Ravi Bishnoi Life Story: ಅಂದು ಇಟ್ಟಿಗೆ, ಸಿಮೆಂಟ್ ಮೂಟೆ ಹೊರುತ್ತಿದ್ದ; ಇಂದು ಐಪಿಎಲ್ನಲ್ಲಿ 4 ಕೋಟಿಗೆ ಒಡೆಯ
Ravi Bishnoi Life Story: ರವಿ ಬಿಷ್ಣೋಯ್ ಜನಿಸಿದ್ದು 2000ರ ಸೆಪ್ಟೆಂಬರ್ 5ರಂದು. ರಾಜಸ್ಥಾನದ ಜೋಧ್ಪುರಲ್ಲಿ ಜನಿಸಿದರು. ಮಧ್ಯಮ ವರ್ಗದ ಕುಟುಂಬವಾದರೂ ಹಣಕಾಸಿನ ಪರಿಸ್ಥಿತಿ ಅಷ್ಟಕಷ್ಟೆ. ನೂರಾರು ಕಷ್ಟಗಳನ್ನು ದಾಟಿ ಬಂದ ಬಿಷ್ಣೋಯ್ ಕ್ರಿಕೆಟರ್ ಆಗುವ ಕನಸನ್ನು ನನಸಾಗಿಸಿಕೊಂಡರು. ಹಾಗಾದರೆ ಹೇಗಿತ್ತು ಆತನ ಲೈಫ್ಸ್ಟೋರಿ? ಬನ್ನಿ ನೋಡೋಣ.
ಹಿಂದಿಯಲ್ಲಿ 'ಇಕ್ಬಾಲ್' ಸಿನಿಮಾ ನೋಡಿದ್ದೀರಾ? ಆ ಚಿತ್ರದಲ್ಲಿ ನಟಿಸಿರುವ ನಟನ ಹೆಸರು ಶ್ರೇಯಸ್ ತಲ್ಪಾಡೆ. ಭಾರತ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆಯುವುದು ನಾಯಕನ ದೊಡ್ಡ ಕನಸಾಗಿರುತ್ತದೆ. ಅದಕ್ಕಾಗಿ ಎದುರಿಸುವ ಕಷ್ಟಗಳು ಅಷ್ಟಿಷ್ಟಲ್ಲ. ಕಡು ಬಡತನ, ಕೌಟುಂಬಿಕ ಸಮಸ್ಯೆಗಳೆಂಬ ದೊಡ್ಡ ಸೇತುವೆಯನ್ನು ದಾಟಿ ಬರುವ ಈತ, ಕೊನೆಗೆ ಭಾರತದ ಯಶಸ್ವಿ ಬೌಲರ್ ಎನಿಸಿಕೊಳ್ಳುತ್ತಾರೆ. ಈ ಕಥೆ ಸಿನಿಮಾಗಷ್ಟೆ ಅಲ್ಲ, ನಿಜ ಜೀವನದಲ್ಲೂ ಇಂತಹ ಉದಾಹರಣೆಗಳು ಸಿಗುತ್ತವೆ.
ಸದ್ಯ ಐಪಿಎಲ್ನಲ್ಲಿ ಧೂಳೆಬ್ಬಿಸುತ್ತಿರುವ ಲೆಗ್ಬ್ರೇಕ್ ಗೂಗ್ಲಿ ಸ್ಪಿನ್ನರ್ ರವಿ ಬಿಷ್ಣೋಯ್ ಜೀವನವೂ ಈ ಕಥೆಗೆ ಹೊರತಾಗಿಲ್ಲ. ಈಗಾಗಲೇ ಟೀಮ್ ಇಂಡಿಯಾ ಪ್ರವೇಶಿಸಿರುವ ಬಿಷ್ಣೋಯ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತನ್ನ ಸ್ಪಿನ್ ಮ್ಯಾಜಿಕ್ನಿಂದ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಬೆರಗುಗೊಳಿಸುತ್ತಿದ್ದಾರೆ. ಲಕ್ನೋ ತಂಡದ ಯಶಸ್ಸಿನಲ್ಲಿ ಈತನದ್ದು ಕೊಡುಗೆ ಅಪಾರ. ಆದರೆ ರವಿ ಬಿಷ್ಣೋಯ್ ಈ ಮಟ್ಟಕ್ಕೆ ಬಂದಿರುವುದರ ಹಿಂದೆಯೇ ಕಣ್ಣೀರಧಾರೆ ಇದೆ.
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅವರು ತಮ್ಮ ಜೀವನದ ಸಂಕಷ್ಟದ ಸನ್ನಿವೇಶಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಬ್ಯಾಟ್ಸ್ಮನ್ಗಳನ್ನು ಉಸಿರುಗಟ್ಟಿಸುತ್ತಿರುವ ರವಿ, ಬಾಲ್ಯದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರಂತೆ. 12ನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಬಿಷ್ಣೋಯ್, ತಮ್ಮ ಕನಸನ್ನು ನನಸಾಗಿಸಲು ಇಟ್ಟಿಗೆ, ಸಿಮೆಂಟ್ ಚೀಲಗಳನ್ನು ಹೊರುತ್ತಿದ್ದರಂತೆ. ಹೀಗಂತ ಸ್ವತಃ ಬಿಷ್ಣೋಯ್ ಅವರೇ ಹೇಳಿದ್ದಾರೆ.
2018ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ನೆಟ್ ಬೌಲರ್ ಆಗುವ ಅವಕಾಶ ಸಿಕ್ಕಿತ್ತು. ಅದೇ ಸಮಯದಲ್ಲಿ 2nd ಪಿಯುಸಿ ಬೋರ್ಡ್ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ, ಕ್ರಿಕೆಟ್ ಮೇಲಿನ ಪ್ರೀತಿ, ನನ್ನನ್ನು ಆ ವರ್ಷದ ಬೋರ್ಡ್ ಪರೀಕ್ಷೆಗಳಿಂದ ದೂರವಿಟ್ಟಿತು. ಹಾಗಾಗಿ ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕರಾಗಿರುವ ನನ್ನ ತಂದೆ ನನ್ನನ್ನು ವಾಪಸ್ ಬರುವಂತೆ ಕೇಳಿಕೊಂಡರು. ಆ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ನನ್ನನ್ನು ಶಿಬಿರದಲ್ಲಿ ಉಳಿಯುವಂತೆ ಹೇಳಿದ್ದರು ಎಂದು ಬಿಷ್ಣೋಯ್ ಹೇಳಿದ್ದಾರೆ.
ಹಾಗಾಗಿ ಆ ವರ್ಷ ಪೂರ್ತಿ 2nd ಪಿಯುಸಿ ಬೋರ್ಡ್ ಪರೀಕ್ಷೆಗಳನ್ನು ಕೈ ಬಿಟ್ಟು ನೆಟ್ ಬೌಲರ್ ಆಗಿಯೇ ಸೇವೆ ಸಲ್ಲಿಸಿದೆ. ಮನೆಗೆ ಬಂದ ಬಳಿಕ ಅಪ್ಪ ನನ್ನ ಮೇಲೆ ಸಿಟ್ಟಾಗಿದ್ದರು. ಅವರನ್ನು ಮನವೊಲಿಸುವ ಪ್ರಯತ್ನ ತುಂಬಾ ಕಷ್ಟವಾಗಿತ್ತು. ಕ್ರಿಕೆಟ್‌ನಲ್ಲಿ ನನ್ನ ಹೆಚ್ಚಿನ ಆಸಕ್ತಿಯಿಂದ ಜೋಧ್‌ಪುರದಲ್ಲಿ ಕೆಲವರ ಜೊತೆಗೂಡಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದೆ. ಆದರೆ, ನಾವು ಅಭ್ಯಾಸ ನಡೆಸಲು ಆ ಅಕಾಡೆಮಿಯಲ್ಲಿ ಸರಿಯಾದ ಪಿಚ್ ಇರಲಿಲ್ಲ. ಮೂಲ ಸೌಕರ್ಯಗಳ ಕೊರತೆ ಕಾಡುತ್ತಿತ್ತು ಎನ್ನುತ್ತಾರೆ 22 ವರ್ಷದ ಸ್ಪಿನ್ನರ್.
ಅಕಾಡೆಮಿಗೆ ಮೂಲ ಸೌಕರ್ಯ ಕೊರತೆ ನೀಗಿಸಲು ನಮ್ಮಲ್ಲಿ ಹಣ ಇರಲಿಲ್ಲ. ಅದಕ್ಕಾಗೊ ನಾನು ನನ್ನ ಸ್ನೇಹಿತರೊಂದಿಗೆ ಕೂಲಿ ಕೆಲಸಕ್ಕೆ ಹೋದೆ. ಇಟ್ಟಿಗೆ, ಸಿಮೆಂಟ್ ಚೀಲಗಳನ್ನು ಹೊರುತ್ತಿದ್ದೆ. ಅಲ್ಲಿ ಬರುತ್ತಿದ್ದ ಹಣದಿಂದ ಕ್ರಿಕೆಟ್ ಪಿಚ್ ಸಿದ್ಧಪಡಿಸಿದ್ದೆವು ಎಂದು ತಾನು ಕ್ರಿಕೆಟ್ಗೆ ಬರುವುದರ ಹಿಂದಿನ ಶ್ರಮ ಏನು ಎಂಬುದನ್ನು ವಿವರಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಫ್ರಾಂಚೈಸಿಯು ರವಿ ಬಿಷ್ಣೋಯ್ ಅವರನ್ನು 4 ಕೋಟಿ ರೂಪಾಯಿಗೆ ಖರೀದಿಸಿದೆ. ಪ್ರಸ್ತುತ ಐಪಿಎಲ್ನಲ್ಲಿ ಆಡಿರುವ 6 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ.
ಅಂಡರ್-19 ವಿಶ್ವಕಪ್ ರನ್ನರ್ಅಪ್ ಭಾರತ ತಂಡದ ಲೆಗ್ ಸ್ಪಿನ್ನರ್ ಆಗಿದ್ದ ರವಿ ಬಿಷ್ಣೋಯ್, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಆಟಗಾರ ಎನಿಸಿದ್ದರು. ಆಡಿದ್ದ 6 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ತೋರಿದ್ದರು. ಈ ಪರ್ಫಾಮೆನ್ಸ್ ನೋಡಿದ್ದ ಫ್ರಾಂಚೈಸಿಗಳು ಬಿಷ್ಣೋಯ್ ಖರೀದಿಗೆ ಒಲವು ತೋರಿದ್ದವು. ಮೊದಲು ಪಂಜಾಬ್ ತಂಡದಲ್ಲಿದ್ದ ರವಿ ಬಿಷ್ಣೋಯ್, ಅಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಹಾಗಾಗಿ ಕಳೆದ ವರ್ಷವಷ್ಟೇ ಪ್ರಾರಂಭವಾದ ನೂತನ ತಂಡ ಲಕ್ನೋಗೆ 4ಕೋಟಿಗೆ ನೇರವಾಗಿ ಡ್ರಾಫ್ಟ್ ಸಿಸ್ಟಮ್ ಮೂಲಕ ಆಯ್ಕೆಯಾದರು.
ವಿಭಾಗ