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ರಾಯಲ್ ಚಾಲೆಂಜರ್ಸ್ ಪಂದ್ಯಕ್ಕೆ ವರುಣ ಕೃಪೆ ತೋರಿದರೂ, ಗುಜರಾತ್ ಆಟಗಾರರು ಅವಕಾಶ ನೀಡಲಿಲ್ಲ. ನಿರ್ಣಾಯಕ ಪಂದ್ಯದಲ್ಲಿ ಸೋಲುವುದರೊಂದಿಗೆ ಟೂರ್ನಿಯಿಂದ ಅಧಿಕೃತವಾಗಿ ಹೊರಬಿತ್ತು.