KKR vs LSG: ಇಂದು ನಿರ್ಧಾರವಾಗಲಿದೆ ಕೆಕೆಆರ್-ಎಸ್ಎಸ್ಜಿ ಪ್ಲೇ ಆಫ್ ಭವಿಷ್ಯ; 2ನೇ ಸ್ಥಾನದ ಮೇಲೆ ಲಕ್ನೋ ಕಣ್ಣು; ಸಂಭಾವ್ಯ ತಂಡ ಹೀಗಿದೆ
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಇಂದು ನಡೆಯಲಿರುವ 2ನೇ ಪಂದ್ಯದಲ್ಲಿ ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕೃನಾಲ್ ಪಾಂಡ್ಯ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ (KKR vs LSG) ಮುಖಾಮುಖಿ ಆಗಲಿದೆ.

ಗೆಲುವಿನೊಂದಿಗೆ ಪ್ಲೇ ಆಫ್ಗೇರುವ ಲೆಕ್ಕಾಚಾರ ಹಾಕಿಕೊಂಡಿರುವ ಲಕ್ನೋ ಸೂಪರ್ ಜೈಂಟ್ಸ್, ಐಪಿಎಲ್ 16ರ 68ನೇ ಪಂದ್ಯದಲ್ಲಿ ಅತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸವಾಲಿಗೆ ಸಜ್ಜಾಗಿದೆ. ಕೃನಾಲ್ ಪಾಂಡ್ಯ ಪಡೆ ಭಾರಿ ಅಂತರದ ಗೆಲುವು ಸಾಧಿಸಿದರೆ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ. ಮತ್ತೊಂದೆಡೆ 7ನೇ ಸ್ಥಾನದಲ್ಲಿರುವ ಕೆಕೆಆರ್ ತಂಡಕ್ಕೂ ಪ್ಲೇ ಆಫ್ ಕನಸು ಇಲ್ಲದಿದ್ದರೂ, ಗೆಲುವಿನೊಂದಿಗೆ ಸ್ಥಾನ ಸುಧಾರಣೆ ಕಾಣುವ ಅವಕಾಶ ಇದೆ. ಈ ಪಂದ್ಯಕ್ಕೆ ಮಳೆ ಭೀತಿಯೂ ಇದೆ.
ಟ್ರೆಂಡಿಂಗ್ ಸುದ್ದಿ
ಈಡನ್ ಗಾರ್ಡನ್ ಮೈದಾನವು ಕೆಕೆಆರ್ಗೆ ತವರು ಮೈದಾನವಾಗಿದ್ದರೂ ಲಕ್ನೋ ತಂಡವು ಕೋಲ್ಕತ್ತಾದ ಮೋಹನ್ ಬಾಗನ್ ಫುಟ್ಬಾಲ್ ಕ್ಲಬ್ಗೆ ಗೌರವ ಸೂಚಕವಾಗಿ ಕೆಂಗೆಂದು ಬಣ್ಣದ ಜೆರ್ಸಿ ತೊಟ್ಟು ಆಡಲಿದೆ. ಇದರಿಂದ ಸ್ಥಳೀಯ ಪ್ರೇಕ್ಷಕರ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿದೆ. ಇನ್ನು ಕೆಕೆಆರ್ ತವರಿನಲ್ಲಿ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಸೋತಿದೆ. ಇದರಿಂದಾಗಿ ಲಕ್ನೋ ತಂಡವು ಗೆದ್ದು ಪ್ಲೇ ಆಪ್ಗೇರುವ ಅವಕಾಶ ಇದೆ.
ಕೆಕೆಆರ್ ತಂಡದ ನಾಯಕನಾಗಿದ್ದ ಗೌತಮ್ ಗಂಭೀರ್, ಈಗ ಲಕ್ನೋ ತಂಡದ ಮೆಂಟರ್ ಆಗಿದ್ದು, ಈಡನ್ ಪಿಚ್ ಬಗ್ಗೆ ಅವರ ಜ್ಞಾನವು ಲಾಭದಾಯಕವಾಗಿದೆ. ಕೆಕೆಆರ್ ಟೂರ್ನಿಯ ಆರಂಭಿಕ ಮೊದಲ 3 ಪಂದ್ಯಗಳಲ್ಲಿ ಗೆದ್ದಿದ್ದ ಕೆಕೆಆರ್ ನಂತರದ ಸುತ್ತಿನಲ್ಲಿ ಸತತ 4 ಸೋಲು ಕಂಡಿತ್ತು. ಬಳಿಕ ಲಯಕ್ಕೆ ಮರಳಿದ ನಂತರದ 6 ಪಂದ್ಯಗಳ ಪೈಕಿ 4ರಲ್ಲಿ ಗೆದ್ದರೂ ಪ್ಲೇ ಆಫ್ ಆಸೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸದ್ಯ 14 ಅಂಕ ಕಲೆ ಹಾಕಿರುವ ಕೆಕೆಆರ್ ಪ್ಲೇ ಆಫ್ಗೇರುವ ಅವಕಾಶ ಇದ್ದರೂ, ಕಳಪೆ ರನ್ರೇಟ್ ಹಿನ್ನಡೆ ತಂದಿಟ್ಟಿದೆ.
ಉಭಯ ತಂಡಗಳ ಮುಖಾಮುಖಿ
ಲಕ್ನೋ ಮತ್ತು ಕೆಕೆಆರ್ ತಂಡಗಳು ಪರಸ್ಪರ ಒಟ್ಟು 2 ಬಾರಿ ಮುಖಾಮುಖಿಯಾಗಿವೆ. ಆದರೆ ಈ ಎರಡೂ ಪಂದ್ಯಗಳಲ್ಲೂ ಲಕ್ನೋ ತಂಡವು ಗೆದ್ದು ಬೀಗಿದೆ. ಸದ್ಯ ಲಕ್ನೋ ವಿರುದ್ಧ ಖಾತೆ ತೆರೆಯುವ ಹಂಬದಲ್ಲಿದೆ ಕೆಕೆಆರ್.
ಪಿಚ್ ರಿಪೋರ್ಟ್
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನವು ಬ್ಯಾಟಿಂಗ್ ಸ್ನೇಹಿಯಾಗಿದೆ. ಮೊದಲ ಇನ್ನಿಂಗ್ಸ್ನ ಸರಾರಿ ಮೊತ್ತ 196 ಇದೆ. ಬ್ಯಾಟ್ಸ್ಮನ್ಗಳ ಸ್ವರ್ಗವಾದ ಈ ಪಿಚ್ನಲ್ಲಿ ಬೌಲರ್ಗಳು ಎಚ್ಚರಿಕೆ ವಹಿಸುವುದು ಮುಖ್ಯ. ಆದರೆ ಕಳೆದ ಪಂದ್ಯದಲ್ಲಿ ಕೋಲ್ಕತ್ತಾ 149 ರನ್ಗಳಿಗೆ ಕುಸಿತ ಕಂಡಿತ್ತು. ಈ ಗುರಿಯನ್ನು ರಾಜಸ್ಥಾನ್ 13.1 ಓವರ್ಗಳಲ್ಲಿ ಚೇಸ್ ಮಾಡಿತ್ತು. ಬ್ಯಾಟ್ಸ್ಮನ್ಗಳಿಗೆ ನೆರವಾದರೆ, ಸ್ಪಿನ್ನರ್ಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಟಾಸ್ ಗೆದ್ದವರು ಚೇಸಿಂಗ್ ಆಯ್ಕೆ ಸಾಧ್ಯತೆ ಹೆಚ್ಚಿದೆ. ಪಂದ್ಯ ಮುಂದುವರೆದಂತೆ ಇಬ್ಬನಿ ಕಾಡುವ ಸಾಧ್ಯತೆ ಇದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ಸುಯಶ್ ಶರ್ಮಾ, ವರುಣ್ ಚಕ್ರವರ್ತಿ.
ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ತಂಡ
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೃನಾಲ್ ಪಾಂಡ್ಯ (ನಾಯಕ), ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್.