ಕನ್ನಡ ಸುದ್ದಿ  /  Sports  /  Cricket News Kl Rahul Jaydev Unadkat Ruled Out Of Ipl 2023 In Danger Of Missing Wtc Final For India Prs

KL Rahul: ಲಕ್ನೋ ತಂಡಕ್ಕೆ ಡಬಲ್​ ಆಘಾತ; ಕೆಎಲ್​ ರಾಹುಲ್​, ಜಯದೇವ್​ ಉನಾದ್ಕತ್​ ಐಪಿಎಲ್​ನಿಂದ ಔಟ್; ಡಬ್ಲ್ಯುಟಿಸಿ ಫೈನಲ್​ಗೂ ಡೌಟ್​

16ನೇ ಆವೃತ್ತಿಯ ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡಕ್ಕೆ ಆಘಾತವಾಗಿದೆ. ತಂಡದ ಪ್ರಮುಖ ಆಟಗಾರರಾದ ಕೆಎಲ್​ ರಾಹುಲ್​, ಜಯದೇವ್​ ಉನಾದ್ಕತ್​ ಗಾಯದ ಸಮಸ್ಯೆಯಿಂದ ಇಡೀ ಐಪಿಎಲ್​ನಿಂದಲೇ ಹೊರ ಬಿದ್ದಿದ್ದಾರೆ. ಈ ಬಗ್ಗೆ ಪಿಟಿಐಗೆ ಬಿಸಿಸಿಐ ಮೂಲಗಳು ಖಚಿತಪಡಿಸಿವೆ.

ಗಾಯದ ಸಮಸ್ಯೆಗೆ ತುತ್ತಾಗಿರುವ ಕೆಎಲ್​ ರಾಹುಲ್
ಗಾಯದ ಸಮಸ್ಯೆಗೆ ತುತ್ತಾಗಿರುವ ಕೆಎಲ್​ ರಾಹುಲ್ (IPL Twitter)

ಐಪಿಎಲ್ (IPL 2023)​​ ತಂಡಗಳ ನಡುವೆ ಪ್ಲೇ ಆಫ್​ ಪೈಪೋಟಿ ಜೋರಾಗಿದೆ. ಇದರ ನಡುವೆ ತಂಡಗಳಿಗೆ ಗಾಯದ ಬರೆ ಬೀಳುತ್ತಿದೆ. ಪ್ರಮುಖ ಆಟಗಾರರೇ ಶ್ರೀಮಂತ ಲೀಗ್​ನಿಂದ ಹೊರ ಬೀಳುತ್ತಿದ್ದಾರೆ. ಈಗ ಲಕ್ನೋ ಸೂಪರ್​ ಜೈಂಟ್ಸ್​​ ತಂಡಕ್ಕೂ (Lucknow Super Giants) ಇದೇ ಆಘಾತ ಎದುರಾಗಿದೆ. ಕಳೆದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​​ ಬೆಂಗಳೂರು (Royal Challengers Bangalore) ವಿರುದ್ಧ ಸೋತಿದ್ದ ಲಕ್ನೋ ತಂಡಕ್ಕೆ ಡಬಲ್ ಆಘಾತ ಎದುರಾಗಿದೆ.

ಮೇ 1ರಂದು ನಡೆದ ಆರ್​ಸಿಬಿ ಎದುರಿನ ಪಂದ್ಯದಲ್ಲಿ ಕೆಎಲ್​ ರಾಹುಲ್ (KL Rahul)​ ಗಂಭೀರ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಪರಿಣಾಮ ಇಡೀ ಐಪಿಎಲ್​ನಿಂದಲೇ ಹೊರ ಬಿದ್ದಿದ್ದಾರೆ. ತೊಡೆಯ ಗಾಯದ ಸಮಸ್ಯೆಗೆ ತುತ್ತಾದ ಲಕ್ನೋ ತಂಡದ ನಾಯಕ ರಾಹುಲ್ ಐಪಿಎಲ್​ನಲ್ಲಿ ಇನ್ನು ಮುಂದೆ ಪಾಲ್ಗೊಳ್ಳುವುದಿಲ್ಲ. ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (ICC World Test Championship FInal)​ ಪಂದ್ಯಕ್ಕಾಗಿ ರಾಹುಲ್​ರನ್ನು ಹೊರಗಿಡಲಾಗಿದೆ ಎಂದು ವರದಿಯಾಗಿದೆ.

ಅಲ್ಲದೆ, ಲಕ್ನೋ ತಂಡದ ಹಿರಿಯ ವೇಗದ ಬೌಲರ್​ ಜಯದೇವ್ ಉನಾದ್ಕತ್ (Jaydev Unadkat) ಅವರೂ ಶ್ರೀಮಂತ ಲೀಗ್​​ನಿಂದ ಹೊರ ಬಿದ್ದಿದ್ದಾರೆ. ಅವರ ಭುಜದ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಜಯದೇವ್​ ಉನಾದ್ಕತ್​ ಕೂಡ ಜೂನ್ 7 ರಿಂದ 11 ರವರೆಗೆ ಲಂಡನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ಗೆ ಆಯ್ಕೆ ಆಗಿದ್ದು, ಈ ಪಂದ್ಯಕ್ಕೂ ಅನುಮಾನ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫೈನಲ್​​ಗೆ ಫಿಟ್​ ಆಗ್ತಾರಾ ರಾಹುಲ್​?

ಹಿರಿಯ ಅನುಭವಿ ಆಟಗಾರ ಹಾಗೂ ವಿಕೆಟ್​ ಕೀಪರ್​ ಕೆಎಲ್ ರಾಹುಲ್​ ಅವರನ್ನು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಸಿದ್ಧಪಡಿಸುವುದು ಬಿಸಿಸಿಐ ಗುರಿಯಾಗಿದೆ. ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡಕ್ಕೆ ಬಿಸಿಸಿಐ ಸೂಚಿಸಿದೆ. ಮಾರ್ಕಸ್ ಸ್ಟೊಯ್ನಿಸ್​ ಅವರ ಬೌಲಿಂಗ್‌ನಲ್ಲಿ ಫಾಫ್ ಡು ಪ್ಲೆಸಿಸ್ ಕವರ್ ಡ್ರೈವ್‌ಗೆ ಬೌಂಡರಿ ಕಡೆಗೆ ಓಡುತ್ತಿರುವಾಗ, ರಾಹುಲ್ ಅವರ ಬಲ ತೊಡೆಗೆ ಗಾಯವಾಗಿತ್ತು.

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದ ಬಳಿಕ ಲಕ್ನೋ ಕ್ಯಾಂಪ್​​ನಿಂದ ಹೊರ ಬರಲಿದ್ದಾರೆ. ಮುಂಬೈನಲ್ಲಿ ಬಿಸಿಸಿಐ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ರಾಹುಲ್‌ಗೆ ಸ್ಕ್ಯಾನಿಂಗ್ ಮಾಡಲಾಗುತ್ತದೆ ಎಂದೂ ತಿಳಿದು ಬಂದಿದೆ. ರಾಹುಲ್​ ಹಾಗೂ ಜಯದೇವ್ ಉನಾದ್ಕತ್‌ ಗಾಯದ ಪ್ರಕರಣ ಶೀಘ್ರವೇ ಇತ್ಯರ್ಥಗೊಳಿಸಲು ಬಿಸಿಸಿಐ ಹೆಚ್ಚು ಮುತುವರ್ಜಿ ವಹಿಸಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಆಟಗಾರನೊಬ್ಬ ಇಂತಹ ಗಾಯಕ್ಕೆ ಸಮಸ್ಯೆಗೆ ಅನುಭವಿಸಿದಾಗ, ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ನೋವು ಮತ್ತು ಊತ ಹೆಚ್ಚಾಗುತ್ತದೆ. ಊತವು ಕಡಿಮೆಯಾಗಲು ಸುಮಾರು 24 ರಿಂದ 48 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಊತ ಕಡಿಮೆಯಾದ ನಂತರವೇ ಸ್ಕ್ಯಾನ್​ ಮಾಡಲಾಗುತ್ತದೆ. ಟೆಸ್ಟ್ ತಂಡದ ಪ್ರಮುಖ ಸದಸ್ಯರಾಗಿರುವ ಅವರು, ಐಪಿಎಲ್‌ನಲ್ಲಿ ಭಾಗವಹಿಸುವುದು ಅನುಮಾನ ಎಂದಿದ್ದಾರೆ.

ಸ್ಕ್ಯಾನ್‌ಗಳಲ್ಲಿ ಗಾಯದ ಮಟ್ಟ ಯಾವ ರೀತಿ ಎಂದು ಖಚಿತಪಡಿಸಿದ ನಂತರವೇ ಬಿಸಿಸಿಐ ವೈದ್ಯಕೀಯ ತಂಡ ಅದರಂತೆ ಚಿಕಿತ್ಸೆ ನೀಡಲಿದೆ. ಜಯದೇವ್ ಅವರ ಇಂಜುರಿ ಸಮಸ್ಯೆಯೂ ಗಂಭೀರವಾಗಿದೆ. ಈ ಋತುವಿನ ಮಟ್ಟಿಗೆ ಅವರು ಇನ್ನು ಮುಂದೆ ಐಪಿಎಲ್ ಆಡಲು ಸಾಧ್ಯವಿಲ್ಲ. ಆದರೆ ಡಬ್ಲ್ಯುಟಿಸಿ ಫೈನಲ್‌ಗೆ ಸಮಯಕ್ಕೆ ಸರಿಯಾಗಿ ಸಿದ್ಧರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಗಾಯಗೊಂಡಿದ್ದರು.