ಕನ್ನಡ ಸುದ್ದಿ  /  Sports  /  Cricket News Pcb Chief Najam Sethi Proposes India Vs Pakistan Test Series After 2007 Bcci Reject The Offer Prs

Ind vs Pak Test: 15 ವರ್ಷಗಳ ಬಳಿಕ ಭಾರತ-ಪಾಕಿಸ್ತಾನ ನಡುವೆ ಟೆಸ್ಟ್​ ಸಿರೀಸ್; ಪಾಕ್​ ಜೊತೆ ದ್ವಿಪಕ್ಷೀಯ ಸರಣಿ ಆಡಲ್ಲ ಎಂದ ಬಿಸಿಸಿಐ

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಟೆಸ್ಟ್​ ಸರಣಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (Pakistan Cricket Board) ಚಿಂತನೆ ನಡೆಸಿದೆ. ಆದರೆ ಈ ಆಫರ್​ ಅನ್ನು ಬಿಸಿಸಿಐ (BCCI) ನಯವಾಗಿ ತಿರಸ್ಕರಿಸಿದೆ. 2007ರ ಬಳಿಕ ಯಾವುದೇ ಟೆಸ್ಟ್​ ಸರಣಿಯು ಉಭಯ ದೇಶಗಳ ಮಧ್ಯೆ ನಡೆದಿಲ್ಲ.

ವಿರಾಟ್​ ಕೊಹ್ಲಿ ಮತ್ತು ಬಾಬರ್​ ಅಜಮ್​
ವಿರಾಟ್​ ಕೊಹ್ಲಿ ಮತ್ತು ಬಾಬರ್​ ಅಜಮ್​

ಭಾರತ - ಪಾಕಿಸ್ತಾನ (India vs Pakistan) ತಂಡಗಳ ನಡುವೆ ಟೆಸ್ಟ್​ ಪಂದ್ಯದ ಕಾದಾಟಕ್ಕೆ ಮತ್ತೆ ವೇದಿಕೆ ಸಜ್ಜಾಗುತ್ತಾ? ಹೀಗೊಂದು ಪ್ರಶ್ನೆ ಕ್ರಿಕೆಟ್​ ವಲಯದಲ್ಲಿ ಹರಿದಾಡುತ್ತಿದೆ. ಇಂಡೋ-ಪಾಕ್​ ಕದನಕ್ಕೆ ರಣರೋಚಕ ಸಮರ ಇಡೀ ವಿಶ್ವವೇ ಕಾದು ಕುಳಿತಿರುತ್ತದೆ. ಟೀಮ್​ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕರೆತರಲು ಸಾಕಷ್ಟು ಕಸರತ್ತು ನಡೆಸುತ್ತಿರುವ ಶತ್ರುರಾಷ್ಟ್ರ, ಈಗ ಬಿಸಿಸಿಐ (BCCI) ಮುಂದೆ ಮತ್ತೊಂದು ಆಫರ್​ ಅನ್ನು ಇಟ್ಟಿದೆ.

ಇದೇ ವರ್ಷ ಏಷ್ಯಾಕಪ್ (Asia Cup)​ ಮತ್ತು ಏಕದಿನ ವಿಶ್ವಕಪ್ (ODI World Cup) ನಡೆಯಲಿದೆ. ಆದರೆ ಭದ್ರತಾ ಸಮಸ್ಯೆಗಳ (Security Issue) ಕಾರಣದಿಂದ ಭಾರತ, ಪಾಕಿಸ್ತಾನಕ್ಕೆ ತೆರಳದಿರಲು ನಿರ್ಧರಿಸಿದೆ. ಹಾಗಾಗಿ ಇದಕ್ಕೆ ತಿರುಗೇಟು ಕೊಟ್ಟಿರುವ ಪಾಕ್​, ನಾವು ಕೂಡ ಏಕದಿನ ವಿಶ್ವಕಪ್​ ಆಡಲು ಭಾರತಕ್ಕೆ ಬರುವುದಿಲ್ಲ ಎಂದು ಹೇಳಿದೆ. ಉಭಯ ಕ್ರಿಕೆಟ್​ ಮಂಡಳಿಗಳ ಹಗ್ಗಜಗ್ಗಾಟದ ನಡುವೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (Pakistan Cricket Board), ಟೆಸ್ಟ್​ ಕ್ರಿಕೆಟ್​​​​ (Test Cricket) ಆಫರ್​​ ನೀಡಿದೆ.

ಭಾರತ ಮತ್ತು ಪಾಕಿಸ್ತಾನ ದೇಶಗಳ ಗಡಿ ಉದ್ವಿಗ್ನತೆಯಿಂದ ಕಾರಣ 15 ವರ್ಷಗಳಿಂದ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಏಕದಿನ, ಟಿ20, ಟೆಸ್ಟ್​ ಸರಣಿಗಳನ್ನು ಆಯೋಜಿಸಿಲ್ಲ. ಐಸಿಸಿ ಟೂರ್ನಮೆಂಟ್​ಗಳಲ್ಲಿ ಮತ್ತು ಏಷ್ಯಾಕಪ್​​ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಮತ್ತೊಂದು ವಿಶೇಷ ಎಂದರೆ 15 ವರ್ಷಗಳಿಂದ ಉಭಯ ತಂಡಗಳ ನಡುವೆ ಒಂದೇ ಒಂದು ಟೆಸ್ಟ್​ ಪಂದ್ಯವೂ ನಡೆದಿಲ್ಲ.

ವರದಿಗಳ ಪ್ರಕಾರ, ಎರಡೂ ತಂಡಗಳ ನಡುವೆ ಟೆಸ್ಟ್​ ಸರಣಿ ಆಯೋಜನೆಗೆ ಪಾಕಿಸ್ತಾನ ಮುಂದಾಗಿದೆ. ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಅವರು ಭಾರತ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಟೆಸ್ಟ್ ಸರಣಿಯನ್ನು ಆಯೋಜಿಸಲು ಒಪ್ಪಿಕೊಂಡಿದ್ದಾರೆ. ಅದು ಕೂಡ ತಟಸ್ಥ ಸ್ಥಳದಲ್ಲಿ ಆಯೋಜಿಸುವುದಾಗಿ ಹೇಳಿದ್ದಾರೆ. ಈ ಆಫರ್ ಅನ್ನು ಬೆನ್ನಲ್ಲೇ ಬಿಸಿಸಿಐ ನಯವಾಗಿ ತಿರಸ್ಕರಿಸಿದೆ.

ಪಿಸಿಬಿ ಅಧ್ಯಕ್ಷ ನಜಮ್ ಸೇಥಿ (PCB Chairman Najam Sethi) ಅವರು ಕೆಲವು ದಿನಗಳ ಹಿಂದಷ್ಟೇ ತಟಸ್ಥ ಸ್ಥಳದಲ್ಲಿ ಭಾರತ ವಿರುದ್ಧ ಟೆಸ್ಟ್ ಸಿರೀಸ್​​ ಆಯೋಜನೆ ಕುರಿತು ಪ್ರಸ್ತಾಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಸಿಸಿಐ, ‘ನಾವು ಪಾಕಿಸ್ತಾನ ತಂಡದ ಜೊತೆಗೆ ಯಾವುದೇ ರೀತಿಯ ದ್ವಿಪಕ್ಷೀಯ ಸರಣಿಗಳನ್ನು ಆಡಲು ರೆಡಿ ಇಲ್ಲ. ನಮ್ಮಲ್ಲಿ ಅಂತಹ ಯೋಜನೆಗಳು ಇಲ್ಲ. ಮುಂದಿನ ದಿನಗಳಲ್ಲೂ ಅಸಾಧ್ಯ ಎಂದು ಹೇಳಿದೆ.

ನಜಮ್ ಸೇಥಿ ಅವರು, ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ ಜೊತೆ ಮಾತನಾಡಿದ್ದು, ಭಾರತ ವಿರುದ್ಧ ಟೆಸ್ಟ್​ ಸರಣಿ ಆಯೋಜನೆಗೆ ನಾನು ಸಿದ್ಧನಿದ್ದೇನೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯಗಳನ್ನು ಆಯೋಜಿಸಬಹುದು ಎಂಬುದು ನನ್ನ ಭಾವನೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಟೆಸ್ಟ್ ಸರಣಿಗೆ ತಾನು ಎಂದಿಗೂ ಸಿದ್ಧ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ನಿರಂತರವಾಗಿ ಉದ್ವಿಗ್ನತೆ ನಡೆಯುತ್ತಿದೆ. 2012ರ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಪಾಕಿಸ್ತಾನವು ಭಾರತಕ್ಕೆ ಪ್ರವಾಸ ಮಾಡಿತು. ಎರಡೂ ತಂಡಗಳ ನಡುವೆ 3 ಟಿ20 ಮತ್ತು ಏಕದಿನ ಸರಣಿ ನಡೆದಿತ್ತು. ಟೆಸ್ಟ್​​​ ಸರಣಿಯನ್ನು ಕೊನೆಯದಾಗಿ 2007ರಲ್ಲಿ ನಡೆದಿತ್ತು. ಭಾರತ 1-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತ್ತು. ಆ ಬಳಿಕ ಎರಡೂ ದೇಶಗಳು ಮತ್ತೆ ಮುಖಾಮುಖಿಯಾಗಿಲ್ಲ.

ಪಾಕಿಸ್ತಾನದ ಆಫರ್​ ಅನ್ನು ಬಿಸಿಸಿಐ ತಿರಸ್ಕರಿಸುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 2ರಿಂದ ಏಷ್ಯಾಕಪ್​ ಪ್ರಾರಂಭವಾಗಲಿದ್ದು, ಪಾಕಿಸ್ತಾನ ಆತಿಥ್ಯ ವಹಿಸಿದೆ. ಹಾಗಾಗಿ ಅಲ್ಲಿಗೆ ಭಾರತ ತಂಡವನ್ನು ಕಳುಹಿಸದಿರಲು ಬಿಸಿಸಿಐ ಚಿಂತಿಸಿದೆ. ಹಲವು ಚರ್ಚೆಗಳ ನಂತರ, ಪಿಸಿಬಿ ಅನುಮೋದನೆ ನೀಡಿದ್ದು, ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಚಿಂತಿಸಿದೆ. ಆದರೆ ಈ ಕುರಿತ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರ ಬೀಳಬೇಕಿದೆ.