ಕನ್ನಡ ಸುದ್ದಿ  /  Sports  /  Cricket News Pbks Vs Dc Ipl 2023 Liam Livingstone Fails To Drive Punjab Kings Home Delhi Capitals Win By 15 Runs Prs

PBKS vs DC: ಪಂಜಾಬ್ ಕಿಂಗ್ಸ್​​​ ಪ್ಲೇ ಆಫ್​ ಕನಸಿಗೆ ತಣ್ಣೀರೆರೆಚಿದ ಡೆಲ್ಲಿ ಕ್ಯಾಪಿಟಲ್ಸ್​; ಬಹುತೇಕ ಹೊರ ಬಿದ್ದ ಶಿಖರ್​ ಧವನ್ ಪಡೆ

16ನೇ ಆವೃತ್ತಿಯ ಐಪಿಎಲ್​ನ 64ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಟೂರ್ನಿಯಲ್ಲಿ 5ನೇ ಗೆಲುವು ಸಾಧಿಸಿದೆ. ಇದರೊಂದಿಗೆ ಕೊನೆಯ ಸ್ಥಾನದಿಂದ 9ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ ಪಂಜಾಬ್​ ಕಿಂಗ್ಸ್​ ಪ್ಲೇ ಆಫ್​ ಕನಸು ಬಹುತೇಕ ಭಗ್ನಗೊಂಡಿದೆ.

ವಿಕೆಟ್​ ಪಡೆದ ಸಂಭ್ರಮದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಟಗಾರರು.
ವಿಕೆಟ್​ ಪಡೆದ ಸಂಭ್ರಮದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಟಗಾರರು. (IPL Twitter)

ಪಂಜಾಬ್​ ಕಿಂಗ್ಸ್​ ತಂಡದ ಪ್ಲೇ ಆಫ್​ಗೇರುವ ಕನಸನ್ನು ಡೆಲ್ಲಿ ಕ್ಯಾಪಿಟಲ್ಸ್ ನುಚ್ಚು ನೂರು ಮಾಡಿದೆ. ಮಹತ್ವದ ಪಂದ್ಯದಲ್ಲಿ ಪಂಜಾಬ್​ ಸೋಲು ಕಂಡಿದೆ. ಪ್ಲೇ ಆಫ್​ ರೇಸ್​ನಿಂದ ಹೊರಬಿದ್ದ ನಂತರ ಬೊಂಬಾಟ್​ ಪ್ರದರ್ಶನ ನೀಡುತ್ತಿರುವ ಡೆಲ್ಲಿ, ತನ್ನ ಜೊತೆಗೆ ಮತ್ತೊಂದು ತಂಡಕ್ಕೂ ಬಹುತೇಕ ಗೇಟ್​​​ಪಾಸ್​ ಟಿಕೆಟ್​ ನೀಡಿದೆ. ಪಂಜಾಬ್​ ಎದುರು ವಾರ್ನರ್​ ಪಡೆ 15 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. 

ಬೃಹತ್​ ಗುರಿ ಬೆನ್ನಟ್ಟಿದ ಪಂಜಾಬ್​ ಕಿಂಗ್ಸ್​​ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಶಿಖರ್ ಧವನ್​ ಗೋಲ್ಡನ್​ ಡಕ್​ ಆಗಿ ಹೊರ ನಡೆದರು. ಅಥರ್ವ ಟೈಡೆ ಮತ್ತು ಪ್ರಭುಸಿಮ್ರಾನ್​ ಸಿಂಗ್​ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಇದು ನಿಧಾನಗತಿ ಆಟವಾಗಿತ್ತು. ಪ್ರಭುಸಿಮ್ರಾನ್ ಸಿಂಗ್​ 22 ರನ್​ಗಳಿಗೆ ವಿಕೆಟ್​ ಒಪ್ಪಿಸಿದರೆ, ಟೈಡೆ 42 ಎಸೆತಗಳಲ್ಲಿ 55 ರನ್​ ಗಳಿಸಿ ನಿರ್ಗಮಿಸಿದರು.

ಮತ್ತೊಂದೆಡೆ ಲಿಯಾಮ್​ ಲಿವಿಂಗ್​ಸ್ಟೋನ್​ ಏಕಾಂಗಿ ಹೋರಾಟ ನಡೆಸಿದರು. ಜಿತೇಶ್​ ಶರ್ಮಾ (0), ಶಾರೂಖ್​ ಖಾನ್​ (6), ಸ್ಯಾಮ್​ ಕರನ್​ (11) ಯಾರೂ ಕ್ರೀಸ್​ ಕಚ್ಚಿನ ನಿಲ್ಲಲು ಪ್ರಯತ್ನಿಸಲಿಲ್ಲ. ಸತತ ವಿಕೆಟ್ ಪತನದ ನಡುವೆಯೂ ಲಿವಿಂಗ್​ಸ್ಟೋನ್​​ ಸ್ಫೋಟಕ ಇನ್ನಿಂಗ್ಸ್​ ಕಟ್ಟಿದರು. ಬೃಹತ್​ ಗುರಿಯನ್ನು ಸುಲಭವಾಗಿ ಚೇಸ್​ ಮಾಡುವ ಯತ್ನಕ್ಕೆ ಕೈ ಹಾಕಿದರು. ಆದರೆ ಇವರಿಗೆ ಸರಿಯಾದ ಜೋಡಿ ಸಿಗದಿರುವುದು ಚೇಸ್​ ಮಾಡಲು ಸಾಧ್ಯವಾಗಲಿಲ್ಲ.

9 ಸಿಕ್ಸರ್ ಚಚ್ಚಿದ ಇಂಗ್ಲೆಂಡ್​ ಆಟಗಾರ

ಲಿವಿಂಗ್​ಸ್ಟೋನ್​ ತಂಡವನ್ನು ಪ್ಲೇ ಆಫ್​ ರೇಸ್​ನಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರಾದರೂ, ಅಂತಿಮ ಹಂತದಲ್ಲಿ ಸಾಧ್ಯವಾಗಲಿಲ್ಲ. ಕೊನೆಯ ಓವರ್​​ನಲ್ಲಿ 33 ರನ್​ಗಳ ಅಗತ್ಯ ಇತ್ತು. ಅಂತಿಮವಾಗಿ​​ 3 ಎಸೆತಗಳಲ್ಲಿ 16 ರನ್​ಗಳು ಬೇಕಾಗುವ ಹಂತಕ್ಕೆ ಬಂತು. ಆದರೆ ಈ ವೇಳೆ ಇಶಾಂತ್​ ಶರ್ಮಾ ಬೊಂಬಾಟ್​ ಬೌಲಿಂಗ್​ ಮೂಲಕ ಕಟ್ಟಿ ಹಾಕಿದರು. ಇದರೊಂದಿಗೆ ಡೆಲ್ಲಿ 15 ರನ್​ಗಳ  ಗೆಲುವಿಗೆ ಕಾರಣರಾದರು. 

ಲಿವಿಂಗ್​ಸ್ಟೋನ್​ 49 ಎಸೆತಗಳಲ್ಲಿ 5 ಬೌಂಡರಿ, 9 ಸಿಕ್ಸರ್​ಗಳ ಸಹಾಯದಿಂದ 94 ರನ್​ ಗಳಿಸಿದರು. ಅಂತಿಮವಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 198 ರನ್​ ಗಳಿಸಿತು. ಡೆಲ್ಲಿ ಪರ ಇಶಾಂತ್​ ಶರ್ಮಾ ಮತ್ತು ಆ್ಯನ್ರಿಚ್​ ನೋಕಿಯಾ ತಲಾ 2 ವಿಕೆಟ್​ ಪಡೆದು ಮಿಂಚಿದರು.

ಪೃಥ್ವಿ ಕಂಬ್ಯಾಕ್​ ಇನ್ನಿಂಗ್ಸ್​

ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​​, ಸ್ಫೋಟಕ ಆರಂಭ ಪಡೆಯಿತು. ಟೂರ್ನಿಯುದ್ದಕ್ಕೂ ಭಾರಿ ನಿರಾಸೆ ಆರಂಭ ಪಡೆದ ಡೆಲ್ಲಿ ಮೊದಲ ಬಾರಿಗೆ ಒಂದು ಉತ್ತಮ ಇನ್ನಿಂಗ್ಸ್​ ಕಟ್ಟಿದೆ. ಸತತ ವೈಫಲ್ಯದಿಂದ ಬೆಂಚ್​ಗೆ ಸೀಮಿತವಾಗಿದ್ದ ಪೃಥ್ವಿ ಶಾ ಮತ್ತೆ ಅವಕಾಶ ಪಡೆದುಕೊಂಡು, ಮಿಂಚಿದರು. ಜೊತೆಗೆ ನಾಯಕ ಡೇವಿಡ್​ ವಾರ್ನರ್​ ಭರ್ಜರಿ ಸಾಥ್​ ನೀಡಿದರು. ಪರಿಣಾಮ ಮೊದಲ ವಿಕೆಟ್​ಗೆ 94 ರನ್​ಗಳು ಹರಿದು ಬಂದವು.

ಆದರೆ ಅರ್ಧಶತಕದ ಅಂಚಿನಲ್ಲಿ ವಾರ್ನರ್ ಎಡವಿದರು. 31 ಎಸೆತಗಳಲ್ಲಿ 5 ಎಸೆತಗಳಲ್ಲಿ 2 ಸಿಕ್ಸರ್​ಗಳ ನೆರವಿನಿಂದ 46 ರನ್​ ಚಚ್ಚಿದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದ ಪೃಥ್ವಿ ಶಾ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಆ ಮೂಲಕ ಡೆಲ್ಲಿ ಬಲ ಹೆಚ್ಚಿಸಿದರು. ಆದರೆ ಹಾಫ್​ ಸೆಂಚುರಿ ಬೆನ್ನಲ್ಲೇ ಹೊರ ನಡೆದರು. 38 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ಗಳ ನೆರವಿನಿಂದ 54 ರನ್​ ಗಳಿಸಿದರು.

ರೊಸೋ ಆರ್ಭಟ

ಬಳಿಕ ಪ್ರಮುಖ 2 ವಿಕೆಟ್​ಗಳ ಕಳೆದುಕೊಂಡ ಬೆನ್ನಲ್ಲೇ ಮತ್ತೆ ಆರ್ಭಟಿಸಿದ್ದು ರೈಲಿ ರೊಸೋ. ಬೆಂಕಿ ಬಿರುಗಾಳಿ ಬ್ಯಾಟಿಂಗ್​ ನಡೆಸಿದ ರೊಸೋ ರನ್​​​ ಪರ್ವತವನ್ನೇ ನಿರ್ಮಿಸಿದರು. ಬೌಲರ್​ಗಳ ಬೆವರಿಳಿಸಿದರು. ಮೈದಾನದ ಮೂಲೆಮೂಲೆಗೂ ಚೆಂಡಿನ ದರ್ಶನ ಮಾಡಿಸಿದರು. ಇದರೊಂದಿಗೆ ಡೆಲ್ಲಿ ತಂಡದ ಮೊತ್ತ ಹಠಾತನ್ನೇ ಏರಿಕೆ ಕಂಡಿತು. ನೋಡ ನೋಡುತ್ತಿದ್ದಂತೆ 200ರ ಗಡಿ ದಾಟಿತು.

ಕೇವಲ 36 ಎಸೆತಗಳಲ್ಲಿ 6 ಸಿಕ್ಸರ್​, 6 ಬೌಂಡರಿಗಳ ಸಹಾಯದಿಂದ 82 ರನ್​ ಗಳಿಸಿದರು. ಫಿಲಿಪ್​ ಸಾಲ್ಟ್​ 26 ರನ್​ ಗಳಿಸಿ ಸಾಥ್​ ನೀಡಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್​ 20 ಓವರ್​​​​​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 213 ರನ್​ ಗಳಿಸಿತು.