Naveen ul Haq: ಕೊಹ್ಲಿಯೇ ನನ್ನ ಕೈ ಹಿಡಿದು ಜಗಳ ಆರಂಭಿಸಿದ್ರು; ಐಪಿಎಲ್ ವಾಗ್ಯುದ್ಧದ ಕುರಿತು ಮೌನ ಮುರಿದ ನವೀನ್ ಉಲ್ ಹಕ್
IPL 2023: ನಾನು ಜಗಳ ಆರಂಭಿಸಿಲ್ಲ. ಪಂದ್ಯದ ನಂತರ ನಾವು ಹಸ್ತಲಾಘವ ಮಾಡುವ ವೇಳೆ ವಿರಾಟ್ ಕೊಹ್ಲಿ ಜಗಳ ಆರಂಭಿಸಿದರು ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.

ಪ್ರಸಕ್ತ ಆವೃತ್ತಿಯ ಐಪಿಎಲ್, ಹಲವು ಘಟನೆಗಳೊಂದಿಗೆ ಕುಖ್ಯಾತಿ ಕೂಡಾ ಪಡೆಯಿತು. ಮೈದಾನದಲ್ಲೇ ನಡೆದ ಜಗಳಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾದವು. ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರ, ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್-ಉಲ್-ಹಕ್ (Naveen-ul-Haq) ಹಾಗೂ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ (Virat Kohli) ನಡುವೆ ನಡೆದ ಜಗಳ ಎಲ್ಲೆಡೆ ಸುದ್ದಿಯಾಯ್ತು. ಆ ಘಟನೆ ಬಳಿಕ ದೇಶದಾದ್ಯಂತ ನಡೆದ ಐಪಿಎಲ್ ಪಂದ್ಯಗಳ ವೇಳೆ ನವೀನ್ ವಿರುದ್ಧ ಅಭಿಮಾನಿಗಳು ಟೀಕಾಪ್ರಹಾರ ನಡೆಸಿದರು. ಇದೀಗ, ಅಫ್ಘಾನ್ ಆಟಗಾರ ಜಗಳಕ್ಕೆ ಅಸಲಿ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ನಡುವಿನ ಐಪಿಎಲ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿಯೊಂದಿಗೆ ಮೈದಾನದಲ್ಲಿ ವಾಗ್ವಾದದ ಬಗ್ಗೆ ಮಾತನಾಡಿದ ನವೀನ್, ಜಗಳವನ್ನು ಪ್ರಾರಂಭಿಸಿದ್ದೇ ಕೊಹ್ಲಿ ಎಂದು ಹೇಳಿದ್ದಾರೆ. ಬಲವಂತವಾಗಿ ತಮ್ಮ ಕೈಗಳನ್ನು ಹಿಡಿದ ಕಾರಣ ತಾನು ಪ್ರತಿಕ್ರಿಯೆ ನೀಡಲೇಬೇಕಾಯ್ತು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಆರ್‌ಸಿಬಿಯ ಸ್ಟ್ಯಾಂಡ್-ಇನ್ ನಾಯಕರಾದ ವಿರಾಟ್ ಕೊಹ್ಲಿ, ಎಲ್‌ಎಸ್‌ಜಿಯ ಮೆಂಟರ್ ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ ಈ ವಾಗ್ಯುದ್ಧದಲ್ಲಿ ಭಾಗಿಯಾಗಿದ್ದರು. ಕೊಹ್ಲಿ ನಡವಳಿಕೆಯೇ ಈ ಜಗಳಕ್ಕೆ ಕಾರಣ ಎಂದು ನವಿನ್ ಹೇಳಿದ್ದಾರೆ.
“ನಾನು ಜಗಳ ಆರಂಭಿಸಿಲ್ಲ. ಪಂದ್ಯದ ನಂತರ ನಾವು ಹಸ್ತಲಾಘವ ಮಾಡುವ ವೇಳೆ ವಿರಾಟ್ ಕೊಹ್ಲಿ ಜಗಳ ಆರಂಭಿಸಿದರು,” ಎಂದು ನವೀನ್ ಬಿಬಿಸಿ ಪಾಷ್ತೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ”ದಂಡ ವಿಧಿಸಿದ್ದನ್ನು ನೋಡಿದಾಗಲೇ ಜಗಳವನ್ನು ಯಾರು ಆರಂಭಿಸಿದರು ಎಂಬುದು ನಿಮಗೆ ಅರ್ಥವಾಗುತ್ತದೆ" ಎಂದು ಅವರು ಹೇಳಿದರು.
ಐಪಿಎಲ್‌ನ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮೂವರಿಗೂ ದಂಡ ವಿಧಿಸಲಾಗಿತ್ತು. ಕೊಹ್ಲಿ ಮತ್ತು ಗಂಭೀರ್ ಅವರ ಪಂದ್ಯದ ಶುಲ್ಕವನ್ನು ಸಂಪೂರ್ಣ ಶುಲ್ಕವನ್ನು ದಂಡವಾಗಿ ವಿಧಿಸಿದರೆ, ನವೀನ್ ಸಂಭಾವನೆಯ ಅರ್ಧದಷ್ಟು ದಂಡ ವಿಧಿಸಲಾಯಿತು.
“ನಾನು ಸಾಮಾನ್ಯವಾಗಿ ಯಾರಿಗೂ ಸ್ಲೆಡ್ಜ್ ಮಾಡುವುದಿಲ್ಲ. ನಾನು ಒಂದು ವಿಷಯವನ್ನು ಹೇಳಬಯಸುತ್ತೇನೆ. ಒಂದು ವೇಳೆ ನಾನು ಸ್ಲೆಡ್ಜ್ ಮಾಡಿದರೂ, ಬೌಲಿಂಗ್ ಮಾಡುವಾಗ ಬ್ಯಾಟರ್‌ಗಳಿಗೆ ಮಾತ್ರ ಮಾಡುತ್ತೇನೆ. ಏಕೆಂದರೆ ನಾನು ಬೌಲರ್. ಆ ಪಂದ್ಯದಲ್ಲಿ ನಾನು ಒಂದೇ ಒಂದು ಮಾತನ್ನೂ ಆಡಿಲ್ಲ. ನಾನು ಯಾರನ್ನೂ ಸ್ಲೆಡ್ಜ್ ಮಾಡಿಲ್ಲ.”
“ನಾನು ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದೆ ಎಂದು ಅಲ್ಲಿದ್ದ ಆಟಗಾರರಿಗೆ ಗೊತ್ತು. ನಾನು ಬ್ಯಾಟಿಂಗ್ ಮಾಡುವಾಗವಾಗಲಿ ಅಥವಾ ಪಂದ್ಯದ ನಂತರವಾಗಲಿ ನನ್ನ ತಾಳ್ಮೆ ಕಳೆದುಕೊಂಡಿಲ್ಲ. ಪಂದ್ಯದ ನಂತರ ನಾನು ಏನು ಮಾಡಿದ್ದೇನೆ ಎಂಬುದು ಎಲ್ಲರಿಗೂ ಕಾಣುತ್ತದೆ. ನಾನು ಕೇವಲ ಕೈಕುಲುಕುತ್ತಿದ್ದೆ. ಆದರೆ, ಅವರು (ಕೊಹ್ಲಿ) ನನ್ನ ಕೈಯನ್ನು ಬಲವಂತವಾಗಿ ಹಿಡಿದರು. ಆ ವೇಳೆ ಒಬ್ಬ ಮನುಷ್ಯನಾಗಿ ಎಲ್ಲರಂತೆ ನಾನು ಕೂಡಾ ಪ್ರತಿಕ್ರಿಯಿಸಿದೆ,” ಎಂದು ನವೀನ್ ಹೇಳಿದ್ದಾರೆ.
ಜಗಳದ ಘಟನೆಯ ಬಳಿಕ, ನವೀನ್ ವ್ಯಾಪಕ ಟ್ರೋಲ್‌ಗೆ ಗುರಿಯಾದರು. ಈ ಬಗ್ಗೆ ಮಾತನಾಡಿದ ಅವರು, "ಇದು ನನ್ನ ಮೇಲೆ ಪರಿಣಾಮ ಬೀರಲಿಲ್ಲ. ಟೀಕಾಕಾರರ ಬಾಯಿ ಮುಚ್ಚಿಸುವುದು ಹೇಗೆಂದು ನನಗೆ ಗೊತ್ತು. ನಾನು ಅದನ್ನು 80,000 ಜನರಿಗೆ ಪ್ರತಿಕ್ರಿಯಿಸಿ ಮಾಡಬೇಕಿಲ್ಲ. ನಾನು ನನ್ನ ಕ್ರಿಕೆಟ್‌ನತ್ತ ಗಮನ ಹರಿಸುತ್ತಿದ್ದೇನೆ. ನನ್ನ ಸಾಮರ್ಥ್ಯದ ನನಗೆ ನಂಬಿಕೆ ಇದೆ. ನನ್ನ ಬದಲಿಗೆ ನನ್ನ ಪ್ರದರ್ಶನವು ಮಾತನಾಡುತ್ತದೆ,” ಎಂದು ಅವರು ಹೇಳಿದ್ದಾರೆ.
“ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಭಾರಿ ಚರ್ಚೆಯಾಯ್ತು. ಆದರೆ, ನಾನದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣ ಕ್ರಿಕೆಟ್. ಹೀಗಾಗಿ ಈ ಘಟನೆಯ ನಂತರವೂ ಆಟವನ್ನು ಮುಂದುವರೆಸುತ್ತೇನೆ” ಎಂದು ನವೀನ್ ಹೇಳಿದ್ದಾರೆ.
ಸಂಬಂಧಿತ ಲೇಖನ