India Vs West Indies: ಅಜಿತ್ ಅಗರ್ಕರ್ ನೇತೃತ್ವದಲ್ಲಿ ಭಾರತ ಟಿ20 ತಂಡ ಪ್ರಕಟ; ಐಪಿಎಲ್ ಹೀರೋ ತಿಲಕ್ ವರ್ಮಾ, ಜೈಸ್ವಾಲ್‌ಗೆ ಸ್ಥಾನ
Team India T20I squad: ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ವೆಸ್ಟ್ ಇಂಡೀಸ್‌ನಲ್ಲಿ ಆಗಸ್ಟ್ 3ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಬುಧವಾರ ಪ್ರಕಟಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಪ್ರಸಕ್ತ ವರ್ಷದ ಐಪಿಎಲ್‌ನಲ್ಲಿ ಅಬ್ಬರಿಸಿ ಭರವಸೆ ಮೂಡಿಸಿದ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಮುಂದಿನ ಆಗಸ್ಟ್ 3ರಿಂದ ವಿಂಡೇಈಸ್ ನೆಲದಲ್ಲಿ ಸರಣಿ ಆರಂಭವಾಗಲಿದ್ದು, ಐದು ಪಂದ್ಯಗಳ ಸರಣಿಗಾಗಿ ಯುವ ಆಟಗಾರರಾದ ತಿಲಕ್ ವರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.
ಬಿಸಿಸಿಐ ಆಯ್ಕೆ ಸಮಿತಿಗೆ ನೂತನವಾಗಿ ನೇಮಕಗೊಂಡ ಅಧ್ಯಕ್ಷ ಅಜಿತ್ ಅಗರ್ಕರ್ ಅವರು, ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಅಬ್ಬರಿಸಿ ಭರವಸೆ ಮೂಡಿಸಿದ್ದ ತಿಲಕ್ ವರ್ಮಾ ಅವರಿಗೆ ಟಿ20 ತಂಡಕ್ಕೆ ಚೊಚ್ಚಲ ಕರೆ ನೀಡಲಾಗಿದೆ. ಮತ್ತೊಂದೆಡೆ ಈಗಾಗಲೇ ವಿಂಡೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ಆಯ್ಕೆಯಾಗಿರುವ ಜೈಸ್ವಾಲ್, ಇದೀಗ ಚುಟುಕು ಸರಣಿಯ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ನಿರೀಕ್ಷೆಯಂತೆಯೇ ಈ ಸರಣಿಯಲ್ಲೂ ತಂಡದಲ್ಲಿ ಸ್ಥಾನ ನೀಡಿಲ್ಲ.
ಭಾರತ ಟಿ20 ತಂಡವನ್ನು ಮತ್ತೆ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದು, ಟಿ20ಯ ನಂಬರ್ ವನ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಉಪನಾಯಕ ಆಗಿದ್ದಾರೆ. ಆವೇಶ್ ಖಾನ್ ಗಾಯದಿಂದ ತಂಡಕ್ಕೆ ಮರಳಿದ್ದು, ಸಂಜು ಸ್ಯಾಮ್ಸನ್ ಹಾಗೂ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ವೇಗಿ ಮುಖೇಶ್ ಕುಮಾರ್ ಕೂಡಾ ಸ್ಥಾನ ಪಡೆದಿದ್ದಾರೆ.
ಪ್ರಸಕ್ತ ವರ್ಷದ ಐಪಿಎಲ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜೈಸ್ವಾಲ್, ಮತ್ತೆ ಆಯ್ಕೆಗಾರರ ಭರವಸೆಯ ಆಯ್ಕೆಯಾಗಿದ್ದಾರೆ. ಮುಂಬೈನ 22 ವರ್ಷದ ಯುವಕ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 13 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು. ಆಡಿದ 14 ಪಂದ್ಯಗಳಿಂದ ಬರೋಬ್ಬರಿ 625 ರನ್ ಗಳಿಸಿ ಮಿಂಚಿದ್ದರು. ಅದರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 124 ರನ್ ಕೂಡಾ ಸೇರಿದೆ.
ಮತ್ತೊಂದು ಕಡೆ ಮುಂಬೈ ತಂಡದ ಪರ ನಿರ್ಣಾಯಕ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ತಿಲಕ್ ವರ್ಮಾ ಕೂಡಾ ಆಯ್ಕೆಗಾರರ ಮನಗೆದ್ದಿದ್ದಾರೆ.
ಅತ್ತ ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್ ಮತ್ತು ಪೃಥ್ವಿ ಶಾ ಅವರು ತಂಡಕ್ಕೆ ಆಯ್ಕೆಯಾಗಿಲ್ಲ. ಮತ್ತೊಂದು ಕಡೆ ಐಪಿಎಲ್‌ನಲ್ಲಿ ಸತತ ಐದು ಸಿಕ್ಸರ್‌ಗಳ ಮೂಲಕವೇ ಪರಿಚಿತರಾದ ರಿಂಕು ಸಿಂಗ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಹೇಗಿರಲಿದೆ ಭಾರತ ತಂಡ
ಇಶಾನ್ ಕಿಶನ್ ಮತ್ತು ಶುಬ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಬ್ಯಾಟ್ ಬೀಸಿದರೆ, ನಾಯಕ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು. ಅಕ್ಷರ್ ಪಟೇಲ್ ಎರಡನೇ ಆಲ್‌ರೌಂಡರ್ ಆಗಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಉಮ್ರಾನ್ ಮಲಿಕ್ ಮತ್ತು ಅರ್ಶದೀಪ್ ವೇಗದ ಬೌಲಿಂಗ್ ಜವಾಬ್ದಾರಿಯನ್ನು ಹೊರುವ ನಿರೀಕ್ಷೆಯಿದೆ. ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರ ಸ್ಪಿನ್ ಜೋಡಿಯು ಮತ್ತೆ ಒಂದಾಗಬಹುದು.
ಭಾರತದ ಟಿ20 ತಂಡ
ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.