ಕನ್ನಡ ಸುದ್ದಿ  /  Sports  /  Cricket News Team India Drop Ravichandran Ashwin For Wtc Final 2023 Ganguly Michael Vaughan Manjrekar Response Jra

R Ashwin: ಡಬ್ಲ್ಯುಟಿಸಿ ಫೈನಲ್‌ನಲ್ಲಿ ಅಶ್ವಿನ್ ಕೈಬಿಟ್ಟ ಭಾರತ; ಅಚ್ಚರಿಯ ನಿರ್ಧಾರ ಎಂದ ಮಾಜಿ ಕ್ರಿಕೆಟಿಗರು

WTC final 2023: ಮಹತ್ವದ ಪಂದ್ಯದಿಂದ ಆರ್ ಅಶ್ವಿನ್ ಅವರನ್ನು ಹೊರಗಿಟ್ಟದ್ದಕ್ಕೆ ಹಿರಿಯ ಹಾಗೂ ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ರವಿಚಂದ್ರನ್‌ ಅಶ್ವಿನ್
ರವಿಚಂದ್ರನ್‌ ಅಶ್ವಿನ್ (Reuters)

ಇಂಗ್ಲೆಂಡ್‌ನ ದಿ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ (World Test Championship final) ಪಂದ್ಯದಲ್ಲಿ, ಭಾರತವು ರವಿಚಂದ್ರನ್ ಅಶ್ವಿನ್ (Ravichandran Ashwin) ಅವರನ್ನು ಕೈಬಿಟ್ಟಿದೆ. ವಿಶ್ವದ ನಂಬರ್ ವನ್ ಟೆಸ್ಟ್ ಬೌಲರ್ ಮತ್ತು 2021-2023‌ರ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿದ್ದ ಅಶ್ವಿನ್ ಅವರ ಅನುಪಸ್ಥಿತಿಯು, ಹಲವರ ಅಚ್ಚರಿಗೆ ಕಾರಣವಾಗಿದೆ.

ಭಾರತ ತಂಡದಲ್ಲಿ ಏಕೈಕ ಸ್ಪಿನ್ನರ್ ಆಗಿ ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ಟಾಸ್‌ ವೇಳೆ ಅಶ್ವಿನ್‌ ಅವರ ಅನುಪಸ್ಥಿತಿಯ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ಈ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. ಆಟದ ತಂತ್ರ ರೂಪಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಯ್ತು ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಹಿರಿಯ ಹಾಗೂ ಮಾಜಿ ಕ್ರಿಕೆಟಿಗರು ಅಭಿಪ್ರಾಯ ತಿಳಿಸಿದ್ದಾರೆ.

ಸೌರವ್ ಗಂಗೂಲಿ

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಊಟದ ಸಮಯದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. “ಇದು ನಂತರದ ಆಲೋಚನೆ. ನಾಯಕನಾಗಿ, ಟಾಸ್ ಮಾಡುವ ಮೊದಲೇ ನಿರ್ಧಾರ ತೆಗೆದುಕೊಳ್ಳಬೇಕು. ಭಾರತವು 4 ವೇಗಿಗಳೊಂದಿಗೆ ಕಣಕ್ಕೆ ಇಳಿಯಲು ನಿರ್ಧರಿಸಿತ್ತು. ಕಳೆದೆರಡು ವರ್ಷಗಳಲ್ಲಿ ತಂಡವು 4 ವೇಗಿಗಳೊಂದಿಗೆ ಯಶಸ್ಸು ಕಂಡಿದೆ. ಆದರೆ ನಾನು ನಾಯಕನಾಗಿದ್ದರೆ, ಅಶ್ವಿನ್‌ ಅವರನ್ನು ಆಡಿಸುತ್ತಿದ್ದೆ. ಹೀಗಾಗಿ ಪ್ರತಿಯೊಬ್ಬ ನಾಯಕನೂ ವಿಭಿನ್ನ. ರೋಹಿತ್ ಮತ್ತು ನಾನು ವಿಭಿನ್ನವಾಗಿ ಯೋಚಿಸುತ್ತೇನೆ. ಅಶ್ವಿನ್ ಅವರು ಗುಣಮಟ್ಟ ಸ್ಪಿನ್ನರ್ ಆಗಿರುವುದರಿಂದ ಅವರನ್ನು ಆಡುವ ಬಳಗದಿಂದ ಹೊರಗಿಡಲು ನನಗೆ ತುಂಬಾ ಕಷ್ಟವಾಗುತ್ತದೆ” ಎಂದು ಗಂಗೂಲಿ ಹೇಳಿದ್ದಾರೆ.

ಮೈಕಲ್ ವಾನ್

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಇಲ್ಲ.‌ ಇದು ತಂಡದ ಅತಿ ದೊಡ್ಡ ತಪ್ಪು!" ಎಂದು ಅವರು ಹೇಳಿಕೊಂಡಿದ್ದಾರೆ.

ಸಂಜಯ್ ಮಂಜ್ರೇಕರ್

ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಈ ಬಗ್ಗೆ ಮಾತನಾಡಿದ್ದು, “ಆಸ್ಟ್ರೇಲಿಯಾ ತಂಡದ ಎಡಗೈ ಆಟಗಾರರ ಸಂಖ್ಯೆಯನ್ನು ಪರಿಗಣಿಸಿ ಅಶ್ವಿನ್ ಅವರನ್ನು ಆಯ್ಕೆ ಮಾಡದಿರುವುದು ನನಗೆ ಸ್ವಲ್ಪ ಆಶ್ಚರ್ಯವಾಗಿದೆ. ಹೀಗಾಗಿ ಇದು ಸಂಪೂರ್ಣವಾಗಿ ಪಿಚ್‌ ಆಧಾರದಿಂದ ತೆಗೆದುಕೊಂಡ ಕ್ರಮವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ದೊಡ್ಡ ಗಣೇಶ್

ಭಾರತದ ಮಾಜಿ ವೇಗಿ ದೊಡ್ಡ ಗಣೇಶ್, ತಮ್ಮ ಭಾವನೆಯನ್ನು ಸರಳವಾದ 'ಅಚ್ಚರಿ'ಯ ಎಮೋಜಿ ಮೂಲಕ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

ರಿಕಿ ಪಾಂಟಿಂಗ್

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಆನ್‌ ಏರ್‌ನಲ್ಲಿ ಕಾಮೆಂಟರಿ ಮಾಡುವಾಗ ಭಾರತದ ಆಡುವ ಬಳಗದ ಸಂಯೋಜನೆ ಬಗ್ಗೆ ಕಟುವಾಗಿ ಹೇಳಿದ್ದಾರೆ. “ಭಾರತವು ಪಂದ್ಯದ ಮೊದಲ ಇನ್ನಿಂಗ್ಸ್‌ಗೋಸ್ಕರ ಬೌಲಿಂಗ್ ಲೈನ್‌ಅಪ್ ಅನ್ನು ಆಯ್ಕೆ ಮಾಡಿಕೊಂಡಂತೆ ತೋರುತ್ತಿದೆ. ಅಶ್ವಿನ್ ಅವರ ಅನುಪಸ್ಥಿತಿಯನ್ನು ನೋಡಿ ಆಶ್ಚರ್ಯವಾಯಿತು” ಎಂದು ಅವರು ಹೇಳಿದ್ದಾರೆ.

ಭಾರತ ಆಡುವ ಬಳಗ

ರೋಹಿತ್ ಶರ್ಮಾ‌ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶ್ರೀಕರ್ ಭರತ್ (ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ಆಡುವ ಬಳಗ

ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೆನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್‌ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.