Virender Sehwag: ಒಂದು ಕೋಟಿ ರೂ ಸಂಭಾವನೆಯ ಬಿಸಿಸಿಐ ಆಫರ್ ಕುರಿತು ಮೌನ ಮುರಿದ ಸೆಹ್ವಾಗ್
ಬಿಸಿಸಿಐ ಮುಖ್ಯ ಆಯ್ಕೆಗಾರರ ಹುದ್ದೆಗಾಗಿ ಬಿಸಿಸಿಐ ಈಗಾಗಲೇ ಸೆಹ್ವಾಗ್ ಅವರನ್ನು ಸಂಪರ್ಕಿಸಿದೆ ಎಂಬ ವದಂತಿಗಳಿವೆ. ಈ ಬಗ್ಗೆ ವೀರು ಪ್ರತಿಕ್ರಿಯೆ ನೀಡಿದ್ದಾರೆ.
ಖಾಸಗಿ ಮಾಧ್ಯಮವೊಂದರ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತ ತಂಡದ ಬಗ್ಗೆ ಹಲವು ರಹಸ್ಯ ಮಾಹಿತಿಯನ್ನು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚೇತನ್ ಶರ್ಮಾ (Chetan Sharma) ರಾಜೀನಾಮೆ ನೀಡಿದರು. ಅದಾದ ಬಳಿಕ ಈಗ ಖಾಲಿ ಇರುವ ಆಯ್ಕೆಗಾರನ ಸ್ಥಾನಕ್ಕೆ ಬಿಸಿಸಿಐ ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ. ಬಿಸಿಸಿಐ ಅರ್ಜಿ ಆಹ್ವಾನಿಸುವ ಮುನ್ನವೇ ಈ ಸ್ಥಾನಕ್ಕಾಗಿ ಪ್ರಮುಖ ಸ್ಪರ್ಧಿಯಾಗಿ ಒಂದು ದೊಡ್ಡ ಹೆಸರು ಕೇಳಿ ಬಂದಿತ್ತು. ಅವರೇ ವೀರೇಂದ್ರ ಸೆಹ್ವಾಗ್ (Virender Sehwag). ಅಲ್ಲದೆ ಬಿಸಿಸಿಐ ಕೂಡಾ ಇದೇ ವಿಚಾರವಾಗಿ ಸೆಹ್ವಾಗ್‌ರನ್ನು ಸಂಪರ್ಕಿಸಿದೆ ಎಂಬ ವರದಿಗಳಿದ್ದವು. ಸದ್ಯ ಈ ಎಲ್ಲಾ ವದಂತಿಗಳ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಇಂದು (ಶುಕ್ರವಾರ) ಮೌನ ಮುರಿದಿದ್ದಾರೆ.
ಕಳೆದ ವರ್ಷ ನಡೆದ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ಚೇತನ್ ಶರ್ಮಾರನ್ನು ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅವರ ನಿರ್ಗಮನವಾದ ನಾಲ್ಕು ತಿಂಗಳ ಬಳಿಕ, ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಭಾರತ ಪುರುಷರ ಆಯ್ಕೆ ಸಮಿತಿಯ ಒಬ್ಬ ಸದಸ್ಯನ ಸ್ಥಾನಕ್ಕೆ ಕ್ರಿಕೆಟ್ ಮಂಡಳಿಯು ಅರ್ಜಿ ಆಹ್ವಾನಿಸಿದೆ.
ಕಳೆದ ಫೆಬ್ರವರಿಯಿಂದ ರಾಷ್ಟ್ರೀಯ ಆಯ್ಕೆಗಾರರ ಹುದ್ದೆ ಖಾಲಿ ಇದೆ. ಸದ್ಯ ಭಾರತದ ಮಾಜಿ ಕ್ರಿಕೆಟಿಗ ಶಿವಸುಂದರ್ ದಾಸ್ ಅವರು ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಸಮಿತಿಯಲ್ಲಿ ಸುಬ್ರೋತೊ ಬ್ಯಾನರ್ಜಿ, ಸಲೀಲ್ ಅಂಕೋಲಾ ಮತ್ತು ಶ್ರೀಧರನ್ ಶರತ್ ಕೂಡ ಇದ್ದಾರೆ.
ಸದ್ಯ ಕೆಲವೊಂದು ಮಾನದಂಡಗಳೊಂದಿಗೆ ಬಿಸಿಸಿಐ ಉತ್ತರ ವಲಯ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತಾ ಮಾನದಂಡವು ಈ ಹಿಂದಿನಂತೆಯೇ ಇವೆ.
ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಮೆಂಟರ್ ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರ ಹೆಸರುಗಳು ಈ ಸ್ಥಾನಕ್ಕೆ ಕೇಳಿಬರುತ್ತಿವೆ. ಈ ನಡುವೆ ಸೆಹ್ವಾಗ್ ಅವರನ್ನು ಬಿಸಿಸಿಐ ಸಂಪರ್ಕಿಸಿದೆ ಎಂಬ ವದಂತಿಗಳಿವೆ. ಈ ಎಲ್ಲಾ ಊಹಾಪೋಹಗಳ ಬಗ್ಗೆ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಸೆಹ್ವಾಗ್, "ಇಲ್ಲ" ಎಂದು ಉತ್ತರಿಸಿದ್ದಾರೆ.
ಪ್ರಸ್ತುತ ವಿವಿಧ ವೇದಿಕೆಗಳಲ್ಲಿ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಜಾಹೀರಾತು ಪ್ರಚಾರಗಳಿಂದಲೂ ಉತ್ತಮ ಉತ್ತಮ ಸಂಭಾವನೆ ಗಳಿಸುತ್ತಿರುವ ಭಾರತದ ಮಾಜಿ ಆರಂಭಿಕ ಆಟಗಾರ, ಬರೋಬ್ಬರಿ 1 ಕೋಟಿ ರೂಪಾಯಿ ವೇತನ ಪ್ಯಾಕೇಜ್ ಇರುವ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿಲ್ಲ.
"ಈ ಹಿಂದೆ ವೀರೂ ಅವರನ್ನು ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೇಳಲಾಯಿತು. ಆ ಬಳಿಕ ಅದು ಅನಿಲ್ ಕುಂಬ್ಳೆಗೆ ಹೋಯಿತು. ಅವರೇ ಖುದ್ದು ಅರ್ಜಿ ಸಲ್ಲಿಸುವುದು ಅಸಂಭವ," ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಮಾನದಂಡಗಳು
- ಅರ್ಜಿ ಸಲ್ಲಿಸಲು ಬಯಸುವವರು ಕನಿಷ್ಠ 7 ಟೆಸ್ಟ್ ಪಂದ್ಯಗಳು ಅಥವಾ 30 ಪ್ರಥಮ ದರ್ಜೆ ಪಂದ್ಯಗಳು 10 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು.
- ಕನಿಷ್ಠ 5 ವರ್ಷಗಳ ಹಿಂದೆ ಆಟದಿಂದ ನಿವೃತ್ತಿ ಪಡೆದಿರಬೇಕು.
- ಒಟ್ಟು 5 ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಸಮಿತಿಯ ಸದಸ್ಯರಾಗಿರುವ ಯಾವುದೇ ವ್ಯಕ್ತಿಯು ಪುರುಷರ ಆಯ್ಕೆ ಸಮಿತಿಯ ಸದಸ್ಯರಾಗಿರಲು ಅರ್ಹರಾಗಿರುವುದಿಲ್ಲ.
ಈ ಮಾನದಂಡಗಳ ಮೇಲೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅಭ್ಯರ್ಥಿಗಳನ್ನು ಹೆಚ್ಚಿನ ಮೌಲ್ಯಮಾಪನಕ್ಕಾಗಿ ವೈಯಕ್ತಿಕ ಸಂದರ್ಶನಗಳಿಗಾಗಿ ಬಿಸಿಸಿಐ ಆಹ್ವಾನಿಸುತ್ತದೆ.