ಕನ್ನಡ ಸುದ್ದಿ  /  Sports  /  Cricket News Sakkath Aata Column Yashasvi Jaiswal Debut Century Successful Life Story India Sports News In Kannada Prs

Yashasvi Jaiswal: ದನದ ಕೊಟ್ಟಿಗೆಯಲ್ಲಿ ಮಲಗಿ, ಹೊಟ್ಟೆಪಾಡಿಗೆ ಪಾನಿಪುರಿ ಮಾರ್ತಿದ್ದ; ಈಗ ಜಗತ್ತೇ ಈತನನ್ನ ನೋಡ್ತಿದೆ, ಇದೇ ಅಲ್ವಾ ಯಶಸ್ಸು!

Yashasvi Jaiswal: ಇದು ಆರಂಭವಷ್ಟೆ..- ಈ ಮಾತನ್ನು ಶತಕ ಸಿಡಿಸಿದ ಬಳಿಕ ಸ್ವತಃ ಯಶಸ್ವಿ ಜೈಸ್ವಾಲ್​ ಹೇಳಿದ್ದು. ತಾಳ್ಮೆ, ಸಂಯಮ, ನಿರ್ದಿಷ್ಟ ಗುರಿ, ಆತ್ಮವಿಶ್ವಾಸ, ನಂಬಿಕೆ.. ಇವು ಯಶಸ್ವಿ ಯಶಸ್ಸಿನ ಆಯುಧಗಳು. ಈಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಪುಟ್ಟ ಹೆಜ್ಜೆಗಳನ್ನಿಟ್ಟ ಜೈಸ್ವಾಲ್​ ಜೀವನ ಹೀಗಿತ್ತು ನೋಡಿ.

ಯಶಸ್ವಿ ಜೈಸ್ವಾಲ್​
ಯಶಸ್ವಿ ಜೈಸ್ವಾಲ್​

ಎಲ್ಲೂ ನೋಡಿದರೂ ‘ಯಶಸ್ವಿ‘ ಜೈಸ್ವಾಲ್​ ಅವರದ್ದೇ ಮಾತು. ಪ್ರಶಂಸೆಯ ಸುರಿಮಳೆ ಈಗಲೂ ನಿಲ್ಲುತ್ತಿಲ್ಲ. ಒಂದು ಶತಕದ ಕುರಿತೇ ಚರ್ಚೆ. ಈಗಲೂ ಕಣ್ಣೆದುರಿಗೆ ಬರುತ್ತಿವೆ ಆತನ ಬ್ಯಾಟ್​​ನಿಂದ ಸಿಡಿದ ಒಂದೊಂದು ರನ್. ಯಾರೇ ಆಗಿರಲಿ, ಪದಾರ್ಪಣೆ ಪಂದ್ಯದಲ್ಲಿ ಕೊಂಚ ಒತ್ತಡ, ಗೊಂದಲ, ಭಯಗೊಳ್ಳುವುದು ಸಹಜ. ಆದರೆ, ಯಶಸ್ವಿ ಕಣ್ಣಲ್ಲಿ ಭಯ ಈ ಎಲ್ಲದಕ್ಕೂ ಜಾಗವೇ ಇರಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಯಾವುದೇ ಅಡೆತಡೆಗಳಿಲ್ಲದೆ ನದಿಯಲ್ಲಿ ನೀರು ಹರಿದಂತೆ ಆತನಲ್ಲಿ ಆತ್ಮ ವಿಶ್ವಾಸ ಉಕ್ಕಿ ಹರಿಯುತ್ತಿತ್ತು. ಮೂರಕ್ಷದ ನಂಬಿಕೆಯೇ ಆತನ ಧೈರ್ಯದ ವಸ್ತುವಾಗಿತ್ತು. ಅದೇ ಅವನನ್ನು ಮೂರಂಕಿ ಗೆರೆಯನ್ನು ದಾಟಿಸುವಂತೆ ಮಾಡಿತು. ಶತಕ ಸಿಡಿಸಿ ರಾತ್ರೋರಾತ್ರಿ ಸೂಪರ್​​ ಸ್ಟಾರ್ ಪಟ್ಟ ದಕ್ಕಿಸಿಕೊಂಡ 21 ವರ್ಷದ ಈ ಯುವಕ, ದಾಟಿದ ಮೂರಂಕಿಯು ಕೆಲ ಹಿರಿಯ ಆಟಗಾರರ ಎದೆಬಡಿತ ಹೆಚ್ಚಿಸಿರುವುದು ಅಚ್ಚರಿ.

ಐಪಿಎಲ್​ ಎಂಬುದು ತಪ್ಪು

ಹಿರಿಯ ಆಟಗಾರರು, ನಾನಿನ್ನೂ ತಂಡಕ್ಕೆ ಮರುಳುತ್ತೇನಾ ಎಂಬ ಪ್ರಶ್ನೆಯನ್ನು ತಮ್ಮನ್ನು ತಾವೇ ಕೇಳಿಕೊಳ್ಳುವಂತೆ ಮಾಡಿದೆ. ಅವರ ಭದ್ರವಾದ ಕುರ್ಚಿಯನ್ನೇ ಅಲುಗಾಡಿಸಿದೆ. ಸದ್ಯ ಚರ್ಚೆಯ ವಿಷಯ ಏನೆಂದರೆ, ಐಪಿಎಲ್​​ ಭರ್ಜರಿ ಪ್ರದರ್ಶನವೇ, ಜೈಸ್ವಾಲ್​ಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿತೆಂದು. ನಿಜ, ಐಪಿಎಲ್​ ಅನ್ನು ಇಲ್ಲಿ ತೆಗೆದು ಹಾಕುವಂತಿಲ್ಲ. ಆದರೆ, ಅದಕ್ಕೆ ಕಾರಣವೇ ಬೇರೆ ಇದೆ.

ಐಪಿಎಲ್​ ಎಂಬುದು ಕಲ್ಪನೆಯಷ್ಟೆ. ಹೇಗಿದೆ ಅಂದರೆ ಬುಡವನ್ನೇ ಬಿಟ್ಟು, ರೆಂಬೆ-ಕೊಂಬೆಗಳೇ ಗಟ್ಟಿಯಾಗಿ ನಿಲ್ಲಲು ಕಾರಣ ಎನ್ನುವಂತಾಗಿದೆ. ಮತ್ತೊಂದು ಆಯಾಮದಲ್ಲಿ ನೋಡಿದರೆ, ಆಯ್ಕೆಯಾಗಿದ್ದು ಐಪಿಎಲ್​​ನಿಂದ ಎನ್ನುವುದೇ ತಪ್ಪು. ಇದರ ಮೂಲ ಎಲ್ಲಿಯದ್ದು ಗೊತ್ತೇ? ಅಂಡರ್​-19 ವಿಶ್ವಕಪ್​. ಈ ವೇದಿಯಲ್ಲೇ ತನ್ನ ಸಾಮರ್ಥ್ಯ ಎಂತಹದ್ದು ಎಂಬುದನ್ನು ಜಗತ್ತಿಗೆ ತೋರಿಸಿದ್ದು.

ಜಗತ್ತಿಗೆ ಪರಿಚಯವಾದ

ಆಡಿದ್ದು, 6 ಪಂದ್ಯ. ಬ್ಯಾಟಿಂಗ್​ ಸರಾಸರಿ 133.33. ಸಿಡಿಸಿದ್ದು 400 ರನ್​. ನೀವೇ ಯೋಚಿಸಿ, ಇದೊಂದು ಅದ್ಭುತ ಅಲ್ಲವೇ. ಇಲ್ಲಿ ಯಶಸ್ವಿ ಬೀಸಿದ ಬ್ಯಾಟ್​​ನಿಂದ ಬಂದ ಒಂದೊಂದು ರನ್​, ಭವಿಷ್ಯದ ಸೂಪರ್​ ಸ್ಟಾರ್​ ಎಂದೇ ಒತ್ತಿಒತ್ತಿ ಹೇಳುತ್ತಿತ್ತು. ಅಷ್ಟು ಸೊಗಸಾಗಿತ್ತು ಆತನ ಬ್ಯಾಟಿಂಗ್ ವೈಖರಿ. 105*, 62, 57*, 29*, 59, 88.. ಇದು ಆತ ಅಂಡರ್​​-19 ವರ್ಲ್ಡ್​​​ಕಪ್​ನಲ್ಲಿ ಗಳಿಸಿದ ಸ್ಕೋರ್. ಇದೆಲ್ಲವೂ ತನ್ನ ಶ್ರಮಕ್ಕೆ ಸಿಕ್ಕ ಪ್ರತಿ ಫಲ.

ನೇರವಾಗಿ ಕ್ರಿಕೆಟ್​​​ ಮೈದಾನಕ್ಕೆ ಖ್ಯಾತಿ ಪಡೆದಿದ್ದಿಲ್ಲ. ಆದರೆ, ಇದರ ಹಿಂದೆಯೂ ಆತನಿಗೊಂದು ಕರುಣಾಜನಕ ಕಥೆಯಿದೆ. ಹೊಟ್ಟೆಪಾಡಿಗೆ ಪಾನಿಪೂರಿ ಮಾರುತ್ತಿದ್ದವ, ಇಂದು ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಮುಂಬೈನ ಕಲಬಾದೇವಿ ಎಂಬ ಸ್ಥಳ. ಹಳೆ ಪುಸ್ತಕಗಳನ್ನು ಮಾರುವ ಪುಟ್ಟ ಗಲ್ಲಿ. ಅಲ್ಲೊಂದು ದನ ಕೊಟ್ಟಿಗೆ ಸಹ ಇತ್ತು. ಅಲ್ಲಿ ಮಲಗುತ್ತಿದ್ದವನೇ ಈ ಭವಿಷ್ಯದ ಸೂಪರ್ ಸ್ಟಾರ್.

ಕರುಣಾಜನಕ ಕಥೆ

ಕ್ರಿಕೆಟರ್​ ಆಗಬೇಕೆಂಬ ಕನಸು ಸಣ್ಣ ವಯಸ್ಸಲ್ಲೇ ಕವಲೊಡೆದಿತ್ತು. ಉತ್ತರ ಪ್ರದೇಶದ ಬದೋಹಿ ಎಂಬುದು ಇವರ ಊರು. ಕುಟುಂಬದ ಹಣಕಾಸಿನ ಪರಿಸ್ಥಿತಿ ತೀರಾ ದಯನೀಯವಾಗಿತ್ತು. ಪಾನಿಪೂರಿ ಮಾರುವುದೇ ತಂದೆಯ ಕಸುಬು. ಒಂದೆಡೆ ಮಗನಿಗೆ ಕ್ರಿಕೆಟ್​ ಅಂದರೆ ಹುಚ್ಚು. ಮನೆಯಲ್ಲೂ ಇದೇ ರೋದನೆ. ಆದರೆ, ಮಗನ ಕನಸು ನೆರವೇರಿಸಲು ತಂದೆ ಬೆಳೆಸಿದ್ದು ಮುಂಬೈ ಕಡೆ ಪ್ರಯಾಣ.

ಮುಂಬೈಗೆ ಬಂದ ತಂದೆಯೂ, ತನ್ನ ಗೆಳೆಯನ ಮನೆಯಲ್ಲಿ ಜೈಸ್ವಾಲ್​ರನ್ನು ಬಿಟ್ಟು ಹೋಗುತ್ತಾನೆ. ಕ್ರಿಕೆಟ್​ ಕಲಿಸುವ ಜವಾಬ್ದಾರಿ ಆತನಿಗೆ ಕೊಡುತ್ತಾನೆ. ಆ ಬಳಿಕ ತಂದೆಯ ಸ್ನೇಹಿತ ದನದ ಕೊಟ್ಟಿಗೆಯಲ್ಲಿ ಮಲಗಿಸಿದ್ದು, ಅಲ್ಲಿಂದ ಓಡಿಸುವುದು, ನಿದ್ದೆ, ಊಟವಿಲ್ಲದೆ ಮಾಡಿದ್ದು, ನಂತರ ಪಾನಿಪೂರಿ ವ್ಯಾಪಾರಿ ಬಳಿ ಕೆಲಸಕ್ಕೆ ಸೇರಿದ್ದು, ಹೊಟ್ಟೆಪಾಡಿಗೆ ಈ ಕೆಲಸ ಮಾಡಿದ್ದು.. ಎಲ್ಲವೂ ಇದೆ.

ಶತಕ ಸಿಡಿಸುವುದೇ ಅಭ್ಯಾಸ

ಸಾಕಷ್ಟು ಕಷ್ಟ ಎದುರಿಸಿದ್ದ 11ರ ಪೋರ, ತಂದೆಗೆ ಇದನ್ನೇನೂ ಹೇಳಿರಲಿಲ್ಲ ಎಂಬುದೇ ಅಚ್ಚರಿ. ಅದಾಗಲೇ ಪ್ರಬುದ್ಧತೆ ತೋರಿದ್ದ. ಇದರ ನಡುವೆಯೇ ತಮ್ಮ ದೈನಂದಿನ ಕ್ರಿಕೆಟ್ ಅಭ್ಯಾಸಕ್ಕೆಂದು ಆಜಾದ್ ಮೈದಾನದ ಕ್ರಿಕೆಟ್ ಗ್ರೌಂಡ್​ಗೆ ಹೋಗುತ್ತಿದ್ದ. ಆಡಿ ಆಡಿ ಎಲ್ಲರನ್ನೂ ಪರಿಚಯ ಮಾಡಿಕೊಂಡ. ಇಲ್ಲಿ ಶತಕ ಸಿಡಿಸುವುದನ್ನೇ ಆತ ಅಭ್ಯಾಸ ಮಾಡಿಕೊಂಡಿದ್ದ. ಇದರಿಂದ ಆತನಿಗೆ ಬೇಡಿಕೆಯೂ ಹೆಚ್ಚಾಗಿತ್ತು.

ತಂದೆ ಕಳುಹಿಸುತ್ತಿದ್ದ ಹಣವು ಏನಕ್ಕೂ ಸಾಲುತ್ತಿರಲಿಲ್ಲ. ಹುಬ್ಬೇರುವಂತ ಪ್ರದರ್ಶನ ನೀಡುತ್ತಿದ್ದ. ಶತಕ ಸಿಡಿಸುವುದನ್ನೇ ಕಸುಬು ಮಾಡಿಕೊಂಡಿದ್ದ. ತನ್ನನ್ನು ಹಿರಿಯ ಆಟಗಾರರೇ ತಂಡಕ್ಕೆ ಕರೆಸಿಕೊಂಡು ಶತಕ ಹೊಡೆದರೆ 200 ರೂಪಾಯಿ ಕೊಡ್ತೇವೆ ಎಂದು ಹೇಳಿದ್ದರಂತೆ. ಆಗ ಆಡುತ್ತಿದ್ದದ್ದು ದುಡ್ಡಿಗೇ ಆದರೂ ಗುರಿ ಇದ್ದದ್ದು ಭಾರತದಲ್ಲಿ ಕಾಣಿಸಿಕೊಳ್ಳುವುದು. ಹೀಗೇ ಅಮೋಘ ಆಟವಾಡುತ್ತಿದ್ದ ಜೈಸ್ವಾಲ್ ಬಿದ್ದದ್ದು ಸ್ಥಳೀಯ ತರಬೇತುದಾರ ಜ್ವಾಲಾ‌ ಸಿಂಗ್ ಎಂಬವರ ಕಣ್ಣಿಗೆ.

ಜ್ವಾಲಾ ಸಿಂಗ್​ ಗಾಡ್ ಫಾದರ್

ಕಣ್ಣಿಗೆ ಬೀಳುವುದಕ್ಕೂ ಮೊದಲು ಜೈಸ್ವಾಲ್​ ಬ್ಯಾಟಿಂಗ್​​ ಕಥೆ ಕೇಳಿದ್ದರು. ನಂತರ ಆಟವನ್ನು ಕಣ್ತುಂಬಿಕೊಂಡು ದಂಗಾಗಿದ್ದರು. ಜೈಸ್ವಾಲ್‌ ಅವರಲ್ಲಿ ನನ್ನನ್ನು ಕಂಡೆ ಎಂದಿದ್ದರು ಜ್ವಾಲಾ ‌ಸಿಂಗ್. ಮತ್ತೊಂದು ವಿಶೇಷ ಅಂದರೆ ಕೋಚ್​ ಕೂಡ ಉತ್ತರ ಪ್ರದೇಶದವರೇ. ಕ್ರಿಕೆಟರ್ ಆಗಬೇಕೆಂಬ ಕನಸಿನ ಮೂಟೆ ಹೊತ್ತು ಮುಂಬೈಗೆ ಬಂದಿದ್ದ ಯಶಸ್ವಿಗೆ ಜ್ವಾಲಾ​ ಸಿಂಗ್​ ಗಾಡ್​ ಫಾದರ್ ಆದರು.

ಅಲ್ಲಿಂದ ನಡೆದಿದೆಲ್ಲಾ ಇತಿಹಾಸ. ಜ್ವಾಲಾಸಿಂಗ್ ಕ್ರಿಕೆಟ್​ನಲ್ಲಿ ಪಳಗಿಸುತ್ತಾನೆ. ತನ್ನ 17ನೇ ವಯಸ್ಸಿನಲ್ಲಿ ಮುಂಬೈ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುತ್ತಾನೆ. ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಶತಕ ಸಿಡಿಸುವುದನ್ನೇ ಖಯಾಲಿ ಮಾಡಿಕೊಂಡಿದ್ದ ಈತ, ತಾನಾಡಿದ ಎಲ್ಲಾ ಟೂರ್ನಿಗಳಲ್ಲೂ ಸೆಂಚುರಿ ಬಾರಿಸಿದ್ದಾನೆ. ರಣಜಿಯಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸವಾಲು..

ಅಂಡರ್​​​-19 ವಿಶ್ವಕಪ್​ನಲ್ಲಿ ಶತಕ ಬಾರಿಸುವುದನ್ನು ಮುಂದುವರೆಸಿದ, ರಣಜಿ, ಇರಾನಿ ಕಪ್, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟೂರ್ನಿ, ಐಪಿಎಲ್​, ಇಂಡಿಯಾ ‘ಎ’ ಪರ, ಈಗ ಭಾರತ ರಾಷ್ಟ್ರೀಯ ತಂಡದಲ್ಲೂ ಈ 21ರ ಪೋರ ಶತಕ ಸಿಡಿಸಿ ಮಿಂಚಿದ್ದಾನೆ. ಹಿರಿಯ ಆಟಗಾರರಿಗೇ ಸವಾಲು ಎಸೆದಿರುವ ಈ ಯುವಕ, ಜವಾಬ್ದಾರಿ ಹೆಚ್ಚಿಸಿಕೊಂಡಿದ್ದಾನೆ. ಹಾಗಾಗಿ ಈ ಜಬಾವ್ದಾರಿ ಉಳಿಸಿಕೊಳ್ಳುವುದೇ ದೊಡ್ಡ ಸವಾಲು.

ಒಂದಂತೂ ಸತ್ಯ. ತಾನಾಡಿರುವ ಎಲ್ಲಾ ಟೂರ್ನಿಗಳಲ್ಲೂ ಶತಕ ತಪ್ಪಿಸದೆ ಇನ್ನಿಂಗ್ಸ್​ ಕಟ್ಟುತ್ತಿದ್ದ ಯಶಸ್ವಿಯ ಯಶಸ್ಸಿಗೆ ಸತತ ಪರಿಶ್ರಮ, ತಾಳ್ಮೆ, ಸಂಯಯವೇ ಕಾರಣ. ಈಗ ವೆಸ್ಟ್​ ಇಂಡೀಸ್​​ 171 ರನ್​ ಸಿಡಿಸಿ ದಾಖಲೆ ಬರೆದಿರುವ ಜೈಸ್ವಾಲ್, ಮುಂದೆ ಅದನ್ನು 200, 300, 400ಗಳಾಗಿ ಪರಿವರ್ತಿಸಲಿ. ದೊಡ್ಡ ಸ್ಟಾರ್​ ಆಟಗಾರನಾಗಲಿ.

ಸ್ಪೂರ್ತಿಯ ಚಿಲುಮೆ

ಎಷ್ಟೋ ಮಂದಿಗೆ ಸ್ವಲ್ಪ ಸ್ಟಾರ್​ ಪಟ್ಟ ಸಿಕ್ಕರೂ, ಅವರನ್ನು ಕಬ್ಬಿಣದ ಸರಪಳಿ ಹಾಕಿ ಎಳೆದರೂ ಕೈಗೆ ಸಿಗಲ್ಲ. ಆದರೆ, ಯಶಸ್ವಿ ಜೀವನ ತುಂಬಾ ವಿಭಿನ್ನ. ಹಿರಿಯರನ್ನು ಕಂಡರೆ ಸದಾ ಗೌರವ. ಕಲಿಯುವ ಹಂಬಲ, ಹೊಸತನದ ಕಡೆ ತುಡಿತ, ತಪ್ಪುಗಳನ್ನು ತಿದ್ದಿಕೊಳ್ಳುವುದರ ಕಡೆ ಗಮನ. ಅಚಲ ವಿಶ್ವಾಸ, ದಿಟ್ಟ ಗುರಿ, ಗೆಲ್ಲೋ ಜಿದ್ದು ಇದ್ದರೆ, ಖಂಡಿತ ಯಶಸ್ಸು ನಮ್ಮದಾಗುತ್ತದೆ ಎಂಬುದಕ್ಕೆ ಈ ಯಶಸ್ವಿ ಜೈಸ್ವಾಲ್ ಉತ್ತಮ ಉದಾಹರಣೆ. ಈತನ ಕಥೆ ಯುವ ಪೀಳಿಗೆಗೆ ಮಾದರಿ, ಸ್ಫೂರ್ತಿ. ಆಲ್​ ದಿ ಬೆಸ್ಟ್​ ಯಶಸ್ವಿ.

ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ ht.kannada@htdigital.in ಗೆ ಈಮೇಲ್​ ಮಾಡಿ.

ಸಂಬಂಧಿತ ಲೇಖನ