ಕನ್ನಡ ಸುದ್ದಿ  /  Sports  /  Cricket News Pakistan Slip To Number Three In Icc Odi Rankings After New Zealand Series Babar Azam Pak Vs Nz Jra

ODI Rankings: ಕಿವೀಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋಲು; ಏಕದಿನ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ಕುಸಿದ ಪಾಕಿಸ್ಥಾನ

ಶುಕ್ರವಾರ ನಡೆದ ಸರಣಿಯ ನಾಲ್ಕನೇ ಪಂದ್ಯವನ್ನು ಗೆದ್ದ ಬಳಿಕ ಪಾಕಿಸ್ತಾನವು ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿತ್ತು. ಆದರೆ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳಲು‌ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ ಸ್ವೀಪ್ ಮಾಡುವ ಅಗತ್ಯವಿತ್ತು. ಆದರೆ ಅದಕೆ ಕಿವೀಸ್‌ ಅವಕಾಶ ಕೊಟ್ಟಿಲ್ಲ.

ಪಾಕಿಸ್ತಾನ ಮತ್ತು ಕಿವೀಸ್‌ ಆಟಗಾರರು
ಪಾಕಿಸ್ತಾನ ಮತ್ತು ಕಿವೀಸ್‌ ಆಟಗಾರರು (AP)

ಏಕದಿನ ಶ್ರೇಯಾಂಕ ಪಟ್ಟಿ(ICC ODI Rankings)ಯಲ್ಲಿ ಪಾಕಿಸ್ತಾನ ತಂಡ ಕುಸಿತ ಕಂಡಿದೆ. ಭಾನುವಾರ ನಡೆದ ನ್ಯೂಜಿಲ್ಯಾಂಡ್‌ ವಿರುದ್ಧದ ಐದನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ (Pakistan vs New Zealand, 5th ODI) ಸೋತ ಪಾಕ್‌, ಶ್ರೇಯಾಂಕದಲ್ಲಿ ಹಿನ್ನಡೆ ಅನುಭವಿಸಿದೆ. ರ‍್ಯಾಂಕಿಂಗ್‌ನಲ್ಲಿ ತನಗಿಂತ ಹಿಂದಿದ್ದ ಕಿವೀಸ್‌ ವಿರುದ್ಧ 47 ರನ್‌ಗಳಿಂದ ಸೋತ ಬಾಬರ್‌ ಅಜಮ್‌ ಪಡೆಯು, ಶ್ರೇಯಾಂಕ ಪಟ್ಟಿಯಲ್ಲಿ ಕೆಳಕ್ಕಿಳಿದಿದೆ.

ಕಿವೀಸ್‌ ವಿರುದ್ಧದ ಮೊದಲ ನಾಲ್ಕು ಏಕದಿನ ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿದ್ದ ಪಾಕಿಸ್ತಾನ, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಅವಕಾಶ ಹೊಂದಿತ್ತು. ಆದರೆ, ಅಂತಿಮ ಏಕದಿನ ಪಂದ್ಯದಲ್ಲಿ ವೈಟ್‌ವಾಶ್‌ ಮುಖಭಂಗದಿಂದ ನ್ಯೂಜಿಲ್ಯಾಂಡ್‌ ತಪ್ಪಿಸಿಕೊಂಡಿದೆ. ಆ ಮೂಲಕ ಪಾಕಿಸ್ತಾನದ ಶ್ರೇಯಾಂಕವನ್ನು ಕಿತ್ತುಕೊಂಡಿದೆ.

ಗೆಲುವಿಗೆ 300 ರನ್‌ಗಳ ಗುರಿ ಪಡೆದ ಪಾಕಿಸ್ತಾನವು, 46.1 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲೌಟ್ ಆಯ್ತು. ಹೀಗಾಗಿ ಪಾಕಿಸ್ತಾನವು ಏಕದಿನ ಶ್ರೇಯಾಂಕದಲ್ಲಿ ಆಸ್ಟ್ರೇಲಿಯ ಮತ್ತು ಭಾರತಕ್ಕಿಂತ 3ನೇ ಸ್ಥಾನಕ್ಕೆ ಕುಸಿಯಿತು. ಸರಣಿಯ ನಿರ್ಣಾಯಕ ಪಂದ್ಯದಲ್ಲಿ ರನ್ ಮಷಿನ್ ಬಾಬರ್ ಅಜಮ್ ತಮ್ಮ 100ನೇ ಏಕದಿನ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು.

ಶುಕ್ರವಾರ ನಡೆದ ಸರಣಿಯ ನಾಲ್ಕನೇ ಪಂದ್ಯವನ್ನು ಗೆದ್ದ ಬಳಿಕ ಪಾಕಿಸ್ತಾನವು ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿತ್ತು. ಆದರೆ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳಲು‌ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ ಸ್ವೀಪ್ ಮಾಡುವ ಅಗತ್ಯವಿತ್ತು. ಆದರೆ ಅದಕೆ ಕಿವೀಸ್‌ ಅವಕಾಶ ಕೊಟ್ಟಿಲ್ಲ.

ಶತಕ ವಂಚಿತರಾದ ಇಫ್ತಿಕರ್ ಅಹ್ಮದ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿವೀಸ್‌, ವಿಲ್ ಯಂಗ್ (87) ಮತ್ತು ನಾಯಕ ಟಾಮ್ ಲ್ಯಾಥಮ್ (59) ಅವರ ಅರ್ಧ ಶತಕಗಳ ನೆರವಿನಿಂದ 49.3 ಓವರ್‌ಗಳಲ್ಲಿ 299 ರನ್‌ ಪೇರಿಸಿತು. ತ್ರಿಶತಕದ ಗುರಿ ಪಡೆದ ಪಾಕಿಸ್ತಾನ, ಮಧ್ಯಮ ಕ್ರಮಾಂಕದ ಬ್ಯಾಟರ್ ಇಫ್ತಿಕರ್ ಅಹ್ಮದ್ ಅವರ ಆಟದ ನೆರವಿನಿಂದ ಉತ್ತಮವಾಗಿ ಮುನ್ನಡೆಯಿತು. ಆದರೆ, ಸೂಕ್ತ ಜೊತೆಯಾಟ ಸಿಗದ ಕಾರಣ ಅವರು ತಮ್ಮ ಮೊದಲ ಏಕದಿನ ಶತಕದಿಂದ ವಂಚಿತರಾದರು. ಪಾಕಿಸ್ತಾನದ ಅಗ್ರ ಕ್ರಮಾಂಕ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಎಡವಿತು. ಹೀಗಾಗಿ ತಂಡದ ಸೋಲು ಖಚಿತವಾಯ್ತು. ಆದರೆ ಇಫ್ತಿಕರ್ ಅಹ್ಮದ್ 72 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿದರು.

ಬಾಬಾರ್‌ ದಾಖಲೆ

ಇದಕ್ಕೂ ಮುನ್ನ ಈ ಸರಣಿಯಲ್ಲಿ ಬಾಬರ್ ಅಜಮ್ ಏಕದಿನ ಕ್ರಿಕೆಟ್‌ನಲ್ಲಿ 5,000 ರನ್‌ಗಳ ಮೈಲಿಗಲ್ಲನ್ನು ತಲುಪಿದ ವೇಗದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಅವರು ಕೇವಲ 97 ಇನ್ನಿಂಗ್ಸ್‌ಗಳಲ್ಲಿ ಈ ಹೆಗ್ಗುರುತನ್ನು ತಲುಪಿದರು.

ಮೊದಲು ನಾಲ್ಕು ಪಂದ್ಯಗಳ ಫಲಿತಾಂಶ

ರಾವಲ್ಪಿಂಡಿಯಲ್ಲಿ ನಡೆದ ಮೊದಲ ಎರಡು ಏಕದಿನ ಪಂದ್ಯಗಳನ್ನು ಕ್ರಮವಾಗಿ ಐದು ಮತ್ತು ಏಳು ವಿಕೆಟ್‌ಗಳಿಂದ ಗೆದ್ದ ಪಾಕಿಸ್ತಾನ, ಕರಾಚಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಬ್ಲ್ಯಾಕ್ ಕ್ಯಾಪ್ಸ್ ತಂಡವನ್ನು 26 ರನ್‌ಗಳಿಂದ ಸೋಲಿಸಿತು. ನಾಲ್ಕನೇ ಪಂದ್ಯದಲ್ಲಿ ಗೆಲುವಿನ ಹುಡುಕಾಟದಲ್ಲಿದ್ದ ನ್ಯೂಜಿಲೆಂಡ್, ಅಲ್ಲಿಯೂ ಹೀನಾಯ ಸೋಲು ಕಂಡಿತು. ಇದೀಗ ಅಂತಿಮ ಪಂದ್ಯದಲ್ಲಿ ಗೆಲ್ಲುವ ಮೂಲಕ, ಪಾಕ್‌ಗೆ ಆಘಾತ ತಂದಿದೆ. ಸದ್ಯ ಕಿವೀಸ್‌ ಶ್ರೇಯಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿವೀಸ್‌ನ ಪ್ರಮುಖ ಆಟಗಾರರು ಆಡುತ್ತಿರುವುದರಿಂದ ಪಾಕಿಸ್ತಾನ ಪ್ರವಾಸಕ್ಕೆ ನ್ಯೂಜಿಲೆಂಡ್‌ ತಂಡದ ಎಂಟು ಪ್ರಮುಖ ಆಟಗಾರರು ಹೋಗಿಲ್ಲ. ಹೀಗಾಗಿ ಮೊದಲ ಎರಡು ಟಿ20 ಪಂದ್ಯಗಳ ಬಳಿಕ ಸರಣಿಯಲ್ಲಿ 2-0ಯಿಂದ ಹಿನ್ನಡೆಯಲ್ಲಿದ್ದ ನ್ಯೂಜಿಲೆಂಡ್, ಅಂತಿಮವಾಗಿ ಟಿ20 ಸರಣಿಯನ್ನು 2-2ರಿಂದ ಡ್ರಾ ಮಾಡಿಕೊಂಡಿತು.