Virat Kohli: ಚಾರ್ಟರ್ ವಿಮಾನದಲ್ಲಿ ಭಾರತಕ್ಕೆ ಬಂದ ವಿರಾಟ್ ಕೊಹ್ಲಿ; ನಮಗೆ ಬುದ್ದಿ ಹೇಳಿ, ನೀವೇ ಹೀಗೆ ಮಾಡಿದ್ರೆ ಹೇಗೆ ಎಂದ ನೆಟ್ಟಿಗರು
Virat Kohli: ಚಾರ್ಟರ್ ವಿಮಾನದ ಮೂಲಕ ಭಾರತಕ್ಕೆ ವಿರಾಟ್ ಕೊಹ್ಲಿ ಬಂದಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಾರ್ಟರ್ ಫ್ಲೈಟ್‌ನಲ್ಲಿ ಕೂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
ವೆಸ್ಟ್ ಇಂಡೀಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವುದರೊಂದಿಗೆ ವಿರಾಟ್ ಕೊಹ್ಲಿ, ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಅತ್ಯಂತ ಸ್ಮರಣೀಯ ಆಟದೊಂದಿಗೆ ತವರಿಗೆ ಬಂದಿಳಿದಿರುವ ಕೊಹ್ಲಿ, 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ನೂತನ ಮೈಲಿಗಲ್ಲು ನೆಟ್ಟಿದ್ದರು.
ಟೆಸ್ಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ಏಕದಿನ ಸರಣಿಯಲ್ಲೂ ಅದೇ ಪ್ರದರ್ಶನ ಮುಂದುವರೆಸುವ ನಿರೀಕ್ಷೆಯಲ್ಲಿದ್ದರು. ಆದರೆ, ಆ ಅವಕಾಶ ಸಿಗಲಿಲ್ಲ. ಮೊದಲ ಪಂದ್ಯದಲ್ಲಿ ಅವಕಾಶ ಪಡೆದಿದ್ದರೂ, ಆಡುವ ಭಾಗ್ಯ ಸಿಗಲಿಲ್ಲ. ಇನ್ನು ಉಳಿದ ಎರಡೂ ಪಂದ್ಯಗಳಲ್ಲಿ ವಿಶ್ರಾಂತಿ ಪಡೆದರು. ರೋಹಿತ್ ಶರ್ಮಾ ಕೂಡ ವಿಶ್ರಾಂತಿ ಪಡೆದಿದ್ದರು. ಸದ್ಯ ಟಿ20 ಕ್ರಿಕೆಟ್ನಲ್ಲಿ ಸ್ಥಾನ ಪಡೆಯದ ಕೊಹ್ಲಿ, ತವರಿಗೆ ವಾಪಾಸ್ ಆಗಿದ್ದಾರೆ.
ಚಾರ್ಟರ್ ವಿಮಾನದ ಮೂಲಕ ಭಾರತಕ್ಕೆ ವಿರಾಟ್ ಕೊಹ್ಲಿ ಬಂದಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಾರ್ಟರ್ ಫ್ಲೈಟ್‌ನಲ್ಲಿ ಕೂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಇದೇ ವಿಚಾರವಾಗಿ ಕೊಹ್ಲಿ ಟ್ರೋಲ್ ಆಗುತ್ತಿದ್ದಾರೆ. ಅವರ ಅಭಿಮಾನಿಗಳು ಕೊಹ್ಲಿ ಕುರಿತು ಸಂಭ್ರಮ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಕೊಹ್ಲಿ ನಡೆಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣ
ನನಗೆ ಚಾರ್ಟರ್ ವಿಮಾನ ಮತ್ತು ಉತ್ತಮ ಸೇವೆಯನ್ನು ಏರ್ಪಡಿಸಿದ್ದಕ್ಕಾಗಿ @acs_aircharter ಮತ್ತು @capt.abupatel ಅವರಿಗೆ ಧನ್ಯವಾದಗಳು ಎಂದು ವಿರಾಟ್ ಕೊಹ್ಲಿ ವಿಮಾನದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಾರ್ಟರ್ ವಿಮಾನವು, ಹೆಚ್ಚಿನ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತದೆ. ಹಾಗಾಗಿ ಪರಿಸರಕ್ಕೆ ತುಂಬಾ ಹಾನಿ ಉಂಟು ಮಾಡುತ್ತದೆ ಎಂದು ಚಾರ್ಟರ್ ಫ್ಲೈಟ್‌ನಲ್ಲಿ ಪ್ರಯಾಣಿಸಿದ್ದಕ್ಕೆ ಕೊಹ್ಲಿಯನ್ನು ದೂಷಿಸಿದ್ದಾರೆ.
ಕೊಹ್ಲಿ ಹೇಳಿಕೆ ಉಲ್ಲೇಖಿಸಿ ಟ್ರೋಲ್
ಕೊಹ್ಲಿ ಈ ಪೋಸ್ಟ್ ಅನ್ನು ಆಗಸ್ಟ್ 2 ರಂದು ಹಂಚಿಕೊಂಡಿದ್ದರೂ, ಇಂದಿಗೂ ಟ್ರೋಲ್ ಮಾಡುತ್ತಲೇ ಇದ್ದಾರೆ. ಸದ್ಯ ಈವರೆಗೂ 59 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. 37 ಸಾವಿರಕ್ಕೂ ಅಧಿಕ ಕಾಮೆಂಟ್ಸ್ ಬಂದಿವೆ. ಇದು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಕಾಮೆಂಟ್ ಬಾಕ್ಸ್ನಲ್ಲಿ ಖಾಸಗಿ ಪ್ರಯಾಣ ನಡೆಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, 2021ರಲ್ಲಿ ಕೊಹ್ಲಿ ಹೇಳಿದ್ದ ಮಾತುಗಳನ್ನೇ ಉಲ್ಲೇಖಿಸಿ ಅಭಿಮಾನಿಗಳು ತಿರುಗೇಟು ನೀಡಿದ್ದರು.
ಅದು 2021ರ ದೀಪಾವಳಿ ಹಬ್ಬ. ಹಬ್ಬದ ಕುರಿತಂತೆ ಒಂದು ಟ್ವೀಟ್ ಮಾಡಿದ್ದರು. ಅಲ್ಲದೆ, ಜಾಗತಿಕ ತಾಪಮಾನ ಮತ್ತು ಪರಿಸರ ರಕ್ಷಣೆಗೆ ಸಂಬಂಧಿಸಿ ಟ್ವೀಟ್ ಮಾಡಿದ್ದರು. ಆ ಮೂಲಕ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಟ್ವೀಟ್ ಮೂಲಕ ಕೋರಿದ್ದರು. ಪಟಾಕಿ ಏನನ್ನೂ ಸುಡಬೇಡಿ. ಇದರಿಂದ ಪರಿಸರಕ್ಕೆ ಹಾನಿ. ದೀಪ ಹಚ್ಚುವ ಮೂಲಕ ದೀಪಾವಳಿ ಆಚರಿಸೋಣ ಕರೆ ಕೊಟ್ಟಿದ್ದರು.
ನೀವೇ ಹೇಳಿ ಹೀಗೆ ಮಾಡಿದ್ರೆ ಹೇಗೆ?
ಜನರು ಸಾರ್ವಜನಿಕ ಸಂಪರ್ಕ ಸಾರಿಗೆಗಳಾದ ಬಸ್‌ಗಳನ್ನು ಮತ್ತು ಪರಿಸರಕ್ಕೆ ಹಾನಿಯಾಗದ ಮೋಟಾರ್ ವಾಹನಗಳನ್ನು ಬಳಸಿ ಎಂದು ಸಲಹೆ ನೀಡಿದ್ದರು. ಹೀಗೆ ಹೇಳಿದ್ದ ಕೊಹ್ಲಿ, ಇದೀಗ ಚಾರ್ಟರ್ ಫ್ಲೈಟ್‌ನಲ್ಲಿ ಪ್ರಯಾಣ ಬೆಳೆಸಿದ್ದು ಎಷ್ಟು ಸರಿ ಎನ್ನುವುದು ಹಲವರ ಪ್ರಶ್ನೆ. ಒಬ್ಬ ಮಾದರಿಯಾದ ವ್ಯಕ್ತಿಯೇ ಹೀಗೆ ಮಾಡಿದರೆ ಅಭಿಮಾನಿಗಳು ಅದೇ ರೀತಿ ನಡೆದುಕೊಳ್ಳುತ್ತಾರೆಯೇ ಎನ್ನುತ್ತಿದ್ದಾರೆ ನೆಟ್ಟಿಗರು.
ನಿಮ್ಮತ್ರ ಹಣ ಜಾಸ್ತಿ ಇದೆ ಎಂದ ನೆಟ್ಟಿಗರು
ನಿಮಗೆ ನಿಜವಾಗಿಯೂ ವೈಯಕ್ತಿಕ ವಿಮಾನದ ಅಗತ್ಯ ಇತ್ತೇ ಎಂದು ಪ್ರಶ್ನೆ ಹಾಕಿದ್ದಾರೆ. ನಿಮ್ಮ ಬಳಿ ಸಾಕಷ್ಟು ಹಣ ಇರಬಹುದು, ಹಾಗಂತ ಈ ರೀತಿ ಹಣ ವ್ಯರ್ಥ ಮಾಡುವುದೇಕೆ? ಇದೇ ಹಣವನ್ನು ಯಾರಿಗಾದರೂ ಸಹಾಯಕ್ಕೆ ಕೈ ಜೋಡಿಸಿ ಎಂದೂ ನೆಟ್ಟಿಗರು ಕೇಳಿದ್ದಾರೆ.