Yashasvi Jaiswal: 78 ಕೋಟಿ ರೂ ಮನೆ ಪ್ರವೇಶ ತಂದ ಅದೃಷ್ಟ; ಬಡವನಿಂದ ಕೋಟ್ಯಾದೀಶನ ತನಕ; ಟೆಸ್ಟ್ಗೆ ಡೆಬ್ಯೂ ಮಾಡಿದ ಜೈಸ್ವಾಲ್ ಜೀವನಗಾಥೆ
Yashasvi Jaiswal: ಈ ಎಡಗೈ ಕ್ರಿಕೆಟಿಗನ ಜೀವನ ಬದಲಾಗಿದ್ದು, 78 ಕೋಟಿ ರೂಪಾಯಿ ಮನೆಗೆ ತೆರಳಿದ ಬಳಿಕ. ಅಲ್ಲಿಂದ ಈ ಎಡಗೈ ಕಥೆ ಕುತೂಹಲಕಾರಿ ತಿರುವು ಪಡೆಯಿತು. ಹೇಗೆ ಎಂಬುದನ್ನು ಈಗ ವಿವರವಾಗಿ ತಿಳಿಯೋಣ.
ಉತ್ತರ ಪ್ರದೇಶದಿಂದ ಮುಂಬೈ ಬಂದ ಈತ ಪಾನಿಪೂರಿ ಮಾರುವುದರಿಂದ ಹಿಡಿದು ಕೋಟ್ಯದೀಶ ಆಗುವವರೆಗೆ.. ಐಪಿಎಲ್ನಿಂದ ಹಿಡಿದು ಟೀಮ್ ಇಂಡಿಯಾಗೆ ಪ್ರವೇಶ ನೀಡುವವರೆಗೂ... ಈ ಪ್ರಯಾಣ ಒಂದೇ ದಿನದಲ್ಲಿ ನಡೆದಿಲ್ಲ. ಹಲವು ವರ್ಷಗಳ ಕಾಯುವಿಕೆ ಮತ್ತು ಪರಿಶ್ರಮ. ಬಡವನಾಗಿ ಕಣಕ್ಕಿಳಿದು ಇಂದು ಕೋಟಿಗಟ್ಟಲೆ ತಲುಪುವಲ್ಲಿ ಯಶಸ್ವಿಯಾಗಿರುವ ಈ ಯುವ ಆಟಗಾರನ ಅದ್ಭುತ ಫಾರ್ಮ್ ಎಲ್ಲರನ್ನೂ ಹುಬ್ಬೇರಿಸುವುದು ಖಚಿತ.
ಎಷ್ಟೇ ಏರಿಳಿತಗಳನ್ನು ಎದುರಿಸಿದರೂ ತನ್ನ ಗುರಿ ಮುಟ್ಟುವವರೆಗೂ ಹೋರಾಡಿದ ಈ ಎಡಗೈ ಆಟಗಾರ ಕೊನೆಗೂ ಇಂದು ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾನೆ. ಗಲ್ಲಿಯಿಂದ ದಿಲ್ಲಿವರೆಗೆ ಐಪಿಎಲ್‌ನೊಂದಿಗೆ ವಿಶ್ವದಾದ್ಯಂತ ಮನ್ನಣೆ ಪಡೆದ ಈತ ಯಾರೂ ಅಲ್ಲ, ಯಶಸ್ವಿ ಜೈಸ್ವಾಲ್ (Yashavi Jaiswal).! ಪ್ರಸ್ತುತ ಎಲ್ಲಿ ನೋಡಿದರೂ ಈ ಹೆಸರೇ ಕೇಳಿ ಬರುತ್ತಿದೆ. ತಮ್ಮ ಅಸಾಧಾರಣ ಆಟದಿಂದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆ ಮಾಡಿದ್ದಾರೆ.
78 ಕೋಟಿ ರೂಪಾಯಿ ಮನೆ ಪ್ರವೇಶ ತಂದ ಲಕ್
ಈ ಎಡಗೈ ಕ್ರಿಕೆಟಿಗನ ಜೀವನಗಾಥೆಯನ್ನು ಕೇಳಿದರೆ ನಿಮ್ಮ ಮನ ಕಲಕುವುದು ಖಂಡಿತ. ಈ ಕಥೆಯಲ್ಲಿ ಒಂದು ಪ್ರಮುಖ ತಿರುವು ಅಂದರೆ, ಜೈಸ್ವಾಲ್ 78 ಕೋಟಿಯ ಮನೆ ಪ್ರವೇಶಿಸಿದ್ದು. ಹೌದು, ಆ ಮನೆ ಪ್ರವೇಶಿಸಿದ ಬಳಿಕವೇ ಈ ಎಡಗೈ ಆಟಗಾರನ ಕಥೆ ಕುತೂಹಲಕಾರಿ ತಿರುವು ಪಡೆಯಿತು. ಆ 78 ಕೋಟಿ ಮನೆ ಯಾರದ್ದು? ಅದು ಯಶಸ್ವಿ ಜೈಸ್ವಾಲ್ ಮನೆ ಅಲ್ಲವೇ? ಅಥವಾ ಅವನ ಸ್ನೇಹಿತರು ಅಥವಾ ಸಂಬಂಧಿಕರದ್ದೇ? ತಿರುವು ಪಡೆದಿದ್ದೇಗೆ ಎಂಬುದನ್ನು ಈ ಮುಂದೆ ವಿವರವಾಗಿ ನೋಡೋಣ.
ಆ ಮನೆ ಯಾರದ್ದು?
ಯಶಸ್ವಿಯ ಬದುಕನ್ನೇ ಬದಲಿಸಿದ ಆ ಮನೆಯ ವಿಶೇಷ ಏನು ಸೇರಿದಂತೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಟೀಮ್ ಇಂಡಿಯಾ ಪರ ಆಡುವ ಆಸೆಗೆ ಆರಂಭದ ಹಂತವೇ ಈ ಮನೆ ಕಾರಣ. ಆದರೆ, ಅದು ಯಶಸ್ವಿ ಮನೆ ಅಲ್ಲ. ಆ ಮನೆಯ ನಿವಾಸಿಯ ಸೂಚನೆ ಪಾಲಿಸಿದ ಬಳಿಕ ಯಶಸ್ವಿ ಜೈಸ್ವಾಲ್ ತನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಅಲ್ಲಿಂದ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಅಲ್ಲದೆ ಮಿಲಿಯನೇರ್ ಕೂಡ ಆದರು. ಅಂತಹ ಯಶಸ್ಸಿಗೆ ಪ್ರೇರಣೆ ನೀಡಿದವರು ಬೇರೆ ಯಾರೂ ಅಲ್ಲ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್.
ಜೈಸ್ವಾಲ್ 78 ಕೋಟಿ ಮನೆಗೆ ಬಂದಿದ್ದೇಗೆ?
ಮುಂಬೈನ ಬಾಂದ್ರಾದ ಪೆರಿ ಕ್ರಾಸ್ ರಸ್ತೆಯಲ್ಲಿರುವ ಸಚಿನ್ ತೆಂಡೂಲ್ಕರ್ ಅವರ 78 ಕೋಟಿ ರೂಪಾಯಿಯ ನಿವಾಸಕ್ಕೆ ಯಶಸ್ವಿ ಜೈಸ್ವಾಲ್ ತಲುಪಿದ್ದೇಗೆ? ಎಂಬುದು ತುಂಬಾ ಆಸಕ್ತಿದಾಯಕವಾಗಿದೆ. ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದ ಜೈಸ್ವಾಲ್ ಅವರನ್ನು ಅದೇ ತಂಡದಲ್ಲಿದ್ದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್, ತನ್ನ ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಜೈಸ್ವಾಲ್ರ ಯಶಸ್ಸಿನ ಹೋರಾಟದ ಕಥೆಯನ್ನು ಸ್ವತಃ ಸಚಿನ್ ಅವರೇ ಕೇಳಿ ಭಾವುಕರಾಗಿದ್ದರು.
ಸಚಿನ್ರಿಂದ ಬ್ಯಾಟಿಂಗ್ ಪಾಠ
ಶ್ರೀಲಂಕಾ ಪ್ರವಾಸಕ್ಕಾಗಿ ಭಾರತೀಯ ಅಂಡರ್-19 ತಂಡದಲ್ಲಿ ಯಶಸ್ವಿ ಆಯ್ಕೆ ಆಗಿದ್ದ. ಅರ್ಜುನ್ ತೆಂಡೂಲ್ಕರ್ ಕೂಡ ಆ ತಂಡದ ಸದಸ್ಯರಾಗಿದ್ದರು. ತಮ್ಮ ಮನೆಗೆ ಬಂದಿದ್ದ ಸಂದರ್ಭದಲ್ಲಿ ಜೈಸ್ವಾಲ್ಗೆ ಸಚಿನ್ ಬ್ಯಾಟಿಂಗ್ ಕುರಿತದಂತೆ ಕೆಲವು ಸಲಹೆಗಳನ್ನು ನೀಡಿದ್ದರು. ಒತ್ತಡ ನಿಭಾಯಿಸುವುದು, ಬೌಲರ್ಗಳ ವೇರಿಯೇಷನ್ ಬೌಲಿಂಗ್ ಅರಿಯುವುದು, ಪಿಚ್ ಮರ್ಮ ಅರಿಯುವುದು, ಕ್ರೀಸ್ ಕಚ್ಚಿ ನಿಲ್ಲುವುದು, ಬ್ಯಾಟಿಂಗ್ ಟೆಕ್ನಿಕ್ಸ್, ಗೇಮ್ ಪ್ಲಾನ್ಸ್, ಸಕಾರಾತ್ಮಕ ಅಂಶಗಳು.. ಹೀಗೆ ಹಲವು ಪ್ರೇರಣಾತ್ಮಕ ಅಂಶಗಳನ್ನು ಜೈಸ್ವಾಲ್ಗೆ ಸಚಿನ್ ಹೇಳಿದ್ದರು. ತನ್ನ ಯಶಸ್ಸಿಗೆ ಇದೇ ಪ್ರಮುಖ ಕಾರಣ ಎಂದು ಯುವ ಆಟಗಾರ ಎಷ್ಟೋ ಬಾರಿ ಹೇಳಿದ್ದರು.
ಯಶಸ್ವಿಗೆ ಬ್ಯಾಟ್ ಉಡುಗೊರೆ ನೀಡಿದ್ದ ಸಚಿನ್
ಸಚಿನ್ ಜೊತೆ ಯಶಸ್ವಿ ಜೈಸ್ವಾಲ್ ಭೇಟಿ, 45 ನಿಮಿಷಗಳ ಕಾಲ ನಡೆಯಿತು. ಯಶಸ್ವಿ ಸಂಭಾಷಣೆಯಲ್ಲಿ ಮುಳುಗಿದ್ದ ಅವರು ಛಾಯಾಚಿತ್ರ, ಸೆಲ್ಫಿ ತೆಗೆದುಕೊಳ್ಳುವುದನ್ನು ಮರೆತುಬಿಟ್ಟರು. ಆ ಸಭೆಯ ನಂತರ, ಸಚಿನ್ ತಮ್ಮ ಸಹಿ ಮಾಡಿದ ಬ್ಯಾಟ್ ಅನ್ನು ಯಶಸ್ವಿಗೆ ಉಡುಗೊರೆಯಾಗಿ ನೀಡಿದ್ದರು. ಆದರೆ, ಯಶಸ್ವಿ ಆ ಬ್ಯಾಟ್ ಹಿಡಿದು ಆಡುವುದಿಲ್ಲ. ಅದನ್ನು ತಮ್ಮ ಮನೆಯ ಶೋಕೇಶ್ನಲ್ಲಿಟ್ಟಿದ್ದಾರೆ. ಆ ಬ್ಯಾಟ್ ನೋಡಿದರೆ ಸಾಕು ಪ್ರೇರಣೆ, ಸ್ಫೂರ್ತಿ ಸಿಗುತ್ತದೆ ಎಂದು ಈ ಯುವ ಆಟಗಾರ ಹೇಳಿದ್ದರು.
ಸಚಿನ್ ಭೇಟಿಯ ಬಳಿಕ ದೇಶೀ ಕ್ರಿಕೆಟ್‌ಗೆ ಎಂಟ್ರಿ
78 ಕೋಟಿ ಮೌಲ್ಯದ ಬಾಂದ್ರಾದಲ್ಲಿರುವ ಸಚಿನ್ ಮನೆಗೆ ಹೋದ ಯಶಸ್ವಿ ಜೈಸ್ವಾಲ್ ಜೀವನ ಹೇಗೆ ಬದಲಾಯಿತು ಎಂಬುದನ್ನು ಈ ಮುಂದೆ ನೋಡೋಣ. ಈ ಘಟನೆ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಕ್ಷಿಪ್ರವಾಗಿ ಬೆಳವಣಿಗೆ ಕಾಣಲು ಸಾಧ್ಯವಾಯಿತು. ಸಚಿನ್ ಭೇಟಿಯ ನಂತರ ಜೈಸ್ವಾಲ್, ಜನವರಿ 2019ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಲಿಸ್ಟ್ ಎ ಚೊಚ್ಚಲ ಪಂದ್ಯವನ್ನಾಡಿದರು. ಆ ಬಳಿಕ 19 ವರ್ಷದೊಳಗಿನವರ ವಿಶ್ವಕಪ್‌ಗೆ ಆಯ್ಕೆಯಾದರು. ಈ ಟೂರ್ನಿಯಲ್ಲಿ ರನ್ ಪರ್ವತವನ್ನೇ ನಿರ್ಮಿಸಿದರು. ಆ ಬಳಿಕ ಯಶಸ್ವಿ ಕೀರ್ತಿ ನಿರಂತರವಾಗಿ ಹರಡುತ್ತಿದೆ.
ಐಪಿಎಲ್ನಲ್ಲೂ ಅಬ್ಬರ
ಪರಿಣಾಮ ಐಪಿಎಲ್-2020ರಲ್ಲಿ ಆತನ ಮೇಲೆ ಕೋಟಿ ಕೋಟಿ ಸುರಿಯಿತು. ಐಪಿಎಲ್ 2020ರಲ್ಲಿ ಯಶಸ್ವಿ ಜೈಸ್ವಾಲ್ 2.40 ಕೋಟಿಗೆ ರಾಜಸ್ಥಾನ್ ರಾಯಲ್ ಪಾಲಾಗಿದ್ದರು. ಅಂದಿನಿಂದ ಯಶಸ್ವಿ, ರಾಜಸ್ಥಾನ್ ಪರವೇ ಆಡುತ್ತಿದ್ದಾರೆ. 16ನೇ ಆವೃತ್ತಿಯ ಐಪಿಎಲ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಅಗ್ರ ಸ್ಕೋರರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ. ಇದೀಗ ಟೀಮ್ ಇಂಡಿಯಾದ ಆಡುವ 11ರ ಬಳಗದಲ್ಲಿ ಅವಕಾಶ ಪಡೆದಿರುವ ಯಶಸ್ವಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ದಿಗ್ಗಜರೇ ಎದುರು ನೋಡುತ್ತಿದ್ದಾರೆ. ಭಾರತದ ಪರವೂ ಅದ್ಭುತ ಪ್ರದರ್ಶನ ನೀಡಲಿ ಎಂಬುದೇ ಎಲ್ಲರ ಆಶಯ.
ವಿಭಾಗ