WTC final: ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್; 87 ವರ್ಷ ಹಳೆಯ ದಾಖಲೆ ಮುರಿದ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್
ಕನ್ನಡ ಸುದ್ದಿ  /  ಕ್ರೀಡೆ  /  Wtc Final: ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್; 87 ವರ್ಷ ಹಳೆಯ ದಾಖಲೆ ಮುರಿದ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್

WTC final: ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್; 87 ವರ್ಷ ಹಳೆಯ ದಾಖಲೆ ಮುರಿದ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್

Travis Head and Steve Smith:‌ ವಿಕೆಟ್‌ ಒಪ್ಪಿಸುವುದಕ್ಕೂ ಮುನ್ನ ಸ್ಟೀವ್ ಸ್ಮಿತ್ ಅವರೊಂದಿಗೆ ಟ್ರಾವಿಸ್ ಹೆಡ್ ದಾಖಲೆಯ ಜೊತೆಯಾಟವಾಡಿದರು. ಇವರಿಬ್ಬರೂ ನಾಲ್ಕನೇ ವಿಕೆಟ್‌ಗೆ ದಿ ಓವಲ್‌ ಮೈದಾನದಲ್ಲಿ ಅತ್ಯಧಿಕ ಜೊತೆಯಾಟವಾಡಿದ ರೆಕಾರ್ಡ್‌ ಬರೆದರು.

ಸ್ಟೀವ್ ಸ್ಮಿತ್ ಅವರೊಂದಿಗೆ 150 ರನ್ ಗಳಿಸಿದ ಸಂಭ್ರಮದಲ್ಲಿ ಟ್ರಾವಿಸ್ ಹೆಡ್
ಸ್ಟೀವ್ ಸ್ಮಿತ್ ಅವರೊಂದಿಗೆ 150 ರನ್ ಗಳಿಸಿದ ಸಂಭ್ರಮದಲ್ಲಿ ಟ್ರಾವಿಸ್ ಹೆಡ್ (Action Images via Reuters)

ಇಂಗ್ಲೆಂಡ್‌ನ ದಿ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ (World Test Championship final) ಪಂದ್ಯದ ಎರಡನೇ ದಿನದಾಟವು ರೋಚಕವಾಗಿ ಸಾಗುತ್ತಿದೆ. ದಿನ ಮೊದಲ ಅವಧಿಯಲ್ಲಿ ಭಾರತ ಮೇಲುಗೈ ಸಾಧಿಸಿದೆ. ಆದರೆ, ಈ ನಡುವೆಯೂ ಆಸೀಸ್‌ ಬ್ಯಾಟರ್‌ಗಳು ದಾಖಲೆ ಬರೆದಿದ್ದಾರೆ.

ಇಂದಿನ ದಿನದಾಟದಲ್ಲಿ ಟ್ರಾವಿಸ್ ಹೆಡ್ 150 ರನ್‌ಗಳ ಗಡಿ ದಾಟಿದರು. ಆಸ್ಟ್ರೇಲಿಯಾದ ಮಾಜಿ ಬ್ಯಾಟರ್‌ ಶೇನ್ ವ್ಯಾಟ್ಸನ್ ನಂತರ, ಇಂಗ್ಲೆಂಡ್‌ನ ಓವಲ್‌ ಮೈದಾನದಲ್ಲಿ 150 ರನ್ ಸಿಡಿಸಿದ ಎರಡನೇ ಆಸೀಸ್‌ ಬ್ಯಾಟರ್‌ ಎಂಬ ಖ್ಯಾತಿಗೆ ಟ್ರಾವಿಸ್ ಹೆಡ್ ಪಾತ್ರರಾಗಿದ್ದಾರೆ. ವ್ಯಾಟ್ಸನ್ 2013ರಲ್ಲಿ ಈ ಸಾಧನೆ ಮಾಡಿದ್ದರು. ಅದಾದ ಬಳಿಕ ಇಂದು (ಗುರುವಾರ) ಟ್ರಾವಿಸ್‌ ಹೆಡ್‌ ಈ ಸಾಧನೆ ಮಾಡಿದ್ದಾರೆ.

ಡಬ್ಲ್ಯೂಟಿಸಿ ಫೈನಲ್‌ ಪಂದ್ಯದ ಮೊದಲ ದಿನದಾಟದಲ್ಲಿ ಶತಕ ಸಿಡಿಸಿದ್ದ ಹೆಡ್, ಅಂತಿಮವಾಗಿ 174 ಎಸೆತಗಳಲ್ಲಿ 25 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 163 ರನ್ ಗಳಿಸಿದರು. ಅಂತಿಮವಾಗಿ ಅವರನ್ನು ಮೊಹಮ್ಮದ್ ಸಿರಾಜ್ ಪೆವಿಲಿಯನ್‌ಗೆ ಕಳುಹಿಸಿದರು. ವಿಕೆಟ್‌ ಕೀಪರ್‌ ಕೆಎಸ್ ಭರತ್‌ಗೆ ಕ್ಯಾಚ್‌ ನೀಡಿ ಹೆಡ್‌ ಔಟಾದರು.

ವಿಕೆಟ್‌ ಒಪ್ಪಿಸುವುದಕ್ಕೂ ಮುನ್ನ ಸ್ಟೀವ್ ಸ್ಮಿತ್ ಅವರೊಂದಿಗೆ ಹೆಡ್ ದಾಖಲೆಯ ಜೊತೆಯಾಟವಾಡಿದರು. ಇವರಿಬ್ಬರೂ ನಾಲ್ಕನೇ ವಿಕೆಟ್‌ಗೆ ದಿ ಓವಲ್‌ ಮೈದಾನದಲ್ಲಿ ಅತ್ಯಧಿಕ ಜೊತೆಯಾಟವಾಡಿದ ರೆಕಾರ್ಡ್‌ ಬರೆದರು.

ಈ ಜೋಡಿಯು 285 ರನ್‌ಗಳ ಬೃಹತ್‌ ಜೊತೆಯಾಟವಾಡಿದರು. ಇದಕ್ಕೂ ಹಿಂದೆ 1936ರಲ್ಲಿ ಇಂಗ್ಲೆಂಡ್‌ನ ವಾಲಿ ಹ್ಯಾಮಂಡ್ ಮತ್ತು ಸ್ಟಾನ್ ವಾರ್ಥಿಂಗ್‌ಟನ್‌, ಭಾರತದ ವಿರುದ್ಧವೇ 266 ರನ್‌ಗಳ ಜೊತೆಯಾಟ ಆಡಿದ್ದರು. ಆ ದಾಖಲೆಯನ್ನು ಈ ಜೋಡಿ ಬ್ರೇಕ್‌ ಮಾಡಿದೆ.

ಈ ಹಿಂದೆ ಇದೇ ಮೈದಾನದಲ್ಲಿ ಆಸ್ಟ್ರೇಲಿಯಾದ ಡಾನ್ ಬ್ರಾಡ್‌ಮನ್ ಮತ್ತು ಆರ್ಚೀ ಜಾಕ್ಸನ್ 1930ರಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕನೇ ವಿಕೆಟ್ 243 ರನ್‌ ಗಳಿಸಿದ್ದೇ ಈವರೆಗೆ ಉತ್ತಮ ಜೊತೆಯಾಟವಾಗಿತ್ತು.

ಅತ್ತ, ಸ್ಟೀವ್ ಸ್ಮಿತ್ ಕೂಡಾ ಭಾರತದ ವಿರುದ್ಧ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. 229 ಎಸೆತಗಳಿಂದ ತಮ್ಮ ಶತಕವನ್ನು ಪೂರೈಸಿದರು. ಆಸೀಸ್ ಅನುಭವಿ ಭಾರತದ ವಿರುದ್ಧ ಒಟ್ಟು ಒಂಬತ್ತು ಶತಕಗಳನ್ನು ಸಿಡಿಸಿದ್ದಾರೆ.‌

ಮೊದಲ ದಿನದಾಟದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ, ಆರಂಭದಲ್ಲೇ ಪ್ರಮುಖ ಬ್ಯಾಟರ್‌ ಉಸ್ಮಾನ್‌ ಖವಾಜಾ ವಿಕೆಟ್‌ ಕಳೆದುಕೊಂಡಿತು. ಒಂದು ಹಂತದಲ್ಲಿ ಪ್ಯಾಟ್ ಕಮ್ಮಿನ್ಸ್ ಬಳಗವು ಕೇವಲ 76 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಸ್ಮಿತ್‌ ಹಾಗೂ ಹೆಟ್‌ ದ್ವಿಶತಕದ ಜೊತೆಯಾಟದ ನೆರವಿನಿಂದ ತಡದ ಮೊತ್ತ ಹೆಚ್ಚಿತು. ಅಂತಿಮವಾಗಿ ಮೊದಲ ದಿನದ ಸ್ಟಂಪ್ಸ್ ವೇಳೆಗೆ ಆಸ್ಟ್ರೇಲಿಯಾವು 3 ವಿಕೆಟ್ ಕಳೆದುಕೊಂಡು 327 ರನ್ ಗಳಿಸಿತು.

ಇಂದು ದಿನದಾಟ ಆರಂಭಿಸಿದ ಆಸೀಸ್‌, ಮೇಲಿಂದ ಮೇಲೆ ಮೂರು ವಿಕೆಟ್‌ ಕಳೆದುಕೊಂಡಿತು. ಟ್ರಾವಿಸ್‌ ಹೆಡ್‌, ಕ್ಯಾಮರೂನ್‌ ಗ್ರೀನ್‌ ಹಾಗೂ ಸ್ಟೀವ್‌ ಸ್ಮಿತ್‌ ಒಬ್ಬರ ನಂತರ ಒಬ್ಬರಂತೆ ಔಟಾದರು. ಆ ಬಳಿಕ ಮಿಚೆಲ್‌ ಸ್ಟಾರ್ಕ್‌ ಕೂಡಾ ರನೌಟ್‌ ಆದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.