ZIM vs WI: ಕ್ರಿಕೆಟ್​ ಶಿಶು ಜಿಂಬಾಬ್ವೆ ಎದುರು ಸೋತ ವೆಸ್ಟ್​ ಇಂಡೀಸ್​ಗೆ ಮುಖಭಂಗ; ಸಿಕಂದರ್ ಆಲ್​ರೌಂಡ್ ಆಟಕ್ಕೆ ಬೆದರಿದ ಕೆರಿಬಿಯನ್ನರು
ಕನ್ನಡ ಸುದ್ದಿ  /  ಕ್ರೀಡೆ  /  Zim Vs Wi: ಕ್ರಿಕೆಟ್​ ಶಿಶು ಜಿಂಬಾಬ್ವೆ ಎದುರು ಸೋತ ವೆಸ್ಟ್​ ಇಂಡೀಸ್​ಗೆ ಮುಖಭಂಗ; ಸಿಕಂದರ್ ಆಲ್​ರೌಂಡ್ ಆಟಕ್ಕೆ ಬೆದರಿದ ಕೆರಿಬಿಯನ್ನರು

ZIM vs WI: ಕ್ರಿಕೆಟ್​ ಶಿಶು ಜಿಂಬಾಬ್ವೆ ಎದುರು ಸೋತ ವೆಸ್ಟ್​ ಇಂಡೀಸ್​ಗೆ ಮುಖಭಂಗ; ಸಿಕಂದರ್ ಆಲ್​ರೌಂಡ್ ಆಟಕ್ಕೆ ಬೆದರಿದ ಕೆರಿಬಿಯನ್ನರು

ZIM vs WI: ಸಿಕಂದರ್​ ರಾಜಾ ಅವರ ಅದ್ಭುತ ಆಲ್​ರೌಂಡ್​ ಪ್ರದರ್ಶನದಿಂದ ಜಿಂಬಾಬ್ವೆ ತಂಡದ ಎದುರು ವೆಸ್ಟ್​ ಇಂಡೀಸ್​ ತಂಡವು 35 ರನ್​ಗಳ ಅಂತರದಿಂದ ಶರಣಾಗಿದೆ. ಈ ಗೆಲುವಿನೊಂದಿಗೆ ಸೂಪರ್ ಸಿಕ್ಸ್​ ಹಂತಕ್ಕೆ ತಲುಪಿದೆ.

ಕ್ರಿಕೆಟ್​ ಶಿಶು ಜಿಂಬಾಬ್ವೆ ಎದುರು ಸೋತ ವೆಸ್ಟ್​ ಇಂಡೀಸ್
ಕ್ರಿಕೆಟ್​ ಶಿಶು ಜಿಂಬಾಬ್ವೆ ಎದುರು ಸೋತ ವೆಸ್ಟ್​ ಇಂಡೀಸ್ (ICC Twitter)

ವೆಸ್ಟ್​ ಇಂಡೀಸ್​ ತಂಡಕ್ಕೆ ಜಿಂಬಾಬ್ವೆ ತಂಡವು (Zimbabwe vs West Indies) ಆಘಾತ ನೀಡಿದೆ. ಐಸಿಸಿ ಏಕದಿನ ವಿಶ್ವಕಪ್​ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕೆರಿಬಿಯನ್ನರನ್ನು ಮಣಿಸಿದ ಕ್ರಿಕೆಟ್​ ಶಿಶು ಜಿಂಬಾಬ್ವೆ, ಸೂಪರ್ ಸಿಕ್ಸ್​ಗೆ ಪ್ರವೇಶ ನೀಡಿದೆ. ಹರಾರೆ ಸ್ಪೋರ್ಟ್ಸ್​​ ಕ್ಲಬ್​ನಲ್ಲಿ ನಡೆದ ಈ ಪಂದ್ಯದಲ್ಲಿ ಜಿಂಬಾಬ್ವೆ ನೀಡಿದ ಅದ್ಭುತ ಪ್ರದರ್ಶನ ಎದುರು ವಿಂಡೀಸ್​ ತಂಡವು 35 ರನ್​ಗಳಿಂದ ಸೋಲಿನ ಮುಖಭಂಗಕ್ಕೆ ಒಳಗಾಗಿದೆ.

ಸಿಕಂದರ್ ರಾಜಾ ಅವರ ಅದ್ಭುತ ಆಲ್​ರೌಂಡ್​ ಆಟದ ಮುಂದೆ ಮಂಕಾದ ವೆಸ್ಟ್​ ಇಂಡೀಸ್​, ಲೀಗ್​​ನ ಅಂತಿಮ ಪಂದ್ಯದಲ್ಲಿ ಜೂನ್ 26ರಂದು ನೆದರ್​ಲೆಂಡ್​ ವಿರುದ್ಧ ಸೆಣಸಾಟ ನಡೆಸಲಿದೆ. ಮೊದಲೆರಡು ಪಂದ್ಯಗಳಲ್ಲಿ ಯುನೈಟೆಡ್​ ಸ್ಟೇಟ್ಸ್​ ಮತ್ತು ನೇಪಾಳ ವಿರುದ್ಧ ಗೆಲುವು ಸಾಧಿಸಿದ್ದ ಕೆರಿಬಿಯನ್ನರು, ಜಿಂಜಾಬ್ವೆ ಎದುರು ಶರಣಾಗಿದೆ.

ಉತ್ತಮ ಆರಂಭದ ನಡುವೆಯೂ ಆಘಾತ

ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ, ಉತ್ತಮ ಆರಂಭ ಪಡೆಯಿತು. ಜಾಯ್ಲಾರ್ಡ್ ಗುಂಬಿ ಮತ್ತು ಕ್ರೆಗ್​ ಎರ್ವಿನ್​ ಮೊದಲ ವಿಕೆಟ್​ಗೆ 63 ರನ್​ಗಳ ಜೊತೆಯಾಟವಾಡಿದರು. ಈ ಜೋಡಿಗೆ ಕೀಮೋ ಪೌಲ್​ ಬೇರ್ಪಡಿಸಿತು. ಗುಂಬಿ 26 ರನ್​ ಗಳಿಸಿ ಹೊರ ನಡೆದರು. ಬಳಿಕ ಕಣಕ್ಕಿಳಿದ ವೆಸ್ಲಿ ಮಾಧೆವೆರೆಯನ್ನು 2 ರನ್​ಗೆ ಅಕೇಲಾ ಹೊಸೈನ್​ ಪೆವಿಲಿಯನ್​​ಗೆ ಕಳುಹಿಸಿದರು.

ಬ್ಯಾಕ್​ ಟು ವಿಕೆಟ್​ ಕಳೆದುಕೊಂಡರೂ ದಿಟ್ಟ ಹೋರಾಟ ನಡೆಸುತ್ತಿದ್ದ ಎರ್ವಿನ್​ಗೆ ರಸ್ಟನ್​ ಚೇಸ್​​ ಆಘಾತ ನೀಡಿದರು. ಅರ್ಧಶತಕದ ಅಂಚಿನಲ್ಲಿ ಎರ್ವಿನ್ (47)​ ಎಡವಿದರು. ಬಳಿಕ ಸೀನ್​ ವಿಲಿಯಮ್ಸ್ 23 ರನ್​ ಗಳಿಸಿ ಆಟ ಮುಗಿಸಿದರು. ಇದರೊಂದಿಗೆ 112ಕ್ಕೆ ಅಗ್ರ ನಾಲ್ಕು ವಿಕೆಟ್​ಗಳು ಕಳೆದುಕೊಂಡು ಜಿಂಬಾಬ್ವೆ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಸಿಕಂದರ್​ ರಾಜಾ ಮತ್ತು ರಿಯಾನ್ ಬರ್ಲ್ ನೆರವಾದರು.

ತಲಾ ಅರ್ಧಶತಕ ಸಿಡಿಸಿದ ಬರ್ಲ್-ರಾಜಾ

ವೆಸ್ಟ್ ಇಂಡೀಸ್​​​​ ಬೌಲರ್​ಗಳಿಗೆ ಕಾಡಿದ ಈ ಜೋಡಿ, 5ನೇ ವಿಕೆಟ್​ಗೆ 87 ರನ್​ಗಳ ಜೊತೆಯಾಟವಾಡಿತು. ಅಷ್ಟೇ ಅಲ್ಲದೆ, ಇಬ್ಬರೂ ಕೂಡ ಅರ್ಧಶತಕ ಸಿಡಿಸಿ ತಂಡದ ಮೊತ್ತ ಏರಿಸಿದರು. ರಿಯಾನ್​ ಬರ್ಲ್​, 57 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್​​ ನೆರವಿನಿಂದ 50 ರನ್​ ಗಳಿಸಿದರೆ, ಸಿಕಂದರ್​ ರಾಜಾ 58 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​​ಗಳ ನೆರವಿನಿಂದ 68 ರನ್​ ಚಚ್ಚಿದರು.

268ಕ್ಕೆ ಆಲೌಟ್

ಸಿಕಂದರ್ ರಾಜಾ ಮತ್ತು ಬರ್ಲ್​ ಔಟಾದ ಬೆನ್ನಲ್ಲೇ ಕ್ಲೈವ್ ಮಂದಡೆ (5), ಮಸಕಾಜ (6), ನಾಗಾರವ (4), ಮುಜರಬಾನಿ (11*), ಚಾತರ 8 ರನ್ ಗಳಿಸಿ ಔಟಾದರು. ಪರಿಣಾಮ 49.5 ಓವರ್​​ಗಳಲ್ಲಿ 268ಕ್ಕೆ ಕುಸಿಯಿತು. ವಿಂಡೀಸ್ ಪರ, ಕೀಮೋ ಪೌಲ್ 3 ವಿಕೆಟ್, ಅಲ್ಜಾರಿ ಜೋಸೆಫ್, ಅಕೇಲಾ ಹೊಸೈನ್ ತಲಾ 2 ವಿಕೆಟ್, ಕೈಲ್ ಮೇಯರ್ಸ್, ರಸ್ಟನ್ ಚೇಸ್ ತಲಾ 1 ವಿಕೆಟ್​ ಪಡೆದರು.

ಕೈ ಹಿಡಿಯಲಿಲ್ಲ ಬ್ಯಾಟರ್ಸ್​

ಇನ್ನೂ 269 ರನ್​ಗಳ ಸವಾಲಿನ ಟಾರ್ಗೆಟ್​ ಬೆನ್ನತ್ತಿದ ವೆಸ್ಟ್​ ಇಂಡೀಸ್​, ಸಾಧಾರಣ ಆರಂಭ ಪಡೆಯಿತು. ಬ್ರೆಂಡನ್​ ಕಿಂಗ್ 20 ರನ್​ ಗಳಿಸಿ ಜಾಗ ಖಾಲಿ ಮಾಡಿದರು. ಬಳಿಕ ಜಾನ್ಸನ್ ಚಾರ್ಲ್ಸ್​ ಕೂಡ 1 ರನ್​ಗೆ ಆಟ ಮುಗಿಸಿದರು. ಇದರ ನಡುವೆ ಕೈಲ್ ಮೇಯರ್ಸ್​ 50 ಅರ್ಧಶತಕ ಸಿಡಿಸಿ ಮಿಂಚಿದರು. ನಾಯಕ ಶೈ ಹೋಪ್ ಕೆಲ ಹೊತ್ತು ಮೇಯರ್ಸ್​ಗೆ ಸಾಥ್​ ನೀಡಿದರು. 30 ರನ್​ ಗಳಿಸಿ ಔಟಾದರು.

ಬಳಿಕ ನಿಕೋಲಸ್​ ಪೂರನ್​ ಮತ್ತು ರಸ್ಟನ್​ ಚೇಸ್​ ತಂಡಕ್ಕೆ ನೆರವಾಗುವ ಭರವಸೆ ತುಂಬಿದರು. ಆದರೆ, ಪೂರನ್​ 34 ರನ್​ ಗಳಿಸಿ ಸುಸ್ತಾದರೆ, ರಸ್ಟನ್​ ಚೇಸ್ 44 ರನ್​ ಗಳಿಸಿ ಔಟಾದರು. ಆ ಬಳಿಕ ಯಾರೊಬ್ಬರೂ ತಂಡಕ್ಕೆ ನೆರವಾಗಲಿಲ್ಲ. ಆರಂಭದಿಂದಲೂ ಮೇಲುಗೈ ಸಾಧಿಸಿದ ಜಿಂಬಾಬ್ವೆ ಬೌಲರ್​​ಗಳು, ವಿಂಡೀಸ್​​​ ಹಿಡಿತಕ್ಕೆ ಪಂದ್ಯವನ್ನು ಬಿಟ್ಟುಕೊಡಲೇ ಇಲ್ಲ. ಜೇಸನ್​ ಹೋಲ್ಡರ್​, ರಾವ್​ಮನ್​ ಪೊವೆಲ್​ ಕ್ರೀಸ್​ ಕಚ್ಚಿನಿಲ್ಲುವಲ್ಲಿ ವಿಫಲರಾದರು.

233ಕ್ಕೆ ಆಲೌಟ್​

ಅಂತಿಮವಾಗಿ 44.4 ಓವರ್​ಗಳಲ್ಲಿ 233 ರನ್​ಗಳಿಗೆ ಆಲೌಟ್​ ಆಯಿತು, ಬ್ಯಾಟಿಂಗ್​​ನಲ್ಲಿ ಮಿಂಚಿದ ಸಿಕಂದರ್ ರಾಜಾ 2 ವಿಕೆಟ್ ಪಡೆದರೆ, ಟೆಂಡೈ ಚಾತಾರ 3 ವಿಕೆಟ್​​, ಮುಜಾರಬಾನಿ, ನಾಗರವ ತಲಾ 2 ವಿಕೆಟ್​ ಕಬಳಿಸಿದರು. ಮಸಕಾಜ 1 ವಿಕೆಟ್​ ಪಡೆದರು. ಟೂರ್ನಿಯಲ್ಲಿ ಹ್ಯಾಟ್ರಿಕ್​ ಗೆಲುವಿನೊಂದಿಗೆ ಟೂರ್ನಿಯಲ್ಲಿ ಸೂಪರ್​ ಸಿಕ್ಸ್​ ಹಂತಕ್ಕೆ ಪ್ರವೇಶ ನೀಡಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.