ICC Rankings: ಡಬ್ಲ್ಯೂಟಿಸಿ ಫೈನಲ್‌ನಲ್ಲಿ ತಂಡದಿಂದ ಹೊರಗಿಟ್ರೂ ನಂಬರ್ ವನ್ ಸ್ಥಾನ ಉಳಿಸಿಕೊಂಡ ಅಶ್ವಿನ್
Ravichandran Ashwin: ರವಿಚಂದ್ರನ್ ಅಶ್ವಿನ್ ನಂಬರ್ 1 ಬೌಲರ್ ಆಗಿ ಮುಂದುವರೆದಿದ್ದಾರೆ. ಐಸಿಸಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ ರಹಾನೆ ಮತ್ತು ಶಾರ್ದೂಲ್ ಕೂಡಾ ಮುನ್ನಡೆ ಸಾಧಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship final) ಫೈನಲ್ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಆಡುವ ಅವಕಾಶ ಪಡೆದಿರಲಿಲ್ಲ. ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದರೂ, ದಿ ಓವಲ್ ಮೈದಾನದ ಪಿಚ್ ಲೆಕ್ಕಾಚಾರ ಹಾಕಿ ಮ್ಯಾನೇಜ್‌ಮೆಂಟ್ ಅಶ್ವಿನ್‌ಗೆ ಅವಕಾಶ ನೀಡಿರಲಿಲ್ಲ. ಆದರೆ, ಅಶ್ವಿನ್ ಮಾತ್ರ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ನಂಬರ್ ವನ್ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅನುಭವಿ ಸ್ಪಿನ್ನರ್ ತಮ್ಮ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಆಡುವ ಬಳಗದಿಂದ ಹೊರಬಿದ್ದ ಹಿನ್ನೆಲೆಯಲ್ಲಿ, ಅಶ್ವಿನ್ ಪರ ಬಾರಿ ಬೆಂಬಲ ವ್ಯಕ್ತವಾಗಿತ್ತು. ಅವರನ್ನು ತಂಡದಿಂದ ಹೊರಗಿಟ್ಟಿದ್ದಕ್ಕೆ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ದೇಶ ವಿದೇಶಗಳ ಶ್ರೇಷ್ಠ ಕ್ರಿಕೆಟಿಗರು ಧ್ವನಿ ಎತ್ತಿದ್ದರು.
ಆಸೀಸ್ ಬ್ಯಾಟರ್‌ಗಳ ಪಾರುಪತ್ಯ
ಭರ್ಜರಿ ಶತಕದೊಂದಿಗೆ ಆಸ್ಟ್ರೇಲಿಯಾ ತಂಡವನ್ನು ಐತಿಹಾಸಿಕ ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ ಬ್ಯಾಟರ್ ಟ್ರಾವಿಸ್ ಹೆಡ್ ಟೆಸ್ಟ್ ಶ್ರೇಯಾಂಕದಲ್ಲಿ ಭಾರಿ ಮುನ್ನಡೆ ಸಾಧಿಸಿದ್ದಾರೆ. ಡಬ್ಲ್ಯುಟಿಸಿ ನೂತನ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ ತಂಡದ ಮೂವರು ಬ್ಯಾಟರ್‌ಗಳು, ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಮೂರು ಸ್ಥಾನಗಳನ್ನು ವಶಪಡಿಸಿಕೊಂಡಿದ್ದಾರೆ. ಮಹತ್ವದ ಪಂದ್ಯದಲ್ಲಿ ಶತಕ ಸಿಡಿಸಿದ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್, ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇದೇ ವೇಳೆ ಮಾರ್ನಸ್ ಲ್ಯಾಬುಶೇನ್ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಅಗ್ರ ಶ್ರೇಯಾಂಕದ ಬ್ಯಾಟರ್ ಆಗಿ ಮಾರ್ನಸ್ ಲ್ಯಾಬುಶೇನ್ ಮುಂದುವರೆದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಮಿತ್ 2ನೇ ಸ್ಥಾನದಲ್ಲಿದ್ದಾರೆ. ಟ್ರಾವಿಸ್ ಹೆಡ್ 884 ರೇಟಿಂಗ್‌ನೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಉಸ್ಮಾನ್ ಖವಾಜಾ 9ನೇ ಸ್ಥಾನ ಪಡೆಯುವ ಮೂಲಕ ಅಗ್ರ 10ರಲ್ಲಿರುವ ನಾಲ್ಕನೇ ಆಸ್ಟ್ರೇಲಿಯಾ ಬ್ಯಾಟರ್ ಆಗಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ 12 ಮತ್ತು 13 ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.ಅಪಘಾತದಿಂದಾಗಿ ಕ್ರಿಕೆಟ್‌ನಿಂದ ದೂರವಿದ್ದರೂ, ರಿಷಬ್ ಪಂತ್ 10ನೇ ಸ್ಥಾನದಲ್ಲಿದ್ದಾರೆ. ಅಗ್ರ ಹತ್ತರೊಳಗೆ ಸ್ಥಾನ ಪಡೆದ ಭಾರತದ ಏಕೈಕ ಬ್ಯಾಟರ್ ಅವರು. ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ 37ನೇ ಸ್ಥಾನಕ್ಕೆ ಜಿಗಿದಿದ್ದು, ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 94ನೇ ಸ್ಥಾನ ಪಡೆದುಕೊಂಡಿದ್ದಾರೆ.
ಮಹತ್ವದ ಫೈನಲ್ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ 4 ಮತ್ತು 1 ವಿಕೆಟ್ ಪಡೆದ ವೇಗಿ ಮೊಹಮ್ಮದ್ ಸಿರಾಜ್, ಬೋಲ್ಯಾಂಡ್‌ಗಿಂತ ನಾಲ್ಕು ಸ್ಥಾನ ಹಿಂದಿದ್ದಾರೆ. ಆಸ್ಟ್ರೇಲಿಯದ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಎರಡು ಸ್ಥಾನ ಮೇಲಕ್ಕೇರಿ ಇಂಗ್ಲೆಂಡ್ ಬೌಲರ್ ಆಲಿ ರಾಬಿನ್ಸನ್ (777) ಅವರೊಂದಿಗೆ ಆರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೋಲ್ಯಾಂಡ್ ಐದು ಸ್ಥಾನ ಬಡ್ತಿ ಪಡೆದು 36ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 209 ರನ್‌ಗಳ ಅಂತರದಿಂದ ಬೃಹತ್ ಗೆಲುವು ಸಾಧಿಸಿತು. 174 ಎಸೆತಗಳಲ್ಲಿ 163 ರನ್ ಗಳಿಸಿದ ಟ್ರಾವಿಸ್ ಹೆಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ವಿಭಾಗ