ಕನ್ನಡ ಸುದ್ದಿ  /  Sports  /  Cricket News Ishan Kishan Suryakumar Yadav Help Mumbai Indians Bulldoze Punjab Kings By Six Wickets In Ipl 2023 Prs

PBKS vs MI: ಇಶಾನ್​, ಸೂರ್ಯರ ಬೆಂಕಿ-ಬಿರುಗಾಳಿ ಆಟಕ್ಕೆ ಪಂಜಾಬ್​ ಧ್ವಂಸ; ದಾಖಲೆಯ ಗೆಲುವು ಸಾಧಿಸಿದ ಮುಂಬೈ; ಲಿವಿಂಗ್​ಸ್ಟೋನ್​ ಆಟ ವ್ಯರ್ಥ

16ನೇ ಆವೃತ್ತಿಯ ಐಪಿಎಲ್​ನ 46ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ಮತ್ತೊಂದು ದಾಖಲೆಯ ಗೆಲುವು ತನ್ನದಾಗಿಸಿಕೊಂಡಿದೆ. ಗೆಲ್ಲುವ ವಿಶ್ವಾಸದಲ್ಲಿದ್ದ ಪಂಜಾಬ್​​ ಲೆಕ್ಕಾಚಾರವನ್ನು ಸೂರ್ಯಕುಮಾರ್ ಯಾದವ್​ ಮತ್ತು ಇಶಾನ್​ ಕಿಶನ್​ ತಲೆ ಕೆಳಗೆ ಮಾಡಿದರು.

ಇಶಾನ್​ ಕಿಶನ್​ ಮತ್ತು ಸೂರ್ಯಕುಮಾರ್​ ಯಾದವ್​​
ಇಶಾನ್​ ಕಿಶನ್​ ಮತ್ತು ಸೂರ್ಯಕುಮಾರ್​ ಯಾದವ್​​ (IPL Twitter)

ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​​​ ದಾಖಲೆಯ ಗೆಲುವಿಗೆ ಮುತ್ತಕ್ಕಿದೆ. ಬ್ಯಾಕ್​ ಟು ಬ್ಯಾಕ್​​ 200+ ಸ್ಕೋರ್​ ಅನ್ನು ಬೆನ್ನಟ್ಟಿದೆ. ಸೂರ್ಯಕುಮಾರ್​​, ಇಶಾನ್​ ಕಿಶನ್​ ಅವರ ಬೆಂಕಿ-ಬಿರುಗಾಳಿ ಆಟ ಪಂಜಾಬ್​ ಬೌಲಿಂಗ್​ ಪಡೆಯನ್ನು ಧ್ವಂಸಗೊಳಿಸಿತು. ಇದರೊಂದಿಗೆ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​​ಗಳ ಗೆಲುವಿನ ನಗೆ ಬಾರಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದೆ. ಕಳೆದ ಪಂದ್ಯದಲ್ಲೂ ಮುಂಬೈ 200+ ರನ್​ಗಳ ಚೇಸ್​ ಮಾಡಿತ್ತು.

ಬೃಹತ್ ರನ್​ ಕೋಟೆಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್​​​, ಭರ್ಜರಿ ಆರಂಭ ಪಡೆಯುವಲ್ಲಿ ಎಡವಿತು. ನಾಯಕ ರೋಹಿತ್​ ಶರ್ಮಾ ಡಕೌಟ್​ಗೆ ಬಲಿಯಾದರು. ಬಳಿಕ ಇಶಾನ್​ ಕಿಶನ್​​ - ಕ್ಯಾಮರೂನ್​ ಗ್ರೀನ್​​ 54 ರನ್​ಗಳ ಜೊತೆಯಾಟವಾಡಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸಿದರು. ಗ್ರೀನ್​​ 23 ರನ್​ ಗಳಿಸಿ ಔಟಾದರು.

ಸೂರ್ಯ - ಇಶಾನ್​​ ಶತಕದ ಜೊತೆಯಾಟ

ಬಳಿಕ ಒಂದಾದ ಇಶಾನ್​ ಕಿಶನ್​ ಮತ್ತು ಸೂರ್ಯಕುಮಾರ್​, ಪಂಜಾಬ್​ ಬೌಲರ್​ಗಳನ್ನು ಅಟ್ಟಾಡಿಸಿಕೊಂಡು ಹೊಡೆದರು. ಬೌಲರ್​​ಗಳಿಗೆ ಬೆಂಡೆತ್ತಿದ ಈ ಜೋಡಿ 3ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿದರು. ಬಿರುಸಿನ ಆಟಕ್ಕೆ ಕೈ ಹಾಕಿದ ಇಬ್ಬರೂ, ಮುಂಬೈ ಕ್ಯಾಂಪ್​​​ನಲ್ಲಿ ಗೆಲುವಿನ ಆಸೆ ಹೆಚ್ಚಿಸಿದರು. ಕೇವಲ 55 ಎಸೆತಗಳಲ್ಲಿ 116 ರನ್​ಗಳ ಪಾಲುದಾರಿಕೆ ನೀಡಿದರು.

ಸ್ಕೈ-ಕಿಶನ್​ ಇರ್ಧಶತಕ

ಅಬ್ಬರದ ಇನ್ನಿಂಗ್ಸ್​ ಕಟ್ಟಿದ ಸೂರ್ಯ ಮತ್ತು ಕಿಶನ್​ ತಲಾ ಅರ್ಧಶತಕ ಸಿಡಿಸಿದರು. ಬೌಂಡರಿ - ಸಿಕ್ಸರ್​ಗಳ ಸುರಿ ಮಳೆಗೈದ ಇವರು, ರನ್​ ಪ್ರವಾಹವನ್ನೇ ಹರಿಸಿದರು. ಇಶಾನ್​ 41 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್​ಗಳ ನೆರವಿನಿಂದ 75 ಚಚ್ಚಿದರು. ಮತ್ತೊಂದೆಡೆ ಸೂರ್ಯಕುಮಾರ್​ 31 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​ಗಳ ಸಹಾಯದಿಂದ 66 ಚಚ್ಚಿದರು. ಪಂದ್ಯವನ್ನು ಗೆಲುವಿನ ಸನಿಹಕ್ಕೆ ತಂದು ಔಟಾದರು.

ಕೊನೆಯಲ್ಲಿ ಡೇವಿಡ್​​-ತಿಲಕ್ ಶೈನಿಂಗ್​

ಸೂರ್ಯ-ಇಶಾನ್​ ಔಟಾದ ಬಳಿಕ ತಿಲಕ್​ ವರ್ಮಾ ಮತ್ತು ಟಿಮ್​ ಡೇವಿಡ್​​ ಮೇಲೆ ಜವಾಬ್ದಾರಿ ಹೆಚ್ಚಾಯಿತು. ಆದರೆ ಈ ಇಬ್ಬರು ಯಾವುದೇ ಒತ್ತಡಕ್ಕೆ ಒಳಗಾಗದೆ, ತಮ್ಮ ಮೇಲಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಆ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಟಿಮ್​ ಡೇವಿಡ್​ ಅಜೇಯ 19 ರನ್​ ಗಳಿಸಿದರೆ, ತಿಲಕ್​ ವರ್ಮಾ ಅಜೇಯ 26 ರನ್​ ಗಳಿಸಿದರು. ಅಂತಿಮವಾಗಿ ಮುಂಬೈ 7 ಎಸೆತಗಳು ಬಾಕಿ ಇರುವಂತೆಯೇ 216 ರನ್​ಗಳಿಸಿ 6 ವಿಕೆಟ್​ಗಳ ಜಯ ಸಾಧಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕಿಂಗ್ಸ್​, ಕಳಪೆ ಆರಂಭ ಪಡೆಯಿತು. ಪ್ರಭು ಸಿಮ್ರಾನ್​ ಸಿಂಗ್​ ಬೇಗನೇ ಔಟಾದರು. ಬಳಿಕ ಶಿಖರ್​ ಧವನ್​ ಮತ್ತು ಮ್ಯಾಥ್ಯೂ ಶಾರ್ಟ್​​ ವಿಕೆಟ್​ ಕಾಪಾಡಿದರು. 49 ರನ್​ಗಳ ಜೊತೆಯಾಟವಾಡಿದ ಈ ಜೋಡಿಗೆ ಸ್ಪಿನ್ನರ್ ಪಿಯೂಷ್​ ಚಾವ್ಲಾ ಶಾಕ್​ ನೀಡಿದರು. ಶಿಖರ್​ 30 ರನ್​, ಶಾರ್ಟ್​​ 27 ರನ್​ ಗಳಿಸಿ ಆದರು.

4ನೇ ವಿಕೆಟ್​ಗೆ ಶತಕದ ಜೊತೆಯಾಟ

95 ರನ್​ಗಳಿಗೆ 3 ವಿಕೆಟ್​ಗಳನ್ನು ಕಳೆದುಕೊಂಡಿದ್ದ ಪಂಜಾಬ್​ಗೆ ಲಿಯಾಮ್​ ಲಿವಿಂಗ್​ಸ್ಟೋನ್​ ಮತ್ತು ಜಿತೇಶ್​ ಶರ್ಮಾ ಆಸರೆಯಾದರು. ಒಂದೆಡೆ ವೇಗದ ಬ್ಯಾಟಿಂಗ್​ ನಡೆಸಿದರೆ, ಮತ್ತೊಂದೆಡೆ ಬೌಲರ್​​ಗಳು ಸುಸ್ತಾದರು. ಕೇವಲ 53 ಎಸೆತಗಳಲ್ಲಿ 119 ರನ್​ಗಳ ಕಾಣಿಕೆ ನೀಡಿದರು. ಅದರಲ್ಲೂ ಲಿವಿಂಗ್​​ಸ್ಟೋನ್​ ಅವರ ಸ್ಪೋಟಕ ಆಟಕ್ಕೆ ಮುಂಬೈ ಅಕ್ಷರಶಃ ಬೆಚ್ಚಿ ಬಿದ್ದಿತು.

ಲಿವಿಂಗ್​ಸ್ಟೋನ್​ ಸ್ಫೋಟಕ ಅರ್ಧಶತಕ ವ್ಯರ್ಥ

ಲಿವಿಂಗ್​ಸ್ಟೋನ್​ ಘರ್ಜನೆಗೆ ಮುಂಬೆ ಹೆದರಿತು.ಆಕ್ರಮಣಕಾರಿ ಆಟದ ಮೂಲಕ ಸ್ಫೋಟಕ ಅರ್ಧಶತಕ ಚಚ್ಚಿದರು. ಲಿವಿಂಗ್​ಸ್ಟೋನ್​​ 42 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್​ಗಳ ನೆರವಿನಿಂದ ಅಜೇಯ 82 ರನ್ ​ಗಳಿಸಿದರು. ಆದರೆ ಅವರ ಹೋರಾಟದ ಆಟ ವ್ಯರ್ಥವಾಗಿದೆ. ಜಿತೇಶ್​ 27 ಎಸೆತಗಳಲ್ಲಿ ಅಜೇಯ 49 ರನ್​ ಚಚ್ಚಿದರು. ಅಂತಿಮವಾಗಿ ಪಂಜಾಬ್​ ಕಿಂಗ್ಸ್​ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 214 ರನ್​ ಗಳಿಸಿತು.