Babar vs Kohli: ವಿರಾಟ್‌ಗಿಂತ ಬಾಬರ್ ಉತ್ತಮ ಆಟಗಾರ; ಕೊಹ್ಲಿಯನ್ನು ನಾನು ಸುಲಭವಾಗಿ ಔಟ್ ಮಾಡಬಲ್ಲೆ ಎಂದ ಮಾಜಿ ಪಾಕ್ ಕ್ರಿಕೆಟಿಗ
ಕನ್ನಡ ಸುದ್ದಿ  /  ಕ್ರೀಡೆ  /  Babar Vs Kohli: ವಿರಾಟ್‌ಗಿಂತ ಬಾಬರ್ ಉತ್ತಮ ಆಟಗಾರ; ಕೊಹ್ಲಿಯನ್ನು ನಾನು ಸುಲಭವಾಗಿ ಔಟ್ ಮಾಡಬಲ್ಲೆ ಎಂದ ಮಾಜಿ ಪಾಕ್ ಕ್ರಿಕೆಟಿಗ

Babar vs Kohli: ವಿರಾಟ್‌ಗಿಂತ ಬಾಬರ್ ಉತ್ತಮ ಆಟಗಾರ; ಕೊಹ್ಲಿಯನ್ನು ನಾನು ಸುಲಭವಾಗಿ ಔಟ್ ಮಾಡಬಲ್ಲೆ ಎಂದ ಮಾಜಿ ಪಾಕ್ ಕ್ರಿಕೆಟಿಗ

Naved ul Hasan: ವಿರಾಟ್‌ ಕೊಹ್ಲಿ ಮತ್ತು ಬಾಬರ್‌ ಅಜಾಮ್‌ ನಡುವೆ ಆಗಾಗ ಹೋಲಿಕೆಗಳು ನಡೆಯುತ್ತಿರುತ್ತವೆ. ಇದೀಗ ಪಾಕಿಸ್ತಾನ ಮಾಜಿ ಕ್ರಿಕೆಟಿಗರೊಬ್ಬರು ವಿರಾಟ್‌ಗಿಂತ ಬಾಬಾರ್‌ ಉತ್ತಮ ಆಟಗಾರ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಾಮ್
ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಾಮ್

ಏಕದಿನ ಕ್ರಿಕೆಟ್‌ನಲ್ಲಿ ನಂಬರ್‌ ವನ್‌ ಶ್ರೇಯಾಂಕ ಪಡೆದಿರುವ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಅಜಾಮ್‌ (Babar Azam), ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದಾರೆ. ಕವರ್ ಡ್ರೈವ್‌ಗಳನ್ನು ಚಾಣಾಕ್ಷವಾಗಿ ಆಡುವ ಬಲಗೈ ಬ್ಯಾಟರ್, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ (ODI World Cup) ಪಾಕಿಸ್ತಾನ ಪರ ಮಹತ್ವದ ಪಾತ್ರ ವಹಿಸಲಿದ್ದಾರೆ.

ಸದ್ಯ ಏಕದಿನ ಶ್ರೇಯಾಂಕದಲ್ಲಿ ಬಾಬರ್ ಅಗ್ರಸ್ಥಾನದಲ್ಲಿದ್ದರೆ, ಕೊಹ್ಲಿ ಪ್ರಸ್ತುತ ಎಂಟನೇ ಸ್ಥಾನದಲ್ಲಿದ್ದಾರೆ. ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಹತ್ತನೇ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್‌ನಲ್ಲಿ ವಿರಾಟ್‌ ಮತ್ತು ಬಾಬರ್‌ ಅಜಾಮ್‌ ನಡುವೆ ಆಗಾಗ ಹೋಲಿಕೆಗಳು ನಡೆಯುತ್ತಿರುತ್ತವೆ. ಎದುರಾಳಿ ತಂಡವನ್ನು ಲೆಕ್ಕಿಸದೆ ಏಕಾಂಗಿಯಾಗಿ ಪಂದ್ಯ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಬ್ಯಾಟರ್‌ ಆಗಿರುವ ವಿರಾಟ್ ಕೊಹ್ಲಿ ಮತ್ತು ಬಾಬಾರ್‌ ನಡುವೆ ಕೆಲವೊಂದು ಸಾಮ್ಯತೆಗಳಿವೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ ಸಂದರ್ಭದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ, ಇಂತಹದೇ ಘಟನೆಗೆ ಎಂಸಿಜಿ ಮೈದಾನ ಸಾಕ್ಷಿಯಾಗಿತ್ತು. 160 ರನ್‌ಗಳ ಗುರಿ ಬೆನ್ನಟ್ಟಿದ ಭಾರತವು, ಒಂದು ಹಂತದಲ್ಲಿ 31 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ, 53 ಎಸೆತಗಳಲ್ಲಿ 82 ರನ್ ಗಳಿಸಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಕೊಹ್ಲಿಗಿಂತ ಬಾಬರ್‌ ಉತ್ತಮ ಬ್ಯಾಟರ್

ಈ ಕುರಿತು ಮಾತನಾಡುತ್ತಾ ತಮ್ಮ ಅಭಿಪ್ರಾಯನ್ನು ಹಂಚಿಕೊಂಡ ಪಾಕಿಸ್ತಾನದ ಮಾಜಿ ವೇಗಿ ನವೇದ್ ಉಲ್ ಹಸನ್, ಕೊಹ್ಲಿಗಿಂತ ಬಾಬರ್ ಉತ್ತಮ ಆಟಗಾರ ಎಂದು ಹೇಳಿಕೊಂಡಿದ್ದಾರೆ. ಏಕದಿನ ಸ್ವರೂಪದಲ್ಲಿ 110 ಅಂತರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿರುವ ಮಾಜಿ ಕ್ರಿಕೆಟರ್, ಕೊಹ್ಲಿಗಿಂತ ಬಾಬರ್ ತಾಂತ್ರಿಕವಾಗಿ ಉತ್ತಮ ಆಟಗಾರ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಕೊಹ್ಲಿಯು ಒಂದೂವರೆ ವರ್ಷಗಳ ಕಾಲ ಫಾರ್ಮ್‌ ಕಳೆದುಕೊಂಡಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ.‌

ಕೊಹ್ಲಿ ಹೆಚ್ಚು ಬಾರಿ ವಿಫಲರಾಗಿದ್ದಾರೆ

“ಬಾಬರ್ ಆಜಮ್ ಅಥವಾ ವಿರಾಟ್ ಕೊಹ್ಲಿ ನಡುವೆ ಹೋಲಿಕೆ ಮಾಡುವಾಗ, ನಾನು ಯಾವಾಗಲೂ ಬಾಬರ್ ತಾಂತ್ರಿಕವಾಗಿ ಹೆಚ್ಚು ಉತ್ತಮ ಎಂದು ಹೇಳುತ್ತೇನೆ. ಇದಕ್ಕೆ ಪ್ರಮುಖ ಕಾರಣವೆಂದರೆ ಬಾಬರ್‌ ವೈಫಲ್ಯಗಳನ್ನು ಅನುಭವಿಸಿದ್ದು ತೀರಾ ಅಪರೂಪ. ಕೊಹ್ಲಿ ಇತ್ತೀಚಿಗೆ ಒಂದೂವರೆ ವರ್ಷಗಳ ಕಾಲ ಫಾರ್ಮ್‌ ಕಂಡುಕೊಳ್ಳಲು ಹೆಣಗಾಡಿದರು. ಏಕೆಂದರೆ ಅವರು ಕೆಳಮಟ್ಟದ ಆಟಗಾರ. ಇಂತಹ ಆಟಗಾರರು ವಿಫಲವಾದಾಗ ದೀರ್ಘ ಕಾಲ ಹಾಗೆಯೇ ಉಳಿಯುತ್ತಾರೆ ” ಎಂದು ನಾದಿರ್ ಅಲಿ ಪಾಡ್‌ಕಾಸ್ಟ್‌ನಲ್ಲಿ ನವೇದ್ ಹೇಳಿದ್ದಾರೆ.

ಬಾಬರ್‌ಗೆ ಹೋಲಿಸಿದರೆ ಕೊಹ್ಲಿ ಬಳಿ ವಿವಿಧ ಶಾಟ್‌ಗಳಿವೆ. ಆದರೆ, ಪಾಕಿಸ್ತಾನದ ನಾಯಕನು ತಮ್ಮ ಬತ್ತಳಿಕೆಯಲ್ಲಿ ಕೆಲವೇ ವಿಧದ ಶಾಟ್‌ಗಳನ್ನು ಇಟ್ಟುಕೊಂಡರೂ ಅದನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುತ್ತಾರೆ. “ಬಾಬರ್ ತಾಂತ್ರಿಕವಾಗಿ ಹೆಚ್ಚು ಸಮರ್ಥರಾಗಿದ್ದಾರೆ. ಕೊಹ್ಲಿ ಬಾಬರ್‌ಗಿಂತ ಹೆಚ್ಚು ಹೊಡೆತಗಳನ್ನು ಹೊಂದಿದ್ದಾರೆ. ಆದಾಗ್ಯೂ, ಬಾಬರ್ ತಮ್ಮಲ್ಲಿರುವ ಸೀಮಿತ ಹೊಡೆತಗಳನ್ನು ಚೆನ್ನಾಗಿ ಬಳಸುತ್ತಾರೆ” ಎಂದು ನವೇದ್ ಅಭಿಪ್ರಾಯಪಟ್ಟಿದ್ದಾರೆ.

“ಬಾಬರ್‌ಗಿಂತ ಕೊಹ್ಲಿ ಹೆಚ್ಚು ಹೊಡೆತಗಳನ್ನಾಡಲು ಪ್ರಮುಖ ಕಾರಣವೆಂದರೆ ಭಾರತದಲ್ಲಿನ ಪಿಚ್‌ಗಳು. ಅವು ಬ್ಯಾಟಿಂಗ್‌ಗೆ ಹೇಳಿ ಮಾಡಿಸಿವೆ. ಅವರು ಐಪಿಎಲ್‌ನಲ್ಲಿ ಆಡುತ್ತಾರೆ. ಅಲ್ಲಿ ವಿಶ್ವ ದರ್ಜೆಯ ಬೌಲರ್‌ಗಳನ್ನು ಎದುರಿಸುತ್ತಾರೆ” ಎಂದು ನವೇದ್ ತಿಳಿಸಿದ್ದಾರೆ.

ಈ ನಡುವೆ ಕೊಹ್ಲಿಯ ವಿಕೆಟ್‌ ಪಡೆಯುವುದು ತುಂಬಾ ಸುಲಭವಾಗುತ್ತದೆ ಎಂದು ನಾವೇದ್ ತಿಳಿಸಿದ್ದಾರೆ. “ನಾನು ನನ್ನ ಹಳೆಯ ಫಾರ್ಮ್‌ನಲ್ಲಿದ್ದರೆ, ಈ ಇಬ್ಬರಲ್ಲಿ ನಾನು ಕೊಹ್ಲಿಯನ್ನು ಸುಲಭವಾಗಿ ಔಟ್ ಮಾಡಬಹುದು. ನಾನು ಅವನನ್ನು ಸ್ಲಿಪ್‌ಗಳಲ್ಲಿ ಅಥವಾ ವಿಕೆಟ್‌ಕೀಪರ್‌ ಜಾಗದಲ್ಲಿ ಬೇಗನೆ ಬಲೆಗೆ ಬೀಳಿಸುತ್ತಿದ್ದೆ,” ಎಂದು ನವೇದ್‌ ಹೇಳಿಕೊಂಡಿದ್ದಾರೆ.

Whats_app_banner