ಕನ್ನಡ ಸುದ್ದಿ  /  Sports  /  Cricket News Ipl 2023 Virat Kohli Creates History As Captain Smashes Multiple Records In Rcb Vs Pbks Match Jra

Virat Kohli Record: ನಾಯಕನಾಗಿ ಹಲವು ದಾಖಲೆ ಬರೆದ ವಿರಾಟ್; ಟಿ20ಯಲ್ಲಿ ಅಪರೂಪದ ಸಾಧನೆ

IPL 2023: ಕೊಹ್ಲಿ 186 ಇನ್ನಿಂಗ್ಸ್‌ಗಳಲ್ಲಿ ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ. ಆ ಸಾಧನೆ ಏನು ಎಂಬುದನ್ನು ಈ ಸ್ಟೋರಿಯಲ್ಲಿ ಓದಿ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ (PTI)

ಮೊಹಾಲಿಯಲ್ಲಿ ಇಂದು (ಗುರುವಾರ, ಏಪ್ರಿಲ್‌ 20) ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಗೆಲುವಿನ ನಗಾರಿ ಬಾರಿಸಿದೆ. ಈ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ಐಕಾನ್ ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ವಹಿಸಿದ್ದರು. ವರ್ಷಗಳ ಹಿಂದೆ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದ ಕೊಹ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಮತ್ತೆ ಬೆಂಗಳೂರು ತಂಡದ ನಾಯಕನಾಗಿ ಹಾಜರಾದರು.

ತಂಡದ ಕಾಯಂ ನಾಯಕ ಫಾಫ್ ಡು ಪ್ಲೆಸಿಸ್, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಿದರು. ಹೀಗಾಗಿ ಅವರು ಬ್ಯಾಟಿಂಗ್‌ ವೇಳೆ ಮಾತ್ರ ಕಾಣಿಸಿಕೊಂಡರು. ವಿರಾಟ್‌ 2021ರ ಐಪಿಎಲ್‌ ಆವೃತ್ತಿಯ ಬಳಿಕ ಅಕ್ಟೋಬರ್​ 11ರಂದು ಆರ್‌ಸಿಬಿ ನಾಯಕತ್ವ ತೊರೆದಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ನಾಯಕನಾಗಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ.

ಐಪಿಎಲ್‌ನಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ. ಸ್ಟ್ಯಾಂಡ್ ಇನ್ ನಾಯಕ ವಿರಾಟ್‌, ಸ್ಯಾಮ್‌ ಕರನ್‌ ಬಳಗದ ವಿರುದ್ಧ ತಮ್ಮ ಅರ್ಧಶತಕ ಸಿಡಿಸಿದರು. ಅದರೊಂದಿಗೆ ಹಲವು ದಾಖಲೆಗಳನ್ನು ಬರೆದರು. ಗುರುವಾರ ನಡೆದ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ 6,500 ರನ್ ಗಡಿ ದಾಟಿದ ಮೊದಲ ಬ್ಯಾಟರ್ ಎನಿಸಿಕೊಂಡರು.

ಈವರೆಗೆ 229 ಐಪಿಎಲ್‌ ಪಂದ್ಯಗಳಲ್ಲಿ 6903 ರನ್‌ ಸಿಡಿಸಿರುವ ವಿರಾಟ್, ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕರಾಗಿ 5333 ರನ್ ಗಳಿಸಿದ್ದಾರೆ. ಇದೇ ವೇಳೆ ಭಾರತದ ಮಾಜಿ ನಾಯಕ ಟೀಮ್‌ ಇಂಡಿಯಾ ಪರ 50 ಪಂದ್ಯಗಳಲ್ಲಿ 1570 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕ ಕೂಡಾ ಸೇರಿವೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆರೋನ್ ಫಿಂಚ್ ನಂತರ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ 186 ಇನ್ನಿಂಗ್ಸ್‌ಗಳಲ್ಲಿ ಈ ಅದ್ಭುತ ಸಾಧನೆ ಮಾಡಿದ್ದಾರೆ. ಇದೇ ವೇಳೆ ವಿಶ್ವದ ಶ್ರೀಮಂತ ಟಿ20 ಲೀಗ್‌ನಲ್ಲಿ 600 ಬೌಂಡರಿಗಳನ್ನು ಬಾರಿಸಿದ ಮೂರನೇ ಬ್ಯಾಟರ್ ಎಂಬ ಖ್ಯಾತಿಗೂ ಕೊಹ್ಲಿ ಪಾತ್ರರಾದರು.

ವಿಶ್ವದ ಶ್ರೀಮಂತ ಟಿ20 ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ನಾಯಕ ವಾರ್ನರ್ 608 ಬೌಂಡರಿಗಳನ್ನು ಬಾರಿಸಿದ್ದಾರೆ ಮತ್ತು ಪಂಜಾಬ್ ಕಿಂಗ್ಸ್ ನಾಯಕ ಧವನ್ ಐಪಿಎಲ್ ವೃತ್ತಿಜೀವನದಲ್ಲಿ ಬರೋಬ್ಬರಿ 730 ಬೌಂಡರಿಗಳನ್ನು ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಇಂದಿನ(ಏಪ್ರಿಲ್‌ 20) ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ರೋಚಕ ಪಂದ್ಯವನ್ನು ಆರ್‌ಸಿಬಿ ವಶಪಡಿಸಿಕೊಂಡಿದೆ. ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಸಿರಾಜ್‌ ಆಟದ ನೆರವಿನಿಂದ ಮೊಹಾಲಿಯಲ್ಲಿ ಆರ್‌ಸಿಬಿಯು 24 ರನ್‌ಗಳಿಂದ ಗೆದ್ದು ಬೀಗಿದೆ.

ಆರ್‌ಸಿಬಿ ನೀಡಿದ 175ರನ್‌ ಚೇಸಿಂಗ್‌ ಮಾಡಿದ ಪಂಜಾಬ್‌, ರೆಡ್‌ ಅಂಡ್‌ ಗೋಲ್ಡ್‌ ಆರ್ಮಿಯ ಬೌಲಿಂಗ್‌ ದಾಳಿಗೆ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡಿತು. ಅಂತಿಮವಾಗಿ 18.2 ಓವರ್‌ಗಳಲ್ಲಿ 150 ರನ್‌ ಗಳಿಸಿ ಆಲೌಟ್‌ ಆಯ್ತು.

ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ ಮತ್ತು ಫಾಫ್‌ ಡುಪ್ಲೆಸಿಸ್‌ ಮೊದಲ ವಿಕೆಟ್‌ಗೆ ಭರ್ಜರಿ 137 ರನ್ ಕಲೆಹಾಕಿದರು. 98 ಎಸೆತಗಳನ್ನು ಎದುರಿಸಿದ ಇವರಿಬ್ಬರೂ ಜವಾಬ್ದಾರಿಯುತ ಆಟ ಪ್ರದರ್ಶಿದರು. ಅಲ್ಲದೆ ಒಬ್ಬರ ನಂತರ ಮತ್ತೊಬ್ಬರಂತೆ ಅರ್ಧಶತಕ ಸಿಡಿಸಿದರು. ಈ ನಡುವೆ ಈ ಬಾರಿಯ ಆವೃತ್ತಿಯಲ್ಲಿ ನಾಲ್ಕನೇ ಅರ್ಧಶತಕ ಸಿಡಿಸಿದ ವಿರಾಟ್‌, ಅಂತಿಮವಾಗಿ 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 59 ರನ್‌ ಕಲೆ ಹಾಕಿ ಔಟಾದರು.

ಸದ್ಯ ಆರು ಪಂದ್ಯಗಳಿಂದ ನಾಲ್ಕು ಅರ್ಧಶತಕ ಸಹಿತ 343 ರನ್‌ ಗಳಿಸಿರುವ ಫಾಫ್‌, ಆರೇಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. ಮತ್ತೊಂದೆಡೆ ನಾಲ್ಕು ಅರ್ಧಶತಕ ಸಹಿತ 279 ರನ್‌ ಸಿಡಿಸಿರುವ ವಿರಾಟ್‌ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.