LSG vs MI Eliminator: ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಚೇಸಿಂಗ್ ಆಯ್ಕೆ; ಉಭಯ ತಂಡಗಳ ಆಡುವ 11ರ ಬಳಗ ಹೀಗಿದೆ
16ನೇ ಆವೃತ್ತಿಯ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಎದುರಾಗುತ್ತಿವೆ. ಹಾಗಾದರೆ ಆಡುವ 11ರ ಬಳಗದಲ್ಲಿ ಯಾರೆಲ್ಲಾ ಅವಕಾಶ ಪಡೆದಿದ್ದಾರೆ ಎಂಬುದನ್ನು ಈ ವರದಿಯಲ್ಲಿ ನೋಡೋಣ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಗುತ್ತಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಟ್ರೆಂಡಿಂಗ್ ಸುದ್ದಿ
ಅದರಂತೆ ಮೊದಲು ಬೌಲಿಂಗ್ ಆರಂಭಿಸಲಿರುವ ಲಕ್ನೋ, ಎದುರಾಳಿಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವ ಲೆಕ್ಕಾಚಾರ ಹಾಕಿಕೊಂಡಿದೆ. ಮುಂಬೈ ತಂಡದಲ್ಲಿ ಒಂದು ಬದಲಾವಣೆಯಾಗಿದೆ. ಕುಮಾರ್ ಕಾರ್ತಿಕೇಯ ಬದಲಿಗೆ, ಹೃತೀಕ್ ಶೋಕೀನ್ ಸ್ಥಾನ ಪಡೆದಿದ್ದಾರೆ.
ಪ್ರಸ್ತುತ ಐಪಿಎಲ್ನಲ್ಲಿ ಉಭಯ ತಂಡಗಳ ಸಾಧನೆ
ಆಲ್ರೌಂಡರ್ ಕೃನಾಲ್ ಪಾಂಡ್ಯ (Krunal Pandya) ಹಂಗಾಮಿ ಸಾರಥ್ಯದ ಲಕ್ನೋ ತಂಡವು, ಲೀಗ್ ಹಂತದ ಕೊನೆಯ 3ನೇ ಪಂದ್ಯಗಳಲ್ಲಿ ಗೆಲುವು ದಾಖಲಿಸಿ, ಉತ್ತಮ ಲಯದಲ್ಲಿದೆ. ಲಕ್ನೋ ತಂಡವು ಲೀಗ್ನಲ್ಲಿ ಆಡಿದ 14 ಪಂದ್ಯಗಳ ಪೈಕಿ 8 ಗೆಲುವು, 5 ಸೋಲು ಕಂಡಿದೆ. 1 ಪಂದ್ಯ ಮಳೆಯಿಂದ ರದ್ದುಗೊಂಡಿದ್ದು, 17 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ. ಇಷ್ಟೇ ಪಂದ್ಯಗಳನ್ನಾಡಿರುವ ಮುಂಬೈ, 8 ಗೆಲುವು, 6 ಸೋಲು ಕಂಡು 16 ಅಂಕ ಕಲೆ ಹಾಕಿ, ಅಗ್ರ-4ರಲ್ಲಿ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶಿಸಿದೆ.
ಗೆದ್ದವರು 2ನೇ ಕ್ವಾಲಿಫೈಯರ್ಗೆ ಅರ್ಹ
ಅಂಕಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನ ಅಲಂಕರಿಸಿರುವ ಮುಂಬೈ-ಲಕ್ನೋ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಲಿವೆ. ಇಲ್ಲಿ ಗೆದ್ದವರು 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದ್ದಾರೆ. ಸೋತವರು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡವು, ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ 2ನೇ ಕ್ವಾಲಿಫೈಯರ್ ಆಡಲಿದೆ.
ಉಭಯ ತಂಡಗಳ ಮುಖಾಮುಖಿ
ಲಕ್ನೋ ಮತ್ತು ಮುಂಬೈ ತಂಡಗಳು ಒಟ್ಟು ಬಾರಿ ಮುಖಾಮುಖಿಯಾಗಿವೆ. ಆದರೆ ಮೂರು ಪಂದ್ಯಗಳಲ್ಲೂ ಲಕ್ನೋ ಜಯಿಸಿರುವುದು ವಿಶೇಷ. ಈಗ ಮುಂಬೈ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಪಿಚ್ ರಿಪೋರ್ಟ್
ಚೆನ್ನೈನ ಚಿದಂಬರಂ ಸ್ಟೇಡಿಯಂ ಸ್ಪಿನ್ ಬೌಲಿಂಗ್ಗೆ ಹೆಚ್ಚು ನೆರವಾಗಲಿದೆ. ಮೇ 23ರಂದು ರಾತ್ರಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ - ಗುಜರಾತ್ ಟೈಟಾನ್ಸ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೂ ಇದೇ ಕಂಡು ಬಂತು. ಚೆನ್ನೈ ನೀಡಿದ್ದ 173 ರನ್ ಬೆನ್ನಟ್ಟಲಾಗದೆ ಗುಜರಾತ್ ಸೋಲೊಪ್ಪಿಕೊಂಡಿತು. ಹಾಗಾಗಿ ಇಂದು ಸ್ಪಿನ್ನರ್ಗಳು ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ
ಆಯುಷ್ ಬಡೋನಿ, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯ್ನಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ (ನಾಯಕ), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಯಶ್ ಠಾಕೂರ್, ಮೊಹ್ಸಿನ್ ಖಾನ್.
ಮುಂಬೈ ಇಂಡಿಯನ್ಸ್ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ರಿಸ್ ಜೋರ್ಡಾನ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ಆಕಾಶ್ ಮಧ್ವಲ್.