Virat Kohli: 2008ರ ಅಂಡರ್-19 ವಿಶ್ವಕಪ್ನಲ್ಲಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ವಿರಾಟ್ ಕೊಹ್ಲಿ ಸಹ ಆಟಗಾರರು ಈಗ ಅಂಪೈರ್ಸ್
Virat Kohli: ವಿರಾಟ್ ಕೊಹ್ಲಿ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬ್ಯುಸಿಯಾಗಿದ್ದರೆ, ಆತನ ಸಹ ಆಟಗಾರರು ಅಂಪೈರ್ಗಳಾಗಿ ಬದಲಾಗಿದ್ದಾರೆ.
ವಿರಾಟ್ ಕೊಹ್ಲಿ (Virat Kohli) ಸದ್ಯ ಟೀಮ್ ಇಂಡಿಯಾದ (Team India) ಸೂಪರ್ ಸ್ಟಾರ್ ಆಟಗಾರ. ಸುಮಾರು 15 ವರ್ಷಗಳಿಂದ ಭಾರತೀಯ ತಂಡದಲ್ಲಿ ಗುರುತಿಸಿಕೊಂಡಿರುವ ಕೊಹ್ಲಿ, ಅಪಾರ ಕೊಡುಗೆ ನೀಡಿದ್ದಾರೆ. ಆತನೇ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ. ವೆಸ್ಟ್ ಇಂಡೀಸ್ ಪ್ರವಾಸದ ಏಕದಿನ ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳಿಗೆ ಬೆಂಚ್ ಕಾದಿದ್ದ ಕೊಹ್ಲಿ, ಈಗ ತವರಿಗೆ ಮರಳಲಿದ್ದಾರೆ.
ಆ ಬಳಿಕ ಏಷ್ಯಾಕಪ್ಗೆ (Asia Cup 2023) ಸಖತ್ ಸಿದ್ಧತೆ ಆರಂಭಿಸಲಿದ್ದಾರೆ. ಕೊಹ್ಲಿ ಕ್ರಿಕೆಟ್ನಲ್ಲಿ ಬ್ಯುಸಿಯಾಗಿದ್ದರೆ, ಆತನ ಸಹ ಆಟಗಾರರು ಅಂಪೈರ್ಗಳಾಗಿ ಬದಲಾಗಿದ್ದಾರೆ. ಕಡಿಮೆ ವಯಸ್ಸಿಗೆ ನಿವೃತ್ತಿ ಘೋಷಿಸಿರುವ ಇಬ್ಬರು ಆಟಗಾರರು, ಅಂಪೈರ್ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹಾಗಾದರೆ ಅವರು ಯಾರು? ಸದ್ಯ ಎಲ್ಲಿ ಅಂಪೈರಿಂಗ್ ಮಾಡುತ್ತಿದ್ದಾರೆ ಎಂಬುದನ್ನು ನೋಡೋಣ ಬನ್ನಿ.
ವಿರಾಟ್ ಕೊಹ್ಲಿಯ ಅವರೊಂದಿಗೆ ಕ್ರಿಕೆಟ್ ವೃತ್ತಿ ಬದುಕು ಆರಂಭಿಸಿದ್ದ ತನ್ಮಯ್ ಶ್ರೀವಾಸ್ತವ್ (Tanmay Srivastava) (33 ವರ್ಷ) ಮತ್ತು ಅಜಿತೇಶ್ ಅರ್ಗಲ್ (Ajitesh Argal) (34 ವರ್ಷ) ಕೆಲ ವರ್ಷಗಳ ಹಿಂದಷ್ಟೇ ವಿದಾಯ ಹೇಳಿದ್ದರು. ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರ ಹೊರತಾಗಿಯೂ ಭಾರತೀಯ ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬುದು ಬೇಸರದ ಸಂಗತಿ. ಈಗ ಇಬ್ಬರು ಕ್ರಿಕೆಟಿಗರು ಬಿಸಿಸಿಐ ನಡೆಸಿದ ಅಂಪೈರಿಂಗ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಶೀಘ್ರದಲ್ಲೇ ಅಜಿತೇಶ್, ತನ್ಮಯ್ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಅಂಪೈರ್ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಜಿತೇಶ್-ತನ್ಮಯ್, ಆಗಸ್ಟ್ 17-19ರವರೆಗೆ ಅಹ್ಮದಾಬಾದ್ನಲ್ಲಿ ಬಿಸಿಸಿಐನ ಓರಿಯಂಟೇಶನ್ ಕಾರ್ಯಕ್ರಮ ಮತ್ತು ಸೆಮಿನಾರ್ ನಡೆಯಲಿದೆ. ಆ ನಂತರ ಮಂಡಳಿ ಆಯೋಜಿಸುವ ಪಂದ್ಯಗಳಲ್ಲಿ ಅಧಿಕೃತವಾಗಿ ಅಂಪೈರ್ ಆಗಿ ಭಾಗವಹಿಸಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆರಂಭದಲ್ಲಿ ಡೊಮೆಸ್ಟಿಕ್ನ ಪಂದ್ಯಗಳಲ್ಲಿ ಅಂಪೈರ್ಗಳಾಗಿ ಕೆಲಸ ಮಾಡಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಂಪೈರಿಂಗ್ ಸೇವೆ ಸಲ್ಲಿಸಬೇಕೆಂದರೆ, ಐಸಿಸಿ ನಡೆಸುವ ತೀರ್ಪುಗಾರರ ಪರೀಕ್ಷೆಯಲ್ಲಿ ಪಾಸ್ ಆಗಬೇಕಾಗುತ್ತದೆ. ಹಾಗಾಗಿ, ಮುಂಬರುವ ದಿನಗಳಲ್ಲಿ ವಿರಾಟ್ ಕೊಹ್ಲಿ ಸಹ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅಂಪೈರ್ಗಳಾಗಿ ಭಾಗಹಿಸಿದರೂ ಅಚ್ಚರಿ ಇಲ್ಲ. ಅಜಿತೇಶ್ ದೇಶೀ ಕ್ರಿಕೆಟ್ನಲ್ಲಿಕಡಿಮೆ ಪಂದ್ಯಗಳನ್ನು ಆಡಿದ್ದಾರೆ. ಆದರೆ, ತನ್ಮಯ್ ಶ್ರೀವಾಸ್ತವ್ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ.
ಅಜಿತೇಶ್ ಅರ್ಗರ್
ಅಜಿತೇಶ್ 10 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಆದರೆ ಗಳಿಸಿರುವುದು 78 ರನ್ ಮಾತ್ರ. ಇನ್ನು ಲೀಸ್ಟ್ ಎನಲ್ಲಿ 3 ಪಂದ್ಯಗಳಾಡಿದ್ದು, 2 ರನ್ ಗಳಿಸಿದ್ದಾರೆ. ಇನ್ನು 6 ಟಿ20ಗಳಲ್ಲಿ ಭಾಗವಹಿಸಿದ್ದು, 33 ರನ್ ಸಿಡಿಸಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 24 ವಿಕೆಟ್ ಪಡೆದಿದ್ದರೆ, ಲೀಸ್ಟ್ ಎನಲ್ಲಿ 1 ವಿಕೆಟ್, ಟಿ20ನಲ್ಲಿ 4 ವಿಕೆಟ್ ಪಡೆದಿದ್ದಾರೆ. 2008ರ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.
ತನ್ಮಯ್ ಶ್ರೀವಾಸ್ತವ್
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 90 ಪಂದ್ಯಗಳನ್ನಾಡಿದ್ದು, 10 ಶತಕ, 27 ಅರ್ಧಶತಕಗಳ ನೆರವಿನಿಂದ 4918 ರನ್ ಸಿಡಿಸಿದ್ದಾರೆ. ಇನ್ನು ಲೀಸ್ಟ್ ಎನಲ್ಲಿ 44 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, 7 ಶತಕ, 10 ಅರ್ಧಶತಕಗಳ ಸಹಾಯದಿಂದ 1728 ರನ್ ಚಚ್ಚಿದ್ದಾರೆ. ಬ್ಯಾಟಿಂಗ್ ಸರಾಸರಿ 44.30 ಇದೆ. ಇನ್ನು ಐಪಿಎಲ್ ಸೇರಿ 34 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 649 ರನ್ ಗಳಿಸಿದ್ದಾರೆ. ತನ್ಮಯ್ ವಿಶ್ವಕಪ್ ಫೈನಲ್ನಲ್ಲಿ 46 ರನ್ ಸಿಡಿಸಿದ್ದರು.