ಕನ್ನಡ ಸುದ್ದಿ  /  Sports  /  Cricket News Lsg Vs Mi Akash Madhwal S Fifer Helps Mumbai Beat Lucknow Super Giants By 81 Runs In Ipl Eliminator Prs

LSG vs MI: 5 ರನ್​ ನೀಡಿ 5 ವಿಕೆಟ್​ ಪಡೆದ ಆಕಾಶ್​​ ಮಧ್ವಾಲ್; ಗೆದ್ದು 2ನೇ ಕ್ವಾಲಿಫೈಯರ್​ಗೆ ಎಂಟ್ರಿಕೊಟ್ಟ ಮುಂಬೈ; ಸೋತು ಹೊರಬಿದ್ದ ಲಕ್ನೋ

ಆಕಾಶ್​​​​ ಮಧ್ವಾಲ್​ (Akash Madhwal) ಅವರು 5 ರನ್​ ನೀಡಿ, 5 ವಿಕೆಟ್​ ಪಡೆದು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಮುಂಬೈ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆದಿದೆ.

ಆಕಾಶ್​​ ಮಧ್ವಾಲ್​ ವಿಕೆಟ್​ ಪಡೆದ ಸಂದರ್ಭ.
ಆಕಾಶ್​​ ಮಧ್ವಾಲ್​ ವಿಕೆಟ್​ ಪಡೆದ ಸಂದರ್ಭ. (IPL Twitter)

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​​​ನ (IPL 2023) ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians)​ ಭರ್ಜರಿ ಗೆಲುವು ಸಾಧಿಸಿದೆ. ಆಕಾಶ್​​ ಮಧ್ವಾಲ್​ ಬೌಲಿಂಗ್​ಗೆ ತತ್ತರಿಸಿದ ಲಕ್ನೋ ಸೂಪರ್ ಜೈಂಟ್ಸ್ (LSG 2023)​ ವಿರುದ್ಧ 81 ರನ್​ಗಳಿಂದ ಗೆದ್ದ ಮುಂಬೈ, ಈ ಗೆಲುವಿನೊಂದಿಗೆ 2ನೇ ಕ್ವಾಲಿಫೈಯರ್​​ಗೆ ಅರ್ಹತೆ ಪಡೆದುಕೊಂಡಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತಿರುವ ಗುಜರಾತ್ ಟೈಟಾನ್ಸ್​​ ತಂಡಕ್ಕೆ ಇದೀಗ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಎದುರಾಳಿಯಾಗಿದೆ.

ಮೊದಲು ಬ್ಯಾಟಿಂಗ್​ ನಡೆಸಿದ್ದ ಮುಂಬೈ​​ 20 ಓವರ್​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸಿತು. ಕ್ಯಾಮರೂನ್​ ಗ್ರೀನ್​ (41), ಸೂರ್ಯಕುಮಾರ್​ (33), ತಿಲಕ್​ ವರ್ಮಾ (26), ನೇಹಾಲ್​ ವಧೇರಾ (23) ಅವರ ಹೋರಾಟದ ಫಲವಾಗಿ ಮುಂಬೈ 180 ರನ್​ಗಳ ಗಡಿ ದಾಟಿತ್ತು. ನವೀನ್​ ಉಲ್​ ಹಕ್​ 4 ವಿಕೆಟ್​ ಪಡೆದು ಮಿಂಚಿದ್ದರು. ಇದೀಗ ಅವರ ಆಟ ವ್ಯರ್ಥವಾಗಿದೆ. ಈ ಗುರಿ ಬೆನ್ನತ್ತಿದ ಲಕ್ನೋ ಸೂಪರ್​ ಜೈಂಟ್ಸ್​, ಆಕಾಶ್​​ ಮಧ್ವಾಲ್​ ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿತು. ಪರಿಣಾಮ 101 ರನ್​ಗಳಿಗೆ ಆಲೌಟಾಯಿತು.

ಸ್ಪಿನ್​ ಪಿಚ್​ನಲ್ಲಿ ಮುಂಬೈ ಇಂಡಿಯನ್ಸ್​ ನೀಡಿದ್ದ ಟಾರ್ಗೆಟ್​ ಬೆನ್ನತ್ತಲು ಲಕ್ನೋ ಪರದಾಡಿತು. ಮುಂಬೈ ಬೌಲರ್​ಗಳ ದಾಳಿಗೆ ಉಡೀಸ್​ ಆದ ಲಕ್ನೋ, ಟೂರ್ನಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಚೇಸಿಂಗ್​ ಆರಂಭಿಸಿದ ಕೈಲ್​ ಮೇಯರ್ಸ್ (18), ಪ್ರೇರಕ್​ ಮಂಕಡ್​ (3), ಕೃನಾಲ್​ ಪಾಂಡ್ಯ (8) ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಮತ್ತೊಂದೆಡೆ ಸತತ ವಿಕೆಟ್​ ಪತನದ ನಡುವೆಯೂ ಮಾರ್ಕಸ್​ ಸ್ಟೋಯ್ನಿಸ್​ 40 ರನ್​ ಗಳಿಸಿ ಮಿಂಚಿದರು.

ಆದರೆ ಸ್ಟೋಯ್ನಿಸ್​ ಬಳಿಕ ಯಾರೋಬ್ಬರೂ ಅಬ್ಬರಿಸಲಿಲ್ಲ. ಆಯುಷ್​ ಬದೋನಿ (1), ನಿಕೋಲಸ್​ ಪೂರನ್​ (0), ದೀಪಕ್​ ಹೂಡಾ (15), ಕೃಷ್ಣಪ್ಪ ಗೌತಮ್ (2).. ಹೀಗೆ ಎಲ್ಲರೂ ಸಹ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಒಪ್ಪಿಸಿದರು. ಅಂತಿಮವಾಗಿ 101 ರನ್​ಗಳಿಗೆ ಆಲೌಟ್​ ಆಯ್ತು ಲಕ್ನೋ ತಂಡ. ಸದ್ಯ 2ನೇ ಕ್ವಾಲಿಫೈಯರ್​ಗೇರಿರುವ ಮುಂಬೈ ಮೇ 26ರಂದು ಗುಜರಾತ್​ ಟೈಟಾನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.

ದಾಖಲೆಯ 5 ವಿಕೆಟ್​ ಪಡೆದ ಆಕಾಶ್​

ಮಾರಕ ಸ್ಪಿನ್​ ದಾಳಿ ನಡೆಸಿದ ಆಕಾಶ್​ ಮಧ್ವಾಲ್​ ಅವರು ದಾಖಲೆಯ ಬೌಲಿಂಗ್​ ನಡೆಸಿದರು. 3.3 ಓವರ್​​ಗಳಲ್ಲಿ ಕೇವಲ 5 ರನ್​ ನೀಡಿ 5 ವಿಕೆಟ್​ ಪಡೆದರು. ಆ ಮೂಲಕ ಅನಿಲ್​ ಕುಂಬ್ಳೆ ದಾಖಲೆ ಸರಿಗಟ್ಟಿದರು.

ಮುಂಬೈ ಬ್ಯಾಟಿಂಗ್​

ಹತ್ವದ ಪಂದ್ಯದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಮುಂಬೈ ಇಂಡಿಯನ್ಸ್​ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​​​ ಶರ್ಮಾ (15) ಮತ್ತು ಇಶಾನ್​ ಕಿಶನ್ (12)​ ಪವರ್​​ ಪ್ಲೇ ಮುಗಿಯುವುದರೊಳಗೆ ತಂಡಕ್ಕೆ ಡಬಲ್​ ಆಘಾತ ನೀಡಿದರು. ಬಳಿಕ ಕ್ಯಾಮರೂನ್​ ಗ್ರೀನ್​ - ಸೂರ್ಯಕುಮಾರ್​ ಯಾದವ್​ ಆಸರೆಯಾದರು. 3ನೇ ವಿಕೆಟ್​ಗೆ 66 ರನ್​​ಗಳ ಜೊತೆಯಾಟವಾಡಿದರು. ಈ ವೇಳೆ ಸೂರ್ಯಕುಮಾರ್​ 33 ರನ್​​ ಗಳಿಸಿ, ಕ್ಯಾಮರೂನ್​ ಗ್ರೀನ್​ 41 ರನ್​ ಗಳಿಸಿ ಹೊರ ನಡೆದರು. ಇಬ್ಬರಿಗೂ ನವೀನ್​ ಉಲ್​ ಹಕ್​ ಶಾಕ್​ ನೀಡಿದರು.

ಬ್ಯಾಕ್ ಟು ಬ್ಯಾಕ್​ ವಿಕೆಟ್​ಗಳು ಕಳೆದುಕೊಳ್ಳುತ್ತಿದ್ದಂತೆ, ಕ್ರೀಸ್​​ನಲ್ಲಿದ್ದ ತಿಲಕ್​ ವರ್ಮಾ ಮತ್ತು ಟಿಮ್​ ಡೇವಿಡ್​ ನಿಧಾನವಾಗಿ ಬ್ಯಾಟ್​ ಬೀಸಿದರು. ಸ್ಲೋ ಇನ್ನಿಂಗ್ಸ್​ ಕಟ್ಟುತ್ತಿದ್ದ ಡೇವಿಡ್​​ 13 ರನ್​ ಗಳಿಗೆ ಆಟ ಮುಗಿಸಿದರು. ತಿಲಕ್​ ವರ್ಮಾ ಕೂಡ 22 ಎಸೆತಗಳಲ್ಲಿ 2 ಸಿಕ್ಸರ್​ಗಳ ನೆರವಿನಿಂದ 26 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಆದರೆ ನೇಹಾಲ್​ ವಧೇರಾ ಕೊನೆಯಲ್ಲಿ ಅಬ್ಬರಿಸಿದರು. ಅದರಲ್ಲೂ 20ನೇ ಓವರ್​​​ನಲ್ಲಿ ಬೌಂಡರಿಗಳ ಸುರಿಮಳೆಗೈದರು. 12 ಎಸೆತಗಳಲ್ಲಿ 22 ರನ್​ ಗಳಿಸಿದರು.

ನವೀನ್​ ಉಲ್​ ಹಕ್​ಗೆ ಯಶ್​ ಠಾಕೂರ್ ಮತ್ತು ಮೊಹ್ಸಿನ್​ ಖಾನ್​ ಸಾಥ್​ ನೀಡಿದರು. ಯಶ್​ ಠಾಕೂರ್​​ 3 ವಿಕೆಟ್​ ಪಡೆದರೆ, ಮೊಹ್ಸಿನ್​ ಅವರು 1 ವಿಕೆಟ್​ ಪಡೆದರು. ಅಂತಿಮ ಮುಂಬೈ ಇಂಡಿಯನ್ಸ್​​ 20 ಓವರ್​​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸಿತು.