ಕನ್ನಡ ಸುದ್ದಿ  /  Sports  /  Cricket News Ipl We Are Vulnerable To Mental Pressure From Trolls Kl Rahul Breaks Silence On Social Media Trolling Prs

KL Rahul on troll: ಟ್ರೋಲ್​​ನಿಂದ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದೇವೆ; ಟ್ರೋಲರ್​​​ಗಳ ವಿರುದ್ಧ ಸಿಡಿದೆದ್ಧ ಕೆಎಲ್​ ರಾಹುಲ್​

ಸ್ಟ್ರೈಕ್​ರೇಟ್​ ಮತ್ತು ಕಳಪೆ ಫಾರ್ಮ್​​​ನಿಂದ ಬಳಲುತ್ತಿದ್ದ ಕೆಎಲ್ ರಾಹುಲ್ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದರು. ಈಗ ಅದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್​, ಟ್ರೋಲ್​​ಗಳು ಮಾನಸಿಕ ಆರೋಗ್ಯ ಮತ್ತು ಆಲೋಚನೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿವೆ ಎಂದು ಹೇಳಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕ ಕೆಎಲ್ ರಾಹುಲ್​
ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕ ಕೆಎಲ್ ರಾಹುಲ್​

ಗಾಯದಿಂದ 16ನೇ ಆವೃತ್ತಿಯ ಇಂಡಿಯನ್​​ ಪ್ರೀಮಿಯರ್ ಲೀಗ್​ನ ಅರ್ಧಕ್ಕೆ ತೊರೆದಿರುವ ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕ ಕೆಎಲ್ ರಾಹುಲ್, ಇದೀಗ ಟ್ರೋಲರ್​ಗಳ ವಿರುದ್ಧ ಸಿಡಿದೆದ್ದಿದ್ದಾರೆ. ತನ್ನ ಕಳಪೆ ಫಾರ್ಮ್, ಸ್ಟ್ರೈಕ್​ರೇಟ್​​​ ಬಗ್ಗೆ ಟೀಕಿಸಿದ್ದ ನೆಟ್ಟಿಗರ ಮೇಲೆ ಗರಂ ಆಗಿದ್ದಾರೆ. ಟ್ರೋಲ್​​ನಿಂದಾಗಿ ಮಾನಸಿಕ ಆರೋಗ್ಯ ಮತ್ತು ಆಲೋಚನೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಎಂದು ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

ದಿ ರಣವೀರ್ ಶೋ ಪಾಡ್‌ಕಾಸ್ಟ್​​ನಲ್ಲಿ ಮಾತನಾಡಿದ ರಾಹುಲ್​, ಕೆಲವು ವಿಷಯಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಪ್ರಸಕ್ತ ಐಪಿಎಲ್​ನಲ್ಲಿ ಕೆಎಲ್​ ರಾಹುಲ್ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಕೆಟ್ಟ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದರು. ಇದು ತಂಡದ ಭಾರಿ ಹಿನ್ನಡೆಗೆ ಕಾರಣವಾಯಿತು. ಪರಿಣಾಮ ಸಾಕಷ್ಟು ಟೀಕೆಗೂ ಕಾರಣವಾಯಿತು. ನೆಟ್ಟಿಗರು ಅವರ ಸ್ಟ್ರೈಕ್​ರೇಟ್​ ಮತ್ತು ಕಳಪೆ ಫಾರ್ಮ್ ಅನ್ನು ಮುಂದಿಟ್ಟುಕೊಂಡು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದರು. ಇದೀಗ ಅದಕ್ಕೆ ರಾಹುಲ್ ಪ್ರತಿಕ್ರಿಯಿಸಿದ್ದಾರೆ.

'ಟ್ರೋಲಿಂಗ್ ಎನ್ನುವುದು ಕೆಲವೊಮ್ಮೆ ನನ್ನ ಮೇಲೆ ಮತ್ತು ಇತರ ಅನೇಕ ಕ್ರೀಡಾಪಟುಗಳ ಮೇಲೆ ಪರಿಣಾಮ ಬೀರಿದೆ. ನಮಗೆ ಅಥ್ಲೀಟ್‌ಗಳಿಗೆ ನಿಜವಾಗಿಯೂ ಬೆಂಬಲ ಬೇಕು ಎನಿಸಿದಾಗ, ಜನರು ಸ್ಫೂರ್ತಿದಾಯಕ ಕಾಮೆಂಟ್​ಗಳ ಮೂಲಕ ಶಕ್ತಿಯನ್ನು ತುಂಬುತ್ತಾರೆ ಎಂದು ಭಾವಿಸಲಾಗುತ್ತದೆ. ಆದರೆ, ಆ ನಿರೀಕ್ಷೆಗಳು ಹುಸಿಯಾಗುತ್ತಿವೆ. ಆ ವ್ಯಕ್ತಿ ನೋವು ಅನುಭವಿಸುತ್ತಿದ್ದಾನೆಯೇ ಇಲ್ಲವೇ ಎಂಬುದರ ಮೇಲೆ ಗಮನ ನೀಡದೆ ಟ್ರೋಲ್​ ಮಾಡುತ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ' ಎಂದು ಹೇಳಿದ್ದಾರೆ ರಾಹುಲ್.

'ನಮ್ಮಲ್ಲಿ ಯಾರೂ ಕೆಟ್ಟ ಪ್ರದರ್ಶನ ನೀಡಲು ಬಯಸುವುದಿಲ್ಲ. ಕ್ರಿಕೆಟ್ ಎಂದರೆ ಜೀವನ. ನನಗೆ ಕ್ರಿಕೆಟ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನ ಆಟದಲ್ಲಿ ನಾನು ಗಂಭೀರವಾಗಿಲ್ಲ ಅಥವಾ ನಾನು ಸಾಕಷ್ಟು ಶ್ರಮಿಸುತ್ತಿಲ್ಲ ಎಂದು ಯಾರಾದರೂ ಏಕೆ ಭಾವಿಸುತ್ತಾರೆ? ಇದು ಕ್ರೀಡೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಆದರೆ, ಕೆಲವೊಮ್ಮೆ ಫಲಿತಾಂಶವು ನನ್ನ ದಾರಿಯಲ್ಲಿ ಹೋಗುವುದಿಲ್ಲ' ಎಂದು ಟ್ರೋಲರ್​​ಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ ಆರಂಭಿಕ ಆಟಗಾರ.

ಐಪಿಎಲ್‌ನ 16ನೇ ಋತುವಿನಲ್ಲಿ ಲಕ್ನೋ ತಂಡವನ್ನು ಮುನ್ನಡೆಸಿದರು. ಅವರು ಕಾಲಿನ ಗಾಯಕ್ಕೆ ತುತ್ತಾದ ಕಾರಣ ಟೂರ್ನಿಯಿಂದ ಹೊರಬಿದ್ದರು. ಈ ಗಾಯದ ಕಾರಣದಿಂದ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಐಪಿಎಲ್​ನಿಂದ ಹೊರಗುಳಿಯುವುದಕ್ಕೂ ಮುನ್ನ ಎಲ್​ಎಸ್​ಜಿ ನಾಯಕ  ರಾಹುಲ್​, ​9 ಪಂದ್ಯಗಳಲ್ಲಿ 34.25 ರ ಸರಾಸರಿಯಲ್ಲಿ 113 ರ ಸ್ಟ್ರೈಕ್ ರೇಟ್‌ನೊಂದಿಗೆ 274 ರನ್ ಗಳಿಸಿದ್ದಾರೆ.

ರಾಹುಲ್ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮತ್ತು ಶೀಘ್ರದಲ್ಲೇ ಬೆಂಗಳೂರಿನ ಎನ್‌ಸಿಎಯಲ್ಲಿ ದೀರ್ಘ ಪುನರ್ವಸತಿ ತೆರಳಲು ಸಿದ್ಧರಾಗಿದ್ದಾರೆ. ಆರಂಭಿಕ ಬ್ಯಾಟರ್​​​ ರಾಹುಲ್​​ ಏಕದಿನ ವಿಶ್ವಕಪ್​ಗೆ ಮರಳಲು ಸಿದ್ಧರಾಗಿದ್ದಾರೆ. 2022ರಿಂದ ಈವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕ ಸಿಡಿಸಿಲ್ಲ. ಟಿ20 ವರ್ಲ್ಡ್​ಕಪ್​​ನಲ್ಲಿ ಕಳಪೆಯಾಟವಾಡಿದ್ದರು. ಪರಿಣಾಮ ಚುಟುಕು ಕ್ರಿಕೆಟ್​ನಿಂದ ಅವರಿಗೆ ಗೇಟ್​ಪಾಸ್​ ನೀಡಲಾಗಿದೆ.

ಐಪಿಎಲ್​ನ 63ನೇ ಪಂದ್ಯದಲ್ಲಿ ಲಕ್ನೋ ತಂಡವು ಮುಂಬೈ ಇಂಡಿಯನ್ಸ್​ ವಿರುದ್ಧ ಲಕ್ನೋ ತಂಡವು ರೋಚಕ ಗೆಲುವು ಸಾಧಿಸಿತು. ಸದ್ಯ ಪ್ಲೇ ಆಫ್​ ಸನಿಹದಲ್ಲಿರುವ ಲಕ್ನೋ, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆಡಿರುವ 13 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 5ರಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಅಂಕಪಟ್ಟಿಯಲ್ಲಿ ಒಟ್ಟು 15 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಪ್ಲೇ ಆಫ್​ ಗೇರಬೇಕೆಂದರೆ ಉಳಿದ ಒಂದು ಪಂದ್ಯವನ್ನೂ ಗೆಲ್ಲಲೇಬೇಕಿದೆ.