Suresh Raina: ಲಂಕಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಸುರೇಶ್ ರೈನಾ ಹೆಸರೇ ಕೂಗಲಿಲ್ಲ; ಇದು ಅವಮಾನ ಎಂದು ಅಭಿಮಾನಿಗಳು ಆಕ್ರೋಶ
ಲಂಕಾ ಪ್ರೀಮಿಯರ್ ಲೀಗ್ (LPL 2023) ಹರಾಜಿನ ವೇಳೆ ಎಲ್ಲಿಯೂ ಸುರೇಶ್ ರೈನಾ ಹೆಸರು ಕೇಳಿ ಬರಲಿಲ್ಲ. ಅನ್ಸೋಲ್ಡ್ ಲೀಸ್ಟ್ನಲ್ಲಾದರೂ ಇದ್ದಾರಾ ಎಂಬುದಕ್ಕೂ ಉತ್ತರ ಸಿಗಲಿಲ್ಲ. ಹಾಗಾದರೆ ರೈನಾ ಹೆಸರು ಏನಾಯಿತು ಎಂದು ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಆಯೋಜಿಸುತ್ತಿರುವ ಲಂಕಾ ಪ್ರೀಮಿಯರ್ ಲೀಗ್ (LPL 2023) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಜೂನ್ 14ರಂದು ನಡೆದ ಹರಾಜಿನಲ್ಲಿ ಆಟಗಾರರು ಉತ್ತಮ ಮೊತ್ತಕ್ಕೆ ಖರೀದಿಯಾದರು. ಆಕ್ಷನ್ನಲ್ಲಿ 60 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಭಾರತದ ಸುರೇಶ್ ರೈನಾ (Suresh Raina) ಕೂಡ ಒಬ್ಬರು. ಭಾರತದಿಂದ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದ ಏಕೈಕ ಆಟಗಾರ ಕೂಡ ಅವರೇ.
ಟ್ರೆಂಡಿಂಗ್ ಸುದ್ದಿ
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿರುವ ರೈನಾ, ಐಪಿಎಲ್ನಿಂದಲೂ ದೂರ ಆಗಿದ್ದಾರೆ. ಇದೀಗ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಆಡುವ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದರು. ಜೊತೆಗೆ ಅಭಿಮಾನಿಗಳು ಮತ್ತೊಮ್ಮೆ ತಮ್ಮ ನೆಚ್ಚಿನ ಆಟಗಾರ ಆಟ ಕಣ್ತುಂಬಿಕೊಳ್ಳಬಹುದು ಎಂಬ ಕನಸಿನಲ್ಲಿದ್ದರು. ಒಂದು ಹಂತದಲ್ಲಿ ಸುರೇಶ್ ರೈನಾ ಅವರನ್ನೇ ಎಲ್ಪಿಎಲ್ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಭಾವಿಸಲಾಗಿತ್ತು. ಆದರೀಗ ಹರಾಜಿನ ವೇಳೆ ಆ ದೃಶ್ಯವು ವ್ಯತಿರಿಕ್ತವಾಗಿದೆ.
ರೈನಾ ಹೆಸರೇ ಮಾಯ
ಆದರೆ ಹರಾಜಿನ ವೇಳೆ ಎಲ್ಲಿಯೂ ಸುರೇಶ್ ರೈನಾ ಹೆಸರು ಕೇಳಿ ಬರಲಿಲ್ಲ. ಅನ್ಸೋಲ್ಡ್ ಲೀಸ್ಟ್ನಲ್ಲಾದರೂ ಇದ್ದಾರಾ ಎಂಬುದಕ್ಕೂ ಉತ್ತರ ಸಿಗಲಿಲ್ಲ. ಹಾಗಾದರೆ ರೈನಾ ಹೆಸರು ಏನಾಯಿತು ಎಂದು ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಹರಾಜು ನಡೆಸಿಕೊಟ್ಟ ಚಾರು ಶರ್ಮಾ ಅವರು ರೈನಾ ಹೆಸರನ್ನು ಮರೆತಿದ್ದಾರೋ ಅಥವಾ ತಲೆ ಕೆಡಿಸಿಕೊಳ್ಳಲಿಲ್ಲವೋ ಎಂಬುದು ತಿಳಿಯಬೇಕಿದೆ. ಇದಕ್ಕೆ ಸಂಬಂಧಿಸಿ ಲಂಕಾ ಕ್ರಿಕೆಟ್ ಬೋರ್ಡ್ ಯಾವುದೇ ಹೇಳಿಕೆ ನೀಡಿಲ್ಲ. ಇದರಿಂದ ಎಲ್ಪಿಎಲ್ನಲ್ಲಿ ರೈನಾ ಆಡುತ್ತಾರೋ ಇಲ್ಲವೋ ಎಂಬುದು ಅನುಮಾನ ಮೂಡಿಸಿದೆ.
11ನೇ ಸೆಟ್ನಲ್ಲಿತ್ತು ಚಿನ್ನ ತಲಾ ಹೆಸರು
ರೈನಾ ಅವರು ತನ್ನ ಮೂಲಬೆಲೆಯೊಂದಿಗೆ 11ನೇ ಸೆಟ್ನಲ್ಲಿ ಇದ್ದರು. ಈ ಸೆಟ್ನಲ್ಲಿ ರಾಸ್ಸಿ ವಾನ್ಡರ್ ಡುಸೆನ್ (ಸೌತ್ ಆಫ್ರಿಕಾ), ಇಮಾಮುಲ್ ಹಕ್ (ಪಾಕಿಸ್ತಾನ), ಎವಿನ್ ಲೆವಿಸ್ (ವೆಸ್ಟ್ ಇಂಡೀಸ್) ಹೀಗೆ ಪ್ರಮುಖ ಕ್ರಿಕೆಟರ್ಗಳ ಹೆಸರುಗಳೂ ಇದ್ದವು. ಹರಾಜಿನಲ್ಲಿ ಈ ಎಲ್ಲಾ ಹೆಸರುಗಳನ್ನು ಪ್ರಸ್ತಾಪಿಸಿದ ಚಾರು ಶರ್ಮಾ, ರೈನಾ ಹೆಸರನ್ನು ಮರೆತಿದ್ದಾರೆ. ಆದರೆ ಇದು ಅಭಿಮಾನಿಗಳಲ್ಲಿ ತೀವ್ರ ಗೊಂದಲ ಮೂಡಿಸಿದೆ. ರೈನಾ ಹೆಸರನ್ನು ಕೂಗುವುದನ್ನು ಮರೆತಿದ್ದಾರಾ ಅಥವಾ ಕೊನೆಯ ಕ್ಷಣದಲ್ಲಿ ಹೆಸರನ್ನು ತೆಗೆದುಹಾಕಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ
ಸುರೇಶ್ ರೈನಾ ಟಿ20 ಕ್ರಿಕೆಟ್ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟಿಗ ಎನಿಸಿಕೊಂಡಿರುವ ಸುರೇಶ್ ರೈನಾ, 205 ಪಂದ್ಯಗಳ ಪೈಕಿ 5528 ರನ್ ಗಳಿಸಿದ್ದಾರೆ. 1 ಶತಕ, 39 ಅರ್ಧಶತಕಗಳೂ ಇದರಲ್ಲಿ ಸೇರಿವೆ. ಸಿಎಸ್ಕೆ ತಂಡದ ಪ್ರಮುಖ ಭಾಗವಾಗಿದ್ದ ರೈನಾ, ತಾನಿದ್ದಾಗ ಚೆನ್ನೈ 4 ಬಾರಿ ಚಾಂಪಿಯನ್ (ಪ್ರಸ್ತುತ 5) ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಟಿ20 ಕ್ರಿಕೆಟ್ನಲ್ಲೂ ಉತ್ತಮ ಸಾಧನೆ
ಇದಲ್ಲದೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲೂ ಅಮೋಘ ದಾಖಲೆ ಹೊಂದಿದ್ದಾರೆ. ಟೀಮ್ ಇಂಡಿಯಾ ಪರ 78 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1609 ರನ್ ಗಳಿಸಿರುವ ರೈನಾ, 1 ಶತಕ, 5 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ. ಇಂತಹ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಸುರೇಶ್ ರೈನಾಗೆ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಕಹಿ ಅನುಭವವಾಗಿದೆ ಎಂದೇ ಹೇಳಬಹುದು. ಆದರೆ ಈ ಬಗ್ಗೆ ಸ್ಪಷ್ಟನೆ ಬರುವವರೆಗೂ ಎಲ್ಪಿಎಲ್ ಆಡುತ್ತಾರೋ ಇಲ್ಲವೋ ಎಂಬುದು ತಿಳಿದಿಲ್ಲ.
ದಿಲ್ಶನ್ ಮಧುಶನಕ ದುಬಾರಿ ಆಟಗಾರ
ಎಲ್ಪಿಎಲ್ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಏಕೈಕ ಐಕಾನ್ ಆಟಗಾರ. ಬಾಬರ್, ಕೊಲೊಂಬೋ ಸ್ಟ್ರೈಕರ್ಸ್ ತಂಡದ ನಾಯಕನಾಗಿದ್ದಾರೆ. ಹರಾಜಿನಲ್ಲಿ ದಿಲ್ಶಾನ್ ಮಧುಶನಕ ಅತಿಹೆಚ್ಚು ಬೆಲೆಗೆ ಮಾರಾಟವಾದ ದುಬಾರಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಮಧುಶನಕ ಅವರನ್ನು ಲೈಕಾ ಜಾಫ್ನಾ ಕಿಂಗ್ಸ್ 92 ಸಾವಿರ ಡಾಲರ್ಸ್ಗೆ ಖರೀದಿಸಿದೆ. ಆ ನಂತರ ಚರಿತ್ ಅಸಲಂಕಾ ಅವರನ್ನು ಅದೇ ತಂಡವು, 80 ಸಾವಿರ ಡಾಲರ್ಗೆ ಖರೀದಿತು. ಇನ್ನು ಮೂರನೇ ಸ್ಥಾನದಲ್ಲಿ ಧನಂಜಯ್ ಡಿಸಿಲ್ವಾ ಅವರು 76 ಸಾವಿರ ಡಾಲರ್ಗೆ ದಂಬುಲ್ಲಾ ಔರಾ ತಂಡಕ್ಕೆ ಸೇಲಾದರು.