ಕನ್ನಡ ಸುದ್ದಿ  /  Sports  /  Cricket News Smart Captain Ms Dhoni Should Join Politics After Retire Industrialist Anand Mahindra Gave The Advice Prs

Anand Mahindra: ಚಾಣಾಕ್ಷ ಕ್ಯಾಪ್ಟನ್​ ಎಂಎಸ್​ ಧೋನಿ ರಾಜಕೀಯ ಸೇರಬೇಕು, ಅವರು ಭವಿಷ್ಯದ ನಾಯಕ; ಸಲಹೆ ಕೊಟ್ಟ ಉದ್ಯಮಿ ಆನಂದ್​ ಮಹೀಂದ್ರಾ

ಮಹೀಂದ್ರಾ ಗ್ರೂಪ್ಸ್‌ ಸಂಸ್ಥೆಯ ಮುಖ್ಯಸ್ಥ ಆನಂದ್‌ ಮಹೀಂದ್ರಾ ಅವರು ತಮ್ಮ ಟ್ವಿಟರ್‌ ಖಾತೆಯ ಮೂಲಕ ಎಂಎಸ್​ ಧೋನಿಯನ್ನು ಹಾಡಿ ಹೊಗಳಿದ್ದಾರೆ. ಅತ್ಯಂತ ಯಶಸ್ವಿ ನಾಯಕ ಧೋನಿ ಅವರು ರಾಜಕೀಯ ಪ್ರವೇಶಿಸುವ ಕಡೆಗೆ ಆಲೋಚಿಸಬೇಕು ಎಂದು ಪೋಸ್ಟ್​ ಮಾಡಿದ್ದಾರೆ.

ಆನಂದ್​ ಮಹೀಂದ್ರಾ ಮತ್ತು ಎಂಎಸ್​ ಧೋನಿ
ಆನಂದ್​ ಮಹೀಂದ್ರಾ ಮತ್ತು ಎಂಎಸ್​ ಧೋನಿ

ಮಹೇಂದ್ರ ಸಿಂಗ್​ ಧೋನಿ (MS Dhoni) ವಿಶ್ವ ಕ್ರಿಕೆಟ್​​ ಕಂಡ ಅತ್ಯಂತ ಚಾಣಾಕ್ಷ ನಾಯಕ. ತನ್ನ ನಾಯಕತ್ವ ಎಂಥದ್ದೂ ಎಂಬುದನ್ನೂ ಜಗತ್ತಿಗೆ ಸಾರಿದ್ದಾರೆ. ನಾಯಕತ್ವದ ವಿಚಾರದಲ್ಲಿ ಧೋನಿಗೆ ಧೋನಿಯೇ ಸಾಟಿ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತರಾದರೂ ಐಪಿಎಲ್​​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ ಧೋನಿ. 41ನೇ ವರ್ಷದಲ್ಲೂ ಮೇ 28ರಂದು ನಡೆದ ಐಪಿಎಲ್​​​ ಫೈನಲ್​ಗೆ (IPL Final) ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ (CSK 2023) ದಾಖಲೆಯ 5ನೇ ಟ್ರೋಫಿ ಗೆದ್ದು ಕೊಟ್ಟರು.

ಅವರ ನಾಯಕತ್ವದ ನಡೆಗೆ ಇಡೀ ವಿಶ್ವವೇ ಸಲಾಂ ಎನ್ನುತ್ತಿದೆ. ಅದರಂತೆ ದೇಶದ ಪ್ರಖ್ಯಾತ ಉದ್ಯಮಿ ಉದ್ಯಮಿ ಆನಂದ್‌ ಮಹೀಂದ್ರಾ, ಧೋನಿ ಕ್ಯಾಪ್ಟನ್ಸಿ ಮಹಿಮೆಯನ್ನು ಕೊಂಡಾಡಿದ್ದಾರೆ. ಮಹೀಂದ್ರಾ ಗ್ರೂಪ್ಸ್‌ ಸಂಸ್ಥೆಯ ಮುಖ್ಯಸ್ಥ ಆನಂದ್‌ ಮಹೀಂದ್ರಾ (Industrialist Anand Mahindra) ಅವರು ತಮ್ಮ ಟ್ವಿಟರ್‌ ಖಾತೆಯ ಮೂಲಕ ಧೋನಿಯನ್ನು ಹಾಡಿ ಹೊಗಳಿದ್ದು, ಅವರ ಕುರಿತು ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದಾರೆ. ಅತ್ಯಂತ ಯಶಸ್ವಿ ನಾಯಕ ಎಂಎಸ್‌ ಧೋನಿ ರಾಜಕೀಯ ಪ್ರವೇಶಿಸುವ ಕಡೆಗೆ ಆಲೋಚಿಸಬೇಕು ಎಂದು ಪೋಸ್ಟ್​ ಮಾಡಿದ್ದಾರೆ.

ರಾಜಕೀಯ ಪ್ರವೇಶಿಸಬೇಕು ಎಂದ ಉದ್ಯಮಿ

ಎಂಎಸ್‌ ಧೋನಿ ಮತ್ತೊಂದು ಐಪಿಎಲ್​ ಆಡಲಿದ್ದಾರೆ ಎಂಬುದನ್ನು ಕೇಳಿ ಸಂತಸ ಪಟ್ಟ ಹಲವರಲ್ಲಿ ನಾನು ಕೂಡ ಒಬ್ಬ. ಆದರೆ, ಧೋನಿ ಅವರು ಶೀಘ್ರವೇ ರಾಜಕೀಯ ಜೀವನಕ್ಕೆ ಕಾಲಿಡಬೇಕು ಎಂದು ಆಶಿಸುತ್ತೇನೆ. ಜೇ ಪಾಂಡಾ ಅವರ ಅಧ್ಯಕ್ಷತೆಯ ಎನ್‌ಸಿಸಿ ಪರಿಶೀಲನಾ ಸಮಿತಿಯಲ್ಲಿ ಧೋನಿ ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಧೋನಿ ಬೌದ್ಧಿಕ ಚುರುಕುತನವು, ಕ್ರೀಡಾ ಕ್ಷೇತ್ರದಲ್ಲಿ ಅವರ ಚುರುಕುತನಕ್ಕೆ ಹೊಂದಿಕೆ ಆಗುತ್ತದೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದು ಹೇಳಿದ್ದಾರೆ.

ಧೋನಿ ಸಹಯೋಗದ ವ್ಯಕ್ತಿ. ವಿನಮ್ರತೆ ಅವರಲ್ಲಿ ತುಂಬಿ ತುಳುಕುತ್ತಿದೆ. ನೂತನ ಸಲಹೆಗಳನ್ನು ನೀಡುವಲ್ಲಿ ಪ್ರವೀಣರು. ಧೋನಿ ಒಬ್ಬ ಸ್ವಾಭಾವಿಕ ನಾಯಕ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ನಾಯಕತ್ವ ಎಂಬುದು ಅವರಲ್ಲಿ ನೈಸರ್ಗಿಕವಾಗಿ ಬೇರೂರಿಬಿಟ್ಟಿದೆ ಎಂದು ಆನಂದ್‌ ಮಹೀಂದ್ರಾ ಟ್ವೀಟ್‌ ಮೂಲಕ ಗುಣಗಾನ ಮಾಡಿದ್ದಾರೆ. ಅವರು ಸ್ಪಷ್ಟ ಭವಿಷ್ಯದ ನಾಯಕ ಎಂದಿರುವ ಆನಂದ್​ ಮಹೀಂದ್ರಾ, ಧೋನಿಗೆ ರಾಜಕೀಯ ಪ್ರವೇಶಿಸಲು ಸಲಹೆ ಕೊಟ್ಟಿದ್ದಾರೆ.

ಧೋನಿ ಫ್ಯಾನ್ಸ್​ ಆಸೆಯಂತೆ ನೆರವೇರಿತು

16ನೇ ಆವೃತ್ತಿಯ ಐಪಿಎಲ್​ನ ಫೈನಲ್​ನಲ್ಲಿ ಗುಜರಾತ್​ ಟೈಟಾನ್ಸ್‌ ವಿರುದ್ಧ ಸಿಎಸ್‌ಕೆ ರೋಚಕ ಗೆಲುವಿಗೆ ಕಾರಣವಾಗಿದ್ದು ಧೋನಿ ನಾಯಕತ್ವ. ಹಾಗಾಗಿ ಅವರ ನಾಯಕತ್ವದ ಪಾತ್ರದ ಕುರಿತು ಆನಂದ್ ಮಹೀಂದ್ರಾ ಮತ್ತಷ್ಟು ಬಣ್ಣಿಸಿದ್ದಾರೆ. ಐಪಿಎಲ್​ ಫೈನಲ್​ಗೂ ಮುನ್ನ ಎಲ್ಲರೂ ನನ್ನನ್ನು ಕೇಳಿದ್ದರು. ಯಾವ ತಂಡಕ್ಕೆ ಬೆಂಬಲಿಸುತ್ತೀರಿ ಎಂದು. ಶುಭ್ಮನ್​ ಗಿಲ್​ ಅವರ ಪ್ರತಿಭೆ ಮೇಲೆ ನನಗೆ ಅಪಾರ ವಿಶ್ವಾಸ ಇತ್ತು. ಅಂತಿಮ ಪಂದ್ಯದಲ್ಲೂ ಅಬ್ಬರಿಸುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಧೋನಿ ಫ್ಯಾನ್ಸ್​ ಆಸೆಯಂತೆ ಎಲ್ಲವೂ ನಡೆಯಿತು. ಚರಿತ್ರೆ ನಿರ್ಮಾಣವಾಯಿತು ಎಂದು ಆನಂದ್​ ಮಹಿಂದ್ರಾ ಹೇಳಿದ್ದಾರೆ.

ಫೈನಲ್​ ಪಂದ್ಯದಲ್ಲಿ ಶುಭ್ಮನ್​ ಗಿಲ್​ ಅದ್ಭುತ ಪ್ರದರ್ಶನ ತೋರಿದರು. ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಗಿಲ್​, ಚೆನ್ನೈ ವಿರುದ್ಧ 19 ಎಸೆತಗಳಲ್ಲಿ 39 ರನ್​ ಸಿಡಿಸಿದ್ದರು. ತನ್ನ ಅದ್ಭುತ ಬ್ಯಾಟಿಂಗ್​​ ಮೂಲಕ ಸಿಎಸ್​ಕೆ ತಂಡವನ್ನು ಕಾಡುತ್ತಿದ್ದ ಶುಭ್ಮನ್​ಗೆ ಧೋನಿ ತಮ್ಮ ಕೈಚಳದ ಮೂಲಕ ಸ್ಟಂಪೌಟ್​ ಮಾಡಿದರು. ಇದು ಅತ್ಯಂತ ವೇಗದ ಸ್ಟಂಪ್​ ಔಟ್​ ಎಂದು ಹೇಳಲಾಗುತ್ತಿದೆ. ಆ ಮೂಲಕ ಧೋನಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

5ನೇ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್​

ಐಪಿಎಲ್​ ಇತಿಹಾಸದಲ್ಲಿ ಚೆನ್ನೈ 5 ಬಾರಿ ಟ್ರೋಫಿ ಗೆದ್ದು, ಮುಂಬೈ ಇಂಡಿಯನ್ಸ್​ ದಾಖಲೆ ಸರಿಗಟ್ಟಿದೆ. ಈ ಫೈನಲ್​ನಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ನಡೆಸಿದ್ದ ಗುಜರಾತ್ ಟೈಟಾನ್ಸ್‌ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 214 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಮಳೆಯಿಂದ ಸ್ಥಗಿತಗೊಂಡಿದ್ದ 2ನೇ ಇನ್ನಿಂಗ್ಸ್​ ಮತ್ತೆ ಶುರುವಾಯಿತು. ಆಗ ಸಿಎಸ್‌ಕೆಗೆ 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ನೀಡಲಾಗಿತ್ತು. ಈ ಗುರಿ ಬೆನ್ನತ್ತಿದ ಚೆನ್ನೈ ಕೊನೇ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತು.