Sachin Tendulkar: ಕುಸ್ತಿಪಟುಗಳ ಪರ ದಯಮಾಡಿ ಮಾತನಾಡಿ, ನ್ಯಾಯ ಕೊಡಿಸಿ; ಸಚಿನ್​ ನಿವಾಸದ ಮುಂದೆ ಹಾಕಿದ್ದ ಬ್ಯಾನರ್​ನಲ್ಲಿ ಕಾಂಗ್ರೆಸ್ ಮನವಿ
ಕನ್ನಡ ಸುದ್ದಿ  /  ಕ್ರೀಡೆ  /  Sachin Tendulkar: ಕುಸ್ತಿಪಟುಗಳ ಪರ ದಯಮಾಡಿ ಮಾತನಾಡಿ, ನ್ಯಾಯ ಕೊಡಿಸಿ; ಸಚಿನ್​ ನಿವಾಸದ ಮುಂದೆ ಹಾಕಿದ್ದ ಬ್ಯಾನರ್​ನಲ್ಲಿ ಕಾಂಗ್ರೆಸ್ ಮನವಿ

Sachin Tendulkar: ಕುಸ್ತಿಪಟುಗಳ ಪರ ದಯಮಾಡಿ ಮಾತನಾಡಿ, ನ್ಯಾಯ ಕೊಡಿಸಿ; ಸಚಿನ್​ ನಿವಾಸದ ಮುಂದೆ ಹಾಕಿದ್ದ ಬ್ಯಾನರ್​ನಲ್ಲಿ ಕಾಂಗ್ರೆಸ್ ಮನವಿ

Sachin Tendulkar: ಪ್ರತಿಪಕ್ಷಗಳು, ರಾಜಕೀಯ ನಾಯಕರು, ರೈತ ಮುಖಂಡರು, ವಿವಿಧ ಸಂಘಟನೆಗಳು, ಅಭಿಮಾನಿಗಳು.. ಹೀಗೆ ಪ್ರಮುಖರೇ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ (Wrestlers Protest ) ಬೆಂಬಲ ಸೂಚಿಸಿದ್ದಾರೆ. ಆದರೆ, ಅಗ್ರಮಾನ್ಯ ಕ್ರಿಕೆಟರ್ ಸಚಿನ್​ ತೆಂಡೂಲ್ಕರ್ ​ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ಸಚಿನ್ ತೆಂಡೂಲ್ಕರ್​ ನಿವಾಸದ ಮುಂದಿನ ಬ್ಯಾನರ್​
ಸಚಿನ್ ತೆಂಡೂಲ್ಕರ್​ ನಿವಾಸದ ಮುಂದಿನ ಬ್ಯಾನರ್​

ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪ ಹೊತ್ತಿರುವ ಭಾರತ ಕುಸ್ತಿ ಫೆಡರೇಷನ್​ ಮುಖ್ಯಸ್ಥ ಬ್ರಿಜ್​ಭೂಷಣ್​ ಸಿಂಗ್ (Wrestling Federation of India Chief Brij Bhushan Sharan Singh) ಬಂಧನಕ್ಕೆ ಒತ್ತಾಯಿಸಿ ಭಾರತದ ಖ್ಯಾತನಾಮ ಕ್ರೀಡಾಪಟುಗಳು (Wrestlers Protest) ದೆಹಲಿಯ ಜಂತರ್​ಮಂತರ್​​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಈ ಧರಣಿ ನಡೆಸುತ್ತಿರುವ ಕುಸ್ತಿಪಟುಗಳಿಗೆ ದೇಶಾದ್ಯಂತ ವ್ಯಾಪಕ ಬೆಂಬಲ ಸಿಗುತ್ತಿದೆ. ಆದರೆ ನ್ಯಾಯಕ್ಕಾಗಿ ಹೋರಾಡುತ್ತಿರುವ ಕ್ರೀಡಾಪಟುಗಳಿಗೆ ಕ್ರಿಕೆಟರ್​ಗಳಿಂದ ಮಾತ್ರ ಬೆಂಬಲ ದೊರೆಯುತ್ತಿಲ್ಲ ಎಂಬುದು ವಿಷಾದ.

ಅಪ್ರಾಪ್ತೆ ಸೇರಿದಂತೆ ಪ್ರಮುಖ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಡಬ್ಲ್ಯಎಫ್​​ಐ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್​ ಭೂಷಣ್ ವಿರುದ್ಧ ಕಳೆದ 40 ದಿನಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಅವರ ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ. ಅದರಲ್ಲೂ ಮೇ 28ರಂದು ನೂತನ ಸಂಸತ್​ ಭವನ (New Parliament Building)) ಉದ್ಘಾಟನಾ ದಿನದಂದು ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಅಗ್ರಮಾನ್ಯ ಕ್ರೀಡಾಪಟುಗಳೊಂದಿಗೆ ದೆಹಲಿ ಪೊಲೀಸರು ಅಮಾನುಷವಾಗಿ ನಡೆದುಕೊಂಡಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಕ್ರಿಕೆಟ್​ ಹೊರತುಪಡಿಸಿ, ಉಳಿದ ಕ್ರೀಡಾಪಟುಗಳಿಂದ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತವಾಗಿತ್ತು. ಹಾಗಂತ ಸಂಪೂರ್ಣವಾಗಿ ಅಲ್ಲ. ಇನ್ನು ಕ್ರಿಕೆಟ್​ನಲ್ಲಿ ಅನಿಲ್​ ಕುಂಬ್ಳೆ (Anil Kumble) ಮಾತ್ರ ಅವರ ಬೆಂಬಲಕ್ಕೆ ನಿಂತಿದ್ದರು. ಪ್ರತಿಪಕ್ಷಗಳು, ರಾಜಕೀಯ ನಾಯಕರು, ರೈತ ಮುಖಂಡರು, ವಿವಿಧ ಸಂಘಟನೆಗಳು, ಅಭಿಮಾನಿಗಳು.. ಹೀಗೆ ಪ್ರಮುಖರೇ ಪ್ರತಿಭಟನಾ ನಿರತರಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಅಗ್ರಮಾನ್ಯ ಕ್ರಿಕೆಟರ್​ಗಳು ಮಾತ್ರ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂಬುದು ಬೇಸರ ಎನ್ನುತ್ತಿದ್ದಾರೆ ನೆಟ್ಟಿಗರು.

ಸಚಿನ್​ ನಿವಾಸದ ಮುಂದೆ ಕಾಂಗ್ರೆಸ್​ ಬ್ಯಾನರ್​

ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಆಂದೋಲನದ ಬಗ್ಗೆ ಮಾತನಾಡದ ದಿಗ್ಗಜ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​​ (Sachin Tendulkar) ಅವರನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಮುಂಬೈನಲ್ಲಿರುವ ಸಚಿನ್ ಅವರ ನಿವಾಸದ ಹೊರಗೆ ಪೋಸ್ಟರ್​​​ವೊಂದನ್ನು ಹಾಕಿದ್ದಾರೆ. ಮುಂಬೈ ಪೊಲೀಸರು ಶೀಘ್ರ ಕ್ರಮ ಕೈಗೊಂಡು ಪೋಸ್ಟರ್ ತೆಗೆದಿದ್ದಾರೆ.

ಬ್ಯಾನರ್​​​ನಲ್ಲಿ ಏನಿದೆ?

ಸಚಿನ್​ ತೆಂಡೂಲ್ಕರ್​ ಅವರೇ ನೀವು ಭಾರತ ರತ್ನ, ಮಾಜಿ ಸಂಸದ ಮತ್ತು ಕ್ರಿಕೆಟ್​ನಲ್ಲಿ ದಂತಕಥೆ. ಆದರೆ ನೀವು ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳದ ಆರೋಪದ ಏಕೆ ಮೌನವಾಗಿದ್ದೀರಿ? ತರಬೇತುದಾರರು ಮಹಿಳಾ ಕುಸ್ತಿಪಟುಗಳಿಗೆ ಮೇಲೆ ನಿಂದನೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಇದೆ. ನೀವು ಧ್ವನಿಯಾಗುವ ಮೂಲಕ ಮಹಿಳಾ ಕುಸ್ತಿಪಟುಗಳ ನೆರವಿಗೆ ಬರಬಹುದು. ದಯಮಾಡಿ ಮಾತನಾಡಿ, ಅವರಿಗೆ ನ್ಯಾಯಕೊಡಿಸಿ ಎಂದು ಬ್ಯಾನರ್​​​ನಲ್ಲಿ ಬರೆಯಲಾಗಿದೆ.

ಬ್ರಿಜ್​ ಭೂಷಣ್​ ವಿರುದ್ಧ ಕ್ರಮ ಕೈಗೊಳ್ಳಲು ಮುಂಬೈ ಕಾಂಗ್ರೆಸ್​ ಯುವ ಕಾರ್ಯಕರ್ತರು, ಸಚಿನ್​ ನಿವಾಸದ ಮುಂದೆ ಬ್ಯಾನರ್​​​ ಹಾಕುವ ಮೂಲಕ ಮನವಿ ಮಾಡಿದ್ದಾರೆ. ನೀವು ಮಾತನಾಡಿದರೆ, ನಿಮ್ಮೊಂದಿಗೆ ಅಭಿಮಾನಿಗಳು, ಪ್ರಮುಖ ಕ್ರಿಕೆಟಿಗರು ಬೆಂಬಲಕ್ಕೆ ನಿಲ್ಲುತ್ತಾರೆ. ಇದರಿಂದ ಒತ್ತಡ ಹೆಚ್ಚಾಗುತ್ತದೆ ಎಂಬುದು ಕಾಂಗ್ರೆಸ್​ ಕಾರ್ಯಕರ್ತರ ಮನವಿಯಾಗಿದೆ. ಆದರೆ ಹಾಕಿದ್ದ ಬ್ಯಾನರ್​ ಅನ್ನು ಈಗಾಗಲೇ ಪೊಲೀಸರು ತೆರವುಗೊಳಿಸಿದ್ದಾರೆ. ಈ ವಿಚಾರದಲ್ಲಿ ಸಚಿನ್​ ಮೌನವಾಗಿರುವುದನ್ನು ಯುವ ಕಾಂಗ್ರೆಸ್​ ಪ್ರಶ್ನಿಸಿದೆ. ಆದರೆ ಸಚಿನ್​ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

5 ದಿನ ಕಾಲಾವಕಾಶ ಕೊಟ್ಟ ಕುಸ್ತಿಪಟುಗಳು

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿ ಹೈರಾಣಾಗಿರುವ ಖ್ಯಾತನಾಮ ಕುಸ್ತಿಪಟುಗಳು, ತಾವು ಗೆದ್ದ ಪದಕಗಳನ್ನು ಗಂಗಾ ನದಿಯಲ್ಲಿ ವಿಸರ್ಜಿಸಲು ಮುಂದಾಗಿದ್ದರು. ಆದರೆ ರೈತ ಮುಖಂಡರು ತಡೆದ ಹಿನ್ನೆಲೆಯಲ್ಲಿ ವಾಪಸ್​ ಬಂದಿದ್ದರು. ಇನ್ನು ಐದು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ, ಒಲಿಂಪಿಕ್ಸ್​, ಏಷ್ಯನ್​, ಕಾಮನ್​ವೆಲ್ತ್​​ನಲ್ಲಿ ಗೆದ್ದ ಪದಕಗಳನ್ನು ಗಂಗಾ ನದಿಗೆ ವಿಸರ್ಜಿಸುತ್ತೇವೆ ಎಂದಿದ್ದಾರೆ.

ಮಹಿಳೆ ಆಗಿರುವ ರಾಷ್ಟ್ರಪತಿಯೂ ಮೌನ

ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೂ ತುಟಿ ಬಿಚ್ಚಿಲ್ಲ. ಅವರು ಪದಕ ಗೆದ್ದಾಗ ಅವರೊಂದಿಗೆ ತೆಗೆಸಿಕೊಂಡು ಸಂಭ್ರಮಿಸಿ ಈಗ ಮೌನಿ ಆಗಿದ್ದಾರೆ. ಮತ್ತೊಂದೆಡೆ ಮಹಿಳೆಯೂ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ತುಟಿಪಿಟಿಕ್​ ಅಂತಿಲ್ಲ. ನನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.