ಕನ್ನಡ ಸುದ್ದಿ  /  Sports  /  Cricket News No Hope Chetan Sharmas Helpless Tweet 3 Months After Sting Operation Ended His Career As Chief Selector Prs

Chetan Sharma: ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ; ಆಪ್ತರಿಂದಲೂ ಬೆಂಬಲ ಸಿಗುತ್ತಿಲ್ಲ; ಚೇತನ್​ ಶರ್ಮಾ ಅಸಹಾಯಕ ಟ್ವೀಟ್​​

ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ಆಪ್ತರು ಅಥವಾ ಪ್ರೀತಿ ಪಾತ್ರರಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ. ಮಾತಾ ರಾಣಿ ನನ್ನನ್ನು ಆಶೀರ್ವದಿಸುತ್ತಾಳೆ ಎಂದು ನಾನು ಭಾವಿಸುತ್ತೇನೆ' ಎಂದು ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಚೇತನ್​ ಶರ್ಮಾ (Chetan Sharma) ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಚೇತನ್​ ಶರ್ಮಾ
ಚೇತನ್​ ಶರ್ಮಾ

ಖಾಸಗಿ ವಾಹಿನಿಯೊಂದರ ರಹಸ್ಯ ಕಾರ್ಯಾಚರಣೆಯಲ್ಲಿ (Sting Operation) ಭಾರತೀಯ ಕ್ರಿಕೆಟ್​ನ (Indian Cricket) ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿ ರಾಜೀನಾಮೆ ಸಲ್ಲಿಸಿದ್ದ ಆಯ್ಕೆ ಸಮಿತಿ ಮುಖ್ಯಸ್ಥನಾಗಿದ್ದ ಚೇತನ್​ ಶರ್ಮಾ (Former Chief Selector Chetan Sharma), ಈಗ ಹಲವು ದಿನಗಳ ಬಳಿಕ ಈ ಕುರಿತು ಮೌನ ಮುರಿದಿದ್ದಾರೆ. ಆ ಕರಾಳ ಘಟನೆಯಿಂದ ತಾನು ಅನುಭವಿಸುತ್ತಿರುವ ನರಕಯಾತನೆ ಕುರಿತು ತುಟಿ ಬಿಚ್ಚಿದ್ದಾರೆ.

ಸ್ಟಿಂಗ್​ ಆಪರೇಷನ್​ನಲ್ಲಿ ಭಾರತೀಯ ಕ್ರಿಕೆಟ್​ನ ಕುರಿತು ಯಾರಿಗೂ ತಿಳಿಯದ ಮಾಹಿತಿ ಹಂಚಿಕೊಂಡು ವಿವಾದಕ್ಕೆ ಗುರಿಯಾಗಿದ್ದ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಚೇತನ್ ಶರ್ಮಾ, ತಮ್ಮ ಸ್ಥಾನಕ್ಕೆ ಫೆಬ್ರವರಿ 17ರಂದು ರಾಜೀನಾಮೆ ನೀಡಿದ್ದರು. ಈ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ಅಂಗಿಕಾರ ಮಾಡಿದ್ದರು. ಭಾರತ ತಂಡದ ಪ್ರಮುಖ ಆಂತರಿಕ ವಿಚಾರಗಳನ್ನು ಬಹಿರಂಗಗೊಳಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿತ್ತು.

ಜೀವನ ತುಂಬಾ ಕಷ್ಟವಾಗಿದೆ

4 ತಿಂಗಳ ನಂತರ ಈ ಕುರಿತು ಚೇತನ್​ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಬುಧವಾರ ತಡರಾತ್ರಿ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ವೊಂದನ್ನು ಮಾಡಿರುವ ಚೇತನ್, ಆ ಘಟನೆಯಿಂದ ತುಂಬಾ ನೊಂದಿದ್ದಾರೆ. 'ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ಆಪ್ತರು ಅಥವಾ ಪ್ರೀತಿ ಪಾತ್ರರಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ. ಮಾತಾ ರಾಣಿ ನನ್ನನ್ನು ಆಶೀರ್ವದಿಸುತ್ತಾಳೆ ಎಂದು ನಾನು ಭಾವಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಚೇತನ್​ ಶರ್ಮಾ ಹೇಳಿದ್ದೇನು?

ಟೀಮ್​ ಇಂಡಿಯಾದ ಕೆಲ ಆಟಗಾರರು ಫಿಟ್​​​ನೆಸ್​ ಪ್ರೂವ್​ ಮಾಡಲು ಇಂಜೆಕ್ಷನ್‌ ಪಡೆಯುತ್ತಾರೆ ಎಂದಿದ್ದ ಚೇತನ್‌ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಟೀಮ್​ ಇಂಡಿಯಾದೊಳಗಿನ ಹಿಂದೆಂದೂ ಕಂಡು ಕೇಳರಿಯದ ಕೆಲ ವಿಚಾರಗಳನ್ನು ರಹಸ್ಯ ಕಾರ್ಯಚರಣೆ ಸಂದರ್ಭದಲ್ಲಿ ಚೇತನ್ ಶರ್ಮಾ ಬಹಿರಂಗಪಡಿಸಿದ್ರು. ಭಾರತದ ಕ್ರಿಕೆಟ್‌ ವಲಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು.

ಇಂಜೆಕ್ಷನ್​​ ಪಡೆದ ಫಿಟ್​ನೆಸ್​ ಪ್ರೂವ್​

ಈ ವರ್ಷದ ಫೆಬ್ರವರಿಯಲ್ಲಿ ಜೀ ನ್ಯೂಸ್ ಮತ್ತು ವಿಯಾನ್ ಜಂಟಿಯಾಗಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಅವರ ಹೇಳಿಕೆಗಳು ಹೊಸ ಸಂಚಲನವನ್ನು ಉಂಟು ಮಾಡಿದ್ದವು. ಇದು ಬಿಸಿಸಿಐ ಅನ್ನು ತಲೆ ತಗ್ಗಿಸುವಂತೆ ಮಾಡಿತ್ತು. ಪಂದ್ಯಕ್ಕೂ ಮುನ್ನ ಚುಚ್ಚುಮದ್ದುಗಳನ್ನು ಬಳಸುತ್ತಾರೆ. ಅದರಲ್ಲಿ ಡ್ರಗ್ಸ್​ ಕೂಡ ಇರುತ್ತದೆ. ಆದರೆ ಡೋಪಿಂಗ್ ಪರೀಕ್ಷೆಯಲ್ಲೂ ಪತ್ತೆಯಾಗುವುದಿಲ್ಲ. ಶೇಕಡಾ 80 - 85ರಷ್ಟು ಫಿಟ್ನೆಸ್‌ ಇದ್ದರೂ, ಇಂಜೆಕ್ಷನ್‌ ನೆರವಿನಿಂದ ಆಟವಾಡುತ್ತಿದ್ದಾರೆ ಎಂಬ ಬಾಂಬ್‌ ಸ್ಪೋಟಿಸಿದ್ದರು.

ಕೊಹ್ಲಿ ಅಂದ್ರೆ ಗಂಗೂಲಿಗೆ ಇಷ್ಟವಿರಲಿಲ್ಲ

ಸೌರವ್ ಗಂಗೂಲಿ ಅವರು ರೋಹಿತ್‌ ಶರ್ಮಾ ಪರವಾಗಿ ಯಾವುದೇ ರೀತಿ ನಡೆದುಕೊಂಡಿಲ್ಲ. ಆದರೆ, ವಿರಾಟ್‌ ಕೊಹ್ಲಿಯನ್ನು ಕಂಡರೆ ಗಂಗೂಲಿಗೆ ಇಷ್ಟವಿಲ್ಲ ಎಂಬುದು ಸ್ಪಷ್ಟ. ಕೊಹ್ಲಿ ಮತ್ತು ರೋಹಿತ್‌ ನಡುವೆ ಒಳ ಮುನಿಸು ಏನೂ ಇಲ್ಲ. ಆಸ್ಟ್ರೇಲಿಯಾ ವಿರುದ್ಧದ ಚುಟುಕು ಸರಣಿಗೂ ಮುನ್ನ ವೇಗಿ ಜಸ್‌ಪ್ರೀತ್‌ ಬುಮ್ರಾ ಚೇತರಿಕೆ ಕಂಡಿರಲಿಲ್ಲ. ಆದರೂ ತರಾತುರಿಯಲ್ಲಿ ಬುಮ್ರಾರನ್ನು ಕಣಕ್ಕಿಳಿಸಲಾಯಿತು. ಇನ್ನೂ ಒಂದಿಬ್ಬರು ಆಟಗಾರರು ಖಾಸಗಿಯಾಗಿ ಇಂಜೆಕ್ಷನ್‌ ತೆಗೆದುಕೊಂಡು ಆಡಲು ಫಿಟ್‌ ಎಂದು ಹೇಳಿದ್ದರು ಅಂತ ಚೇತನ್​ ಶರ್ಮಾ ಬಹಿರಂಗಪಡಿಸಿದ್ದರು.

ಕೊಹ್ಲಿ ಸುಳ್ಳು ಹೇಳಿದ್ದರು

ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್​ ಗಂಗೂಲಿ ಅವರಿಂದ ತಾವು ಏಕದಿನ ಕ್ಯಾಪ್ಟನ್ಸಿ ಕಳೆದುಕೊಂಡೆ ಎಂಬುದು ಕೊಹ್ಲಿ ಕಲ್ಪನೆ. ಆದರೆ ಕ್ಯಾಪ್ಟನ್ಸಿ ತ್ಯಜಿಸುವ ಮುನ್ನ ಮರು ಆಲೋಚನೆ ಮಾಡುವಂತೆ ಗಂಗೂಲಿ, ಕೊಹ್ಲಿಗೆ ಹೇಳಿದ್ದರು. ಆದರೆ, ಕೊಹ್ಲಿ ಅದನ್ನು ಕೇಳಿರಲಿಲ್ಲ. ಆದರೆ ಗಂಗೂಲಿ ನನಗೆ ಏನೂ ಹೇಳಲಿಲ್ಲ ಎಂದು ಕೊಹ್ಲಿ ಸುಳ್ಳು ಹೇಳಿದರು. ವಿರಾಟ್‌ ಸುಳ್ಳು ಹೇಳಿದ್ದು ಯಾಕೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಚೇತನ್​ ಶರ್ಮಾ ಹೇಳಿದ್ದರು.

ಮರು ನೇಮಕ

ಕಳೆದ ವರ್ಷ ನಡೆದ ಐಸಿಸಿ T20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ, ಸೆಮಿಫೈನಲ್​​​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೋತು ಹೊರ ಬಿದ್ದ ಬಳಿಕ ಚೇತನ್‌ ಶರ್ಮಾರನ್ನು ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನದಿಂದ ಕಿತ್ತೊಗೆಯಲಾಗಿತ್ತು. ಆದರೆ, ಮುಂದಿನ ಸೆಲೆಕ್ಟರ್​​ಗಳ ನೇಮಕ ಪ್ರಕ್ರಿಯೆ ತಡವಾದ ಕಾರಣ ಅವರನ್ನೇ ಸೆಲೆಕ್ಷನ್‌ ಸಮಿತಿ ಮುಖ್ಯಸ್ಥರನ್ನಾಗಿ ತಾತ್ಕಾಲಿಕವಾಗಿ ಮರು ನೇಮಕ ಮಾಡಲಾಗಿತ್ತು.